ಹೋರಾಟವೆಂದರೆ ಹೀಗಿರಬೇಕು

ಬಿಜಾಪುರದಲ್ಲಿ ನಡೆದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ರಾಜ್ಯದ ಎಲ್ಲರಿಗೂ ಮಾದರಿಯಾಗಿದೆ. ಈ ಹೋರಾಟದಲ್ಲಿ ರೈತ, ದಲಿತ,ಕಾರ್ಮಿಕ ಸಂಘಟನೆಗಳು, ಎಡಪಂಥೀಯ ಪಕ್ಷಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವು. ಇವರೆಲ್ಲರ ಏಕೈಕ ಗುರಿ ಖಾಸಗಿ ಸಹಭಾಗಿತ್ವ ಇಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿತ್ತು ಈ ಹೋರಾಟದ ಪರಿಣಾಮವಾಗಿ ಬಿಜಾಪುರ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಬೇಕಾಗಿ ಬಂತು.
ಇತ್ತೀಚಿನ ವರ್ಷಗಳಲ್ಲಿ ಬಿಜಾಪುರ ಜಿಲ್ಲೆ ಮಾತ್ರವಲ್ಲ ಉತ್ತರ ಕರ್ನಾಟಕ ಇಂಥದೊಂದು ಹೋರಾಟವನ್ನು ಕಂಡಿರಲಿಲ್ಲ. ಕಳೆದ ಎರಡೂ ವರೆ ದಶಕಗಳಿಂದ ನಿತ್ಯ ಪ್ರಚೋದನಕಾರಿ ಭಾಷಣಗಳು, ಜನಾಂಗ ದ್ವೇಷದ ಮಾತುಗಳನ್ನು ಕೇಳಿ ತತ್ತರಿಸಿ ಹೋಗಿದ್ದ ಈ ಭಾಗದಲ್ಲಿ ಜನರಿಗೆ, ನಾಡಿನ ಬದುಕಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟಗಳು ಅಪರೂಪವಾಗಿದ್ದವು. ಹಿಂದೂ ಮುಸಲ್ಮಾನರು ಜತೆಗೂಡಿ ಮೊಹರಂ, ದೀಪಾವಳಿ ಆಚರಿಸುತ್ತ ಬಂದ ಪ್ರದೇಶವಿದು. ಸೌಹಾರ್ದ ಇಲ್ಲಿನ ಸಹಜ ಸಂಸ್ಕೃತಿ.ವಿವಿಧ ಸಮುದಾಯಗಳ ನಡುವೆ ಕೊಳ್ಳಿ ಇಡುವ ಅಸಹಜ ಕುಸಂಸ್ಕೃತಿಯೊಂದು ಇತ್ತೀಚೆಗೆ ವ್ಯಾಪಕವಾಗಿ ನೆಲೆಯೂರಲು ಹವಣಿಸುತ್ತಿತ್ತು. ಇಂಥ ನಿರಾಶಾದಾಯಕ ವಾತಾವರಣದಲ್ಲಿ ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಹೊಸ ಭರವಸೆಯನ್ನು ಮೂಡಿಸಿತು. ಇನ್ನು ಮುಂದೆ ಒಂಟಿ ಹೋರಾಟಗಳಿಗೆ ಭವಿಷ್ಯವಿಲ್ಲ, ಜಂಟಿ ಹೋರಾಟಗಳಿಗೆ ಸೋಲಿಲ್ಲ ಎಂಬ ಸಂದೇಶಗಳನ್ನು ನಾಡಿಗೆ ನೀಡಿ ಹೊಸ ದಾರಿಯನ್ನು ತೋರಿಸಿತು ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ.
ನನ್ನ ಬಿಜಾಪುರ ಜಿಲ್ಲೆಯಲ್ಲಿ ಇಂಥದೊಂದು ಹೋರಾಟ ಇತ್ತೀಚಿನ ದಿನಗಳಲ್ಲಿ ನಡೆದಿರಲಿಲ್ಲ. ಆಲಮಟ್ಟಿ ಅಣೆಕಟ್ಟೆಗಾಗಿ ಅರುವತ್ತರ ದಶಕದಲ್ಲಿ ನಡೆದ ಸುದೀರ್ಘ ಹೋರಾಟದ ನೆನಪು ನನಗಿನ್ನೂ ಇದೆ. ಆಗ ಬಿಜಾಪುರದ ಲೋಕಸಭಾ ಸದಸ್ಯರಾಗಿದ್ದ ಕಾಂಗ್ರೆಸ್‌ನ ರಾಜಾರಾಮ ದುಬೆ, ಗುಡದಿನ್ನಿ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಎನ್.ಕೆ. ಉಪಾಧ್ಯಾಯ, ಡಾ.ಅಂಬೇಡ್ಕರ್ ಅವರ ರಿಪಬ್ಲಿಕನ್ ಪಕ್ಷದ ಶಾಸಕ ಸಿದ್ಧಾರ್ಥ ಅರಕೇರಿ, ಸುಗಂಧಿ ಅವರ ಜಂಟಿ ನಾಯಕತ್ವದಲ್ಲಿ ದೀರ್ಘವಾಗಿ ನಡೆದ ಹೋರಾಟಕ್ಕೆ ಸರಕಾರ ಕೊನೆಗೂ ಮಣಿಯಿತು.ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬಿಜಾಪುರಕ್ಕೆ ಬಂದು ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಅದರ ನಂತರ ನಡೆದ ಬಹುದೊಡ್ಡ, 106 ದಿನಗಳಷ್ಟು ದೀರ್ಘ ಕಾಲದ ಹೋರಾಟವೆಂದರೆ ಬಿಜಾಪುರಕ್ಕೆ ಸರಕಾರಿ ಮೆಡಿಕಲ್ ಕಾಲೇಜು ಆಗ ಬೇಕೆಂದು ನಡೆದ ಹೋರಾಟವೆಂದರೆ ಅತಿಶಯೋಕ್ತಿಯಲ್ಲ. ಈ ಆಂದೋಲನವನ್ನು ಸಂಘಟಿಸಿದವರು ಯಾವುದೇ ಒಂದು ಪಕ್ಷದವರಲ್ಲ, ಸಂಘಟನೆಯವರಲ್ಲ, ಇದು ಎಲ್ಲ ಜನಪರ ಸಂಘಟನೆಗಳು ಸಮಾನ ಮನಸ್ಕ ಗೆಳೆಯರು ಕೂಡಿ ನಡೆಸಿದ ಹೋರಾಟ. ಇದರಲ್ಲಿ ಕಾಂಗ್ರೆಸ್, ರೈತ ಸಂಘ, ಜೆಡಿಎಸ್,
ಸಿಪಿಐ, ಸಿಪಿಎಂ, ಎಸ್.ಯು.ಸಿ.ಐ ಎಲ್ಲ ದಲಿತ ಸಂಘಟನೆಗಳು ಪಾಲ್ಗೊಂಡಿದ್ದವು. ಹೋರಾಟ ತೀವ್ರ ಸ್ವರೂಪ ತಾಳಿದಾಗ ಈ ಚಳವಳಿಯ ನಾಯಕರಾದ ಹೆಸರಾಂತ ಅಂಬೇಡ್ಕರ್‌ವಾದಿ ಲೇಖಕ, ಪತ್ರಕರ್ತ ಅನಿಲ ಹೊಸಮನಿ , ಎಸ್.ಯು.ಸಿ.ಐ.ನ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಭಗವಾನ ರೆಡ್ಡಿ, ಆಮ್ ಆದ್ಮಿ ಪಕ್ಷದ ಭೋಗೇಶ ಸೊಲ್ಲಾಪುರ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಹುಣಶ್ಯಾಳದ ಸಂಗನ ಬಸವ ಸ್ವಾಮೀಜಿ ಇವರನ್ನು ಬಂಧಿಸಲಾಯಿತು. ಇದರ ಬಿಸಿ ಬೆಂಗಳೂರಿನವರೆಗೂ ತಲುಪಿತು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜಾಪುರಕ್ಕೆ ಬಂದು ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಭರವಸೆಯನ್ನು ನೀಡಿದರು. ಆದರೂ ಬಂಧಿತರ ಬಿಡುಗಡೆಯಾಗಿರಲಿಲ್ಲ. ಎರಡು ವಾರ ಕಾಲ ಜೈಲು ವಾಸ ಅನುಭವಿಸಿದ ನಂತರ ನ್ಯಾಯಾಲಯ ಇವರನ್ನು ಸಂಕ್ರಮಣದ ದಿನ ಜನವರಿ 14ರಂದು ಜಾಮೀನು ಮೇಲೆ ಬಿಡುಗಡೆ ಮಾಡಿತು. ಖಾಸಗಿ ಸಹಭಾಗಿತ್ವದ (ಪಿಪಿಪಿ) ಹೆಸರಿನಲ್ಲಿ 150 ಎಕರೆ ಅಮೂಲ್ಯ ಭೂಮಿಯನ್ನು ನುಂಗುವ ಮಸಲತ್ತು ನಡೆದಿತ್ತು. (ನುಂಗಪ್ಪಗಳು ಯಾರೆಂಬುದು ಈಗ ಬೇಡ) ಆದರೆ ಈ ಮಸಲತ್ತನ್ನು ಅವಿರತ ಹೋರಾಟದ ಮೂಲಕ ಜನ ವಿಫಲಗೊಳಿಸಿದರು. ನಾವು (ಡಾ.ಸಿದ್ಧನ ಗೌಡ ಪಾಟೀಲ, ಡಾ. ಮಲ್ಲಿಕಾ ಘಂಟಿ, ಡಾ.ರಾಜೇಂದ್ರ ಪೊದ್ದಾರ, ಶಂಕರ ಹಲಗತ್ತಿ, ಮೊದಲಾದವರು) ಅಲ್ಲಿ ಹೋಗಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದೆವು. ಈಗ ಹೋರಾಟದ ಗೆಳೆಯರು ಜಾಮೀನು ಮೇಲೆ ಬಿಡುಗಡೆ ಯಾದರೂ ಅವರ ಮೇಲೆ ಹಲವಾರು ಖಟ್ಲೆಗಳನ್ನು ಹಾಕಲಾಗಿದೆ. ಸರಕಾರ ಅವರ ಮೇಲಿನ ಖಟ್ಲೆಗಳನ್ನು ವಾಪಸ್ ಪಡೆಯಬೇಕು. ಇದರಿಂದ ಸ್ಪಷ್ಟವಾದ ಅಂಶವೆಂದರೆ ಎಲ್ಲ ಸಮಾನ ಮನಸ್ಕರು ಜೊತೆ ಗೂಡಿ ಹೋರಾಟಕ್ಕೆ ಇಳಿದರೆ ಗೆಲುವು ಅಸಾಧ್ಯವಲ್ಲ. ಇನ್ನೊಂದು ಅಂಶವೆಂದರೆ ಇನ್ನು ಮುಂದೆ ಹೋರಾಟವೇ ಉಳಿದ ದಾರಿ ಎಂಬುದು ಬಿಜಾಪುರದ ಹೋರಾಟದಿಂದ ಸ್ಪಷ್ಟವಾಗಿದೆ.
ರಾಜ್ಯದ ಹಲವಾರು ಕಡೆ ಆಗಾಗ ಚಳವಳಿ, ಹೋರಾಟಗಳು ನಡೆಯುತ್ತಿರುತ್ತವೆ. ಬಹುತೇಕ ಹೋರಾಟಗಳು ಸಣ್ಣಪುಟ್ಟ ಬೇಡಿಕೆಗಳಿಗಾಗಿ ನಡೆಯುತ್ತವೆ. ಅವೂ ಕೂಡ ಯಶಸ್ವಿಯಾದ ಉದಾಹರಣೆಗಳು ವಿರಳ. ಆದರೆ ನವ ಉದಾರೀಕರಣದ ಈ ಕಾಲಘಟ್ಟದಲ್ಲಿ ಖಾಸಗಿ ಸಹಭಾಗಿತ್ವದ ಸರಕಾರಿ ಕಾಲೇಜು ಸ್ಥಾಪನೆಯ ಸರಕಾರದ ಮಸಲತ್ತನ್ನು ವಿರೋಧಿಸಿ ನಡೆದ ಹೋರಾಟವಿದು. ಈ ಹೋರಾಟವನ್ನು ವಿಫಲಗೊಳಿಸಲು ಹಲವಾರು ತಂತ್ರ, ಕುತಂತ್ರಗಳು ನಡೆದವು. ತೊಂಭತ್ತು ದಿನಗಳ ಧರಣಿ ಸತ್ಯಾಗ್ರಹ, ಹದಿನೈದು ದಿನಗಳ ಹಗಲೂ ರಾತ್ರಿ ಕೊರೆಯುವ ಚಳಿಯಲ್ಲಿ ನಡೆದ ಸತ್ಯಾಗ್ರಹ, ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರ ಮನೆಯ ಮುಂದೆ ನಡೆದ ಪ್ರತಿಭಟನೆ, ಆ ಸಂದರ್ಭದಲ್ಲಿ ಆರು ಜನರ ಬಂಧನ.ಇಷ್ಟು ದೀರ್ಘಕಾಲ ಬದ್ಧತೆ, ಸಂಯಮ ಹಾಗೂ ಸ್ಫೂರ್ತಿಯನ್ನು ಇಟ್ಟುಕೊಂಡು ಈ ಹೋರಾಟ ನಡೆಯಿತು. ಇದರ ಯಶಸ್ಸಿನ ಗುಟ್ಟೇನಂದರೆ ಹೋರಾಟದ ಮಧ್ಯದಲ್ಲಿ ಒಡಕು ಬರದಂತೆ ಕಾಯ್ದು ಕೊಂಡಿದ್ದು. ಒಡಕು ಹುಟ್ಟಿಸಲು ನಡೆದ ಹುನ್ನಾರಗಳು ವಿಫಲಗೊಂಡವು.
ಈ ಮೆಡಿಕಲ್ ಕಾಲೇಜು ಹೋರಾಟದಲ್ಲಿ ಪಾಲ್ಗೊಂಡ ಸಂಘಟನೆಗಳಿಗೆ ತಮ್ಮದೇ ಆದ ಪ್ರತ್ಯೇಕ ಅಜೆಂಡಾ ಇರಲಿಲ್ಲ. ಎಲ್ಲರ ಏಕೈಕ ಗುರಿ ಪಿಪಿಪಿ ಅಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿತ್ತು.ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಹಲವಾರು ಕಡೆ ಸಂಯುಕ್ತ ಹೋರಾಟಗಳು ನಡೆದರೂ ಯಶಸ್ವಿಯಾದ ಉದಾಹರಣೆಗಳು ತುಂಬಾ ಕಡಿಮೆ.ರಾಜಕೀಯ ರಂಗವನ್ನು ತೆಗೆದುಕೊಂಡರೂ ಕೂಡ ಬಿಜೆಪಿಯನ್ನು ಕೋಮುವಾದಿ, ಫ್ಯಾಶಿಸ್ಟ್ ಪಕ್ಷ ಎಂದು ಒಪ್ಪಿಕೊಳ್ಳುವವರು ಅದರ ವಿರುದ್ಧ ಒಂದಾಗಿ ಪ್ರತೀ ಕ್ಷೇತ್ರದಲ್ಲಿ ಏಕೈಕ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿದ್ದರೆ ಪರಿಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಪ್ರತಿಪಕ್ಷಗಳ ಈ ಒಡಕು ಬಿಜೆಪಿ ಗೆಲುವಿಗೆ ಕಾರಣವಾಗಿದೆ.ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (ಎನ್‌ಡಿ ಎ) ಅಧಿಕಾರಕ್ಕೆ ಬರುತ್ತಿದೆ. ಅದು ತನ್ನ ಕೋಮುವಾದಿ ಅಜೆಂಡಾಗಳನ್ನು ಜಾರಿಗೆ ತರುತ್ತಲೇ ಇದೆ.ಅದನ್ನು ಫ್ಯಾಶಿಸ್ಟ್ ಎಂದು ಟೀಕಿಸುವವರು ಕೂಡ ಅದನ್ನು ತಡೆಯಲು ಸಾಧ್ಯವಾಗಿಲ್ಲ. ಪ್ರತಿಪಕ್ಷ ಗಳ ಈ ಅನೈಕ್ಯತೆಯ ಕೋಮುವಾದಿ ಶಕ್ತಿಗಳ ಗೆಲುವಿನ ಗುಟ್ಟಾಗಿ ರೈತ, ಕಾರ್ಮಿಕ ಸಂಘಟನೆಗಳು ಜಂಟಿ ಹೋರಾಟಗಳನ್ನು ಮಾಡುತ್ತಲೇ ಬಂದಿವೆ. ಆದರೂ ನವ ಉದಾರೀಕರಣದ ಪ್ರಭುತ್ವದ ಧೋರ ಣೆಯನ್ನು ಪರಾಭವಗೊಳಿಸಲು ಸಾಧ್ಯವಾಗಿಲ್ಲ.
ನಾನು ಅನೇಕ ಜಂಟಿ ಹೋರಾಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಷ್ಟೇ ಅಲ್ಲ ಕೆಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಇದರಲ್ಲಿ ಪಾಲ್ಗೊಳ್ಳುವ ಬಹುತೇಕ ಸಂಘಟನೆಗಳು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತವೆ. ತಮ್ಮದೇ ಆದ ಸ್ವಂತದ ಹೋರಾಟವಿದ್ದರೆ ಮಾತ್ರ ತಮ್ಮ ಸಂಘಟನೆಯ ಎಲ್ಲರೂ ಭಾಗವಹಿಸುವಂತೆ ಎಚ್ಚರ ವಹಿಸುತ್ತವೆ. ಜಂಟಿ ಹೋರಾಟವಾದರೆ ಕೆಲವೇ ಕೆಲವು ನಾಯಕರು ಮಾತ್ರ ಬರುತ್ತಾರೆ. ಹೀಗಾಗಿ ಐಕ್ಯ ಹೋರಾಟಗಳು ಯಶಸ್ವಿಯಾಗುತ್ತಿಲ್ಲ. ಕನಿಷ್ಠ ಜನಸಾಮಾನ್ಯರ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾದರೂ ಸಂಯುಕ್ತ ಹೋರಾಟ ನಡೆಸುವುದು ಇಂದಿನ ಅನಿವಾರ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಬಿಜಾಪುರದಲ್ಲಿ ನಡೆದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ರಾಜ್ಯದ ಎಲ್ಲರಿಗೂ ಮಾದರಿಯಾಗಿದೆ. ಈ ಹೋರಾಟದಲ್ಲಿ ರೈತ, ದಲಿತ,ಕಾರ್ಮಿಕ ಸಂಘಟನೆಗಳು, ಎಡಪಂಥೀಯ ಪಕ್ಷಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವು. ಇವರೆಲ್ಲರ ಏಕೈಕ ಗುರಿ ಖಾಸಗಿ ಸಹಭಾಗಿತ್ವ ಇಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿತ್ತು ಈ ಹೋರಾಟದ ಪರಿಣಾಮವಾಗಿ ಬಿಜಾಪುರ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಬೇಕಾಗಿ ಬಂತು. ಇದು ಇಲ್ಲಿಗೆ ಮುಗಿಯುವುದಿಲ್ಲ. ಆದರೆ ಬರೀ ಭರವಸೆಯನ್ನು ಮಾತ್ರ ನಂಬದೇ ಗುರಿ ಸಾಧಿಸುವ ವರೆಗೆ ಹೋರಾಟವನ್ನು ನಿಧಾನವಾಗಿ ನಡೆಸಿಕೊಂಡು ಹೋಗಬೇಕಾಗಿದೆ. ಮಾರ್ಚ್‌ನಲ್ಲಿ ಮಂಡಿಸಲ್ಪಡುವ ಮುಂಗಡ ಪತ್ರದಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಅನುದಾನವನ್ನು ಒದಗಿಸಲು ಒತ್ತಡ ತರಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಜೊತೆಗೂಡಿ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ.
ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ವಿಷಯದಲ್ಲಿ ಜನರು ಬೀದಿಗೆ ಬರುವ ಮೊದಲು ಜನ ಪ್ರತಿನಿಧಿಗಳು ಜಿಲ್ಲೆಯ ಹಾಗೂ ತಮ್ಮನ್ನು ಚುನಾಯಿಸಿದ ಜನರ ಹಿತರಕ್ಷಣೆಗಾಗಿ ಖಾಸಗಿ ಸಹಭಾಗಿತ್ವವನ್ನು ವಿರೋಧಿಸಿ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜಿನ ಪರವಾಗಿ ಸರಕಾರದ ಮೇಲೆ ಒತ್ತಡ ತರಬೇಕಾಗಿತ್ತು.ಆದರೆ ಪಾಟೀಲರು, ಗೌಡರು, ನಾಡಗೌಡರು, ದೇಸಾಯರು ಮೊದಲಾದ ಫ್ಯೂಡಲ್ ಧಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿರುವ ಜಿಲ್ಲೆ ಬಿಜಾಪುರ. ಇವರಲ್ಲಿ ಬಹುತೇಕ ಶಾಸಕರಿಗೆ ಸ್ವಹಿತಾಸಕ್ತಿ ಮುಖ್ಯವಾಗಿರುತ್ತದೆ. ಎಲ್ಲರೂ ಹಾಗಿಲ್ಲವಾದರೂ ವಿಷ ಕಕ್ಕುವ ಮಾತುಗಳಿಗೆ ಹೆಸರಾದ ಬಿಜಾಪುರ ನಗರ ಶಾಸಕ ಯತಾಳ್ ಗೌಡರು ಇಡೀ ಪ್ರಕರಣದಲ್ಲಿ ಖಳನಾಯಕ ನಂತೆ ಕಾಣಿಸಿಕೊಂಡರು. ಖಾಸಗಿ ಸಹಭಾಗಿತ್ವದ ಸರಕಾರಿ ಮೆಡಿಕಲ್ ಕಾಲೇಜಿನ ಪಾಲುಗಾರಿಕೆ ವಹಿಸಲು 500 ಕೋಟಿ ರೂಪಾಯಿ ಕೊಡುವುದಾಗಿ ಸದನದಲ್ಲೇ ಅವರು ಹೇಳಿದ್ದರು. ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಆರಂಭವಾದಾಗ ಸ್ಥಳೀಯ ಶಾಸಕನಾಗಿ ಕನಿಷ್ಠ ಸಹಾನುಭೂತಿಯನ್ನು ಅವರು ತೋರಿಸಲಿಲ್ಲ. ಬದಲಿಗೆ ಹೋರಾಟಗಾರರನ್ನು ಪೇಮೆಂಟ್ ಗಿರಾಕಿಗಳೆಂದು ಅವಮಾನಿಸಿದರು. ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಧರಣಿ ನಡೆದ ಸ್ಥಳಕ್ಕೆ ಬಂದು ಸಹಾನುಭೂತಿ ತೋರಿಸಿದರು. ಆದರೆ ಈ ಗೆಲುವಿನ ಮೊದಲ ಶ್ರೇಯಸ್ಸು ಹೋರಾಟಗಾರರಿಗೆ ಸಲ್ಲಬೇಕು. ಹೋರಾಟ ನಡೆಯದಿದ್ದರೆ ಇಷ್ಟೊತ್ತಿಗೆ ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ತಲೆ ಎತ್ತಲು ಪೂರ್ವ ತಯಾರಿಗಳು ನಡೆಯುತ್ತಿದ್ದವು.ಹೋರಾಟಗಾರರ ಜೊತೆಗೆ ಇದರ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡಿದವರು ಬಿಜಾಪುರದ ಮಾಧ್ಯಮದ ಗೆಳೆಯರು.ಅವರು ಬಿಟ್ಟೂ ಬಿಡದೇ ಬೆನ್ನು ಹತ್ತಿದರು. ಇದೇ ಕಾರಣಕ್ಕಾಗಿ ಯುವ ಪತ್ರಕರ್ತ ಮಿತ್ರ ಬಸವರಾಜ ಸಂಪಳ್ಳಿ ಅವರಿಗೆ ಎಂ.ಬಿ.ಪಾಟೀಲರು ಆ್ಯಕ್ಟಿವಿಸ್ಟ್ ತರ ಮಾತಾಡಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು. ಆದರೆ ಸಚಿವರಿಗೆ ಗೊತ್ತಿಲ್ಲ ‘ಜರ್ನಲಿಸ್ಟ್ ಒಳಗೆ ಒಬ್ಬ ಆ್ಯಕ್ಟಿವಿಸ್ಟ್ಟ್’ ಇರದಿದ್ದರೆ ಆತ ಪತ್ರಕರ್ತನೇ ಅಲ್ಲ. ಇಂದಿನ ನಿರಾಶಾದಾಯಕ ಕಾರ್ಪೊರೇಟ್, ಕಮ್ಯೂನಲ್ ದಿನಗಳಲ್ಲಿ ಸಂಯುಕ್ತ ಹೋರಾಟವೊಂದೇ ಉಳಿದ ದಾರಿಯಾಗಿದೆ.







