ನಿತೀಶ್ ಕುಮಾರ್ ನಿರ್ಗಮನದ ಸಂದೇಶ ಏನು?

ಬಿಹಾರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅವರ ಪಕ್ಷಕ್ಕೆ ಬಹುಮತ ನೀಡಿದರು. ಆದರೆ ಜನ ಏನೇ ತೀರ್ಮಾನ ನೀಡಲಿ ನೀವು ರಾಜ್ಯಸಭಾ ಸದಸ್ಯರಾಗಿ ಎಂದು ಮಿತ್ರ ಪಕ್ಷ ಬಿಜೆಪಿ ಆದೇಶ ನೀಡಿದ ನಂತರ ನಿತೀಶ್ ಕುಮಾರ್ ದುಸರಾ ಮಾತಾಡದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಗೆ ನೀಡಿದರು. ಆದರೆ ತಕ್ಷಣಕ್ಕೆ ರಾಜೀನಾಮೆ ನೀಡಿಲ್ಲ. ಬಹುಶಃ ಎಪ್ರಿಲ್ 5 ಅಥವಾ 6ರಂದು ಬಿಹಾರದ ಎನ್‌ಡಿಎ ಶಾಸಕಾಂಗ ಸಭೆಯಲ್ಲಿ ನೂತನ ನಾಯಕನ ಆಯ್ಕೆಯ ಸಂದರ್ಭ ಅವರು ಪದತ್ಯಾಗ ಮಾಡಬಹುದು. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪಕ್ಕದಲ್ಲಿ ಕೂತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಿಯಾಗಿ ತುಂಬಿದ್ದಾರೋ ಇಲ್ಲವೋ ಎಂದು ಅವರ ನಾಮಪತ್ರವನ್ನೇ ದಿಟ್ಟಿಸಿ ನೋಡುತ್ತಿದ್ದರು. ಬಿಜೆಪಿ ಸ್ನೇಹ ಧರ್ಮ ಹೇಗೆಂದರೆ ತನ್ನೊಂದಿಗೆ ಮೈತ್ರಿ ಮಾಡಿಕೊಂಡ ಯಾವ ಮಿತ್ರಪಕ್ಷವನ್ನೂ ಅದು ನಾಶ ಮಾಡದೇ ಬಿಡುವುದಿಲ್ಲ. ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳವನ್ನು ಮುಗಿಸಲು ಅಮಿತ್ ಶಾ ಮತ್ತು ನಾಗಪುರದ ಗುರುಗಳು ತಮ್ಮ ಕಟ್ಟಾ ಭಕ್ತರನ್ನು ಆ ಪಕ್ಷದೊಳಗೆ ಸೇರಿಸಿದ್ದರು. ಸಂಜಯ ಝಾ ಅವರಂಥ ಸ್ವಯಂ ಸೇವಕ ಜೆಡಿಯುವನ್ನು ನಿಯಂತ್ರಿಸುತ್ತಿದ್ದರು. ಬಿಜೆಪಿ ಆರೆಸ್ಸೆಸ್‌ನ ರಾಜಕೀಯ ವೇದಿಕೆ. ಪ್ರಜಾಪ್ರಭುತ್ವ ಮತ್ತು ಮೈತ್ರಿ ಧರ್ಮದಲ್ಲಿ ಅದಕ್ಕೆ ಅಂಥ ನಂಬಿಕೆಯಿಲ್ಲ. ಅದು ತನ್ನೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷಗಳನ್ನು ಒಡೆದು ನಾಶ ಮಾಡತ್ತಿರುವುದು ಇದು ಮೊದಲ ಸಲವಲ್ಲ. ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಬುಟ್ಟಿಗೆ ಹಾಕಿಕೊಂಡ ಬಿಜೆಪಿ ಪಾಸ್ವಾನ್ ನಿಧನದ ನಂತರ ಅವರ ಪಕ್ಷವನ್ನು ಇಬ್ಭಾಗ ಮಾಡಿ ದುರ್ಬಲಗೊಳಿಸಿತು. ಪಂಜಾಬ್‌ನಲ್ಲಿ ದೊಡ್ಡ ಪಕ್ಷವಾಗಿದ್ದ ಅಕಾಲಿದಳದ ಜೊತೆಗೆ ಮೈತ್ರಿ ಮಾಡಿಕೊಂಡು ಹಂತ ಹಂತವಾಗಿ ಅದನ್ನು ಮುಗಿಸಿದ ಬಿಜೆಪಿ ನಾಲ್ಕನೇ ಸ್ಥಾನಕ್ಕೆ ತಳ್ಳಿತು. ಈಗ ಅದು ಹೇಳ ಹೆಸರಿಲ್ಲದಂತಾಗಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆಯ ಜೊತೆಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಆ ಪಕ್ಷವನ್ನು ಒಡೆದು ಎರಡು ಭಾಗ ಮಾಡಿತು. ಉದ್ಧವ್ ಠಾಕ್ರೆ ಅವರ ಪಕ್ಷದ ಏಕನಾಥ್ ಶಿಂದೆಗೆ ಅಧಿಕಾರದ ಆಸೆ ಹಚ್ಚಿ ಮತ್ತು ತನಿಖಾ ಸಂಸ್ಥೆಗಳ ಬೆದರಿಕೆ ಹಾಕಿ ಇಬ್ಭಾಗವಾದ ಶಿವಸೇನೆಯ ಇನ್ನೊಂದು ಬಣಕ್ಕೆ ಅವರನ್ನು ನಾಯಕನನ್ನಾಗಿ ಮಾಡಿತು. ರಾಜಕೀಯ ಚಾಣಕ್ಯ ಎಂದೇ ಹೆಸರಾಗಿದ್ದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್‌ರ ಪಕ್ಷವನ್ನು ಒಡೆದು ಹೋಳು ಮಾಡಿತು. ಅವರ ಅಣ್ಣನ ಮಗ ಅಜಿತ್ ಪವಾರ್ ನೇತೃತ್ವದಲ್ಲಿ ಹೊಸ ಬಣವನ್ನು ಕಟ್ಟಿತು.
ಉತ್ತರ ಪ್ರದೇಶದಲ್ಲಿ ಬಲಿಷ್ಠ ಪಕ್ಷವಾಗಿದ್ದ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರಿಗೆ ತನಿಖಾ ಸಂಸ್ಥೆಯ ಬೆದರಿಕೆಯನ್ನು ಹಾಕಿ ನಿಧಾನವಾಗಿ ಅವರ ಪಕ್ಷದ ಓಟ್ ಬ್ಯಾಂಕ್ ಅನ್ನು ಕಬ್ಜಾ ಮಾಡಿಕೊಂಡಿತು. ಒಡಿಶಾದಲ್ಲಿ ಬಿಜೆಪಿಯ ಜೊತೆಗೆ ದೀರ್ಘ ಕಾಲದ ಮೈತ್ರಿ ಮಾಡಿಕೊಂಡಿದ್ದ ಬಿಜೆಡಿ (ನವೀನ್ ಪಟ್ನಾಯಕ್) ಪಕ್ಷವನ್ನು ಮುಗಿಸಿ ಸ್ವಂತ ಬಲದಿಂದ ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿಯಿತು. ಹರ್ಯಾಣದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ದುಷ್ಯಂತ ಚೌಟಾಲರ ಪಕ್ಷ ಜೆಜೆಪಿ ಮಣ್ಣು ಮುಕ್ಕಿತು. ಈಗ ನಿತೀಶ್ ಕುಮಾರ್ ಸರದಿ. ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ ನಂತರ ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿ ಬರುತ್ತಾರೆ. ಮತ್ತೊಂದೆಡೆ ಅವರ ಸಂಯುಕ್ತ ಜನತಾ ದಳ (ಜೆಡಿಯು) ಹೇಳ ಹೆಸರಿಲ್ಲದಂತೆ ಆಗುತ್ತದೆ.
ಬಿಹಾರ ಮತ್ತು ಉತ್ತರ ಪ್ರದೇಶಗಳು ಅತ್ಯಂತ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ಹಿಂದಿ ಭಾಷಿಕ ರಾಜ್ಯಗಳು. ಇವೆರಡು ರಾಜ್ಯಗಳನ್ನು ವಶಪಡಿಸಿಕೊಂಡರೆ ಇಡೀ ಭಾರತವನ್ನು ಸ್ವಾಧೀನ ಪಡಿಸಿಕೊಳ್ಳುವುದು ಸುಲಭ ಎಂಬುದು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಹಿನ್ನೆಲೆಯ ಸಂಘಟನೆಯಾದ ಆರೆಸ್ಸೆಸ್ ಲೆಕ್ಕಾಚಾರ. ಈ ಗುರಿಯನ್ನು ಇಟ್ಟುಕೊಂಡೇ ಗುಜರಾತ್‌ನ ಸೋಮೇಶ್ವರದಿಂದ ಅಡ್ವಾಣಿ ಅವರು ರಥಯಾತ್ರೆ ಹೊರಡಿಸಲು ಸೂಚನೆ ನೀಡಿದವರು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಗುರುಗಳು. ಆಗ ಅಂದರೆ ತೊಂಭತ್ತರ ದಶಕದಲ್ಲಿ ಸಂಘ ಪರಿವಾರಕ್ಕೆ ದೊಡ್ಡ ಅಡ್ಡಿಯಾದವರು ಇಬ್ಬರು ಸಮಾಜವಾದಿಗಳು. ಅವರೆಂದರೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಮತ್ತು ಬಿಹಾರದ ಲಾಲು ಪ್ರಸಾದ್ ಯಾದವ್. ಬಿಜೆಪಿಯ ಕಮಂಡಲದ ಕೋಮುವಾದಿ ಹುನ್ನಾರದ ವಿರುದ್ಧ ಇವರಿಬ್ಬರೂ ಹಿಂದುಳಿದವರಿಗೆ ಮೀಸಲು ನೀಡುವ ಮಂಡಲ್ ವಸ್ತ್ರವನ್ನು ಪ್ರಯೋಗಿಸಿದರು. ಬಿಹಾರ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ಕೋಮುವಾದಿ ಶಕ್ತಿಗಳ ವಿರುದ್ಧ ಎಂಥ ದಿಟ್ಟ ಕ್ರಮವನ್ನು ಕೈಗೊಂಡರೆಂದರೆ ಬಿಹಾರವನ್ನು ಪ್ರವೇಶಿಸಿದ ವಿಎಚ್‌ಪಿಯ ರಥಯಾತ್ರೆಯನ್ನು ತಡೆದು ಅಡ್ವಾಣಿ ಅವರನ್ನು ಬಂಧಿಸಿದರು. ಉತ್ತರ ಪ್ತದೇಶದಲ್ಲೂ ಮುಲಾಯಂ ಸಿಂಗ್ ಯಾದವ್ ದಿಟ್ಟ ಹೆಜ್ಜೆಯನ್ನು ಇಟ್ಟರು.
ಆಗಿನಿಂದಲೂ ಲಾಲು ಪ್ರಸಾದ್ ಯಾದವ್‌ರ ಮೇಲೆ ಕಣ್ಣಿಟ್ಟ ಕೋಮುವಾದಿ ಶಕ್ತಿಗಳು ನಾನಾ ಹಗರಣಗಳಲ್ಲಿ ಜೈಲು ಪಾಲಾಗುವಂತೆ ಮಾಡಿದರು. ಇದುವರೆಗೂ ಲಾಲು ಆ ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಬಿಜೆಪಿ ಜೊತೆಗೆ ರಾಜಿ ಮಾಡಿಕೊಂಡಿದ್ದರೆ ಯಾವ ಕೇಸೂ ಇಲ್ಲದೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದ ಲಾಲು ಜೈಲು ಪಾಲಾಗಿ ಆರೋಗ್ಯ ಹದಗೆಟ್ಟರೂ ಕೂಡ ಸಂಘ ಪರಿವಾರಕ್ಕೆ ಶರಣಾಗತರಾಗಲಿಲ್ಲ.
ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಸೇರಿ ಬಿಜೆಪಿ ಜೊತೆಗೆ ರಾಜಿ ಮಾಡಿಕೊಂಡ ನಿತೀಶ್ ಕುಮಾರ್ ಆಗಾಗ ಬಣ್ಣ ಬದಲಿಸುತ್ತ ತಾನು ಮಾಡುತ್ತ ಬಂದ ಸಂದರ್ಭ ಸಾಧಕ ರಾಜಕಾರಣ ಮತ್ತು ರಾಜಿ, ಹೊಂದಾಣಿಕೆಗಳಿಗೆ ಭಾರೀ ಬೆಲೆ ತೆರುತ್ತಿದ್ದಾರೆ.ಅವರು ರಾಜ್ಯಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಅವರ ಪಕ್ಷದವರೂ ಸೇರಿದಂತೆ ಯಾರೂ ಕಣ್ಣೀರು ಹಾಕಲಿಲ್ಲ.
ನಿತೀಶ್ ಕುಮಾರ್‌ರನ್ನು ದಿಲ್ಲಿಗೆ ಕರೆಸಿಕೊಂಡು ಬಿಹಾರಕ್ಕೆ ಬಿಜೆಪಿಗೆ ಮುಖ್ಯಮಂತ್ರಿಯ ಪಟ್ಟ ಕಟ್ಟಲಾಗುತ್ತದೆ. ಕ್ರಮೇಣ ಸಂಯುಕ್ತ ಜನತಾ ದಳ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹೀಗೆ ಒಂದೊಂದಾಗಿ ಪಕ್ಷಗಳನ್ನು ಮುಗಿಸಿ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ದಾರಿಯನ್ನು ಸುಗಮಗೊಳಿಸಿಕೊಳ್ಳುವುದು ಇವರ ಕುತಂತ್ರವಾಗಿದೆ. ಕರ್ನಾಟಕದಲ್ಲೂ ಇಂಥದೇ ಮಸಲತ್ತಿಗೆ ಜೆಡಿಎಸ್ ಬಲಿಯಾಗಲಿದೆ. ಎಚ್.ಡಿ .ಕುಮಾರಸ್ವಾಮಿ ಅವರಿಗೆ ಸಿಎಂ ಕುರ್ಚಿಯ ಆಸೆ ಹಚ್ಚಿ ಬುಟ್ಟಿಗೆ ಹಾಕಿಕೊಂಡಾಗಿದೆ. ಕರ್ನಾಟಕದಲ್ಲಿ ದೇವೇಗೌಡರ ಜಾತ್ಯತೀತ ಜನತಾ ದಳಕ್ಕೆ ಹಳೆಯ ಮೈಸೂರಿನ ಒಂದೆರಡು ಜಿಲ್ಲೆಗಳನ್ನು ಬಿಟ್ಟರೆ ಅಂಥ ವ್ಯಾಪಕ ನೆಲೆಯಿಲ್ಲ. ನಿತೀಶ್ ಕುಮಾರ್‌ರಂಥ ಪ್ರಭಾವಿ ಹಿನ್ನೆಲೆ ಇವರಿಗಿಲ್ಲ. ಹೀಗಾಗಿ ಇವರನ್ನು ಮುಗಿಸುವುದು ಸುಲಭ.
ಸಂಘ ಪರಿವಾರದ ಕಾರ್ಯಸೂಚಿಯನ್ನು ಒಪ್ಪದ ಭಿನ್ನ ವಿಚಾರ ಧಾರೆಯ ಯಾವ ಪಕ್ಷ ಇಲ್ಲವೇ ಸಂಘಟನೆ ಇರಲೇಬಾರದು ಎಂಬುದು ನಾಗಪುರದ ಅಲಿಖಿತ ಆದೇಶ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅದನ್ನು ಚಾಚೂ ತಪ್ಪದೇ ಕಾರ್ಯಗತಗೊಳಿಸುತ್ತಿದ್ದಾರೆ. ಈಗಾಗಲೇ ಧೃತರಾಷ್ಟ್ರ ಆಲಿಂಗನದ ಮೂಲಕ ಬಹುತೇಕ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿದ್ದಾರೆ. ಆದರೆ ತಾತ್ವಿಕವಾಗಿ ಅವರ ಸಿದ್ಧಾಂತವನ್ನು ವಿರೋಧಿಸುವ ಡಿಎಂಕೆಯಂಥ ಪಕ್ಷಗಳು ತಮ್ಮ ದ್ರಾವಿಡ ಕೋಟೆಗೆ ಅವರನ್ನು ಬಿಟ್ಟಿಲ್ಲ. ಕರ್ನಾಟಕದಲ್ಲಿ ಜಾತ್ಯತೀತ ಜನತಾದಳಕ್ಕೆ ಅಂಥದೊಂದು ಅವಕಾಶವಿತ್ತು. ಅವರು ಸರಿಯಾಗಿ ಅದನ್ನು ಬಳಸಿಕೊಳ್ಳಲಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಭರವಸೆಯನ್ನು ನೀಡಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವೆಲ್ ಹಾಕಿ ಕಾಯುತ್ತಿರುವ ವಿಜಯೇಂದ್ರ, ಅಶೋಕ, ಅಶ್ವತ್ಥ ನಾರಾಯಣ, ನಿರಾಣಿ, ಬೆಲ್ಲದ ಸೇರಿದಂತೆ ಕರ್ನಾಟಕದ ಕೆಲವು ಬಿಜೆಪಿ ನಾಯಕರು ದಿಗಿಲುಗೊಂಡಿದ್ದಾರೆ. ಆದರೆ ಮೋದಿಯವರು ಹೇಳುವುದೊಂದು ಮಾಡುವುದು ಇನ್ನೊಂದು ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ.
ಕರ್ನಾಟಕದ ಬಿಜೆಪಿಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಗುಂಪುಗಳಿವೆ. ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರರನ್ನು ಕಂಡರಾಗದ ಪ್ರಹ್ಲಾದ್ ಜೋಶಿ, ಅರವಿಂದ ಬೆಲ್ಲದ್, ಯತ್ನಾಳ್, ಈಶ್ವರಪ್ಪ, ಅಶೋಕ್ ಹೀಗೆ ಹಲವರಿದ್ದಾರೆ. ಎಲ್ಲಕಿಂತ ಮುಖ್ಯವಾಗಿ ದಿಲ್ಲಿಯಲ್ಲಿ ಇರುವ ಆರೆಸ್ಸೆಸ್‌ನ ಸಂತೋಷ್ ಮೊದಲಾದವರು ಕಡ್ಡಿಯಾಡಿಸುತ್ತಲೇ ಇದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂದರೆ ಇವರೆಲ್ಲ ಒಟ್ಟುಗೂಡಿದರೂ ಅಚ್ಚರಿ ಪಡಬೇಕಾಗಿಲ್ಲ.







