Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಮತಾಂಧತೆಯ ಮತ್ತೇರಿದಾಗ

ಮತಾಂಧತೆಯ ಮತ್ತೇರಿದಾಗ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ2 Jun 2025 11:32 AM IST
share
ಮತಾಂಧತೆಯ ಮತ್ತೇರಿದಾಗ

ಕೆಲಸಕ್ಕೆಂದು ಹೊರಗೆ ಹೋದ ಮಗ ಮರಳಿ ಮನೆಗೆ ಬರುವುದು ಖಾತ್ರಿಯಿಲ್ಲ. ಶಾಲೆಗೆ ಹೋಗಿರುವ ಮಕ್ಕಳು ಸುರಕ್ಷಿತವಾಗಿ ಮನೆಗೆ ವಾಪಸಾಗುವುದು ಗ್ಯಾರಂಟಿಯಿಲ್ಲ. ಯಾವುದೋ ಊರಿನಿಂದ ದುಡಿಯಲೆಂದು ಬಂದವನು ತಮಗೆ ಬೇಡದ ಸಮುದಾಯದವನಾಗಿದ್ದರೆ ಯಾವ ತಪ್ಪಿಲ್ಲದಿದ್ದರೂ ನಡುಬೀದಿಯಲ್ಲಿ ಹೆಣವಾಗಿ ಬೀಳುತ್ತಾನೆ. ಒಂದು ಕೊಲೆಯಾದರೆ, ಅದಕ್ಕೆ ಪ್ರತೀಕಾರವಾಗಿ ಇನ್ನೊಂದು ಹತ್ಯೆ. ಇಲ್ಲಿ ಬಹುತೇಕ ಕಾನೂನು ಸುವ್ಯವಸ್ಥೆ ಹೆಸರಿಗೆ ಮಾತ್ರ ಇದೆ. ಇಲ್ಲಿ ಶಾಸಕರೇ ಹಿಂಸೆಗೆ ಪ್ರಚೋದಿಸುತ್ತಾರೆ. ತಲವಾರು ಹಿಡಿಯಲು ಪ್ರಚೋದಿಸುವ ಬಹಿರಂಗ ಭಾಷಣಗಳಾಗುತ್ತವೆ. ಯಾರ ಮೇಲೂ ಯಾವುದೇ ಕಾನೂನು ಕ್ರಮವಿಲ್ಲ. ಎಫ್‌ಐಆರ್ ಹಾಕಿದರೂ ಅದು ನೆಪಕ್ಕೆ ಮಾತ್ರ, ಹಿಂದೆ ಇಲ್ಲಿ ಕೋಮು ಗಲಭೆಗಳು ನಡೆದಿಲ್ಲವೆಂದಲ್ಲ, ಈಗ ಅಂದರೆ 1992ರ ನಂತರ ಅದರ ಸ್ವರೂಪ ಬದಲಾಗಿದೆ. ಇಲ್ಲಿ ಕೋಮು ದಂಗೆ ಎಂಬುದು ಲಾಭದಾಯಕ ದಂಧೆಯಾಗಿದೆ. ಹಿಂದಿನಂತೆ ಇದು ಒಂದೆರಡು ದಿನಗಳಲ್ಲಿ ತಣ್ಣಗಾಗುವ ದಂಗೆಯಲ್ಲ.ಈಗಿನದು ಸಂಘಟಿತ ಹಿಂಸಾಚಾರ. ಇದಕ್ಕೆ ಹಣಕಾಸಿನ ನೆರವನ್ನು ನೀಡುವವರೂ ಇದ್ದಾರೆ. ಇದರಿಂದ ಲಾಭ ಪಡೆಯುವ ರಾಜಕೀಯ ನಾಯಕರಿದ್ದಾರೆ. ಬೆಂಕಿ ತಣ್ಣಗಾಗದಂತೆ ನೋಡಿಕೊಳ್ಳುವ, ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಸಾಮಾಜಿಕ ಮಾಧ್ಯಮಗಳಿವೆ. ಬೇಲಿಯೇ ಹೊಲವನ್ನು ಮೇಯುವಂತೆ ಆರಕ್ಷಕ ವ್ಯವಸ್ಥೆ ಇಲ್ಲಿದೆ. ಇದು ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಪರಿಸ್ಥಿತಿ.

ಕೊಲೆ ಮಾಡಲು ಕಾರಣ ಬೇಕಿಲ್ಲ. ಅಬ್ದುಲ್ ರಹ್ಮಾನ್ ಎಂಬ ಅಮಾಯಕ ವ್ಯಕ್ತಿಯ ಗೆಳೆಯ ದೀಪಕ್ ಎಂಬ ಇಪ್ಪತೊಂದರ ಯುವಕನ ತಂದೆ ಆಸ್ಪತ್ರೆಯ ಐಸಿಯುನಲ್ಲಿ ಇದ್ದಾಗ, ರಕ್ತದ ಅವಶ್ಯಕತೆ ಇತ್ತು. ಆಗ ಧಾವಿಸಿ ಬಂದ ಅಬ್ದುಲ್ ರಹ್ಮಾನ್ ತನ್ನ ರಕ್ತ ಕೊಟ್ಟ. ಅದು ಸಾಲದಾದಾಗ ಊರಿನ ಮುಸ್ಲಿಮ್ ಯುವಕರು ಬಂದು ರಕ್ತ ಕೊಟ್ಟರು. ಈಗ ಕೋಮು ವಿಷವನ್ನು ತಲೆ ತುಂಬಿ ಕೊಂಡ ದೀಪಕ್ ಅಬ್ದುಲ್ ರಹಾನ್‌ರನ್ನು ಕರೆದು ಮೋಸ ಮಾಡಿ ಕೊಂದ. ಇದು ಒಂದು ಉದಾಹರಣೆ ಮಾತ್ರ. ಇಂಥ ಅನೇಕ ಪ್ರಕರಣಗಳಿವೆ.

ಅಲ್ಲಿಂದ ಬರುತ್ತಿರುವ ವರದಿಗಳನ್ನು ಗಮನಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವುದು ರಾಜ್ಯ ಸರಕಾರದ ಆಡಳಿತವೋ ಅಥವಾ ಜನಾಂಗ ದ್ವೇಷಿ ಕೋಮುವಾದಿ ಶಕ್ತಿಗಳ ಆಡಳಿತವೋ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ. ಒಂದರ ಮೇಲೊಂದು ಹೆಣಗಳು ಉರುಳುತ್ತಿದ್ದರೂ ಯಾರ ಮೇಲೂ ಕಾನೂನು ಕ್ರಮವಿಲ್ಲ. ಜನಪ್ರತಿನಿಧಿಗಳೇ ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿ ಹಿಂಸೆಗೆ ಪ್ರಚೋದಿಸುತ್ತಿದ್ದರೂ ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಬಂಧಿಸಿದ ಇಲಾಖೆ ಸಂಪೂರ್ಣ ವಿಫಲಗೊಂಡಿದೆ. ಗೃಹ ಸಚಿವರು ಕಾಟಾಚಾರಕ್ಕೆಂಬಂತೆ ಮುಖ ತೋರಿಸಿ ಹೋದರು. ಅವರು ಮತ್ತು ಉಸ್ತುವಾರಿ ಸಚಿವರು ಬಂದು ದ.ಕ. ಹಿಂಸಾಚಾರ ನಿಯಂತ್ರಿಸಲು ಪ್ರತ್ಯೇಕ ಪೊಲೀಸ್ ಪಡೆ ರಚಿಸುವುದಾಗಿ ಮೂಗಿಗೆ ತುಪ್ಪ ಸವರಿ ಬೆಂಗಳೂರು ವಿಮಾನವನ್ನು ಹತ್ತಿದರು. ಇದು ಕೇವಲ ಕಾನೂನು ಸುವ್ಯವಸ್ಥೆ ಸಮಸ್ಯೆ ಮಾತ್ರವಲ್ಲ, ಒಮ್ಮೆಲೆ ಉದ್ಭವವಾದದ್ದೂ ಅಲ್ಲ. ಕರಾವಳಿಯ ಕೋಮು ಹಿಂಸಾಚಾರಕ್ಕೆ ನಿರ್ದಿಷ್ಟವಾಗಿ ಮೂರು ದಶಕಗಳ ಇತಿಹಾಸವಿದೆ. ಅದರ ಬೇರುಗಳಿಗೆ ಕೈ ಹಾಕಿ ಕಿತ್ತು ಬಿಸಾಡುವ ವರೆಗೆ ಈ ಬೆಂಕಿ ತಣ್ಣಗಾಗುವುದಿಲ್ಲ.

ಎಲ್ಲ ಕಡೆಗಳಂತೆ ಇಲ್ಲೂ ಕೂಡ ಕೋಮು ಹಿಂಸಾಚಾರದಲ್ಲಾಗಲಿ, ಇರಿತದ ಘಟನೆಗಳಲ್ಲಾಗಲಿ, ಹತ್ಯೆಗೊಳಗಾದವರಾರೂ ಕೋಟ್ಯಧೀಶರ ಮಕ್ಕಳಲ್ಲ. ಆಟೋ ಚಾಲಕರು, ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಬದುಕು ಸಾಗಿಸುವವರು ಮತ್ತು ಅವರ ಮಕ್ಕಳು ಈ ವರೆಗೆ ಅಸುನೀಗಿದ್ದಾರೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಕರಾವಳಿ ಭಾಗದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯ ಒಂದು ವಿಧದ ಅಸಹಾಯಕತೆಯಿಂದ, ಭಯ ಭೀತಿಯ ಅಡಿಯಲ್ಲಿ ನರಳುತ್ತಿದೆ. ಮುಂದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇನೋ ಇದನ್ನು ತಡೆಯಲು, ಶಾಶ್ವತ ಪರಿಹಾರ ಕಂಡು ಹಿಡಿಯಲು ಯತ್ನಿಸುತ್ತಿದ್ದಾರೆ. ಕೋಮುವಾದಿ ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ಕರೆ ನೀಡಿದ್ದಾರೆ. ದಕ ಮೂಲದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ .ಹರಿಪ್ರಸಾದ್ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ದ.ಕ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ಎನ್. ಅವರನ್ನೂ ವರ್ಗಾವಣೆ ಮಾಡಲಾಗಿದೆ.ಆದರೆ ಅವರನ್ನು ವರ್ಗಾವಣೆ ಮಾಡಿ ಮತ್ತಾರನ್ನು ತಂದರೂ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯ ಬಗ್ಗೆ ಸಂದೇಹಗಳಿವೆ.ಉನ್ನತ ಅಧಿಕಾರಿಗಳನ್ನು ಬದಲಾವಣೆ ಮಾಡಿದರೆ ಸಾಲದು.ಇಡೀ ಪೊಲೀಸ್ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. 30-40 ವರ್ಷಗಳಿಂದ ಇಲ್ಲಿ ತಳವೂರಿರುವ ಕೆಲವರನ್ನು ಬದಲಿಸಬೇಕಾಗಿದೆ. ಒಂದು ಕಾಲದಲ್ಲಿ ಔದ್ಯಮಿಕ ಅಭಿವೃದ್ಧಿ, ಶಿಕ್ಷಣ, ಬ್ಯಾಂಕಿಂಗ್, ವ್ಯಾಪಾರ, ವಹಿವಾಟುಗಳಲ್ಲಿ ಹೆಸರಾಗಿದ್ದ ಮಂಗಳೂರು ಈಗ ಅಪಖ್ಯಾತಿಗೊಳಗಾಗಿದೆ.

ಕರ್ನಾಟಕದ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಹೀಗೇಕಾಯಿತು? ಏಕೆ ಅಲ್ಲಿ ಬದುಕು ಅಸುರಕ್ಷಿತವಾಗಿದೆ ಎಂಬ ಆತಂಕ ಎಲ್ಲೆಡೆ ಉಂಟಾಗಿದೆ. ಇದು ಒಮ್ಮೆಲೆ ಉಂಟಾದ ಸಮಸ್ಯೆಯಲ್ಲ. 1992ರ ಅಯೋಧ್ಯೆ ಘಟನೆ ಆನಂತರ ಅವಿಭಜಿತ ದ.ಕ. ಜಿಲ್ಲೆಯ ಶಾಂತಿ, ನೆಮ್ಮದಿಯ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಮನುಷ್ಯರ ನಡುವೆ ಅಪನಂಬಿಕೆಯ ಅಡ್ಡಗೋಡೆಗಳು ಎದ್ದು ನಿಂತಿವೆ. ಅಮಾಯಕರು ಹತ್ಯೆಗೆ ಒಳಗಾಗುತ್ತಿದ್ದಾರೆ. ಯಾವ ಸರಕಾರ ಬಂದರೂ ಈ ಜಿಲ್ಲೆಯ ಜನರ ಬದುಕಿಗೆ ಶಾಂತಿ, ನೆಮ್ಮದಿ ಬರಲಿಲ್ಲ. ಬಿಜೆಪಿ ಸರಕಾರ ಹೋಗಿ, ಕಾಂಗ್ರೆಸ್ ಸರಕಾರ ಬಂದ ಆನಂತರ ಎಲ್ಲಾ ಸರಿ ಆಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇದಕ್ಕೆ ಬರೀ ಸರಕಾರವನ್ನು ದೂರಿದರೆ ಪ್ರಯೋಜನವಿಲ್ಲ. ಎಲ್ಲವನ್ನೂ ಸರಕಾರ ಮಾಡಲು ಆಗುವುದೂ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನೆ ಬಂದರೆ, ಕರಾವಳಿಯ ಪೊಲೀಸ್ ಇಲಾಖೆ ಸರಕಾರದ ನಿಯಂತ್ರಣದ

ಬದಲಿಗೆ ಯಾರದೋ ಕೈಯಲ್ಲಿ ಇರುವಂತೆ ಕಾಣುತ್ತಿದೆ. ಪೊಲೀಸರು ಸಂಘ ಪರಿವಾರದ ಜೊತೆ ಶಾಮೀಲಾಗಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಇದು ಮಂಗಳೂರುವೊಂದರ ಸಮಸ್ಯೆಯಲ್ಲ. ದೇಶದ ಅನೇಕ ಕಡೆ ಕೋಮು ಗಲಭೆ ನಡೆದಾಗ, ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂಬ ದೂರುಗಳಿವೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೋಮು ಗಲಭೆ ನಡೆದಾಗಲೆಲ್ಲ, ಪೊಲೀಸರು ವಹಿಸಿದ ಪಾತ್ರ ನ್ಯಾಯಸಮ್ಮತವಾಗಿರಲಿಲ್ಲ ಎಂಬ ವರದಿಗಳು ಇವೆ. ಹೀಗಾಗಿ ಜಾತ್ಯತೀತ ಪಕ್ಷ ಅಧಿಕಾರದಲ್ಲಿ ಇದ್ದರೂ ಶಾಂತಿ ಮತ್ತು ನೆಮ್ಮದಿ ಕಾಪಾಡುವುದು ಸುಲಭದ ಸಂಗತಿಯಲ್ಲ.

ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದರೆ, ನಮ್ಮ ಕಾರ್ಯಕರ್ತರು ಪೊಲೀಸ್ ಇಲಾಖೆ, ಸೇನೆ ಮತ್ತು ಸರಕಾರದ ಆಡಳಿತಾಂಗದ ಎಲ್ಲಾ ಕಡೆ ಸೇರಿಕೊಳ್ಳಬೇಕು ಎಂದು ವಿನಾಯಕ ದಾಮೋದರ ಸಾವರ್ಕರ್ ಎಂಟು ದಶಕಗಳ ಹಿಂದೆಯೇ ಹೇಳಿದ್ದರು. ಕಳೆದ ಏಳು ದಶಕಗಳ ಆನಂತರ ಆಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯ ವೈಖರಿ ಗಮನಿಸಿದರೆ, ಸಂವಿಧಾನೇತರ ಶಕ್ತಿಗಳು ಆಡಳಿತಾಂಗವನ್ನು ನಿಯಂತ್ರಿಸುತ್ತಿವೆಯೇ ಎಂಬ ಸಂದೇಹ ಬರುತ್ತದೆ. ಮೀರತ್ ದಂಗೆಯಲ್ಲಿ ಮತ್ತು ಕಾನ್‌ಪುರ ಕೋಮು ಗಲಭೆಯಲ್ಲಿ ಇದು ಸ್ಪಷ್ಟವಾಗಿದೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಇಲ್ಲವೆಂದಲ್ಲ. ಆದರೆ ಅಂಥವರು ಬಹಳ ತೊಂದರೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಸಂಘಿ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಮುಂದಾದ ಅತ್ಯಂತ ದಕ್ಷ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸಾವಿಗೀಡಾದರು. ಅವರ ಸಾವಿನ ಬಗ್ಗೆ ಸಂದೇಹಗಳಿವೆ.ಎರಡೂ ಕಡೆಯ ಭಯೋತ್ಪಾದಕರಿಗೆ ಹೇಮಂತ ಕರ್ಕರೆ ಅವರು ಸಿಂಹ ಸ್ವಪ್ನವಾಗಿದ್ದರು. ಅದೇನೆ ಇರಲಿ, ಹಿಂದೂಗಳು, ಬ್ರಾಹ್ಮಣರು, ಕೊಂಕಣಿಗಳು ಮುಸಲ್ಮಾನರು, ಕ್ರೈಸ್ತರು, ಬಿಲ್ಲವರು, ಮೊಗವೀರರು ಮತ್ತು ಜೈನರು ಹೀಗೆ ಎಲ್ಲಾ ಸಮುದಾಯದವರು ಒಟ್ಟಾಗಿ ಕಟ್ಟಿಕೊಂಡ ತುಳುನಾಡಿನ ಬದುಕು ಛಿದ್ರವಾಗಿ ಹೋಗತೊಡಗಿ ದಶಕಗಳೇ ಗತಿಸಿದವು.ಈ ಬಗ್ಗೆ ಅಸಹಾಯಕ ಆತಂಕ ವ್ಯಕ್ತಪಡಿಸುವುದನ್ನು ಬಿಟ್ಟು ಮತ್ತೇನನ್ನು ಮಾಡಲು ಆಗುತ್ತಿಲ್ಲ. ಮುಂದೇನು ಗೊತ್ತಿಲ್ಲ.

ಎಂಥ ಜಿಲ್ಲೆ ಏನಾಗಿ ಹೋಯಿತು ಎಂಬ ಕಳವಳ ಉಂಟಾಗುತ್ತದೆ. ಹಿಂದೆ ಇದೇ ನೆಲದಲ್ಲಿ ಜನಿಸಿದ ಕುದ್ಮುಲ್ ರಂಗರಾವ್ ಅವರು ಅಸ್ಪೃಶ್ಯ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟವರು.ಅವರು ಆಗಾಗ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ. ದಲಿತ ಮಕ್ಕಳು ಓದಿ, ದೊಡ್ಡ ಸಾಹೇಬರಾಗಿ ತನ್ನ ಮುಂದೆ ಕಾರಿನಲ್ಲಿ ಹೋದರೆ, ಅವರ ಕಾರಿನ ದೂಳು ನನ್ನ ಕಣ್ಣಿನಲ್ಲಿ ಬಿದ್ದರೆ, ಪುನೀತನಾಗುತ್ತೇನೆ ಎಂದು ಅವರು ಹೇಳುತ್ತಿದ್ದರು. ಮಾನವರೆಲ್ಲ ಒಂದೇ ಎಂಬ ಸಂದೇಶ ಸಾರಿದ ಕೇರಳದ ನಾರಾಯಣ ಗುರುಗಳು ಮಂಗಳೂರು ನೆಲದಲ್ಲೇ ನಡೆದಾಡಿ, ವಂಚಿತ ಸಮುದಾಯಗಳಿಗಾಗಿ ಗೋಕರ್ಣನಾಥೇಶ್ವರ ದೇವಸ್ಥಾನ ಕಟ್ಟಿದರು. ಸಂವಿಧಾನ ರಚನೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಬೆನಗಲ್ ನರಸಿಂಗರಾಯರು ಇದೇ ದಕ್ಷಿಣ ಕನ್ನಡದವರು. ಈ ದೇಶದಲ್ಲಿ ಕಮ್ಯುನಿಸ್ಟ್ ಚಳವಳಿ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ಸಚ್ಚಿದಾನಂದ ವಿಷ್ಣು ಘಾಟೆ ಇದೇ ಮಣ್ಣಿನಲ್ಲಿ ಹುಟ್ಟಿ ದೇಶದೆತ್ತರಕ್ಕೆ ಬೆಳೆದು ನಿಂತವರು. ಸಮಾಜವಾದಿ ನಾಯಕಿ, ಚಿಂತಕಿ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಜಾರ್ಜ್ ಫೆರ್ನಾಂಡಿಸ್ ಅಂಥವರನ್ನು ನೀಡಿದ ಜಿಲ್ಲೆಯಿದು. ಸಾಹಿತ್ಯಕ್ಕೆ ಬಂದರೆ ಶಿವರಾಮ ಕಾರಂತ, ನಿರಂಜನ, ವ್ಯಾಸರಾಯ ಬಲ್ಲಾಳ, ಬಿ.ಎಂ.ಇದಿನಬ್ಬ ಇಂಥವರೆಲ್ಲ ಇಲ್ಲಿ ಆಗಿ ಹೋಗಿದ್ದಾರೆ. ಪಕ್ಕದ ಕಾಸರಗೋಡು ಜಿಲ್ಲೆಯ ಕಯ್ಯಾರ ಕಿಂಞಣ್ಣ ರೈ, ಪಂಜೆ ಮಂಗೇಶರಾವ್ ಇವರೆಲ್ಲ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ರಾಜಕಾರಣಕ್ಕೆ ಬಂದರೆ, ಈ ಜಿಲ್ಲೆಯಿಂದ ಬಿ.ವಿ.ಕಕ್ಕಿಲಾಯ, ಕಾಮ್ರೇಡ್ ಕೃಷ್ಣಶೆಟ್ಟಿ, ವೈಕುಂಠ ಬಾಳಿಗಾ, ನಾಗಪ್ಪ ಆಳ್ವಾ, ಬಿ.ಎಂ.ಇದಿನಬ್ಬ, ಪಿ.ರಾಮಚಂದ್ರ ರಾವ್, ಬಿ.ಎ.ಮೊಹಿದೀನ್ ಅಂಥವರು ಇಲ್ಲಿ ಗೆದ್ದು ಬಂದು ವಿಧಾನಸಭೆ ಪ್ರವೇಶಿಸಿದ್ದರು. ವೀರಪ್ಪ ಮೊಯ್ಲಿ ಅಂಥವರು ಮುಖ್ಯಮಂತ್ರಿಯಾದರೆ, ಜನಾರ್ದನ ಪೂಜಾರಿ ಕೇಂದ್ರ ಮಂತ್ರಿಯಾದರು. ಇದು ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ ಕಣ್ಣಿಗೆ ಗೋಚರಿಸುವ ಅಂಶಗಳು. ಆದರೆ ಈಗ ?

ಇಂಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ನೆತ್ತರು ಹರಿಯುತ್ತಿದೆ.ಇದು ಮನುಷ್ಯನ ನೆತ್ತರು. ಈ ಕೆಂಪು ನೆತ್ತರಿನಲ್ಲಿ ಜಾತಿ-ಧರ್ಮವನ್ನು ಹುಡುಕುವ ಕುಬ್ಜ ಮಾನವರು ಹುಟ್ಟಿಕೊಂಡಿದ್ದಾರೆ. 70ರ ದಶಕದಲ್ಲಿ ಕಕ್ಕಿಲಾಯರನ್ನು ಗೆಲ್ಲಿಸಿದ ಬಂಟ್ವಾಳ ಈಗ ಕೋಮು ಕಲಹದ ರಣರಂಗವಾಗಿದೆ. ಕಕ್ಕಿಲಾಯರು ಗೆದ್ದಾಗ, ಅವರನ್ನು ಹೊತ್ತು ಕುಣಿದಿದ್ದ ಬಂಟ್ವಾಳದ ಹಿರಿಯರು ಈಗ ಇಲ್ಲ. ಆದರೆ ಅವರ ಪೀಳಿಗೆಗೆ ಸೇರಿದವರು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಹೊತ್ತು ಕುಣಿಯುತ್ತಿದ್ದಾರೆ. ಬದುಕಿ ಬಾಳಬೇಕಾದ ಯುವಕರು ಇರಿತಗಳಿಂದ ಅಸು ನೀಗುತ್ತಿರುವಾಗಲೂ ಕೋಮುವಾದಿಗಳ ಕ್ರೂರ ಕುಚೇಷ್ಟೆ ನಿಂತಿಲ.್ಲ ಭಕ್ತರ ಹೆಗಲ ಮೇಲೆ ಕೂತು ಸಂಭ್ರಮಿಸುವ ನಾಯಕರು, ಶಾಸಕರು ಇಲ್ಲಿದ್ದಾರೆ.ಆದರೆ ಸಾಮಾನ್ಯ ಜನರಲ್ಲಿ ಮನುಷ್ಯತ್ವ ಸತ್ತಿಲ್ಲ. ಈ ಹಿಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದವರು ಸ್ವಯಂ ಸೇವಕರಲ್ಲ, ಶರತ್ ಅವರ ಆತ್ಮೀಯ ಸ್ನೇಹಿತ ಅಬ್ದುಲ್ ರವೂಫ್. ಮನುಷ್ಯತ್ವದ ಈ ಬತ್ತದ ಸೆಲೆಯೇ ತುಳುನಾಡನ್ನು ಇಲ್ಲಿಯವರೆಗೆ ಬದುಕಿಸಿದೆ.ಆದರೆ ಕೋಮು ವ್ಯಾಧಿ ಅದಕ್ಕೂ ಧಕ್ಕೆ ತಂದಿದೆ. ಹೆಣಗಳನ್ನು ನೆಲಕ್ಕೆ ಕೆಡವಿ ವೋಟಿನ ಬೆಳೆ ತೆಗೆಯುವ ನೀಚತನದ ರಾಜಕಾರಣ ಇಲ್ಲಿ ನಡೆಯುತ್ತಲೆ ಇದೆ. ಬೆಂಕಿ ಆರಿಸಬೇಕಾದ ಧರ್ಮಗುರುಗಳ ಬಾಯಿಯಲ್ಲೂ ಪ್ರಚೋದನಕಾರಿ ಮಾತುಗಳು ಬರುತ್ತಿವೆ.

ನಾನು ಹುಟ್ಟಿ ಬೆಳೆದ ಅವಿಭಜಿತ ಬಿಜಾಪುರ ಜಿಲ್ಲೆ ಬಿಟ್ಟರೆ ಅತ್ಯಂತ ಇಷ್ಟಪಡುವ ಜಿಲ್ಲೆ ದಕ್ಷಿಣ ಕನ್ನಡ. 70ರ ದಶಕದಲ್ಲಿ ಈ ರಮ್ಯತಾಣಕ್ಕೆ ಮೊದಲ ಸಲ ಕಾಲಿಟ್ಟಾಗ, ಇಲ್ಲಿ ಸುತ್ತಲೂ ಕಂಡ ಹಸಿರು, ಕಡಲು, ಬೆಟ್ಟ ಎಲ್ಲವನ್ನೂ ನೋಡಿ ವಿಸ್ಮಯಗೊಂಡಿದ್ದೆ. 1977ರಲ್ಲಿ ಪುತ್ತೂರಿನಲ್ಲಿ ನಡೆದ ಪ್ರಗತಿಪಂಥ ಸಾಹಿತ್ಯ ಸಮ್ಮೇಳನಕ್ಕೆ ನಿರಂಜನ ಅವರ ಜೊತೆ ಇಲ್ಲಿಗೆ ಬಂದಿದ್ದೆ. ಆತ್ಮೀಯ ಗೆಳೆಯ ಅಶೋಕ ಶೆಟ್ಟರ್ ಕೂಡ ಜೊತೆಯಿದ್ದರು. ಅಂದಿನ ಸಮ್ಮೇಳನದಲ್ಲಿ ನಿರಂಜನ ದಂಪತಿ, ಬಸವರಾಜ ಕಟ್ಟಿಮನಿ, ಮಿನುಗು ತಾರೆ ಕಲ್ಪನಾ ಮತ್ತು ಆಗಿನ ಶಾಸಕರಾಗಿದ್ದ ಬಿ.ವಿ.ಕಕ್ಕಿಲಾಯರು ಭಾಗವಹಿಸಿದ್ದರು. ಪುತ್ತೂರಿನ ವಿದ್ವಾಂಸ ಬಿ.ಎಂ.ಶರ್ಮಾ ಸಮ್ಮೇಳನ ಸಂಘಟಿಸಿದ್ದರು. ಆನಂತರ ಆಗಾಗ ಭಾರತ ಸೋವಿಯತ್ ಸಾಂಸ್ಕೃತಿಕ ಸಂಘ ( ಇಸ್ಕಸ್) ರಾಜ್ಯ ಸಮ್ಮೇಳನ ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷದ ಸಮ್ಮೇಳನ ಹೀಗೆ ಹಲವಾರು ಸಲ ಮಂಗಳೂರಿಗೆ ಹೋಗಿ ಬರುತ್ತಿದ್ದೆ .

ಕೋಮು ಸೌಹಾರ್ದ ವೇದಿಕೆಯ ಕಾರ್ಯದರ್ಶಿಯಾಗಿದ್ದಾಗ, ತಿಂಗಳಿಗೊಮ್ಮೆಯಾದರೂ ಮಂಗಳೂರು ಮತ್ತು ಉಡುಪಿಗೆ ಹೋಗಿ ಬರುತ್ತಲೇ ಇದ್ದೆ. ಕಳೆದ ಶತಮಾನದ 70ರ ದಶಕದಿಂದ ಈವರೆಗಿನ ಬದಲಾಗುತ್ತಿರುವ ಮಂಗಳೂರನ್ನು ನೋಡುತ್ತಲೇ ಇರುವೆ. ಮೊದಲ ಬಾರಿ ಪುತ್ತೂರಿಗೆ ಬಂದಾಗ, ಕನ್ನಡದ ಹಿರಿಯ ಕವಿ ಸುಬ್ಬಣ್ಣ ಎಕ್ಕುಂಡಿ ಜೊತೆಗಿದ್ದರು. ಮಂಗಳೂರಿನಿಂದ ವಾಪಸ್ ಹುಬ್ಬಳ್ಳಿಗೆ ಹೋಗುವಾಗ, ಹಂಪನಕಟ್ಟೆ ಬಸ್ ನಿಲ್ದಾಣದ ಅಂಗಡಿಯೊಂದರ ಕಟ್ಟೆಯ ಮೇಲೆ ಯಕ್ಕುಂಡಿ ಅವರೊಂದಿಗೆ ಕಳೆದ ಕ್ಷಣಗಳು ಈಗಲೂ ನೆನಪಿಗೆ ಬರುತ್ತವೆ.ಆ ಕಟ್ಟೆಯ ಮೇಲೆ ಕುಳಿತೇ ಯಕ್ಕುಂಡಿ ಅವರು ತಾವು ಬರೆದ ಪದ್ಯಗಳನ್ನು ಓದಿದ್ದರು. ಮಂಗಳೂರು ಬಗೆಗಿನ ಆಕರ್ಷಣೆಗೆ ಇನ್ನೊಂದು ಕಾರಣ ಬಿಜಾಪುರದಲ್ಲಿ ನಮಗೆಲ್ಲ ಕಮ್ಯುನಿಸಂ ಹೇಳಿಕೊಟ್ಟವರು ಮಂಗಳೂರು ಮೂಲದ ಎನ್.ಕೆ.ಉಪಾಧ್ಯಾಯರು. ಕಳೆದ ಶತಮಾನದ 40ರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಲು ನಮ್ಮ ಬಿಜಾಪುರ ಜಿಲ್ಲೆಗೆ ಬಂದ ಉಪಾಧ್ಯಾಯರು ಅದೇ ಊರಿನಲ್ಲಿ ಎಂಟೂವರೆ ದಶಕಗಳನ್ನು ಕಳೆದು ಅದೇ ಮಣ್ಣಿನಲ್ಲಿ ಮಣ್ಣಾಗಿ ಹೋದರು. ಹೀಗೆ ಮಂಗಳೂರಿನ ನಂಟು ಬಾಲ್ಯದಿಂದಲೂ ಅಂಟಿಕೊಂಡಿದೆ. ಇಂತಹ ನನ್ನ ಮೆಚ್ಚಿನ ಮಂಗಳೂರು ಈಗ ಹೀಗಾಗಿರುವುದು ಕಂಡು ಆತಂಕ ಉಂಟಾಗುತ್ತದೆ. ಯಾರಿಗೂ ಯಾವ ತೊಂದರೆಯನ್ನೂ ಮಾಡದ ಅಮಾಯಕರು ಬೀದಿ ಹೆಣವಾಗುತ್ತಿರುವುದು ಕಂಡು ಸಂಕಟವಾಗುತ್ತದೆ. ಕಾರಣವಿಲ್ಲದ ಕಗ್ಗೊಲೆಗಳಿಗೆ ಉತ್ತರ ಹುಡುಕುವುದು ಕಷ್ಟ. ಜಾತಿ, ಧರ್ಮದ ಅಮಲು ನೆತ್ತಿಗೇರಿದಾಗ ಮನುಷ್ಯ ಮೃಗವಾಗುತ್ತಾನೆ ಎಂಬುದಕ್ಕೆ ತುಳುನಾಡು ಉದಾಹರಣೆ ಆಗುತ್ತಿರುವುದು ವಿಷಾದದ ಸಂಗತಿ. ಧರ್ಮ ಎಂಬುದು ಲಾಭದಾಯಕ ದಂಧೆಯಾದಾಗ, ಅದನ್ನು ಬಳಸಿಕೊಳ್ಳುವವರು ಹುಟ್ಟಿಕೊಳ್ಳುತ್ತಾರೆ. ಅಮಾಯಕ ಯುವಕರಲ್ಲಿ ಧರ್ಮದ ನಶೆಯೇರಿಸಿ, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ನಗುತ್ತಾರೆ. ತಮ್ಮ ಮಕ್ಕಳನ್ನು ವ್ಯಾಸಂಗ ಮಾಡಲು ವಿದೇಶಕ್ಕೆ ಕಳುಹಿಸುತ್ತಾರೆ.

ಈಗಂತೂ ಕರಾವಳಿಯ ಅದರಲ್ಲೂ ದಕ್ಷಿಣ ಕನ್ನಡದ ಅದರಲ್ಲೂ ಮಂಗಳೂರಿನ ಬದುಕು ಕೋಮು ಆಧಾರದಲ್ಲಿ ಧ್ರುವೀಕರಣಗೊಂಡಿದೆ. ಚುನಾವಣೆಗಳು ಸಮೀಪಿಸಿದಾಗ ಇಲ್ಲಿ ಕೆಲವರ ಪಿತ್ಥ ನೆತ್ತಿಗೇರುತ್ತದೆ. ಇದು ಬರೀ ಹಿಂದೂ-ಮುಸ್ಲಿಮ್ ದ್ವೇಷವೆಂದು ವ್ಯಾಖ್ಯಾನಿಸಬೇಕಿಲ್ಲ. ಹಿಂದೂಗಳೇ ಆದ ವಿನಾಯಕ ಬಾಳಿಗಾ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಹೀಗೆ ಅನೇಕ ಯುವಕರು ಇಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅವರನ್ನು ಕೊಂದವರು

ಯಾರು? ಈ ಪ್ರಶ್ನೆಗೆ ಉತ್ತರವಿಲ್ಲ. ದೇವಾಲಯವೊಂದರ ಭ್ರಷ್ಟಾಚಾರವನ್ನು ಬಯಲಿಗೆಳೆದ ವಿನಾಯಕ ಬಾಳಿಗಾ ಅವರ ಕೊಲೆ ಆರೋಪಿ ಜೊತೆಗೆ ಸೂಲಿಬೆಲೆಯಂಥವರು ತೆಗೆಸಿಕೊಂಡ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಿಂದಿನಿಂದಲೂ ಹರಿದಾಡುತ್ತಿದೆ.

ದಕ್ಷಿಣ ಕನ್ನಡದಲ್ಲಿ ಚುನಾವಣೆ ಸಮೀಪಿಸಿದಾಗ ಮಾತ್ರವಲ್ಲ,ಆಗಾಗ ಕೋಮು ಜ್ವರ ಉಲ್ಬಣಗೊಳ್ಳುತ್ತದೆ. ಮನುಷ್ಯರನ್ನು ಕೊಂದು ವೋಟ್ ಬ್ಯಾಂಕ್ ನಿರ್ಮಿಸಿಕೊಳ್ಳುವ ರಾಜಕಾರಣ ನಿರಂತರವಾಗಿ ನಡೆಯುತ್ತದೆ. ಚುನಾಯಿತ ಪ್ರತಿನಿಧಿಗಳೇ ನಿಷೇಧಾಜ್ಞೆ ಉಲ್ಲಂಘಿಸಿ ಬೀದಿಗೆ ಇಳಿಯುತ್ತಾರೆ. ಈ ಜಿಲ್ಲೆಯಲ್ಲಿ ಸಂಘ ಪರಿವಾರ ಬೆಳೆಯಲು ಬಿಟ್ಟುಕೊಟ್ಟ ವೀರಪ್ಪ ಮೊಯ್ಲಿ , ಜನಾರ್ದನ ಪೂಜಾರಿ ಮುಂತಾದವರು ತಮ್ಮ ಪಾಡಿಗೆ ತಾವಿದ್ದಾರೆ. ಅನೇಕ ಆರೋಪಗಳಲ್ಲಿ ಸಿಲುಕಿದ ಬಿಜೆಪಿ ನಾಯಕರನ್ನು ರಕ್ಷಿಸುತ್ತ ಬಂದಿದ್ದ ಆಸ್ಕರ್ ಫೆರ್ನಾಂಡಿಸ್ ಈಗಿಲ್ಲ. ಎಡಪಕ್ಷಗಳ ಶಕ್ತಿಯು ಈಗ ಮುಂಚಿನಂತಿಲ್ಲ. ಆದರೂ ಡಾ. ನಿವಾಸ ಕಕ್ಕಿಲ್ಲಾಯ ಮತ್ತು ಮುನೀರ್ ಕಾಟಿಪಳ್ಳ ಅವರಂಥವರು ತಮ್ಮ ಶಕ್ತಿಮೀರಿ ಪ್ರತಿರೋಧ ಒಡ್ಡುತ್ತಿದ್ದಾರೆ.

ಇಂಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಮರುಕಳಿಸಬೇಕಾದರೆ, ಜಾತಿ ಮತ್ತು ಮತವನ್ನು ಮೀರಿ ಮನುಷ್ಯನನ್ನು ಪ್ರೀತಿಸುವ ಬುದ್ಧ, ಬಸವ, ನಾರಾಯಣಗುರು, ಅಂಬೇಡ್ಕರ್, ಕುವೆಂಪು ನೀಡಿದ ಬೆಳಕಿನಲ್ಲಿ ನಾವು ಸಾಗಬೇಕು. ಹೊಸ ಪೀಳಿಗೆಯಲ್ಲಿ ವೈಚಾರಿಕ ಜಾಗೃತಿ ಮೂಡಿಸಬೇಕು. ಪೊಲೀಸ್ ಇಲಾಖೆ ಸೇರಿದಂತೆ ಆಡಳಿತಾಂಗವನ್ನು ಜಾತ್ಯತೀತಗೊಳಿಸಬೇಕು. ಧರ್ಮವನ್ನು, ದೇವರನ್ನು ವ್ಯಾಪಾರಕ್ಕೆ ಇಟ್ಟ ಮಠಾಧೀಶರ ಬದಲಿಗೆ ಸ್ವಾಮಿ ವಿವೇಕಾನಂದರು ನೀಡಿದ ವಿಶ್ವ ಮಾನವತೆಯ ದಾರಿಯಲ್ಲಿ ಸಾಗಬೇಕು.ನಾನು ಹುಬ್ಬಳ್ಳಿಯ ಕೋಮು ಗಲಭೆಗಳನ್ನು ಕಂಡವನು.ಹೀಗೆ ನಿರಂತರವಾಗಿ ಅಶಾಂತಿ ಉಂಟಾದರೆ ವ್ಯಾಪಾರ ವಹಿವಾಟು ಗಳಿಗೆ ಪೆಟ್ಟು ಬೀಳುತ್ತದೆ.ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಹೂಡಿಕೆದಾರರು ಹಿಂಜರಿಯುತ್ತಾರೆ.ಒಂದು ಕಾಲದಲ್ಲಿ ಉತ್ತರ ಕರ್ನಾಟದ ಬಹುದೊಡ್ಡ ವಾಣಿಜ್ಯ ಕೇಂದ್ರವಾಗಿದ್ದ ಹುಬ್ಬಳ್ಳಿ ಈಗ ಮೊದಲಿನಂತಿಲ್ಲ. ಇಲ್ಲಿನ ವ್ಯಾಪಾರ, ವಹಿವಾಟುಗಳು ಅಕ್ಕಪಕ್ಕದ ಗದಗ_, ಹಾವೇರಿ ನಗರಗಳಿಗೆ ಸ್ಥಳಾಂತರವಾಗಿವೆ.ಬರಲಿರುವ ದಿನಗಳಲ್ಲಿ ಮಂಗಳೂರು ಕೂಡ ಹಾಗಾದರೆ ಅಚ್ಚರಿ ಪಡಬೇಕಿಲ್ಲ.ಮಂಗಳೂರು ಸಹಜ ಸ್ಥಿತಿಗೆ ಬರಬೇಕಾದರೆ ಅಮಾಯಕ ಯುವಕರ ಕೈಗೆ ತಲವಾರು ಚಾಕು, ಚೂರಿಗಳನ್ನು ಕೊಟ್ಟವರನ್ನು ಮೊದಲು ಹಿಡಿದು ಒಳಗೆ ಹಾಕಬೇಕು. ಸೂತ್ರಧಾರರನ್ನು ಹಿಡಿದರೆ ಪಾತ್ರಧಾರಿಗಳು ದಾರಿಗೆ ಬರುತ್ತಾರೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X