ಜಾತಿವಾರು ಸಮೀಕ್ಷೆಗೆ ಇಷ್ಟೊಂದು ಭಯವೇಕೆ?

ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಮಾತ್ರವಲ್ಲ, ಸ್ವಪಕ್ಷದ ಬಲಿಷ್ಠ ಜಾತಿಗಳ ಪ್ರಭಾವಿ ಶಕ್ತಿಗಳ ತೀವ್ರ ವಿರೋಧ ಹಾಗೂ ಒತ್ತಡದ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ದಿಟ್ಟ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಗೊಂಡಿದ್ದಾರೆ. ದೇವರಾಜ ಅರಸು ನಂತರ ಇಂಥ ಸವಾಲನ್ನು ಬೇರಾವ ಮುಖ್ಯಮಂತ್ರಿಯೂ ಎದುರಿಸಿರಲಿಲ್ಲ. ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಜಾತಿವಾರು ಸಮೀಕ್ಷೆಯನ್ನು ಕೈ ಬಿಡಲಾಗುವುದು ಇಲ್ಲವೇ ಮುಂದೂಡಲಾಗುವುದು ಎಂಬ ದಟ್ಟ ವದಂತಿಗಳು ಹರಡಿದ್ದವು. ಇದರ ನಡುವೆ ಮುಖ್ಯಮಂತ್ರಿಯವರ ಈ ದಿಟ್ಟ ನಿಲುವಿನಿಂದ ಈ ಬಗೆಗಿನ ಗೊಂದಲ ನಿವಾರಣೆಯಾದಂತಾಗಿದೆ.ಆದರೂ ಈ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಅಡ್ಡಗಾಲು ಹಾಕುವ ಮಸಲತ್ತುಗಳು ನಡೆಯುತ್ತಲೇ ಇವೆ. ಆದರೂ ಸರಕಾರ ಯಾವುದೇ ಒತ್ತಡಕ್ಕೆ ಮಣಿಯದೇ ದಸರಾ ಸಂದರ್ಭದಲ್ಲೇ ಈ ಸಮೀಕ್ಷೆಯನ್ನು ನಡೆಸುವುದು ಸೂಕ್ತ.
ಜಾತಿ ಜನಗಣತಿ ಪ್ರಕ್ರಿಯೆಗೆ ತೀವ್ರ ವಿರೋಧ ಎದುರಾಗುತ್ತಿರುವ ಈ ಸನ್ನಿವೇಶದಲ್ಲಿ ಎಪ್ಪತ್ತರ ದಶಕದ ಆ ದಿನಗಳು ಮತ್ತೆ ನೆನಪಿಗೆ ಬರುತ್ತಿವೆ. ಆಗಿನ ಮತ್ತು ಈಗಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ರಾಜಕೀಯ ವಾತಾವರಣವೂ ಭಿನ್ನವಾಗಿದೆ. ಆದರೆ, ಶತಮಾನಗಳಿಂದ ಅನ್ಯಾಯಕ್ಕೆ ಒಳಗಾಗಿರುವ ಸಮಾಜದ ನೊಂದ ಜನ ವರ್ಗಗಳ ಆರ್ಥಿಕ, ಸಾಮಾಜಿಕ ಏಳಿಗೆಗೆ ಆಗಿನಂತೆ ಈಗಲೂ ವಿರೋಧ ಬರುತ್ತಲೇ ಇದೆ. ವಿರೋಧದ ಸ್ವರೂಪ ಬದಲಾಗಿದೆ. ಆದರೆ, ವಿರೋಧದ ಉದ್ದೇಶ ಬದಲಾಗಿಲ್ಲ. ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಸಕಲರಿಗೂ ಸಮಾನಾವಕಾಶ ಕಲ್ಪಿಸುವ ಯಾವುದೇ ಪ್ರಕ್ರಿಯೆಯನ್ನು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ತಮ್ಮ ಜಾತಿಯ ಜನಸಾಮಾನ್ಯರ ಸಂಖ್ಯಾಬಲವನ್ನು ತೋರಿಸಿ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡವರಿಗೆ, ರಾಜಕೀಯ ಕೋಟೆಯನ್ನು ಕಟ್ಟಿಕೊಂಡವರಿಗೆ ಈ ಸಮೀಕ್ಷೆ ಬೇಡವಾಗಿದೆ.
ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಜನ ವರ್ಗಗಳ ಸಾಮಾಜಿಕ , ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನಕ್ಕೆ ರಾಜ್ಯ ಹೈಕೋರ್ಟಿನ ಹಿರಿಯ ವಕೀಲರಾಗಿದ್ದ ಲಕ್ಷ್ಮಣ ಹಾವನೂರು ಅವರ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಲಾಗಿತ್ತು .ಈ ಆಯೋಗದ ಸದಸ್ಯರು ನಾಡಿನೆಲ್ಲೆಡೆ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿದರು.ಆಳವಾದ ಅಧ್ಯಯನ ನಡೆಸಿದರು. ಹಾವನೂರು ಅವರಿಗೆ ಬೆಂಬಲವಾಗಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಪಿ.ಲಂಕೇಶ್ ಮೊದಲಾದವರಿದ್ದರು. ಈಗ ನಾಡಿನ ಹೆಸರಾಂತ ವಕೀಲರಾಗಿರುವ ರವಿವರ್ಮ ಕುಮಾರ್ ಅವರು ಹಾವನೂರು ಅವರ ಒಡನಾಡಿಯಾಗಿ ವರದಿಗೆ ನೆರವಾದರು. ಆದರೆ ಈ ವರದಿ ಬರುವ ಮುನ್ನವೇ ಪಟ್ಟ ಭದ್ರ ಹಿತಾಸಕ್ತಿಗಳಿಂದ ಅಪಸ್ವರ ಶುರುವಾಯಿತು. ಜಿಲ್ಲೆ, ತಾಲೂಕುಗಳಲ್ಲಿ ಪ್ರತಿಭಟನೆಗಳು ನಡೆದವು. ಆಗ ವೀರ ಶೈವರು ಮತ್ತು ಒಕ್ಕಲಿಗ ರಾಜಕಾರಣಿಗಳು ಪ್ರತಿಭಟನೆಯ ನಾಯಕತ್ವವನ್ನು ವಹಿಸಿದ್ದರು. ರಾಜಕಾರಣಿಗಳು ಮಾತ್ರವಲ್ಲ, ಕಾವಿಧಾರಿ ಮಠಾಧೀಶರೂ ಬೀದಿಗೆ ಬಂದಿದ್ದರು.ಆದರೆ ಯಾವುದೇ ಒತ್ತಡಕ್ಕೆ ಮಣಿಯದ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿಯನ್ನು ಜಾರಿಗೆ ತಂದರು. ಈಗಿನಂತೆ ಆಗಲೂ ಕೂಡ ಹಾವನೂರು ಆಯೋಗದ ವರದಿಯ ವಿರೋಧಿಗಳು ದೇವರಾಜ ಅರಸು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದರು. ಅರಸು ನಂತರ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಥದೇ ಆದರೆ ಸ್ವಲ್ಪ ಭಿನ್ನವಾದ ಸವಾಲನ್ನು ಎದುರಿಸುತ್ತಿದ್ದಾರೆ. ಆದರೂ ಅವರು ಹಿಂದೆ ಸರಿದಿಲ್ಲ ಎಪ್ಪತ್ತರ ದಶಕದಲ್ಲಿ ವೀರಶೈವ, ಲಿಂಗಾಯತ ಸಮುದಾಯಗಳ ನಾಯಕರು ಒಮ್ಮತದಿಂದ ಹಾವನೂರು ಆಯೋಗದ ವರದಿಯನ್ನು ವಿರೋಧಿಸಿದರು. ಆದರೆ ಈಗ ಅವರಲ್ಲೇ ಒಮ್ಮತವಿಲ್ಲ. ವೀರಶೈವ , ಲಿಂಗಾಯತರಲ್ಲಿ ಮೂರ್ನಾಲ್ಕು ಬಣಗಳಾಗಿವೆ. ಒಬ್ಬೊಬರು ಒಂದೊಂದು ರೀತಿ ವಾದ ಮಂಡಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ, ಧರ್ಮದ ಅಂಕಣದಲ್ಲಿ ಏನನ್ನು ನಮೂದಿಸಬೇಕು ಎಂಬ ಬಗ್ಗೆ ಒಬ್ಬೊಬರು ಒಂದೊಂದು ರೀತಿಯಲ್ಲಿ ಸಲಹೆ ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ಮಾಡಿದರೂ ಹೆಚ್ಚಿನ ಪರಿಣಾಮ ಉಂಟಾಗಿಲ್ಲ. ಈ ನಡುವೆ ಸಂಘ ಪರಿವಾರ ಮತ್ತು ಅದರ ರಾಜಕೀಯ ವೇದಿಕೆಯಾಗಿರುವ ಬಿಜೆಪಿ ಈ ಸಮೀಕ್ಷೆಯಿಂದ ಹೆದರಿ ಕಂಗಾಲಾಗಿದೆ. ಹಿಂದೂಗಳನ್ನು ವಿಭಜಿಸುವ ತಂತ್ರ ಎಂದು ಹತಾಶೆಯಿಂದ ಟೀಕಿಸುತ್ತಿದೆ. ಬಿಜೆಪಿ ನಿಲುವಿಗೆ ಬೆಂಬಲವಾಗಿ ನಿಂತಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮಠಾಧೀಶರು ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಮತ್ತು ಜಾತಿ ,ಉಪಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕೆಂದು ಸಮಾಜದ ಸಭೆಯನ್ನು ಕರೆ ನೀಡಿದ್ದಾರೆ. ಆದರೆ ಲಿಂಗಾಯತ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪಂಚಮಸಾಲಿ ಉಪ ಪಂಗಡಕ್ಕೆ ಸೇರಿದವರು ಸ್ವಾಮಿಗಳ ಮಾತು ಕೇಳುವರೇ? ಈ ಪ್ರಶ್ನೆಗೆ ಮಠಾಧೀಶರ ಬಳಿಯೂ ಉತ್ತರವಿಲ್ಲ.ಸಿದ್ದರಾಮಯ್ಯನವರು ಕೇವಲ ಅಹಿಂದ ಸಮುದಾಯಗಳು ಮಾತ್ರವಲ್ಲ ಎಲ್ಲ ಸಮುದಾಯಗಳ ಶ್ರಮಜೀವಿಗಳ ಒಲುವನ್ನು ಗಳಿಸಿಕೊಂಡಿದ್ದಾರೆ. ಇದು ಜಾತಿ ಯಾರಿಗೂ ಮತದ ಜನಗಣತಿ ಅಲ್ಲ.ಆದರೆ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಗಣತಿಯಾಗಿದೆ. ಇದರಿಂದ ತೊಂದರೆ ಇಲ್ಲ. ತಮ್ಮ ಜಾತಿ ಹಾಗೂ ಧರ್ಮದ ಕಾಲಂನಲ್ಲಿ ಏನನ್ನಾದರೂ ತುಂಬ ಬಹುದು ಹಿಂದೆ ಪ್ರಗತಿಪರ ಸಂಘಟನೆಗಳ ಜೊತೆಗೆ ಗುರುತಿಸಿಕೊಳ್ಳುತ್ತಿದ್ದ ವೇದಿಕೆಯ ಮೇಲೆ ನಿಂತು ಕ್ರಾಂತಿ ಗೀತೆಗಳನ್ನು ಹಾಡುತ್ತಿದ್ದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಲ್ಲಿದ್ದ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕಳೆದ ಬುಧವಾರ ಸಭೆಯೊಂದನ್ನು ನಡೆಸಿ ಸಮೀಕ್ಷೆಯಲ್ಲಿ ಪಂಚಮಸಾಲಿ ಗಳು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಲು ಕರೆ ನೀಡಿದರು.ರಾಜ್ಯದಲ್ಲಿ ಒಟ್ಟು ಮೂರು ಪಂಚಮಸಾಲಿ ಪೀಠಗಳಿವೆ. ಹಾಗೆ ಹೇಳದಿದ್ದರೆ ಅವರ ಪೀಠವೇ ಅಲುಗಾಡುತ್ತಿತ್ತು. ಕೂಡಲ ಸಂಗಮ ಸೇರಿದಂತೆ ಈ ಪೀಠಗಳು ಬಿಜೆಪಿಯ ರಾಜಕಾರಣಿಗಳು ತಮ್ಮ ರಾಜಕೀಯ ಅನುಕೂಲಕ್ಕಾಗಿ ಮಾಡಿಕೊಂಡ ಪೀಠಗಳು. ಈ ಪೀಠಗಳಿಗೆ ಸಕಲ ಸಂಪನ್ಮೂಲಗಳನ್ನು ಒದಗಿಸುವವರು ಇದೇ ರಾಜಕಾರಣಿಗಳು. ಆರಂಭದಲ್ಲಿ ಬಿಜೆಪಿ ಸರಕಾರ ವಿದ್ದಾಗ ಉದ್ದಿಮೆ ಸಚಿವರಾಗಿದ್ದ ಮುರುಗೇಶ ನಿರಾಣಿ ಅವರು ಕೂಡಲ ಸಂಗಮದ ಪಂಚಮಸಾಲಿ ಪೀಠ ಸ್ಥಾಪಿಸಿ ದಾವಣಗೆರೆಯಲ್ಲಿ ಇದ್ದ ಜಯ ಮೃತ್ಯುಂಜಯ ಸ್ವಾಮಿಗಳನ್ನು ಅಲ್ಲಿಗೆ ಕರೆ ತಂದು ಪೀಠದ ಮೇಲೆ ಕೂರಿಸಿದರು.ಮುಂದೆ ಯಾವುದೋ ಕಾರಣಕ್ಕಾಗಿ ಅವರಲ್ಲಿ ಭಿನ್ನಾಭಿಪ್ರಾಯ ಬಂದು ದೂರವಾದರು. ಆಗ ಕೂಡಲ ಸಂಗಮ ಪಂಚಮಸಾಲಿ ಪೀಠದ ಸ್ವಾಮಿಗಳ ನೆರವಿಗೆ ಬಂದವರು ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್. ನಂತರ ಅವರೂ ಕೈ ಬಿಟ್ಟರು. ಈಗ ಬಿಜಾಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಜಯ ಮೃತ್ಯುಂಜಯ ಸ್ವಾಮಿಗಳು ಅವಲಂಬಿಸಿದ್ದಾರೆ. ಇನ್ನೊಂದೆಡೆ ಮುರುಗೇಶ ನಿರಾಣಿಯವರು ಜಮಖಂಡಿಯಲ್ಲಿ ಪಂಚಮಸಾಲಿ ಸಮುದಾಯದ ಮತ್ತೊಂದು ಪೀಠವನ್ನು ಮಾಡಿದ್ದಾರೆ. ಬಿಜೆಪಿಯ ಇನ್ನೊಂದು ಗುಂಪು ಹರಿಹರದಲ್ಲಿ ಪಂಚಮಸಾಲಿ ಸಮುದಾಯದ ಮಗದೊಂದು ಪೀಠವನ್ನು ಸ್ಥಾಪಿಸಿ ವಚನಾನಂದ ಸ್ವಾಮಿಗಳನ್ನು ಆ ಪೀಠದ ಮೇಲೆ ಕೂರಿಸಿದ್ದಾರೆ.ಈ ಮೂರೂ ಪಂಚಮಸಾಲಿ ಪೀಠಗಳು ಬಿಜೆಪಿ ಪರವಾಗಿವೆ.ಪಂಚಮಸಾಲಿ ಸಮುದಾಯದವರು ಸಮೀಕ್ಷೆಯಲ್ಲಿ ಧರ್ಮದ ಕಾಲಂ ನಲ್ಲಿ ‘ಹಿಂದೂ’ ಎಂದು ಬರೆಸಲು ಸೂಚನೆ ನೀಡಿದ್ದಾರೆೆ.
ಜಾತಿ ಜನಗಣತಿ ಎಂಬುದು ಯಾವುದೇ ಸಮುದಾಯವನ್ನು ಎತ್ತಿ ಕಟ್ಟಿ ಇನ್ನುಳಿದ ಸಮುದಾಯಗಳನ್ನು ಕಡೆಗಣಿಸುವುದಲ್ಲ. ಕಾಂಗ್ರೆಸ್ ಪಕ್ಷದವರು ತಾವು ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿಗೆ ಸಂಬಂಧಿಸಿದ ಹಿಂದುಳಿದ ಆಯೋಗದ ಸಮೀಕ್ಷಾ ವರದಿಯನ್ನು ಜಾರಿಗೆ ತರುವುದಾಗಿ ಜನರಿಗೆ ಮಾತು ಕೊಟ್ಟಿದ್ದರು.ಆದರೆ ಇದನ್ನು ಈಡೇರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೊಂದು ಅಗ್ನಿ ಪರೀಕ್ಷೆಯಾಗಿತ್ತು. ಈ ವಿಷಯದಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಮುಖ್ಯಮಂತ್ರಿಗಳು ಯಾವುದಕ್ಕೂ ಮಣಿಯಲಿಲ್ಲ.
ಜಾತಿ ಜನಗಣತಿಯನ್ನು ವಿರೋಧಿಸುತ್ತಿರುವವರು ಯಾರೆಂದು ಎಲ್ಲರಿಗೂ ಗೊತ್ತಿದೆ. ವೀರಶೈವ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಜನಸಾಮಾನ್ಯರು ತಮ್ಮ ಪಾಡಿಗೆ ತಾವು ಸುಮ್ಮನಿದ್ದರೂ ಇವರನ್ನು ಜಾತಿ ಹೆಸರಿನಲ್ಲಿ ಬಳಸಿಕೊಂಡು ರಾಜಕೀಯ ಅಧಿಕಾರವನ್ನು ಮತ್ತು ಸಕಲ ಸಂಪನ್ಮೂಲಗಳನ್ನು ಗಳಿಸಿಕೊಂಡವರು ಇದನ್ನು ವಿರೋಧಿಸುತ್ತ ಬಂದರು.
ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿಯವರು ಜಾತಿ ಗಣತಿ ನಡೆಯಲೇಬೇಕೆಂಬ ನಿಲುವಿನ ಪರವಾಗಿದ್ದರು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಇದು ಅಡಕವಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಜಾತಿ ಜನಗಣತಿ ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಹಲವಾರು ಸಲ ಹೇಳಿದರು. ಸಿದ್ದರಾಮಯ್ಯನವರಿಗೆ ಇದು ನುಂಗಲೂ ಆಗದ, ಉಗುಳಲೂ ಆಗದ ತುತ್ತಾಗಿ ಪರಿಣಮಿಸಿತ್ತು ಇದನ್ನೆಲ್ಲ ನೋಡುವಾಗ ನನಗೆ ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗಿನ ದಿನಗಳು ನೆನಪಿಗೆ ಬರುತ್ತವೆ. ಆಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನಕ್ಕೆ ಹೈಕೋರ್ಟನು ಹಿರಿಯ ವಕೀಲ ಲಕ್ಷ್ಮಣ ಹಾವನೂರು ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗದ ವರದಿ ಬರುವ ಮುನ್ನವೇ ರಾಜ್ಯದಲ್ಲಿ ಇದರ ವಿರುದ್ಧ ಅಪಸ್ವರ ಕೇಳಿ ಬರತೊಡಗಿತು. ಅಲ್ಲಲ್ಲಿ ಪ್ರತಿಭಟನೆಗಳೂ ನಡೆದವು. ಆಗಲೂ ಇದನ್ನು ವಿರೋಧಿಸಿದವರು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ರಾಜಕೀಯ ನಾಯಕರು. ಈಗ ಶಾಮನೂರು ಅವರ ಜೊತೆಗೆ ಸೇರಿ ವಿರೋಧಿಸುತ್ತಿರುವ ಮಂತ್ರಿ ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಅಗ ಹಾವನೂರು ಆಯೋಗದ ವಿರುದ್ಧ ನಡೆದ ಚಳವಳಿಯ ಮುಂಚೂಣಿಯಲ್ಲಿದ್ದರು. ಕಾವಿಧಾರಿ ಮಠಾಧೀಶರೂ ಬೀದಿಗೆ ಬಂದಿದ್ದರು.
ಆದರೆ ಯಾವುದೇ ಒತ್ತಡಕ್ಕೆ ಮಣಿಯದ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿಯನ್ನು ಪಟ್ಟು ಹಿಡಿದು ಜಾರಿಗೆ ತಂದರು.
ಪ್ರತಿಯೊಂದು ಸಮುದಾಯದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಿ ನಿಖರ ಅಂಕಿಅಂಶಗಳ ಸಹಿತ ಸಿದ್ಧಪಡಿಸಿದ ವರದಿ ಬೆಳಕಿಗೆ ಬರಲು ಬಿಡಲಿಲ್ಲ. ಹೀಗಾಗಿ ಮತ್ತೆ ಜಾತಿವಾರು ಸಮೀಕ್ಷೆಯನ್ನು ಮಾಡಬೇಕಾಗಿ ಬಂತು.
ಶತಮಾನಗಳಿಂದ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಜಾತಿ ಗಣತಿ ಮಾಡಿದರೆ ಸಮಾಜ ವಿಭಜಿಸುವ ಕಾರ್ಯ ಎಂದು ಅಗ್ಗದ ಟೀಕೆ ಮಾಡಲಾಗುತ್ತಿದೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೊದಲು ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗಳ ಬಗ್ಗೆ ಅಧ್ಯಯನ ಮಾಡಬೇಕು. ಕಾಂತರಾಜು ನೇತೃತ್ವದ ಆಯೋಗ ಸಮಗ್ರ ಅಧ್ಯಯನ ಮಾಡಿ ವರದಿ ನೀಡಿತ್ತು ಆದರೆ ಅದು ಹಳೆಯದೆಂದು ಅಪಸ್ವರ ಬಂತು. ಈ ವರದಿಯನ್ನು ಸರಕಾರ ಸ್ವೀಕರಿಸಿದ ಆನಂತರ ಅದನ್ನು ಪರಿಶೀಲಿಸಿ ಸದನದಲ್ಲಿ ಚರ್ಚೆಯಾಗಿ ಎಲ್ಲರ ಅಭಿಪ್ರಾಯ ಪಡೆದು ಜಾರಿಗೆ ತರಬೇಕಾಗಿತ್ತು. ಆದರೆ ಆ ವರದಿಯೇ ಹೊರಗೆ ಬರಬಾರದು ಎಂದು ಸರಕಾರದ ಮೇಲೆ ಒತ್ತಡ ಹಾಕುವ ಪ್ರಭಾವಿ ರಾಜಕಾರಣಿಗಳು ಯಶಸ್ವಿಯಾಗಿದ್ದರು.ಹೀಗೆ ವಾದ ಮಾಡುವವರು ತಮ್ಮ ಜಾತಿಯ ಮತಗಳಿಂದ ಮಾತ್ರ ಸದನಕ್ಕೆ ಆರಿಸಿ ಬಂದಿಲ್ಲ. ಎಲ್ಲ ಸಮುದಾಯಗಳ ಜನರು ಸೇರಿ ಇವರನ್ನು ಚುನಾಯಿಸಿದ್ದಾರೆ ಎಂಬ ಅರಿವು ಇವರಿಗೆ ಇರಬೇಕು. ಬಾಯಿ ಬಿಟ್ಟರೆ ಬಸವಣ್ಣನವರ ಹೆಸರನ್ನು ಹೇಳುವ ಇವರು ತಮ್ಮ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಹಿಂದುಳಿದ ಆಯೋಗದ ವರದಿಯನ್ನು ವಿರೋಧಿಸಿದರು. ಬಾಯಿಯಲ್ಲಿ ಇವನಾರವ, ಇವನಾರವ ಎನಬೇಡ , ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ ಎಂದು ಬಹಿರಂಗವಾಗಿ ಹೇಳುವ ಕೃತಿಯಲ್ಲಿ ಆ ರೀತಿ ಇಲ್ಲ.
ಒಂದೆಡೆಯಿಂದ ವಿರೋಧ ಬರುತ್ತಿದ್ದರೆ, ಇನ್ನೊಂದೆಡೆ ಎಚ್. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಬೇಕೆಂದು ಆಗ್ರಹವೂ ಬಂತು.
ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿಯನ್ನು ಸ್ವೀಕರಿಸಿದಾಗ ಅವರ ಬೆಂಬಲಕ್ಕೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜನವರ್ಗಗಳಿದ್ದವು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.ಆಗ ಹೆಸರಿಗೆ ಮಾತ್ರವಿದ್ದ ಬಿಜೆಪಿ ಈಗ ಪ್ರಬಲವಾಗಿದೆ. ಬಿಜೆಪಿ ಈ ಅಹಿಂದ ಓಟ್ ಬ್ಯಾಂಕನ್ನ್ನು ಒಡೆದು ಛಿದ್ರಗೊಳಿಸಿದೆ. ಅದು ಪ್ರಯೋಗಿಸಿದ ಮನುವಾದಿ, ಕೋಮುವಾದಿ ಹಿಂದುತ್ವದ ಅಸ್ತ್ರದಿಂದಾಗಿ ಶೋಷಿತ ಸಮುದಾಯಗಳು ಒಂದಾಗಿ ಉಳಿದಿಲ್ಲ. ಆದರೂ ಕೋಮುವಾದಿಗಳನ್ನು ಹಿಮ್ಮೆಟ್ಟಿಸಿ ಗೆಲ್ಲುವ ಮತ್ತು ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯವಿರುವುದು ಸಿದ್ದರಾಮಯ್ಯನವರಿಗೆ ಮಾತ್ರ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಚಳವ ಳಿಯಲ್ಲಿ ನಾಯಕತ್ವ ವಹಿಸಿದ್ದ ರಾಜಕೀಯ ನಾಯಕರು ಈಗ ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದಾರೆ. ಪರಸ್ಪರ ನೆಂಟಸ್ತಿಕೆಗಳು ಆಗಿವೆ. ಹೀಗೆ ಹಲವಾರು ಹೊಸ ಬೆಳವಣಿಗೆಗಳಿಂದಾಗಿ ಹಿಂದುಳಿದ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಬೇಕಾಗಿದೆ.







