Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಇಳೆಗೆ ಮಾರಕ ಶೋಷಕರ ಸ್ವಾರ್ಥ

ಇಳೆಗೆ ಮಾರಕ ಶೋಷಕರ ಸ್ವಾರ್ಥ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ9 Jun 2025 9:43 AM IST
share
ಇಳೆಗೆ ಮಾರಕ ಶೋಷಕರ ಸ್ವಾರ್ಥ

ಈಭೂಮಿಯ ಮೇಲೆ ಮನುಷ್ಯ ಮಾತ್ರವಲ್ಲ ಪ್ರಾಣಿ, ಪಕ್ಷಿ, ಮೀನು, ಚಿಟ್ಟೆ, ಹುಲಿ, ಕರಡಿ, ಮೊಲ, ಬೆಕ್ಕು ಸೇರಿ ಕೋಟ್ಯಂತರ ಜೀವ ಜಂತುಗಳಿವೆ. ಆದರೆ, ಇವುಗಳಿಗೆ ಸ್ವಾರ್ಥವಿಲ್ಲ. ಅವುಗಳಿಂದ ಪರಿಸರಕ್ಕೆ ಹಾನಿಯಿಲ್ಲ. ನಾಳೆಗೆಂದು ಕೂಡಿಸಿ ಇಡುವುದಿಲ್ಲ. ಅವುಗಳಲ್ಲಿ ಜಾತಿ, ಮತಗಳಿಲ್ಲ. ಸಹಜೀವಿಗಳ ಬಗ್ಗೆ ದ್ವೇಷವಿಲ್ಲ. ಪರಸ್ಪರ ಹಂಚಿಕೊಂಡು ತಿನ್ನುತ್ತವೆ. ಕಾಗೆ ಒಂದು ಅಗಳು ಅನ್ನ ಸಿಕ್ಕರೆ ಸಾಕು ಅದನ್ನು ಹಂಚಿಕೊಂಡು ತಿನ್ನುತ್ತದೆ. ಕಾಗೆಯ ಈ ವಿಶಾಲತೆಯ ಬಗ್ಗೆ ಬಸವಣ್ಣನವರು ಒಂದು ವಚನ ಬರೆದಿದ್ದಾರೆ. ಆದರೆ, ಮನುಷ್ಯ ಹಾಗಲ್ಲ. ಮನುಷ್ಯ ಹಸಿವು ನೀಗಿದರೆ ಸಾಕೆನ್ನುವುದಿಲ್ಲ. ಮುಂದಿನ ನಾಲ್ಕಾರು ಶತಮಾನಗಳ ಕಾಲ ತನ್ನ ವಂಶದವರು ಕುಳಿತು ತಿನ್ನುವಷ್ಟು ಸಂಪಾದನೆಯನ್ನು ಸಕಲ ಜೀವ ಜಂತುಗಳಿಗೆ ಸೇರಿದ ಪ್ರಕೃತಿಯ ಸಂಪತ್ತನ್ನು ತಾನೊಬ್ಬನೇ ನುಂಗುತ್ತಾನೆ. ಕೊನೆಗೊಂದು ದಿನ ಉಸಿರು ನಿಂತು ಹೋಗುತ್ತದೆ. ಅವನು ಕೂಡಿಟ್ಟಿದ್ದು ಯಾರಿಗೋ ಏನೋ? ಅದಕ್ಕೆಂದೇ ಮನುಷ್ಯನ ದುರಾಸೆಗೆ ಕಡಿವಾಣ ಹಾಕಲು ಧರ್ಮಗಳು ಹುಟ್ಟಿಕೊಂಡವು, ಧರ್ಮಗುರುಗಳು ಬಂದರು, ಮುಂದೆ ಅವರೂ ದಾರಿ ತಪ್ಪಿದರು. ಈಗಿರುವ ಧರ್ಮಗುರುಗಳು ಮಹಾಸ್ವಾರ್ಥಿಗಳು.ಅದು ಸಾಲದೆಂಬಂತೆ ಮನುಕುಲದಲ್ಲೇ ಭಾರತದಂಥ ಕೆಲವು ದೇಶಗಳಲ್ಲಿ ಜಾತಿಗಳೂ ಇವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯು ಅಸ್ತಿತ್ವದಲ್ಲಿ ಇದೆ.

ಮನುಷ್ಯ ತಾನು ಬದುಕಲು ಜಾತಿ, ಮತ, ಸಿದ್ಧಾಂತಗಳನ್ನು ಮಾಡಿಕೊಂಡ. ಕ್ರಮೇಣ ಅವುಗಳೇ ಅವನ ಬದುಕಿಗೆ ತೊಡಕಾದವು. ಕಾಲ ಬದಲಾದಂತೆ ಧರ್ಮಗಳ ಸಿದ್ಧಾಂತಗಳು, ಮೌಲ್ಯಗಳು ಬದಲಾದವು. ನಮ್ಮ ಕಾಲದಲ್ಲಿ ಪ್ರಸ್ತುತವೆನಿಸಿದ್ದು ನಾವಿದ್ದಾಗಲೇ, ಇಲ್ಲವೇ ನಮ್ಮ ನಂತರ ಅಪ್ರಸ್ತುತವಾಗುತ್ತಿರುವುದು ವಾಸ್ತವ. ಆದರೂ ಒಮ್ಮೊಮ್ಮೆ ಭೂತಕಾಲದ ಭೂತಗಳು ವರ್ತಮಾನದ ಬದುಕನ್ನು ನಿಯಂತ್ರಿಸುವಷ್ಟು ಶಕ್ತಿಶಾಲಿ ಆಗುತ್ತವೆ. ಯಾವುದೇ ಉತ್ತಮ ವ್ಯವಸ್ಥೆ ಶಾಶ್ವತವಾಗಿರುವುದಿಲ್ಲ ಎಂಬುದು ಸೋವಿಯತ್ ಸಮಾಜವಾದಿ ವ್ಯವಸ್ಥೆಯ ಪತನದಿಂದ ಸ್ಪಷ್ಟವಾಯಿತು. ಕಳೆದ ಐದಾರು ಸಾವಿರ ವರ್ಷಗಳ ಮನುಷ್ಯನ ಹೆಜ್ಜೆ ಜಾಡುಗಳನ್ನು ಗಮನಿಸಿದರೆ ಸ್ವಾರ್ಥ, ದ್ವೇಷ, ಕಲಹ ಆತನ ಸಹಜ ಗುಣಗಳಾಗಿವೆ. ಅನಿಯಂತ್ರಿತ ಅಧಿಕಾರ ಮತ್ತು ಆಸ್ತಿ ದೊರೆತಾಗ ಆತ ಒಳ್ಳೆಯವನಾಗಿರುವುದಿಲ್ಲ. ಅಂತಲೇ ಪ್ರಭುತ್ವ ತನ್ನಿಂದ ತಾನೇ ಉದುರಿ ಹೋಗುತ್ತದೆ ಎಂಬ ಮಾರ್ಕ್ಸ್ ಸಿದ್ಧಾಂತ ಸದುದ್ದೇಶದ ಆಶಯ ಮಾತ್ರ ಆಗಿ ಉಳಿದಿದೆ. ಅದು ನಿಜವಾಗಿದ್ದರೆ ಆತನ ಸಿದ್ಧಾಂತ ಪ್ರತಿಪಾದಿಸುವವರೂ ಇಷ್ಟೊಂದು ಪಕ್ಷಗಳಾಗಿ, ಒಡೆದು ಹೋಳಾಗಿ ತಮ್ಮದೇ ಬರೋಬ್ಬರಿ ಎಂದು ಧಾರ್ಮಿಕ ಪಂಗಡಗಳಂತೆ ಕಿತ್ತಾಡುತ್ತಿರಲಿಲ್ಲ. ಯಾವುದೇ ವ್ಯವಸ್ಥೆ ಶಾಶ್ವತ ಅಲ್ಲವಾದರೂ ಮನುಷ್ಯ ಮನುಷ್ಯನನ್ನು ಪರಸ್ಪರ ಪ್ರೀತಿಸುವ, ಹೊಂದಿಕೊಂಡು ಬದುಕುವ ಸಹಜ ಬದುಕಿಗಾಗಿ ಸದಾ ಯತ್ನಿಸುತ್ತಲೇ ಇರಬೇಕು ಎಂಬುದು ಸಹಜ ಆಶಯವಾಗಿದೆ.

ಯಾವುದೇ ಧರ್ಮ, ಪಂಗಡ ಮತ್ತು ಸಿದ್ಧಾಂತಗಳಿಗಿಂತ ಮನುಷ್ಯ ಪ್ರೀತಿ ಮುಖ್ಯ. ನಾನು ಸೂಕ್ಷ್ಮವಾಗಿ ಗಮನಿಸಿದಂತೆ ಇಂಥ ಸಹಜ ಮನುಷ್ಯ ಪ್ರೀತಿ ಗಂಡಸರಿಗಿಂತ ಹೆಣ್ಣು

ಮಕ್ಕಳಲ್ಲಿ ಜಾಸ್ತಿ ಇರುತ್ತದೆ. ತಾಯ್ತನದಿಂದ ಮನುಷ್ಯ ಸಮಾಜವನ್ನು ಪೊರೆಯುವುದು ಅವರಿಂದ ಸಾಧ್ಯವಾಗುತ್ತದೆ. ಅಂತಲೇ ಮನುಷ್ಯ ದ್ವೇಷಿ ಸಿದ್ಧಾಂತಗಳ ವಿರುದ್ಧ ಮಹಿಳೆಯರೇ ಗಟ್ಟಿಯಾಗಿ ನಿಲ್ಲುತ್ತಾರೆ.

ಅಜ್ಞಾನದ ಜಾಗದಲ್ಲಿ ವಿಜ್ಞಾನ ಬೆಳೆಯುತ್ತಿದ್ದಂತೆ ಅದನ್ನು ತನ್ನ ಉನ್ನತಿಗಾಗಿ ಮನುಷ್ಯ ಬಳಸಿಕೊಂಡು ಪ್ರಕೃತಿಗೆ ಸವಾಲು ಹಾಕುತ್ತ ಬಂದ. ಇರಲೊಂದು ಸೂರು ಸಾಕಾದರೂ ಅತಿ ಆಸೆಗೆ ಬಿದ್ದು ನೂರಾರು ಮನೆಗಳನ್ನು ಮಾಡಿಕೊಂಡ. ಅಭಿವೃದ್ಧಿಯ ಹೆಸರಿನಲ್ಲಿ ಆಸರೆ ನೀಡಿದ ಭೂಮಿಯನ್ನೇ ನಾಶ ಮಾಡಲು ಮುಂದಾದ. ಅಕ್ರಮ, ಸಕ್ರಮ ಗಣಿಗಾರಿಕೆ, ಗಿಡ ಮರಗಳ ನಾಶ, ಸಹಜೀವಿಗಳಿಗೆ ಹಿಂಸೆ ಇವೆಲ್ಲ ಮನುಷ್ಯನ ಚಾಳಿಯಾಯಿತು. ಬದುಕಿರುವ ಅಲ್ಪಕಾಲಾವಧಿಯಲ್ಲಿ ನೆಮ್ಮದಿಯಾಗಿರುವ ಬದಲಾಗಿ ದುರಾಸೆಗೆ ಬಿದ್ದು ಮಾಡಬಾರದ್ದನ್ನೆಲ್ಲ ಮಾಡತೊಡಗಿದ. ಇದೆಲ್ಲದರ ಪರಿಣಾಮವಾಗಿ ಪರಿಸರದಲ್ಲಿ ಹಲವಾರು ಏರುಪೇರುಗಳಾಗಿವೆ. ಬರಬೇಕಾದಾಗ ಮಳೆ ಬರುವುದಿಲ್ಲ. ಬೇಡವಾದಾಗ ಸಾಕೆನಿಸುವಷ್ಟು ಸುರಿಯುತ್ತದೆ. ಅದೇ ರೀತಿ ಬೇಸಿಗೆಯ ಬಿಸಿಲು ಕೂಡ ಇತ್ತೀಚಿನ ದಿನಗಳಲ್ಲಿ ತೀರ ಅಸಹನೀಯವಾಗತೊಡಗಿದೆ.

ಇಷ್ಟೆಲ್ಲ ಯಾಕೆ ಬರೆಯಬೇಕಾಯಿತೆಂದರೆ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಸಕಲ ಜೀವಿಗಳಿಗೆ ನೆರಳು ನೀಡುತ್ತ ಬಂದ ಮರಗಳ ಮಾರಣ ಹೋಮ ಅವ್ಯಾಹತವಾಗಿ ನಡೆದಿದೆ. ಇದರ ಪರಿಣಾಮವಾಗಿ ಹವಾಮಾನದಲ್ಲಿ ತೀವ್ರ ಬದಲಾವಣೆ ಯಾಗಿದೆ. ಭೂ ತಾಪಮಾನ ಆತಂಕವನ್ನು ಉಂಟು ಮಾಡಿದೆ. ಜಲಮಾಲಿನ್ಯ, ವಾಯುಮಾಲಿನ್ಯಗಳು ವ್ಯಾಪಕವಾಗಿದ್ದರೂ ಸರಕಾರವಾಗಲಿ, ನಾಗರಿಕ ಸಮಾಜವಾಗಲಿ ಅತ್ತ ಕಡೆ ಗಮನವನ್ನು ಕೊಡದಷ್ಟು ಜಡತ್ವ ಆವರಿಸಿದೆ. ಕೋವಿಡ್‌ನಂಥ ಹೊಸ ಕಾಯಿಲೆಗಳು, ವೈರಸ್ ಗಳು ಹುಟ್ಟಿಕೊಳ್ಳುತ್ತಲೇ ಇವೆ. ಅವುಗಳಿಂದ ಜನ ಸಾಮಾನ್ಯರ ಆರೋಗ್ಯ ಹದಗೆಡುತ್ತ ಹೊರಟಿದೆ. ಪರಿಸರ ರಕ್ಷಣೆ ಮತ್ತು ವಾತಾವರಣದ ಪರಿಶುದ್ಧತೆ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಒಂದೆರಡು ಸಾಲುಗಳನ್ನು ಕೂಡ ಬರೆಯದೇ ಮತದಾರರಿಗೆ ಹುಸಿ ಭರವಸೆಗಳನ್ನು ನೀಡುತ್ತ ಬಂದಿವೆ.

ನಮ್ಮ ಹಿರಿಯರು ನೆರಳಿಗೆಂದು ಮಾತ್ರವಲ್ಲ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಮರಗಳನ್ನು ನೆಟ್ಟರು. ನೀರಡಿಕೆ ನಿವಾರಿಸಲು ಕೆರೆಗಳನ್ನು ನಿರ್ಮಿಸಿದರು, ಒಂದು ಊರಿಗೆ ಒಂದು ಕೆರೆ ಮಾತ್ರವಲ್ಲ ಮತ್ತೊಂದು, ಮತ್ತೆರಡು ಕೆರೆಗಳನ್ನು ಮಾಡಿದರು.ಆದರೆ ನಾವು?

ನಾಗರಿಕತೆ ಬೆಳೆದಂತೆ, ಮನುಷ್ಯರಲ್ಲಿ ಸಂಪತ್ತಿನ ದಾಹ ಹೆಚ್ಚಾದಂತೆ, ಸಂಗ್ರಹ ಪ್ರವೃತ್ತಿ ಮಿತಿ ಮೀರಿದಾಗ ಮರಗಳನ್ನು ಕಡಿದು ನಾಶ ಮಾಡತೊಡಗಿದ, ಕೆರೆಗಳನ್ನು, ಕಾಲುವೆಗಳನ್ನು ಮುಚ್ಚಿ ಮನೆಗಳನ್ನು ಕಟ್ಟತೊಡಗಿದೆ. ಇದರಿಂದ ಪರಿಸರದ ಪರಿಸ್ಥಿತಿ ಹದಗೆಟ್ಟು ಬದುಕಲು ಅಸಹನೀಯವಾಗಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪೆನಿಗಳ ಕೈಗೆ ನಮ್ಮ ಭೂಮಿ, ನೀರು, ಖನಿಜ ಸಂಪತ್ತು ಸೇರತೊಡಗಿತು. ನಾಶವಾಗುತ್ತಿರುವ ಪರಿಸರವನ್ನು ಉಳಿಸಿಕೊಳ್ಳಲು ಬಯಲು ಪ್ರದೇಶದಲ್ಲಿ ಗಿಡ ನೆಡುವುದು, ಕೆರೆಗಳ ಅತಿಕ್ರಮಣ ತಡೆ ಗಟ್ಟುವುದು, ಸಾವಿರಾರು ವರ್ಷಗಳಿಂದ ಸುರಕ್ಷಿತವಾಗಿ ಉಳಿದ ಅರಣ್ಯ ಸಂಪತ್ತನ್ನು ನುಂಗಿ ನೀರು ಕುಡಿಯುವುದನ್ನು ತಡೆಯಲು ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಸುಮ್ಮನೆ ತೋರಿಕೆಗಾಗಿ ವಿಶ್ವ ಪರಿಸರ ದಿನಾಚರಣೆ, ವನ ಮಹೋತ್ಸವಗಳಂಥ ನಾಟಕಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದ್ದೇವೆ. ಹೀಗಾಗಿ ಪರಿಸರದ ಪರಿಸ್ಥಿತಿ ಎಷ್ಟು ದಾರುಣವಾಗಿದೆಯೆಂದರೆ ಬರಲಿರುವ ವರ್ಷಗಳಲ್ಲಿ ಭಾರೀ ಬೆಲೆ ತೆರಬೇಕಾಗಿ ಬರಬಹುದು. ಇಂಥ ಅಭಿವೃದ್ಧಿ ಯಾರಿಗೂ ಬೇಡ.

ಎಲ್ಲಕ್ಕಿಂತ ಹೆಚ್ಚು ಆತಂಕ ಉಂಟು ಮಾಡುವ ಸಂಗತಿಯೆಂದರೆ ಮರಗಳ ನಾಶ. ಯಾವುದೇ ಹೊಸ ಯೋಜನೆಗಳು ಬಂದರೂ ಮೊದಲು ಬಲಿಯಾಗುವುದು ಮರಗಳು. ಅಂತಲೇ ಸುಪ್ರೀಂ ಕೋರ್ಟ್ ಕಳೆದ ವಾರ ತೀವ್ರ ಕಳವಳವನ್ನು ವ್ಯಕ್ತಪಡಿಸಿತು. ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಲ್ಲುವುದಕ್ಕಿಂತ ಹೆಚ್ಚು ಅಪಾಯಕಾರಿಯಾದುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಗ್ರಾದ ತಾಜ್‌ಮಹಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ೪೫೪ ಮರಗಳನ್ನು ಕಡಿದುದಕ್ಕಾಗಿ ಕಳವಳವನ್ನು ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಕಡಿದವರಿಗೆ, ಕಡಿಸಿದವರಿಗೆ ೪.೫೪ ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ೪೫೪ ಮರಗಳು ಸೃಷ್ಟಿಸುತ್ತಿದ್ದ ಹಸಿರು ಪರಿಸರವನ್ನು ಮರು ಸೃಷ್ಟಿಸಲು ಕನಿಷ್ಠ ೧೦೦ ವರ್ಷಗಳು ಬೇಕಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಕಳವಳದಿಂದ ಹೇಳಿರುವುದು ಪ್ರಕರಣದ ಗಂಭೀರತೆಗೆ ಒಂದು ಉದಾಹರಣೆಯಾಗಿದೆ.

ಯಾವುದೇ ವ್ಯಕ್ತಿ ಸಂಬಂಧಿಸಿದ ಅಧಿಕಾರಿ ಇಲ್ಲವೇ ಸಂಸ್ಥೆಯ ಪೂರ್ವಾನುಮತಿಯಿಲ್ಲದೇ ಮರಗಳನ್ನು ಕಡಿಯಬಾರದು. ಪರಿಸರಕ್ಕೆ ಹಾನಿ ಉಂಟು ಮಾಡುವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ದಯೆ ತೋರಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ಅವರಿರುವ ಪೀಠ ಸ್ಪಷ್ಟವಾಗಿ ಹೇಳಿದೆ. ತಾಜ್ ಮಹಲ್ ಪರಿಸರದಲ್ಲಿ ಹೆಚ್ಚು ಮರಗಳನ್ನು ಬೆಳೆಸಿ ಹಸಿರು ವಲಯವನ್ನು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್ ೧೯೯೬ರಲ್ಲಿ ಸೂಚಿಸಿತ್ತು. ಆದರೆ ಈಗ ಅದೇ ಪರಿಸರದಲ್ಲಿ ನೂರಾರು ಮರಗಳನ್ನು ಕಡಿದಿರುವುದು ವಿಪರ್ಯಾಸವಾಗಿದೆ.

ಮರಗಳ ನಾಶ ಕೇವಲ ತಾಜ್ ಮಹಲ್ ಪ್ರದೇಶದಲ್ಲಿ ಮಾತ್ರವಲ್ಲ, ಭಾರತದ ಉದ್ದಗಲಕ್ಕೂ ಎಲ್ಲಿ ಹೊಸ ರಸ್ತೆಗಳ ನಿರ್ಮಾಣ, ಹಳೆಯ ರಸ್ತೆಗಳ ಅಗಲೀಕರಣ, ರೈಲು ಮಾರ್ಗಗಳ ನಿರ್ಮಾಣ, ಇಂಥ ಕಡೆಗಳಲ್ಲೆಲ್ಲ ಬಿಸಿಲಿನಲ್ಲಿ ಆಸರೆ ನೀಡುತ್ತಿದ್ದ ಮರಗಳು ಈಗ ಕಾಣುತ್ತಿಲ್ಲ. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ರಾಜ್ಯದ ಉತ್ತರ ಭಾಗದಲ್ಲಿ ಸಾಲು ಮರಗಳು ಅಪರೂಪ. ನಾನೊಮ್ಮೆ ಅನಿಲ್ ಹೊಸಮನಿಯವರ ‘ಬಹುಜನ ನಾಯಕ’ ಪತ್ರಿಕೆಯ ಕಾರ್ಯಕ್ರಮಕ್ಕೆ ಬಿಜಾಪುರ ಜಿಲ್ಲೆಯ ತಾಲೂಕು ಕೇಂದ್ರ ಇಂಡಿಗೆ ಹೋಗಿದ್ದೆ. ಅಲ್ಲಿ ತಲುಪಿ ವಾಹನದಿಂದ ಇಳಿದಾಗ ಕೆಂಡದಂಥ ಉರಿ ಬಿಸಿಲಿನ ಕಿರಣಗಳು ಮೈಗೆ ಅಪ್ಪಳಿಸಿ ಸುಸ್ತಾಗಿ ಹೋದೆ. ಅಲ್ಲಿನ ಮುಖ್ಯ ರಸ್ತೆಯಲ್ಲಾಗಲಿ, ಬಝಾರದಲ್ಲಾಗಲಿ ಒಂದೇ, ಒಂದು ಮರವನ್ನೂ ನಾನು ಕಾಣಲಿಲ್ಲ. ಜನರಿಗೂ ಅವುಗಳು ಅಗತ್ಯವೆನಿಸಿಲ್ಲ. ಆದರೆ ಜಿಲ್ಲಾ ಕೇಂದ್ರ ಬಿಜಾಪುರ ಎಷ್ಟೋ ವಾಸಿ. ಆದಿಲ್ ಶಾಹಿ ಕಾಲದಿಂದಲೂ ಅಲ್ಲಿ ಗಿಡ, ಮರಗಳನ್ನು ಬೆಳೆಸುವ ಪ್ರವೃತ್ತಿ ಇದೆ. ಆದರೂ ದಕ್ಷಿಣ ಕರ್ನಾಟಕದ ನಗರಗಳಿಗೆ ಹೋಲಿಸಿದರೆ ಉತ್ತರದ ಊರುಗಳಲ್ಲಿ ಗಿಡ, ಮರಗಳು ಕಡಿಮೆ. ಆದರೆ, ಅತ್ಯಂತ ಹೆಚ್ಚು ಬಿಸಿಲಿಂದ ಕೂಡಿದ ಕಲಬುರಗಿ ಮಾತ್ರ ಭಿನ್ನವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಅಲ್ಲಿ ಬರೀ ಬಿಸಿಲು ಬಿಟ್ಟರೆ ಬೇರೇನೂ ಇರಲಿಲ್ಲ. ಆದರೆ ಈಗ ಕಲಬುರಗಿಯಲ್ಲಿ ಉದ್ಯಾನಗಳ ಸಂಖ್ಯೆ ಸಾಕಷ್ಟಿದೆ. ಜನರೂ ತಮ್ಮ ಮನೆಯ ಬಳಿ ಗಿಡ ನೆಟ್ಟು ಮರಗಳನ್ನು ಬೆಳೆಸುತ್ತಿದ್ದಾರೆ. ಹೀಗಾಗಿ ಬಿಸಿಲಿನ ಪ್ರಖರತೆ ಮುಂಚಿನಷ್ಟು ಅನುಭವಕ್ಕೆ ಬರುವುದಿಲ್ಲ.

ಪರಿಸರ ರಕ್ಷಣೆ ಮತ್ತು ಹಸಿರೀಕರಣದ ಬಗ್ಗೆ ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಜನಪ್ರತಿನಿಧಿಗಳು ವಿಶೇಷ ಆಸಕ್ತಿಯನ್ನು ವಹಿಸಬೇಕು. ಹಿಂದೆ ಅಂದರೆ ಎಪ್ಪತ್ತು, ಎಂಭತ್ತರ ದಶಕದಲ್ಲಿ ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಕಾರ್ಮಿಕ ನಾಯಕರಾದ ಪಂಪಾಪತಿ ಅವರಿದ್ದರು. ಜವಳಿ ಗಿರಣಿಯ ಸಾಮಾನ್ಯ ಕಾರ್ಮಿಕನಾಗಿದ್ದ ಪಂಪಾಪತಿ ಅವರು ಮುಂದೆ ಕಮ್ಯುನಿಸ್ಟ್ ಪಕ್ಷದ ನಾಯಕನಾಗಿ ಬೆಳೆದು ದಾವಣಗೆರೆಯ ನಗರ ಪಾಲಿಕೆ ಅಧ್ಯಕ್ಷರಾಗಿ ಮತ್ತು ಎರಡು ಸಲ ಶಾಸಕರಾಗಿ ಸೇವೆ ಸಲ್ಲಿಸಿದರು. ಅವರು ನಗರ ಪಾಲಿಕೆ ಅಧ್ಯಕ್ಷರಾಗಿದ್ದಾಗ ದಾವಣಗೆರೆಯಲ್ಲಿ ನೂರಾರು ಸಾಲು ಮರಗಳನ್ನು ನೆಟ್ಟು ಬೆಳೆಸಿದರು. ಅವು ಬೆಳೆಯುವವರೆಗೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಅವುಗಳನ್ನು ರಕ್ಷಿಸಿ ಬೆಳೆಸಿದರು. ನೆರಳು ನೀಡುತ್ತಿದ್ದ ಈ ಮರಗಳನ್ನು ರಸ್ತೆ ಅಗಲೀಕರಣದ ಹೆಸರಿನಲ್ಲಿ ಈಗ ನಾಶ ಪಡಿಸಲಾಗಿದೆ.

ಈಗಂತೂ ಕಾಲ ಬದಲಾಗಿದೆ. ಗಣಿ ಲೂಟಿಕೋರರು ನೇರವಾಗಿ ರಾಜಕೀಯವನ್ನು ಪ್ರವೇಶಿಸುತ್ತಿದ್ದಾರೆ. ಶಾಸನ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಯಕಟ್ಟಿನ ಅಧಿಕಾರ ಕೇಂದ್ರಗಳನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ಮಾತಾಡದಂತೆ ಅವರನ್ನು ಮೌಢ್ಯದ ಕೂಪಕ್ಕೆ ತಳ್ಳಲಾಗುತ್ತಿದೆ. ಪರಿಸರ ನಾಶದ ವಿರುದ್ಧ ಧ್ವನಿ ಎತ್ತಬೇಕಾದವರನ್ನು ಕೋಮು ಕಲಹಗಳಲ್ಲಿ ಮುಳುಗಿಸಲಾಗುತ್ತಿದೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಹೊಡೆದಾಟಕ್ಕೆ ಹಚ್ಚುವ ಸಂಘಟನೆಗಳು ಪರಿಸರ, ಅರಣ್ಯ ನಾಶ, ಗಣಿಗಾರಿಕೆ ಬಗ್ಗೆ ಎಂದೂ ಬಾಯಿ ಬಿಡುವುದಿಲ್ಲ. ಹೀಗಾಗಿ ಉಸಿರಾಡುವ ಗಾಳಿಯೂ ಮಲಿನಗೊಳ್ಳುತ್ತಿದೆ. ಮಾರುಕಟ್ಟೆ ಪ್ರಧಾನ ಆರ್ಥಿಕತೆ ಬಂದ ನಂತರವಂತೂ ಮನುಷ್ಯ ಸರಾಗವಾಗಿ ಉಸಿರಾಡಲು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ೨೦೧೯ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯದ ಪರಿಣಾಮವಾಗಿ ೧೭ ಲಕ್ಷ ಜನ ಅಸುನೀಗಿದ್ದಾರೆ ಎಂದು ವಿಜ್ಞಾನಿಗಳು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದಲ್ಲದೆ ಆರ್ಥಿಕವಾಗಿಯೂ ಭಾರತ ವರ್ಷಕ್ಕೆ ೨.೬೦ ಲಕ್ಷ ಕೋಟಿ ರೂಪಾಯಿಗಳಷ್ಟು ಹಾನಿಯನ್ನು ಅನುಭವಿಸುತ್ತಿದೆ.

ನಾವು ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವು ಪ್ರಾಣ ಘಾತುಕವಾಗಿ ಪರಿಣಮಿಸಿವೆ. ನಮ್ಮ ರಾಜ್ಯವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಬಹುತೇಕ ನದಿಗಳು ಮಲಿನಗೊಂಡಿವೆ. ಹರಿಹರದ ಪಾಲಿ ಫೈಬರ್ ಕಾರ್ಖಾನೆಯಂಥ ಉದ್ದಿಮೆಗಳಿಂದ ತುಂಗಭದ್ರಾ ನದಿಯ ನೀರು ಕುಡಿಯಬಾರದಷ್ಟು ಮಲಿನಗೊಂಡಿದೆ. ಕೈಗಾರಿಕೆಗಳನ್ನು ಆರಂಭಿಸುವಾಗ ನಾನಾ ಷರತ್ತುಗಳನ್ನು ಹಾಕಿ ಪರವಾನಿಗೆ ನೀಡಲಾಗುತ್ತದೆ. ಆದರೂ ಅವುಗಳು ಬಿಡುವ ತ್ಯಾಜ್ಯದಿಂದ ನದಿ ನೀರು ಮಲಿನಗೊಳ್ಳುವುದು ನಿಂತಿಲ್ಲ. ಪರಿಸರ ಮಾಲಿನ್ಯಕ್ಕೆ ಕೈಗಾರಿಕೆಗಳು ಮಾತ್ರ ಕಾರಣವಲ್ಲ. ಲಂಗು ಲಗಾಮಿಲ್ಲದ ವಾಹನಗಳ ಓಡಾಟ, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿ, ಅಡಿಗೆ ಮಾಡಲು ಅಲ್ಲಲ್ಲಿ ಸೌದೆಗಳ ಬಳಕೆ, ಅಭಿವೃದ್ಧಿ ಹೆಸರಿನಲ್ಲಿ ಅನುಪಯುಕ್ತ ಕಾಮಗಾರಿಗಳ ಪರಿಣಾಮವಾಗಿ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಪರಿಸ್ಥಿತಿ ಕಳವಳಕಾರಿಯಾಗಿದೆ.

ನಾವು ಉಸಿರಾಡುವ ಗಾಳಿ ಕೂಡ ಸುರಕ್ಷಿತವಲ್ಲ. ವಿಶ್ವಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಗಾಳಿ ಕಲುಷಿತಗೊಂಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖ ಮಾಡಿದೆ. ವಿಷಕಾರಿಯಾದ ಗಾಳಿ ಸೇವನೆಯಿಂದ ಬರುವ ಗಂಭೀರ ಕಾಯಿಲೆಗಳಿಂದ ಲಕ್ಷಾಂತರ ಜನರು ಸಾವಿಗೀಡಾಗುತ್ತಿರುವ ಬಗ್ಗೆ ಸಾಮಾಜಿಕ, ಆರ್ಥಿಕ ಆಯಾಮಗಳೂ ಇವೆ. ವಾಯು ಮಾಲಿನ್ಯ ಕಾರಣದಿಂದಲೇ ಉಂಟಾಗುವ ಹೃದ್ರೋಗ, ಪಾರ್ಶ್ವವಾಯು, ಶ್ವಾಸ ಕೋಶದ ಕ್ಯಾನ್ಸರ್, ಮೊದಲಾದ ಮಾರಣಾಂತಿಕ ಕಾಯಿಲೆಗಳು ಅಭಿವೃದ್ಧಿ ಶೀಲ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ಭಾರತದಲ್ಲಿ ಕೂಡ ಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ವರ್ಷಕ್ಕೆ ೬ ಲಕ್ಷ ಮಂದಿ ಕೊನೆಯುಸಿರು ಎಳೆಯುತ್ತಾರೆ. ಅವಧಿಗೆ ಮುಂಚಿತ ಹೆರಿಗೆ, ಶಿಶುಗಳು ಕಡಿಮೆ ತೂಕ ಹೊಂದಿರುವುದಕ್ಕೂ ವಾಯು ಮಾಲಿನ್ಯಕ್ಕೂ ನೇರ ಸಂಬಂಧವಿದೆ. ಕುಡಿಯುವ ನೀರಿನ ಸಮಸ್ಯೆಯಂತೂ ಜಾಗತಿಕವಾಗಿ ಅತ್ಯಂತ ಅಪಾಯಕಾರಿಯಾಗಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯ ೨೦೧೦ರ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ವ್ಯವಸ್ಥೆಯನ್ನು ಮಾನವ ಹಕ್ಕುಗಳ ಭಾಗ ಎಂದು ನಮೂದಿಸಲಾಗಿದೆ. ಕಾರ್ಪೊರೇಟ್ ಬಂಡವಾಳಶಾಹಿಯ ಅಭಿವೃದ್ಧಿ ಮಾರ್ಗದ ಪರಿಣಾಮವಾಗಿ ಮನುಷ್ಯನಿಗೆ ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಆಹಾರ ಸಿಗದಂತಾಗಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರಲು ನಿರಂತರವಾದ ಜನ ಜಾಗೃತಿ ಅಗತ್ಯವಾಗಿದೆ.

ಜಗತ್ತಿನ ಮುಂದೆ ಈಗ ಎರಡು ಆಯ್ಕೆಗಳಿವೆ. ಅಳಿವು ಹಾಗೂ ಉಳಿವು. ಇವರೆಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈ ಭೂಮಿ ಮತ್ತು ಇದರ ಮೇಲಿರುವ ಮನುಷ್ಯ ಸೇರಿದಂತೆ ಸಕಲ ಜೀವಿಗಳು ಸುರಕ್ಷಿತವಾಗಿ ಉಳಿಯಬೇಕೆಂದರೆ ಲಾಭಕೋರ ವಿನಾಶಕಾರಿ ಅಭಿವೃದ್ಧಿ ಮಾರ್ಗವನ್ನು ಕೈ ಬಿಡಬೇಕಾಗಿದೆ. ಈಗ ಅದೊಂದೇ ನಮ್ಮ ಎದುರಿನ ಉಳಿದ ದಾರಿಯಾಗಿದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X