ಜೈಲಿನಲ್ಲಿ ಇರಬೇಕಾದವರು ಯಾರು?

ಮುಸ್ಲಿಮ್ ಅಲ್ಪಸಂಖ್ಯಾತರನ್ನು ಉಸಿರೆತ್ತದಂತೆ ಮಾಡಲು ಪದೇ ಪದೇ ‘ಜಿಹಾದಿ’ ಪದವನ್ನು ಬಳಸಲಾಗುತ್ತಿದೆ.ಕೋಮುವಾದಿ ಮತ್ತು ಮನುವಾದಿ ಶಕ್ತಿಗಳ ವಿರುದ್ಧ ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡುವವರನ್ನು ‘ಅರ್ಬನ್ ನಕ್ಸಲ್’ ಪದವನ್ನು ಬಳಸಿ ಹತ್ತಿಕ್ಕಲಾಗುತ್ತದೆ. ಇವೆರಡು ಪದಗಳು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಲ್ಲಿ ಸೃಷ್ಟಿಯಾಗಿ ಗೃಹ ಇಲಾಖೆಯಲ್ಲಿ ಅನಧಿಕೃತ ವಾಗಿ ಸೇರ್ಪಡೆಗೊಂಡಿವೆ.ಸೈದ್ಧಾಂತಿಕ ವಿರೋಧಿ ಗಳನ್ನು ಹತ್ತಿಕ್ಕಲು ಈ ಪದಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಭಾರತದ ಬುದ್ಧ್ದಿಜೀವಿಗಳು,
ಚಿಂತಕರು, ಲೇಖಕರು ಮತ್ತು ಕಲಾವಿದರನ್ನು ಟೀಕಿಸಲು ಈ ಪದಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಸಂಸತ್ತಿನ 543 ಸದಸ್ಯರ ಪೈಕಿ 252 ಮಂದಿಯ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ವರ್ಷದಿಂದ ವರ್ಷಕ್ಕೆ ಸಂಸತ್ತಿನ ಉಭಯ ಸದನಗಳನ್ನು ಪ್ರವೇಶಿಸುವ ಅಪರಾಧ ಹಿನ್ನೆಲೆ ಯ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಂಸತ್ತು ಮಾತ್ರವಲ್ಲ ರಾಜ್ಯಗಳ ಶಾಸನ ಸಭೆಗಳಲ್ಲೂ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಕಾನೂನು, ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರದ (ಪ್ರಭುತ್ವದ) ಆಯಕಟ್ಟಿನ ಸಾಂವಿಧಾನಿಕ ಸ್ಥಾನಗಳಲ್ಲಿ ಇಂಥವರು ಕುಳಿತುಕೊಂಡರೆ ಕಾನೂನು ವ್ಯವಸ್ಥೆಯ ಗತಿಯೇನು ಎಂಬ ಆತಂಕ ಸಹಜವಾಗಿ ಉಂಟಾಗುತ್ತಲೇ ಇದೆ. ಇನ್ನೊಂದೆಡೆ ಸಂಸತ್ತಿನಲ್ಲಿ ಇರಲೇ ಬೇಕಾದ ಹಲವಾರು ವಿಷಯಗಳಲ್ಲಿ ಪಾರಂಗತರಾದ ವಿದ್ವಾಂಸರು ದೇಶದ್ರೋಹದ ಆರೋಪವನ್ನು ಹೊತ್ತು ಸೆರೆಮನೆಯಲ್ಲಿ ಇದ್ದಾರೆ. ಆನಂದ್ ತೇಲ್ತುಂಬ್ಡೆೆ ಅವರಂಥ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ವಿದ್ವಾಂಸರು, ಹಾಗೆಯೇ ವರವರರಾವ್ ಅವರಂಥ ಕವಿಗಳು ಅಸಹನೀಯ ಯಾತನೆಯನ್ನು ಅನುಭವಿಸಿ ಜಾಮೀನು ಮೇಲೆ ಹೊರಗೆ ಬಂದಿದ್ದರೂ ಪೊಲೀಸರ ಕಣ್ಗಾವಲಿನಲ್ಲೇ ಇರಬೇಕಾಗಿದೆ. ಇವರು ಮಾತ್ರವಲ್ಲ ಉಮರ್ ಖಾಲಿದ್ ಅವರಂಥ ಪ್ರತಿಭಾವಂತ ವಿದ್ಯಾರ್ಥಿ ಕಳೆದ ಐದಾರು ವರುಷಗಳಿಂದ ಸೆರೆಮನೆಯಲ್ಲಿ ಇದ್ದಾರೆ. ಯಾವುದೇ ಆರೋಪ ಇಲ್ಲದಿದ್ದರೂ ಅವರಿಗೆ ಜಾಮೀನು ಕೂಡ ಸಿಗುತ್ತಿಲ್ಲ. ಆದರೆ ಇದೀಗ ಅಸ್ವಸ್ಥ ತಾಯಿಯನ್ನು ನೋಡಲು, ವೈದ್ಯಕೀಯ ತಪಾಸಣೆ ಮಾಡಿಸಲು ಕೇವಲ ಮೂರು ದಿನಗಳ ಜಾಮೀನು ನೀಡಲಾಗಿದೆ.
ದಿಲ್ಲಿಯಲ್ಲಿ 2020 ರಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಗಲಭೆ, ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಉಮರ್ ಖಾಲಿದ್ ಮಾತ್ರವಲ್ಲ, ಶರ್ಜೀಲ್ ಇಮಾಮ್ ಅವರು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇದ್ದಾರೆ.
ಉಮರ್ ಖಾಲಿದ್ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಹೈಕೋರ್ಟ್ ಮಾತ್ರವಲ್ಲ , ಸುಪ್ರೀಂ ಕೋರ್ಟ್ ಕೂಡ ನಿರಾಕರಿಸಿದ್ದು ತಪ್ಪು ಎಂದು ಸುಪ್ರೀಂ ಕೋರ್ಟ್ ತನ್ನದೇ ಹಿಂದಿನ ತೀರ್ಪಿನ ಮರು ಪರಾಮರ್ಶೆಗೆ ಮುಂದಾಗಿದೆ.
ಜಾಮೀನು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯ ಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಉಮರ್ ಖಾಲಿದ್ ಹಾಗೂ ಶರ್ಜೀಲ್ ಅವರಿಗೆ ಸುಪ್ರೀಂ ಕೋರ್ಟಿನ ಮತ್ತೊಂದು ಪೀಠವು ಜಾಮೀನು ನಿರಾಕರಿಸಿದ್ದು ತಪ್ಪುನಿರ್ಧಾರವಾಗಿದೆ ಮತ್ತು 2021 ರ ಕೆ.ಎ.ನಜೀಬ್ ಪ್ರಕರಣದಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠ ಸ್ಥಾಪಸಿದ್ದ ತತ್ವದ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ)ಅಡಿಯಲ್ಲಿ ಕೂಡ ಜಾಮೀನು ನಿರಾಕರಣೆ ಸರಿಯಲ್ಲ ಎಂದು ಹೇಳಿದೆ.
ಸುಪ್ರಿಂ ಕೋರ್ಟ್‌ನ ಈ ಪರಾಮರ್ಶೆ ಉಮರ್ ಖಾಲಿದ್ ರೀತಿಯ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಸಣ್ಣ ಪೀಠಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶನದಂತಿದೆ ಎಂದು ಹೇಳಿದರೆ ತಪ್ಪಿಲ್ಲ. ಉಮರ್ ಖಾಲಿದ್‌ರನ್ನು ಐದು ವರ್ಷಗಳಷ್ಟು ದೀರ್ಘ ಕಾಲ ಬಂಧನದಲ್ಲಿ ಇಡುವುದು ಸರಿಯಲ್ಲ. ಸರಕಾರದ ಹಟದಿಂದಾಗಿ ನ್ಯಾಯದ ಚೌಕಟ್ಟನ್ನು ಮೀರಿದಂತಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಉಮರ್ ಖಾಲಿದ್ ಅವರ ತಂದೆ ಸೈಯದ್ ಖಾಸಿಂ ರಸೂಲ್ ಇಲ್ಯಾಸ್ ಅವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದರು. ಅಮಾಯಕನಾದ ತನ್ನ ಮಗನನ್ನು ಯಾವುದೇ ವಿಚಾರಣೆ ಇಲ್ಲದೆ ಐದು ವರ್ಷಗಳಷ್ಟು ಸುದೀರ್ಘ ಕಾಲ ಜೈಲಿನಲ್ಲಿ ಇಟ್ಟಿರುವ ಬಗ್ಗೆ ತೀವ್ರ ಅಸಮಾಧಾನ ವನ್ನು ವ್ಯಕ್ತಪಡಿಸಿದರು.
ಸರಕಾರದಿಂದ, ಸಮಾಜದಿಂದ ಅನ್ಯಾಯ ವಾದಾಗ, ಎಲ್ಲಿಯೂ ನ್ಯಾಯ ಸಿಗದಿದ್ದಾಗ ನಾಗರಿಕರು ಸಾಮಾನ್ಯವಾಗಿ ಕೋರ್ಟಿಗೆ ಹೋಗುತ್ತಾರೆ. ಅಲ್ಲಿ ಕೆಲವರಿಗೆ ಪರಿಹಾರವೂ ಸಿಕ್ಕಿದೆ. ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸರಕಾರವನ್ನು ಬಿಡದೇ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡ ಉದಾಹರಣೆಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರಕಾರದ ಕಣ್ಸನ್ನೆಯಂತೆ ಕೋರ್ಟುಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದು ಬರೀ ಆರೋಪವಲ್ಲ. ಇದು ವಾಸ್ತವ ಸಂಗತಿಯಾಗಿದೆ.
ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಕಟು ವಾಸ್ತವದ ಸಂಗತಿ ಯಾವುದೆಂದರೆ ಕಾನೂನಿನ ಎದುರು ಕೆಲವರು ಹೆಚ್ಚು ಸಮಾನವಾಗಿರುತ್ತಾರೆ. ಕಾನೂನು ಎಲ್ಲ ಪ್ರಜೆಗಳಿಗೂ ಒಂದೇ ತೆರನಾಗಿ ಅನ್ವಯಿಸ್ಪಡುವುದಿಲ್ಲ. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರತಿಭಾವಂತ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಅವರ ಎಂಟು ಮಂದಿ ಸ್ನೇಹಿತರನ್ನು ಯಾವುದೇ ವಿಚಾರಣೆಯಿಲ್ಲದೆ, ಯಾವುದೇ ಲಿಖಿತ ಆರೋಪಗಳಿಲ್ಲದೆ ಐದು ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿರುವುದು ಅನ್ಯಾಯದ ಪರಮಾವಧಿಯಾಗಿದೆ. ಪದೇ ಪದೇ ಜಾಮೀನು ನಿರಾಕರಿಸುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ.
ಈ ದೇಶದಲ್ಲಿ ಗೌರಿ ಲಂಕೇಶ್, ಡಾ.ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸರೆ, ದಾಭೋಳ್ಕರ್ ಅವರನ್ನು ಹತ್ಯೆ ಮಾಡಿದ ಆರೋಪಕ್ಕೆ ಒಳಗಾದವರು ನ್ಯಾಯಾಲಯದಿಂದ ಜಾಮೀನು ಪಡೆದು ರಾಜಾರೋಷವಾಗಿ ಓಡಾಡುತ್ತಾರೆ.ಆದರೆ ಯಾವುದೇ ತಪ್ಪನ್ನು ಮಾಡದ ಪಿಎಚ್‌ಡಿ ವಿದ್ಯಾರ್ಥಿ ಉಮರ್ ಖಾಲಿದರ್‌ಂಥವರಿಗೆ ಜಾಮೀನು ನಿರಾಕರಿಸಲಾಗುತ್ತದೆ. ಮುಸ್ಲಿಮ್ ಅಲ್ಪಸಂಖ್ಯಾತರನ್ನು ಉಸಿರೆತ್ತದಂತೆ ಮಾಡಲು ಪದೇ ಪದೇ ‘ಜಿಹಾದಿ’ ಪದವನ್ನು ಬಳಸಲಾಗುತ್ತಿದೆ.ಕೋಮುವಾದಿ ಮತ್ತು ಮನುವಾದಿ ಶಕ್ತಿಗಳ ವಿರುದ್ಧ ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡುವವರನ್ನು ‘ಅರ್ಬನ್ ನಕ್ಸಲ್’ ಪದವನ್ನು ಬಳಸಿ ಹತ್ತಿಕ್ಕಲಾಗುತ್ತದೆ. ಇವೆರಡು ಪದಗಳು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಲ್ಲಿ ಸೃಷ್ಟಿಯಾಗಿ ಗೃಹ ಇಲಾಖೆಯಲ್ಲಿ ಅನಧಿಕೃತ ವಾಗಿ ಸೇರ್ಪಡೆಗೊಂಡಿವೆ.ಸೈದ್ಧಾಂತಿಕ ವಿರೋಧಿ ಗಳನ್ನು ಹತ್ತಿಕ್ಕಲು ಈ ಪದಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಭಾರತದ ಬುದ್ಧ್ದಿಜೀವಿಗಳು,
ಚಿಂತಕರು, ಲೇಖಕರು ಮತ್ತು ಕಲಾವಿದರನ್ನು ಟೀಕಿಸಲು ಈ ಪದಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಯು ಎಪಿಎ ಅಸ್ತ್ರವನ್ನು ಸರಕಾರ ಬಳಸುವುದು ತನ್ನ ರಾಜಕೀಯ, ಸೈದ್ಧಾಂತಿಕ ವಿರೋಧಿಗಳ ವಿರುದ್ಧ. ಯಾವುದೇ ವ್ಯಕ್ತಿಯನ್ನು ವಿಚಾರಣೆಯೇ ಇಲದೆ ಐದು ವರ್ಷಗಳಷ್ಟು ದೀರ್ಘ ಕಾಲ ಜೈಲಿನಲ್ಲಿ ಇಡುವುದು ಲೋಪ ಎಂದು ನ್ಯಾಯಾಲಯಕ್ಕೆ ಅನಿಸಿಲ್ಲ.ಯಾವುದೇ ಆರೋಪವನ್ನು ಸಾಬೀತು ಪಡಿಸದೆ, ವಿಚಾರಣೆ ನಡೆಸದೆ ಜೈಲಿನಲ್ಲಿ ಇಡುವುದು ಆತಂಕದ ಸಂಗತಿಯಾಗಿದೆ. ಯಾವುದೇ ಆರೋಪವಿಲ್ಲದೆ ಬಂಧಿಸಿ ನಂತರ ಸಾಕ್ಷ್ಯಾಧಾರ ಗಳಿಗಾಗಿ ತಡಕಾಡುವುದು ಅನ್ಯಾಯದ ಪರಮಾವಧಿಯಾಗಿದೆ.
ಅರ್ಬನ್ ನಕ್ಸಲ್ ಪದವನ್ನು ಬಳಸಿ ಅಂತರ್‌ರಾಷ್ಟ್ರೀಯ ಮಟ್ಟದ ಲೇಖಕ ಆನಂದ ತೇಲ್ತುಂಬ್ಡೆಡೆ,ಕವಿ ವರವರರಾವ್, ಖ್ಯಾತ ನ್ಯಾಯವಾದಿಸುಧಾ ಭಾರದ್ವಾಜ್, ಪತ್ರಕರ್ತ ಗೌತಮ ನವ್ಲಾಕಾ ಅವರಂಥವರನ್ನು ಬಂಧಿಸಿ,ಹಿಂಸಿಸಿದ್ದನ್ನು ಈ ದೇಶ ಮರೆತಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐಎ) ಬಂಧಿಸಲ್ಪಟ್ಟಿದ್ದ 84 ವಯಸ್ಸಿನ ಸ್ಟ್ಯಾನ್ ಸ್ವಾಮಿ ಅವರ ಸಾವನ್ನು ಮರೆಯಲು ಹೇಗೆ ಸಾಧ್ಯ?
2020 ರ ಫೆಬ್ರವರಿ ತಿಂಗಳಿನಲ್ಲಿ ದಿಲ್ಲಿಯಲ್ಲಿ ನಡೆದ ಕೋಮು ಗಲಭೆಯ ಹಿಂದಿನ ಪಿತೂರಿಗೆ ಸಂಬಂಧಿಸಿದಂತೆ ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್‌ರನ್ನು ಬಂಧಿಸಲಾಗಿದೆ. ವಿಚಾರಣೆಯಿಲ್ಲದೆ ಐದು ವರ್ಷಗಳ ಕಾಲ ಜೈಲಿನಲ್ಲಿ ಇಡಲಾಗಿದೆ. ಆದರೆ ದಿಲ್ಲಿ ಗಲಭೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಕಪಿಲ್ ಮಿಶ್ರಾ ಅವರಂಥವರು ಅತ್ಯಂತ ಪ್ರಚೋದನಕಾರಿ ಭಾಷಣ ಮಾಡಿದರೂ ಅವರ ವಿರುದ್ಧ ಯಾವುದೇ ಕ್ರಮವಿಲ್ಲ. ಗಲಭೆ ನಡೆದಾಗಲೇ ಅನುರಾಗ ಠಾಕೂರ ‘ಗೋಲಿ ಮಾರೋ ಸಾಲೊಂಕೊ’ ಎಂದು ಭಾಷಣದಲ್ಲಿ ಅತ್ಯಂತ ಉದ್ರೇಕಕಾರಿ ಕರೆ ನೀಡಿದರೂ ಅವರ ವಿರುದ್ಧ ಕ್ರಮವಿಲ್ಲ. ಕೋರ್ಟ್ ಕೂಡ ಅವರಾಡಿದ ಮಾತು ಪ್ರಚೋದನಕಾರಿ ಅಲ್ಲ ಎಂದು ಇತ್ತೀಚೆಗೆ ಹೇಳಿದೆ.
ವಾಸ್ತವವಾಗಿ ಮಹಾತ್ಮಾ ಗಾಂಧಿ, ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸರೆ, ಡಾ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಇವರನ್ನು ಗುಂಡಿಕ್ಕಿ ಕೊಂದವರು ಯಾರು? ಮುಸಲ್ಮಾನರಂತೂ ಅಲ್ಲ. ನಕ್ಸಲರೂ ಅಲ್ಲ.ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ಜೈಲು ಸೇರಿದವರನ್ನು ಹೂ ಹಾರ ಹಾಕಿ ಸತ್ಕರಿಸಿದವರು ಯಾರು? ಅನಂತ ಮೂರ್ತಿ ಅವರು ನಿಧನರಾದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದವರು ಯಾರೆಂದು ವಿವರಿಸಬೇಕಾಗಿಲ್ಲ. ಉಮರ್ ಖಾಲಿದ್ ಮತ್ತು ಅವರ ಸ್ನೇಹಿತರು ಇಂಥ ಹೇಯ ಕೃತ್ಯವನ್ನು ಮಾಡಿದವರಲ್ಲ.






