ಸ್ಯಾಟ್ಸ್ ಪಾರ್ಟಿ ವಿರುದ್ಧ ಜನಾಕ್ರೋಶ; ಟಾಟಾದಿಂದ ನಾಲ್ವರು ಅಧಿಕಾರಿಗಳ ಅಮಾನತು

PC: x.com/ians_india
ಮುಂಬೈ: ಜೂನ್ 12ರಂದು ಏರ್ ಇಂಡಿಯಾ 171 ವಿಮಾನ ಅಹ್ಮದಾಬಾದ್ ನಲ್ಲಿ ದುರಂತಕ್ಕೀಡಾದ ಬಳಿಕ ಗುರುಗ್ರಾಮ ಕಚೇರಿಯಲ್ಲಿ ಕಂಪನಿಯ ಸ್ಯಾಟ್ಸ್ ಎಕ್ಸಿಕ್ಯೂಟಿವ್ ಗಳು ಪಾರ್ಟಿ ಮಾಡುತ್ತಿದ್ದ ವಿಡಿಯೊ ವಿರುದ್ಧ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಟಾಟಾ ಸಮೂಹ ಹಲವು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ.
ಏರ್ ಇಂಡಿಯಾದ ನಾಲ್ವರು ಹಿರಿಯ ಸ್ಯಾಟ್ಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಇತರರಿಗೆ ಎಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದು ಕಂಪನಿ ಶುಕ್ರವಾರ ಪ್ರಕಟಿಸಿದೆ.
ಗುರುಗ್ರಾಮ ಕಚೇರಿ ಆವರಣದಲ್ಲಿ ಜೂನ್ 20ರಂದು ಹಲವು ಮಂದಿ ಹಿರಿಯ ಅಧಿಕಾರಿಗಳು ದೊಡ್ಡ ಧ್ವನಿಯಲ್ಲಿ ಸಂಗೀತ ಪ್ಲೇ ಮಾಡಿ ನೃತ್ಯ ಮಾಡುತ್ತಿರುವುದನ್ನು ಸೆರೆಹಿಡಿದ ವಿಡಿಯೊ ಎಕ್ಸ್ ನಲ್ಲಿ ವೈರಲ್ ಆಗಿದ್ದು, 38 ಲಕ್ಷ ವೀಕ್ಷಣೆಯನ್ನು ಈ ಎಕ್ಸ್ ಪೋಸ್ಟ್ ಕಂಡಿತ್ತು. ಈ ಪಾರ್ಟಿ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಸಂತ್ರಸ್ತ ಕುಟುಂಬಗಳು ಶೋಕದಲ್ಲಿದ್ದಾಗ ಈ ಪಾರ್ಟಿ ನಡೆಸಿರುವುದನ್ನು ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದರು.
ಇತ್ತೀಚಿನ ಆಂತರಿಕ ವೈರಲ್ ವಿಡಿಯೊ ಬಗೆಗಿನ ಪ್ರತಿಕ್ರಿಯೆಗಳಿಗೆ ಏರ್ ಇಂಡಿಯಾ ಸ್ಯಾಟ್ಸ್ ತೀವ್ರ ವಿಷಾದ ವ್ಯಕ್ತಪಡಿಸುತ್ತಿದೆ. ಈ ನಡವಳಿಕೆಗಳು ನಮ್ಮ ಮೌಲ್ಯಗಳಿಗೆ ಸರಿ ಹೊಂದುವಂಥದ್ದಲ್ಲ ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.







