ಸಕ್ಕರೆ ಲಾಬಿ ಮತ್ತು ಸಿದ್ದರಾಮಯ್ಯ

ಗಣಿ ಉದ್ಯಮಪತಿಗಳು, ರಿಯಲ್ ಎಸ್ಟೇಟ್ ಕುಳಗಳು, ‘ಶಿಕ್ಷಣದ ಅಂಗಡಿ’ಗಳನ್ನು ಇಟ್ಟುಕೊಂಡವರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲಕರು ಸದನದಲ್ಲಿ ಸಚಿವ ಸಂಪುಟದಲ್ಲಿ ತುಂಬಿ ಕೊಂಡರೆ ಅವರು ಸಹಜವಾಗಿ ತಮ್ಮ ಉದ್ಯಮಗಳ ಹಿತಾಸಕ್ತಿಯ ಪರವಾಗಿರುತ್ತಾರೆ. ಅವರಿಗೆ ಅಭಿವೃದ್ಧಿ ಅಂದರೆ ತಮ್ಮ ಅಭಿವೃದ್ಧಿ ಮಾತ್ರ. ಇಂಥವರು ಮಾಡುವ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರವೂ ಹೆದರುತ್ತದೆ.
ಕಳೆದ ವಾರ ನಡೆದ ಕಬ್ಬು ಬೆಳೆಗಾರರ ಹೋರಾಟ ಹಲವು ಕಾರಣಗಳಿಂದ ಗಮನ ಸೆಳೆಯಿತು.
ಎಲ್ಲಕ್ಕಿಂತ ಮುಖ್ಯವಾಗಿ ಈ ಹೋರಾಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಭಾಯಿಸಿದ ರೀತಿ ನನಗೆ ತುಂಬಾ ಹಿಡಿಸಿತು. ಅವರ ಸಚಿವ ಸಂಪುಟದಲ್ಲೇ ಸಕ್ಕರೆ ಕಾರ್ಖಾನೆಗಳ ಮಾಲಕರು ಪ್ರಭಾವಿ ಸಚಿವರಾಗಿದ್ದರೂ ಅದನ್ನು ಪರಿಗಣಿಸದೆ ಯಾವುದೇ ಒತ್ತಡಕ್ಕೆ ಮಣಿಯದೆ ಅವರು ರೈತರ ಪರ ದಿಟ್ಟ ತೀರ್ಮಾನವನ್ನು ಕೈಗೊಂಡರು. ಇದರಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮತ್ತು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ ದಳವಾಯಿ (ನಿವೃತ್ತ ಐಎಎಸ್ ಅಧಿಕಾರಿ)
ಮಹತ್ವದ ಪಾತ್ರ ವಹಿಸಿದರು. ಕಬ್ಬು ಬೆಳೆಗಾರರು ಒಂದು ಟನ್ ಕಬ್ಬಿಗೆ ರೂ. 3,500 ಕೊಡಬೇಕು ಎಂಬ ಬೇಡಿಕೆ ಮುಂದಿಟ್ಟು ಉತ್ತರ ಕರ್ನಾಟಕ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಬೀದಿಗಿಳಿದರು. ಹೋರಾಟ ತೀವ್ರಗೊಂಡಾಗ ಸದರಿ ಭಾಗದ ಹಿರಿಯ ಸಚಿವರಾರೂ ಅಲ್ಲಿಗೆ ಹೋಗಲಿಲ್ಲ. ಯಾಕೆಂದರೆ ಅವರೆಲ್ಲ ಸಕ್ಕರೆ ಕಾರ್ಖಾನೆಗಳ ಮಾಲಕರು. ಸಕ್ಕರೆ ಸಚಿವ ಶಿವಾನಂದ ಪಾಟೀಲರು ಹೋಗಿ ರೈತರ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸಿದರು. ಆದರೂ ರೈತರು ಬೇಡಿಕೆ ಈಡೇರದೆ ಹೋರಾಟ ಕೈ ಬಿಡುವುದಿಲ್ಲ ಎಂದರು.
ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕ್ಕರೆ ಕಾರ್ಖಾನೆಗಳ ಮಾಲಕರ ಸಭೆಯನ್ನು ಬೆಂಗಳೂರಿನಲ್ಲಿ ಕರೆದರು. ಆ ಸಭೆಯಲ್ಲಿ ಟನ್ ಕಬ್ಬಿಗೆ ರೂ. 3,300 ಕೊಡಲು ಒಪ್ಪಬೇಕೆಂದು ಮಾಲಕರನ್ನು ಕೇಳಿದರು. ರೂ. 3,200 ಕೊಡಲು ಮಾಲಕರು ಒಪ್ಪಿದರು. ಆದರೆ ಹೆಚ್ಚುವರಿ ರೂ.100 ಅಂದರೆ ಮಾಲಕರು, 50 ಮತ್ತು ಸರಕಾರ 50 ಕೊಡುವ ಸೂತ್ರವನ್ನು ಒಪ್ಪದ ಮಾಲಕರು ತಮ್ಮ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ರಾಗ ತೆಗೆದರು. ಆಗ ಅವರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ನಿಮ್ಮ ಕಾರ್ಖಾನೆಗಳು ನಷ್ಟದಲ್ಲಿ ಇದ್ದರೆ ಒಂದಕ್ಕೆ 3-4 ಸಕ್ಕರೆ ಕಾರ್ಖಾನೆಗಳು ಹೇಗಾದವು? ಎಂದು ಪ್ರಶ್ನಿಸಿದಾಗ ಕೆಲವರು ಗೊಣಗಾಡಿದರೂ ಸಿದ್ದರಾಮಯ್ಯನವರು ಮಾಲೀಕರನ್ನು ಗದರಿಸಿದಾಗ ಮಾಲೀಕರು ಬಾಯಿ ಮುಚ್ಚಿ ಒಪ್ಪಿಕೊಂಡರು.ಆದರೂ ಇನ್ನೂ ಕೆಲವು ಸಮಸ್ಯೆಗಳಿವೆ. ಸರಕಾರ ರೂ. 50 ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವುದೋ ಅಥವಾ ಕಾರ್ಖಾನೆಗಳಿಗೆ ನೀಡುವುದೋ ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ ಹಿಂದಿನ ಸರಕಾರಗಳು ಟನ್ ಕಬ್ಬಿಗೆ ಘೋಷಿಸಿದ್ದ ರೂ. 150 ಪ್ರೋತ್ಸಾಹ ಧನ ಬೆಳೆಗಾರರ ಕೈಗೆ ಸಿಗಲಿಲ್ಲ. ಇದಲ್ಲದೆ ಸರಕಾರ ಟನ್ ಕಬ್ಬಿಗೆ ರೂ.3,300 ಘೋಷಿಸಿರುವುದು ಕಬ್ಬು ಕಟಾವ್ ಮತ್ತು ಸಾಗಣೆ ದರವನ್ನು ಹೊರತುಪಡಿಸಿಯೋ ಅಥವಾ ಒಳಗೊಂಡಂತೆಯೋ ಎಂಬುದು ಸ್ಪಷ್ಟವಾಗಬೇಕಾಗಿದೆ. ಅಲ್ಲದೆ ರಿಕವರಿ ಆಧಾರಿತ ಬೆಲೆ ನಿರ್ಧಾರವನ್ನು ಬಾಗಲಕೋಟ ಜಿಲ್ಲಾ ರೈತರು ಒಪ್ಪಿಲ್ಲ. ಇಂಥ ಸಮಸ್ಯೆಗಳು ನಿವಾರಣೆಯಾಗಬೇಕಾಗಿದೆ.
ಕರ್ನಾಟಕದಲ್ಲಿ ಒಟ್ಟು 70 ಸಕ್ಕರೆ ಕಾರ್ಖಾನೆಗಳಿವೆ.ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 24, ಬಿಜಾಪುರ ಜಿಲ್ಲೆಯಲ್ಲಿ 10, ಬಾಗಲಕೋಟ ಜಿಲ್ಲೆಯಲ್ಲಿ 9 ಬೀದರ್‌ನಲ್ಲಿ 6 ಸಕ್ಕರೆ ಕಾರ್ಖಾನೆಗಳಿವೆ. ಉಳಿದ 21 ಕಾರ್ಖಾನೆಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಇವೆ. ಈ ಪೈಕಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳಿಗೆ ಬಿಜೆಪಿ ನಾಯಕರು ಮಾಲಕರು. ಇನ್ನ್ನೂ ಕೆಲವಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮಾಲಕರು. ಇವುಗಳ ಬಲದಿಂದಲೇ ಇವರು ತಮ್ಮ ರಾಜಕೀಯ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ತಾವು ಮಂತ್ರಿ, ಶಾಸಕರಾಗಿ ತಮ್ಮ ಬಂಧು ಬಳಗದವರಿಗೂ ಅಧಿಕಾರದ ಸ್ಥಾನಮಾನಗಳನ್ನು ಒದಗಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಮಾತ್ರ ಉತ್ಪಾದನೆಯಾ ಗುವುದಿಲ್ಲ, ಎಥೆನಾಲ್‌ನಂಥ ಅದರ ಉಪ ಉತ್ಪನ್ನಗಳಿಂದಲೇ ಕೋಟಿ, ಕೋಟಿ ಆದಾಯ ಬರುತ್ತದೆ. ಅಂತಲೇ ಸರಕಾರವನ್ನೇ ನಿಯಂತ್ರಿಸುವಷ್ಟು ಪ್ರಬಲವಾಗಿ ಇವರು ಬೆಳೆದಿದ್ದಾರೆ. ಇವರಿಗೆ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಮಾಲಕರು ಮಾದರಿ. ಅಲ್ಲಿ ಸಕ್ಕರೆ ಲಾಬಿಯಿಂದ ಶರದ್ ಪವಾರ್ ಅವರು ಮೂರು ದಶಕಗಳ ಕಾಲ ರಾಜ್ಯ ರಾಜಕೀಯವನ್ನು ನಿಯಂತ್ರಿಸಿದರು. ಗಡಿ ಜಿಲ್ಲೆಯ ಉಮೇಶ್ ಕತ್ತಿಯಂಥವರು ಅದನ್ನೇ ಮಾದರಿಯನ್ನಾಗಿ ಇಟ್ಟು ಕೊಂಡು ಇಲ್ಲಿ ಅನುಸರಿಸಿದರು. ಅನೇಕರು ಮೊದಲು ಸಹಕಾರಿ ಸಕ್ಕರೆ ಕಾರ್ಖಾನೆ ಎಂದು ಹೇಳಿ ಸ್ವಾಹ ಮಾಡಿದರು. ಕರ್ನಾಟಕದಲ್ಲಿ ಇಷ್ಟೊಂದು ಸಕ್ಕರೆ ಕಾರ್ಖಾನೆಗಳು ಬೇಕೇ ಎಂಬ ಪ್ರಶ್ನೆಯ ಬಗ್ಗೆ ಚರ್ಚೆ ಆಗಬೇಕಾಗಿದೆ. ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಬೇಕೆಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಈಗ ಕಬ್ಬಿನಂಥ ಹೆಚ್ಚು ನೀರು ಬೇಡುವ ವಾಣಿಜ್ಯ ಬೆಳೆಗಾಗಿ ಈ ನೀರಾವರಿ ಯೋಜನೆಗಳು ಬಳಕೆಯಾಗುತ್ತಿವೆ. ಸಕ್ಕರೆ ಕಾರ್ಖಾನೆ ಮಾಲಕರೇ ತಮ್ಮ ಲಾಭಕ್ಕಾಗಿ ಹೆಚ್ಚು ಕಬ್ಬು ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಾರೆ. ಇದಕ್ಕೆ ಸದ್ಯದ ಪರಿಹಾರವೆಂದರೆ ಈ ಸಕ್ಕರೆ ಕಾರ್ಖಾನೆಗಳನ್ನು ಸರಕಾರ ರಾಷ್ಟ್ರೀಕರಣ ಮಾಡಬೇಕು. ಖಾಸಗೀಕರಣದ ನವ ಉದಾರೀಕರಣದ ಯುಗದಲ್ಲಿ ಇದು ಒಂದು ಆಶಯವಾಗಿ ಮಾತ್ರ ಉಳಿಯುತ್ತದೆ.
ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಯಾಗಿದ್ದಾಗ ಬಸ್ ರಾಷ್ಟ್ರೀಕರಣ ಮಾಡಿದ್ದರು. ಆದರೆ ಅದು ಇಂದಿರಾಗಾಂಧಿ ಅವರ ಗರೀಬಿ ಹಠಾವೋ ಕಾಲ. ಸೋವಿಯತ್ ರಶ್ಯ ಇತ್ತು. ಜಗತ್ತಿನ ಎಲ್ಲೆಡೆ ಸಮಾಜವಾದದ ಗಾಳಿ ಬೀಸುತ್ತಿತ್ತು.ಆದರೆ ಈಗ ಕಾಲ ಬದಲಾಗಿದೆ. ಸೋವಿಯತ್ ರಶ್ಯ ಇಲ್ಲ. ಸಮಾಜವಾದ ಬಹುತೇಕ ಪದ ಕೋಶವನ್ನು ಸೇರಿಯಾಗಿದೆ. ಮುಕ್ತ ಮಾರುಕಟ್ಟೆಯ ನವ ಉದಾರೀಕರಣದ ಕಾಲ ಇದು. ಇಂಥ ಕಾಲದಲ್ಲಿ ಮುಖ್ಯಮಂತ್ರಿಯಾದ ಸಮಾಜವಾದಿ ಸಿದ್ದರಾಮಯ್ಯನವರು ರೈತರ ಪರವಾಗಿ ನಿಂತು ಕಾರ್ಖಾನೆ ಮಾಲಕರನ್ನು ನಿಯಂತ್ರಿಸುವುದು , ಗದರಿಸುವುದು ಅಷ್ಟು ಸುಲಭದ ಸಂಗತಿಯಲ್ಲ. ಆದರೆ ಅಪಾರ ಜನಪ್ರಿಯತೆ ಮತ್ತು ಸಮಾಜವಾದಿ ಹಿನ್ನೆಲೆಯಿಂದ ಹಾಗೂ ವೈಯಕ್ತಿಕ ಧಾಡಸೀತನದಿಂದ ಇದು ಅವರಿಗೆ ಸಾಧ್ಯವಾಗಿದೆ.
ಸಿದ್ದರಾಮಯ್ಯನವರು ಈ ಕಾಲದ ಅಪರೂಪದ ರಾಜಕಾರಣಿ. ಯಾಕೆಂದರೆ ಅವರು ಸಮಾಜವಾದಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಗರಡಿಯಲ್ಲಿ ಬೆಳೆದು ಹೋರಾಟದ ಹಿನ್ನೆಲೆಯಿಂದ ಬಂದವರು. ಈಗ ಹೋರಾಟದ ಹಿನ್ನೆಲೆಯಿಂದ ಬರುವ ನಾಯಕರು, ರಾಜಕಾರಣಿಗಳು ವಿರಳ. ಈಗ ರಾಜಕೀಯದಲ್ಲಿ ಅದರಲ್ಲೂ ಅಧಿಕಾರ ರಾಜಕೀಯದಲ್ಲಿ ಮಿಂಚುವವರು ಉದ್ಯಮ ಪತಿಗಳು, ಶಿಕ್ಷಣದ ಅಂಗಡಿಗಳ ವ್ಯಾಪಾರಿಗಳು, ಸಕ್ಕರೆ ಮುಂತಾದ ಕಂಪೆನಿಗಳ ಮಾಲಕರು ಅಂದರೆ ಅತಿಶಯೋಕ್ತಿಯಲ್ಲ.
ಭಾರತಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಗತಿಸಿದವು. ಇದೇ ಕಾಲಘಟ್ಟದಲ್ಲಿ ಸ್ವತಂತ್ರವಾದ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿಗೂ ಸುರಕ್ಷಿತವಾಗಿದೆ. ಆದರೆ ಕಳೆದ ಹನ್ನೊಂದು ವರ್ಷಗಳಿಂದ ಅದರ ಸುರಕ್ಷತೆಯ ಬಗ್ಗೆ ಮತ್ತೆ ಮತ್ತೆ ಆತಂಕ ಉಂಟಾಗುತ್ತಲೇ ಇದೆ. ಇದನ್ನು ಈಗ ಕಾರ್ಪೊರೇಟ್ ಕಂಪೆನಿಗಳು ನಿಯಂತ್ರಿಸುತ್ತಿವೆಯೇನೋ ಎಂಬ ಕಳವಳ ಉಂಟಾಗುತ್ತದೆ.
ಸ್ವಾತಂತ್ರ್ಯ ಹೋರಾಟದ ಪೂರ್ವದಿಂದಲೂ ಹಣವಂತರು ರಾಜಕೀಯದ ಮೇಲೆ ಪ್ರಭಾವ ಬೀರುತ್ತಲೇ ಬಂದರು. ಸ್ವಾತಂತ್ರ್ಯಾ ನಂತರವೂ ಅದು ಮುಂದುವರಿಯಿತು. ಆಗಿನ ಬಹುದೊಡ್ಡ ಬಂಡವಾಳಗಾರ ಬಿರ್ಲಾ ಅವರು ಮಹಾತ್ಮಾ ಗಾಂಧೀಜಿಯವರಿಗೆ ಮತ್ತು ಅವರ ಚಟುವಟಿಕೆಗಳಿಗೆ ಎಲ್ಲ ವಿಧದ ನೆರವನ್ನೂ ನೀಡುತ್ತಿದ್ದರು. ಗಾಂಧೀಜಿ ದಿಲ್ಲಿಯಲ್ಲಿ ಇದ್ದಾಗೆಲ್ಲ ಬಿರ್ಲಾ ಭವನದಲ್ಲಿ ತಂಗುತ್ತಿದ್ದರು. ಅವರ ಹತ್ಯೆ ನಡೆದದ್ದು ಕೂಡ ಅಲ್ಲಿಯೇ.ಗಾಂಧೀಜಿ ಮೇಲೆ ಬಿರ್ಲಾಗಳು ಒತ್ತಡ ಹೇರುತ್ತಿದ್ದರೆಂದಲ್ಲ, ಗಾಂಧೀಜಿಯವರೂ ಅವರ ಮಾತನ್ನು ಕೇಳುತ್ತಿದ್ದರೆಂದಲ್ಲ.ಆಗಿನ ಸನ್ನಿವೇಶವೇ ಭಿನ್ನವಾಗಿತ್ತು. ಆದರೆ ಸ್ವಾತಂತ್ರ್ಯಾ ನಂತರ ನಮ್ಮವರೇ ನಮ್ಮನ್ನು ಆಳ ತೊಡಗಿದಾಗಲೂ ಸರಕಾರದ ನಿರ್ಧಾರಗಳ ಮೇಲೆ ಬಂಡವಾಳಗಾರರು ಪ್ರಭಾವ ಬೀರುವುದು ಜಾಸ್ತಿಯಾಯಿತು. ಅದೇನೇ ಇರಲಿ. ಆಗ ಜನ ಹೋರಾಟಗಳ ಅಂಗಳದಿಂದ ಬಹುತೇಕ ರಾಜಕೀಯ ನಾಯಕರು ಬರುತ್ತಿದ್ದರು. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೂ ಅಂಥವರೇ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರುತ್ತಿದ್ದರು. ಪ್ರಧಾನಿ ಜವಾಹರಲಾಲ್ ನೆಹರೂ, ಡಾ.ಅಂಬೇಡ್ಕರ್, ಜಗಜೀವನ ರಾಮ್ ಹಾಗೂ ಸಮಾಜವಾದಿಗಳಾದ ರಾಮ ಮನೋಹರ ಲೋಹಿಯಾ, ಅಶೋಕ ಮೆಹ್ತಾ, ಎಸ್.ಎಂ.ಜೋಶಿ, ನಾಥ ಪೈ, ಕಮ್ಯುನಿಸ್ಟ್ ನಾಯಕರಾದ ಎಸ್.ಎ.ಡಾಂಗೆ, ಎ.ಕೆ.ಗೋಪಾಲನ್, ಭೂಪೇಶ್ ಗುಪ್ತ್ತಾ, ಸಮರ ಮುಖರ್ಜಿ ಇಂಥವರೆಲ್ಲ ಸಂಸತ್ತಿನಲ್ಲಿ ಇದ್ದರು.ಇಂಥವರಿಂದ ಸಂಸತ್ತಿಗೆ ಒಂದು ಘನತೆ ಬರುತ್ತಿತ್ತು.
ಭಾರೀ ಬಂಡವಾಳಗಾರರು ನೇರವಾಗಿ ರಾಜಕೀಯಕ್ಕೆ ಬರುತ್ತಿರಲಿಲ್ಲ. ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಕೆಲವು ಚುನಾಯಿತ ಸದಸ್ಯರನ್ನು ನೇಮಿಸಿಕೊಳ್ಳುತ್ತಿದ್ದರು. ತಮಗೆ ನೆರವಾಗುವ ಪಕ್ಷಗಳಿಗೆ ಧಾರಾಳವಾಗಿ ಹಣಕಾಸಿನ ನೆರವನ್ನು ನೀಡುತ್ತಿದ್ದರು. ತೆರೆ ಮರೆಯಲ್ಲಿ ಇದ್ದು ಅವರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ, ಈಗ ಹಾಗಿಲ್ಲ. ನೇರವಾಗಿ ಅವರೇ ರಾಜಕೀಯಕ್ಕೆ ಬರುತ್ತಿದ್ದಾರೆ. ಕ್ರೊನಿ ಕ್ಯಾಪಿಟಲಿಸಂ ಅಂದರೆ ಇದೇ ಎಂದು ಹೇಳಬಹುದು.
ಸ್ವಾತಂತ್ರ್ಯ ಬಂದ ಹೊಸದರಲ್ಲಿ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿಂದ ಬಂದವರು ಸದನದಲ್ಲಿ ಕಾಣುತ್ತಿದ್ದರು. ಆದರೂ ಆಗಲೂ ಕೂಡ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದಿದ್ದವರು ಕಾಂಗ್ರೆಸ್ ಪಕ್ಷವನ್ನು ಸೇರಿ ಅಧಿಕಾರದ ಆಯಕಟ್ಟಿನ ಸ್ಥಾನಗಳಲ್ಲಿ ತುಂಬಿರುವರೆಂದು ನೈಜ ಸ್ವಾತಂತ್ರ್ಯ ಹೋರಾಟಗಾರರು ಕಾಂಗ್ರೆಸ್ ಪಕ್ಷದಿಂದ ಹೊರ ಬಿದ್ದು ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳನ್ನು ಸೇರಿ, ಇಲ್ಲವೇ ತಮ್ಮದೇ ಪಕ್ಷಗಳನ್ನು ಕಟ್ಟಿಕೊಂಡ ಉದಾಹರಣೆಗಳೂ ಇವೆ.
ಇದೆಲ್ಲ ಇದ್ದರೂ ತೊಂಭತ್ತರ ದಶಕದವರೆಗೆ ಅಂದರೆ ಉದಾರೀಕರಣದ, ಜಾಗತೀಕರಣದ ಶಕೆ ಆರಂಭವಾ ಗುವವರೆಗೆ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಅಂಥ ಧನವಂತರಲ್ಲದ ಮಧ್ಯಮ ವರ್ಗದ ರೈತಾಪಿ ಸಮುದಾಯದಿಂದ ಬಂದವರು ಚುನಾಯಿತರಾಗಿ ಬರುತ್ತಿದ್ದರು. ಶಾಂತವೇರಿ ಗೋಪಾಲಗೌಡರು, ಕಾಗೋಡು ತಿಮ್ಮಪ್ಪ, ಬಿ.ವಿ.ಕಕ್ಕಿಲ್ಲಾಯ, ಎಂ.ಎಸ್.ಕೃಷ್ಣ ನ್, ಪಂಪಾಪತಿ, ಗಂಗಾಧರ ನಮೋಶಿ, ಇದಿನಬ್ಬ ಇಂಥವರೆಲ್ಲ ಸದನದಲ್ಲಿ ಇರುತ್ತಿದ್ದರು. ಸದನದಲ್ಲಿ ಶಾಂತವೇರಿ ಗೋಪಾಲಗೌಡರು ಜನರ ಸಮಸ್ಯೆಗಳ ಬಗ್ಗೆ ಎಷ್ಟು ಆಕ್ರೋಶದಿಂದ ಮಾತನಾಡುತ್ತಿದ್ದರೆಂದರೆ ಒಮ್ಮೆ ರಾಜ್ಯಪಾಲರ ಭಾಷಣದ ಪ್ರತಿಯನ್ನೇ ಹರಿದು ಬಿಸಾಕಿದರು. ಇನ್ನೊಮ್ಮೆ ಎದುರಿನ ಧ್ವನಿ ವರ್ಧಕವನ್ನು ಮುರಿದರು. ಆದರೆ ಸರಳ ಮತ್ತು ಪ್ರಾಮಾಣಿಕರಾಗಿದ್ದ
ಅವರನ್ನು ಎಲ್ಲರೂ ಗೌರವಿಸುತ್ತಿದ್ದರು. ನಮ್ಮ ಬಿಜಾಪುರ ಜಿಲ್ಲೆಯ ಸಿಂದಗಿಯಿಂದ ಪಡಗಾನೂರು ಶಂಕರಗೌಡರದ್ದು ತಮ್ಮ ಮತಕ್ಷೇತ್ರದಲ್ಲಿ ಸೈಕಲ್ ಮೇಲೆ ಪ್ರಯಾಣ. ಸದನದಲ್ಲಿ ಬಿಜಾಪುರ ಜಿಲ್ಲೆಯ ಬರಗಾಲದ ಪರಿಸ್ಥಿತಿಯ ಬಗ್ಗೆ ವಿವರಿಸುವಾಗ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ಕಿವಿಗೊಡದಿದ್ದರೆ ಸದನದಲ್ಲಿ ಬೊಬ್ಬೆ ಹಾಕುತ್ತಿದ್ದರು. ಬಹಳ ಹಿಂದೆ ಅಲ್ಲ ಒಂದೂವರೆ ದಶಕದ ಹಿಂದೆ ಕಮ್ಯುನಿಸ್ಟ್ ಸದಸ್ಯ ಜಿ.ವಿ.ಶ್ರೀ ರಾಮರೆಡ್ಡಿ, ವಾಟಾಳ್ ನಾಗರಾಜ್ , ಜಯಪ್ರಕಾಶ್ ಹೆಗ್ಡೆ ಅಂಥವರು ಸದನದಲ್ಲಿ ಜನರ ಧ್ವನಿಯಾಗಿ ಮಾತಾಡುತ್ತಿದ್ದರು.
ಆದರೆ ಈಗ ಮಾರುಕಟ್ಟೆ ಆರ್ಥಿಕತೆಯ ಯುಗ ಆರಂಭವಾದ ನಂತರ ನಮ್ಮ ಚುನಾಯಿತ ಸಂಸ್ಥೆಗಳ ಸ್ವರೂಪವೇ ಬದಲಾಗತೊಡಗಿತು. ರಿಯಲ್ ಎಸ್ಟೇಟ್ ಉದ್ಯಮಿಗಳು, ಅಕ್ರಮ ಗಣಿಗಾರಿಕೆಗಳಲ್ಲಿ ತೊಡಗಿದವರು, ಭಾರೀ ಉದ್ಯಮಪತಿಗಳು, ಸಕ್ಕರೆ ಕಾರ್ಖಾನೆಗಳ ಮಾಲಕರು ನೇರವಾಗಿ ರಾಜಕೀಯವನ್ನು ಪ್ರವೇಶಿಸಿ ಶಾಸನ ಸಭೆಗಳಿಗೆ ಚುನಾಯಿತರಾಗಿ ಬರತೊಡಗಿದರು.ಮತದಾರರಿಗೆ ಆಮಿಷವೊಡ್ಡಿ, ಜಾತಿ ರಾಜಕೀಯವನ್ನು ಬಳಸಿಕೊಂಡು ಚುನಾಯಿತರಾಗಿ ಬರುವ ಇವರು ತಮಗೆ ದೊರೆತ ರಾಜಕೀಯ ಅಧಿಕಾರವನ್ನು ತಮ್ಮ ವ್ಯವಹಾರ, ದಂಧೆಗಳ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳತೊಡಗಿದರು. ತಮ್ಮ ಮತಕ್ಷೇತ್ರಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುವ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ. ಇದಕ್ಕೆ ಬಳ್ಳಾರಿಯ ಗಣಿ ದಂಧೆಕೋರರ ಬಾನಗಡಿಯ ಇತಿಹಾಸವೇ ಒಂದು ಉದಾಹರಣೆಯಾಗಿದೆ. ಸಂಡೂರು ಮುಂತಾದ ಕಡೆ ಗಣಿಗಾರಿಕೆಯಿಂದ ಯಾವುದೇ ಅಭಿವೃದ್ಧಿಯಾಗಲಿಲ್ಲ. ಬದಲಿಗೆ ನಿತ್ಯ ಅದಿರುಗಳನ್ನು ಹೊತ್ತ ಸಾವಿರಾರು ಲಾರಿಗಳು ಗಣಿ ಪ್ರದೇಶಗಳಿಂದ ಹೊರಟು ಮಧ್ಯದ ಹೊಸಪೇಟೆ, ಕೊಪ್ಪಳ, ಗದಗ,ಹುಬ್ಬಳ್ಳಿ, ಕಲಘಟಗಿ ಹೀಗೆ ಕ್ರಮಿಸಿ ಕಾರವಾರದ ಬಂದರನ್ನು ಸೇರುತ್ತಿದ್ದವು. ನಿತ್ಯ ಸಾವಿರಕ್ಕೂ ಹೆಚ್ಚು ಅದಿರು ಹೊತ್ತ ಲಾರಿಗಳ ಓಡಾಟದಿಂದಾಗಿ ರಸ್ತೆಗಳು ನಾಶವಾಗಿ ಹೋದವು.ಈ ರಸ್ತೆಗಳ ನಾಶಕ್ಕೆ ದಂಡವೆಂದು ಈ ಗಣಿ ಉದ್ಯಮಿಗಳಿಂದ ಸರಕಾರ ಹಣವನ್ನು ವಸೂಲಿ ಮಾಡಲಿಲ್ಲ. ಜನತೆಯ ಬೊಕ್ಕಸದ ಹಣದಿಂದ ಇವುಗಳನ್ನು ಸುಸ್ಥಿತಿಗೆ ತರಲು ನೂರಾರು ಕೋಟಿ ರೂಪಾಯಿಗಳನ್ನು ಸರಕಾರ ಖರ್ಚು ಮಾಡಿತು.
____ ಇಷ್ಟೆಲ್ಲಾ ಲೂಟಿ ಮಾಡುವ ಇವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಇದ್ದರೂ ಇವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಬಿಜೆಪಿಯಲ್ಲಿ. ಕರ್ನಾಟಕದಲ್ಲಿ ಆಪರೇಷನ್ ಕಮಲದ ಶಾಸಕರ ಖರೀದಿಯ ಸೂತ್ರಧಾರರು ಇದೇ ಗಣಿ ಲೂಟಿಕೋರರು. ಭಾರತ ಮಾತೆಯ ಒಡಲು ಬಗೆದು ಅಮೂಲ್ಯ ಗಣಿ ಸಂಪತ್ತನ್ನು ದೋಚಿದವರು ನಮಸ್ತೆ ಸದಾ ವತ್ಸಲೆ ಎಂದು ಭಾರತಾಂಬೆಯ ಮೇಲೆ ಪ್ರಾರ್ಥನೆ ಮಾಡುವ ಪರಿವಾರಕ್ಕೂ ಆಸರೆದಾತರಾದರು.ಇವರಿಂದ ಕೋಟಿ ಕೋಟಿ ಗುರುದಕ್ಷಿಣೆ ಪಡೆದವರಿಗೆ ಭಾರತ ಮಾತೆಗಿಂತ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮರು ಜೀವ ನೀಡುವ ಮನುವಾದಿ ರಾಷ್ಟ್ರ ನಿರ್ಮಾಣ ಮೊದಲ ಆದ್ಯತೆಯಾಗಿತ್ತು.
ಮತದಾರರನ್ನು ಓಲೈಸಲು ಸಾಮೂಹಿಕ ಮದುವೆ,ಗ್ರಾಮೀಣ ಪ್ರದೇಶಗಳ ಕ್ರೀಡಾ ತಂಡಗಳಿಗೆ ಹಣ ಸಹಾಯ ಮುಂತಾದವುಗಳನ್ನು ಕೆಲವರು ಮಾಡಿದರೆ ಬಿಜಾಪುರದ ಶಾಸಕರೊಬ್ಬರು ತಮ್ಮ ಕೋಟ್ಯಂತರ ರೂಪಾಯಿಗಳ ಅಕ್ರಮ ವ್ಯವಹಾರಗಳನ್ನು ಮುಚ್ಚಿ ಕೊಳ್ಳಲು ಮುಸ್ಲಿಮ್ ವಿರೋಧಿ ಉದ್ರೇಕಕಾರಿ ಭಾಷಣಗಳಿಗೆ ಮೊರೆ ಹೋದರು. ಇವರು ಜನರಿಂದ ಬಡ್ಡಿಯ ಆಸೆ ಹಚ್ಚಿ ಹಣ ದೋಚುವ ಹಲವಾರು ವ್ಯವಹಾರಗಳನ್ನು ನಡೆಸಿದರು. ಅವುಗಳಲ್ಲಿ ಸಕ್ಕರೆ ಕಾರ್ಖಾನೆಯೂ ಒಂದು. ಇದರ ಬಗ್ಗೆ ಜನ ಮಾತಾಡಬಾರದೆಂದು ತನ್ನ ಹೊಲಸು ನಾಲಗೆಯ ಮೂಲಕ ಮುಸಲ್ಮಾನರ ಮೇಲೆ ವಿಷ ಕಾರ ತೊಡಗಿದರು. ನಮ್ಮ ಯುವಕರಿಗೂ ಈಗ ಇಂಥವರೇ ಬೇಕಾಗಿದ್ದಾರೆ.ಇವರನ್ನು ಭಾಷಣಕ್ಕೆ ಕರ್ನಾಟಕದ ಹಲವಾರು ಊರುಗಳಲ್ಲಿ ಕರೆಸುತ್ತಿದ್ದಾರೆ.
ಜನ ಹೋರಾಟಗಳಿಂದ ಬಂದವರು ಶಾಸನಗಳನ್ನು ರೂಪಿಸುವ ಸದನಗಳಲ್ಲಿ ಇದ್ದರೆ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಬಹುದು. ಅವರಿಗೆ ಜನರ ಬಗ್ಗೆ ಕಾಳಜಿ ಮತ್ತು ಮತದಾರರ ಹೆದರಿಕೆ ಇರುತ್ತದೆ. ಆದರೆ ಗಣಿ ಉದ್ಯಮಪತಿಗಳು, ರಿಯಲ್ ಎಸ್ಟೇಟ್ ಕುಳಗಳು, ‘ಶಿಕ್ಷಣದ ಅಂಗಡಿ’ಗಳನ್ನು ಇಟ್ಟುಕೊಂಡವರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲಕರು ಸದನದಲ್ಲಿ ಸಚಿವ ಸಂಪುಟದಲ್ಲಿ ತುಂಬಿ ಕೊಂಡರೆ ಅವರು ಸಹಜವಾಗಿ ತಮ್ಮ ಉದ್ಯಮಗಳ ಹಿತಾಸಕ್ತಿಯ ಪರವಾಗಿರುತ್ತಾರೆ. ಅವರಿಗೆ ಅಭಿವೃದ್ಧಿ ಅಂದರೆ ತಮ್ಮ ಅಭಿವೃದ್ಧಿ ಮಾತ್ರ. ಇಂಥವರು ಮಾಡುವ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರವೂ ಹೆದರುತ್ತದೆ. ಮಹತ್ವದ ಅಧಿಕಾರ ಸ್ಥಾನಗಳಲ್ಲಿ ಇವರು ಇರುವುದರಿಂದ ಇವರನ್ನು ಮುಟ್ಟಲು ಸಂಬಂಧಿಸಿದ ಸರಕಾರಿ ಇಲಾಖೆಗಳೂ ಹಿಂಜರಿಯುತ್ತವೆ.
ಆದ್ದರಿಂದ ಜನ ಚಳವಳಿಗಳಿಗೆ ಪುನಶ್ಚೇತನ ನೀಡಿ ಶಾಸನಗಳನ್ನು ರೂಪಿಸುವ ಸದನಗಳಲ್ಲಿ ಹೋರಾಟಗಳಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ಎಚ್ಚರ ವಹಿಸಬೇಕಾಗಿದೆ.







