ಪ್ರಭುತ್ವದ ದೌರ್ಜನ್ಯಕ್ಕೆ ತಣ್ಣನೆಯ ಪ್ರತಿಕ್ರಿಯೆ ರೆಕ್ವಿಯೆಮ್

ಆನ್ನಾ ಆಖ್ಮತೋವಾ ಪ್ರಜ್ಞಾವಂತರು, ಪ್ರತಿಭಾವಂತರು, ಬುದ್ಧಿಜೀವಿಗಳು ದೇಶ ಬಿಟ್ಟು ಹೋಗುವ ಸಮಯದಲ್ಲಿ ಸೈಬೀರಿಯಾದ ಮಂಜಿನಂತೆ ರಶ್ಯದಲ್ಲಿಯೇ ನೆಲೆನಿಂತು ಸ್ಟಾಲಿನ್ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ಕಾವ್ಯ ರಚನೆಯ ಮೂಲಕ ತಣ್ಣನೆಯ ಪ್ರತಿಭಟನೆ ತೋರಿದ ಪ್ರತಿಭಾವಂತ ಕವಯಿತ್ರಿ. 1889ರಲ್ಲಿ ಈಗಿನ ಉಕ್ರೇನ್ನ ಒಡೆಸ್ಸಾ ಪಟ್ಟಣದಲ್ಲಿ ಜನಿಸಿ 1966ರಲ್ಲಿ ಮಾಸ್ಕೊದಲ್ಲಿ ನಿಧನ ಹೊಂದಿದ ಆನ್ನಾ ತನ್ನ ಹದಿಮೂರನೇ ವಯಸ್ಸಿನಲ್ಲೇ ಕವನ ರಚನೆಗೆ ತೊಡಗುತ್ತಾಳೆ. ಆದರೆ ಅವಳ ತಂದೆ ಕವನ ರಚನೆ ತನ್ನ ಮನೆತನದ ಮಾನ ಕೆಡಿಸುತ್ತದೆ ಎಂದು ಬಲವಾಗಿ ವಿರೋಧಿಸಿದಾಗ ತಂದೆಯ ಕುಲನಾಮ ‘ಗೊರೆಂಕೋ’ವನ್ನೇ ತ್ಯಜಿಸಿ ತಾತರ್ ಬುಡಕಟ್ಟಿಗೆ ಸೇರಿದ ತನ್ನ ಮುತ್ತಜ್ಜಿಯ ಕುಲನಾಮ ‘ಆಖ್ಮತೋವಾ’ವನ್ನು ಆಯ್ದುಕೊಂಡು ಕವನ ರಚನೆ ಮುಂದುವರಿಸಿದ ದಿಟ್ಟೆ ಆನ್ನಾ. ತನ್ನ ಎಪ್ಪತ್ತಾರು ವರ್ಷಗಳ ಜೀವನದಲ್ಲಿ ಸರಕಾರದಿಂದ ಗಂಡನ ಹತ್ಯೆ, ಮಗನ ಸೆರೆಮನೆವಾಸ, ಪ್ರೇಮ ಸಂಬಂಧದಲ್ಲಿನ ತಲ್ಲಣಗಳು ಹೀಗೆ ಹೆಚ್ಚಾಗಿ ನೋವನ್ನೇ ಅನುಭವಿಸಿದ ಆನ್ನಾ ಪ್ರಾರಂಭದಲ್ಲಿ ಬರೆದಿದ್ದು ಗಂಡು-ಹೆಣ್ಣಿನ ಪ್ರೇಮ ಸಂಬಂಧದ ಬಗೆಗಿನ ಹೃದಯ ಸ್ಪರ್ಶಿ ಅಸ್ಪಷ್ಟ ಭಾವನೆಗಳು, ಮಾನಸಿಕ ತುಮುಲಗಳ ಕುರಿತಾಗಿ. ಆದರೆ ಹಿಟ್ಲರ್ ರಶ್ಯದ ಮೇಲೆ ದಾಳಿ ನಡೆಸಿದ ನಂತರ ಆಕೆ ಕಾವ್ಯ ರಚಿಸಿದ್ದು ಪ್ರಭುತ್ವದ ವಿರುದ್ಧ. ಕಾವ್ಯ ರಚನೆಯಲ್ಲಿ ರೂಪಕ, ನಿಗೂಢತೆ, ಸಾಂಕೇತಿಕತೆ, ಆಧ್ಯಾತ್ಮಿಕತೆಯನ್ನು ತಿರಸ್ಕರಿಸಿ ಬೌದ್ಧಿಕ ನಿಖರತೆ, ಕಲಾತ್ಮಕತೆಯೊಂದಿಗೆ ಭೌತಿಕ ಜಗತ್ತು, ಪ್ರಕೃತಿಯನ್ನು ಸಂಭ್ರಮಿಸುವ ವಾಸ್ತವವಾದಿ ನಿಲುವಿನ ‘ಅಕ್ಮೇಯಿಸ್ಟ್’ ಗುಂಪಿನ ಪ್ರಮುಖ ಕವಯಿತ್ರಿ ಆನ್ನಾ. ನೊಬೆಲ್ ಸಾಹಿತ್ಯ ಪ್ರಶಸ್ತಿಗೆ 1965, 1966ರಲ್ಲಿ ಆನ್ನಾ ಹೆಸರು ಸೂಚಿಸಲಾಗಿತ್ತು.
ರೆಕ್ವಿಯೆಮ್ ಎಂದರೆ ಕ್ರೈಸ್ತ ಧರ್ಮದಲ್ಲಿ ಮೃತಪಟ್ಟವರ ಆತ್ಮ ಶಾಂತಿಗಾಗಿ, ಸದ್ಗತಿಗಾಗಿ ನಡೆಸುವ ಚರಮಗೀತೆಯ ಸಂಗೀತ ಕಾರ್ಯಕ್ರಮ. ಶೋಕ ಗೀತೆ ಎಂಬ ಅರ್ಥವೂ ಇದೆ. ಆನ್ನಾ 1935ರಿಂದ 1961ರ ನಡುವೆ ‘ರೆಕ್ವಿಯೆಮ್’ ಶೀರ್ಷಿಕೆ ಅಡಿ ರಚಿಸಿದ ಸಣ್ಣ ಕವನಗಳಿವು. ಈ ರೆಕ್ವಿಯೆಮ್ ಸರಣಿಯಲ್ಲಿ ಒಟ್ಟು ಇರುವುದು ಕೇವಲ ಹದಿನೈದು ಕವನಗಳು ಮಾತ್ರ. ಸ್ಟಾಲಿನ್ ಕಾಲದಲ್ಲಿನ ಮಹಾ ಶುದ್ಧೀಕರಣ (Great Purge) ಅಭಿಯಾನದ ಸಂದರ್ಭದಲ್ಲಿ ಜನಸಾಮಾನ್ಯರು ಸರ್ವಾಧಿಕಾರದಿಂದ ಅನುಭವಿಸಿದ ನೋವು, ಕ್ರೌರ್ಯ, ದುಃಖ-ದುಮ್ಮಾನ, ಸಂಕಟ, ಕೋಪ, ಹತಾಶೆಗಳನ್ನು ಈ ಕವನಗಳು ಧ್ವನಿಸುತ್ತವೆ. ಸರ್ವಾಧಿಕಾರ ಎಡ, ಬಲ, ಮಧ್ಯಮ ಅಥವಾ ವ್ಯಕ್ತಿ ಆಧಾರಿತ ಹೀಗೆ ಯಾವುದೇ ಮಾದರಿಯದ್ದಾಗಿರಲಿ ಅದರ ದುಷ್ಪರಿಣಾಮಗಳು ಒಂದೇ ತೆರನಾಗಿರುತ್ತವೆ ಎಂಬುದು ಈ ಕವನಗಳ ಓದಿನಿಂದ ವೇದ್ಯವಾಗುತ್ತದೆ. ರಶ್ಯ ಹಾಗೂ ಯೂರೋಪ್ನಲ್ಲಿ ಕಿರು ಮಹಾಕಾವ್ಯದ ಮಾನ್ಯತೆ ಹೊಂದಿರುವ ಈ ಕವನಗಳನ್ನು ಪ್ರಾಧ್ಯಾಪಕ ಡಾ. ಜಯಶ್ರೀನಿವಾಸ ರಾವ್ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
‘ಭೂಮಿಕೆ’ ಶಿರೋನಾಮೆಯ ಕಿರು ಕವಿತೆಯಲ್ಲಿನ ಈ ಕೆಳಗಿನ ಸಾಲುಗಳು ಸರ್ವಾಧಿಕಾರದ ಭೀಕರತೆಯನ್ನು, ಪ್ರಭುತ್ವವನ್ನು ವಿರೋಧಿಸುವವರ, ಪ್ರಶ್ನಿಸುವವರ ವಿರುದ್ಧ ಪ್ರಭುತ್ವ ಎಸಗುತ್ತಿದ್ದ ದೌರ್ಜನ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಧ್ವನಿಸುತ್ತವೆ.
ಕಾಲವೊಂದು ಹೀಗಿತ್ತು ಆಗ,
ಸತ್ತವರು ಮಾತ್ರ ನಗುತ್ತಿದ್ದರು,
ಶಾಂತಿ ದೊರಕಿದ ಸಂತಸದಲ್ಲಿ.....
ಅಮಾಯಕ ರಶ್ಯ ಒದ್ದಾಡುತ್ತಿತ್ತು
ರಕ್ತಸಿಕ್ತ ಬೂಟಿನಡಿಯಲ್ಲಿ,
ಕಪ್ಪು ಮಾರಿಯಾದ ಚಕ್ರಗಳಡಿಯಲ್ಲಿ
ರಶ್ಯದ ಗುಪ್ತ ಪಡೆಯ ಪೊಲೀಸರು ಅರ್ಧ ರಾತ್ರಿಯಲ್ಲಿ ಕಪ್ಪು ಬಣ್ಣದ ವ್ಯಾನುಗಳಲ್ಲಿ ಬಂದು ತಪ್ಪು ಆಪಾದನೆ ಹೊರಿಸಿ ರಾಜಕೀಯ ವಿರೋಧಿಗಳನ್ನು ಬಂಧಿಸಿ ಕೊಂಡೊಯ್ಯುತ್ತಿದ್ದರು. ಈ ಕಪ್ಪು ಬಣ್ಣದ ವ್ಯಾನುಗಳನ್ನು ಕಪ್ಪು ಮಾರಿಯಾ (ಃಟಚಿಛಿಞ ಒಚಿಡಿiಚಿ) ಎಂದು ಕರೆಯುತ್ತಿದ್ದರು ಎಂಬ ಮಾಹಿತಿಯನ್ನು ಈ ಕವನದ ಅಡಿ ಟಿಪ್ಪಣಿಯಲ್ಲಿ ನೀಡಿದ್ದಾರೆ ಜಯಶ್ರೀನಿವಾಸರಾವ್. ಇದನ್ನು ಓದುವಾಗ ನಮ್ಮ ದೇಶದಲ್ಲಿ ಈಗ ಇಂತಹ ವಿದ್ಯಮಾನಗಳು ನಡೆಯುತ್ತಿರುವುದು, ಸರಕಾರವನ್ನು ಪ್ರಶ್ನಿಸುವವರು ಹಾಗೂ ಅದರ ತಪ್ಪು ನಿರ್ಧಾರಗಳ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು ಇದೇ ರೀತಿ ಕ್ಷುಲ್ಲಕ ಆಪಾದನೆಗಳನ್ನು ಹೊರಿಸಿ ಬಂಧಿಸುತ್ತಿರುವುದು, ನಮ್ಮ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟಿಸುವುದೂ ಸಹ ಸರಕಾರಕ್ಕೆ ಅಪರಾಧವಾಗಿ ಕಾಣಿಸುತ್ತಿರುವುದು ನಮ್ಮ ಕಣ್ಣ ಮುಂದೆ ಬಂದು ಆತಂಕವಾಗುತ್ತದೆ!
ರೆಕ್ವಿಯೆಮ್ ಕಾವ್ಯ ಸರಣಿಯ ಆರಂಭದಲ್ಲಿರುವ ಗದ್ಯ ಪ್ರಸ್ತಾವನೆಯಲ್ಲಿ ಸೆರೆಮನೆಗಳ ಎದುರಿನಲ್ಲಿ ತಮ್ಮವರಿಗಾಗಿ ಕಾಯುತ್ತಾ ನಿಂತ ಜನಗಳ ಜೊತೆ ನಿಂತಿದ್ದ ಸಂದರ್ಭವನ್ನು ವಿವರಿಸುತ್ತಾ ಆನ್ನಾ ಹೇಳುವ ‘‘ಒಂದು ದಿನ, ಯಾರೋ ಒಬ್ಬರಿಗೆ, ನಾನು ಯಾರೆಂದು ಗೊತ್ತಿದ್ದಂತೆ ಅನಿಸಿ ನನ್ನ ಹೆಸರು ಕರೆದರು. ಆಮೇಲೆ, ನನ್ನ ಹಿಂದೆ ನಿಂತಿದ್ದ ಥಂಡಿಯಿಂದ ನೀಲಿಯಾದ ತುಟಿಯವಳೊಬ್ಬಳು, ನನ್ನ ಹೆಸರು ಗೊತ್ತಿಲ್ಲದವಳು ನಮಗೆಲ್ಲರಿಗೂ ಈಗ ಅಭ್ಯಾಸವಾಗಿರುವ ಜೊಂಪಿನಿಂದ ಎಚ್ಚೆತ್ತು, ಮೆಲುದನಿಯಲಿ ಹೇಳಿದಳು’’ ಎಂಬ ಮಾತುಗಳು ದೀರ್ಘ ಕಾಲ ಸರ್ವಾಧಿಕಾರದ ಅಡಿಯಲ್ಲಿ ನರಳಿರುವ ಜನ ನ್ಯಾಯಕ್ಕಾಗಿ, ಹಕ್ಕುಗಳಿಗಾಗಿ ಯಾಚಿಸುತ್ತಾ ಹೇಗೆ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡು ಮೈಮರವಿಗೆ ಒಳಗಾಗುತ್ತಾರೆ, ನಿದ್ರೆಯಲ್ಲಿರುವಂತಿರುತ್ತಾರೆ ಎಂಬುದನ್ನು ಮಾರ್ಮಿಕವಾಗಿ ಸೂಚಿಸುತ್ತವೆ. ಅಂತೆಯೇ ಜೈಲಿನಲ್ಲಿರುವ ತಮ್ಮ ಮಕ್ಕಳ ಬಿಡುಗಡೆಗಾಗಿ, ಅವರ ದೀರ್ಘಾಯುಷ್ಯಕ್ಕಾಗಿ ನೋವು, ಆತಂಕ, ದುಗುಡ, ದುಃಖಗಳಿಂದ ಕಾಯುತ್ತಿದ್ದ ಇತರ ತಾಯಂದಿರಂತೆ ಆನ್ನಾ ಕೂಡ ಮಗ ಜೈಲಿನಲ್ಲಿದ್ದಾಗ ಆತನ ಬಿಡುಗಡೆಗಾಗಿ ವರ್ಷಾನುಗಟ್ಟಲೆ ಕಾಯುವ ಸಂದರ್ಭವನ್ನು ‘ಅತ್ತೆ ನಾನು ಹದಿನೇಳು ತಿಂಗಳು’ ಎಂಬ ಶಿರೋನಾಮೆಯಡಿ ಹೃದಯಸ್ಪರ್ಶಿ ಕವನ ರಚಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ:-
‘‘ಅತ್ತೆ ನಾನು ಹದಿನೇಳು ತಿಂಗಳು,
ಕರೆದೆ ನಿನ್ನನ್ನು ಮನೆಗೆ ಬಾ ಎಂದು.
ಗಲ್ಲಿಗೇರಿಸುವವರ ಕಾಲಿಗೆ ಬಿದ್ದೆ,
ನಿನಗಾಗಿ, ನನ್ನ ತುಂಟನೇ,
ನನ್ನ ಮಗನೇ.
ಎಲ್ಲವೂ ಸಿಕ್ಕು ಸಿಕ್ಕಾಗಿ ಬಿಟ್ಟಿದೆ ಎಂದೆಂದಿಗೂ,
ಯಾವುದು ಮೃಗ
ಯಾವುದು ಮನುಷ್ಯ
ಎಂದು ನನ್ನಿಂದ ಹೇಳಲಿಕ್ಕಾಗಲ್ಲ ಇನ್ನೆಂದೂ.
ಎಷ್ಟು ಕಾಲ ಕಾಯಬೇಕು ನಾವು ಕೊನೆಯ ತೀರ್ಪಿಗಾಗಿ?’’
ಮನ ಕಲಕುವ ಈ ಕವನದ ಸಾಲುಗಳು ಸರ್ವಾಧಿಕಾರಿ ಆಡಳಿತದಲ್ಲಿ ಸಿಕ್ಕು ನಲುಗುತ್ತಿರುವ, ಎಲ್ಲಾ ದೇಶಗಳ ತಾಯಂದಿರಿಗೂ, ಎಲ್ಲಾ ಕಾಲಕ್ಕೂ ಅನ್ವಯಿಸುತ್ತವೆ. ಈಗ ವಿಚಾರಣೆ ಇಲ್ಲದೆ ಕಳೆದ ಆರು ವರ್ಷಗಳಿಂದ ಸೆರೆಮನೆಯಲ್ಲಿರುವ ಉಮರ್ ಖಾಲಿದ್ನ ತಾಯಿಗೂ ಹೀಗೇ ಅನ್ನಿಸುತ್ತಿರಬಹುದಲ್ಲವೇ!?
ಅನುವಾದ ಒಂದು ಕ್ಲಿಷ್ಟವಾದ ಕಾರ್ಯ. ಮೂಲ ಕೃತಿಯ ಆಶಯವನ್ನು ಸಮಗ್ರವಾಗಿ ಗ್ರಹಿಸಿ ಅದನ್ನು ಇನ್ನೊಂದು ಭಾಷೆಗೆ ತರ್ಜುಮೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಅರ್ಥ ಅನರ್ಥವಾಗಿ ಅನುವಾದ ಸೊರಗುತ್ತದೆ. ಆದರೆ ಈಗಾಗಲೇ ವ್ಯಾಸರಾವ್ ವೆಂಕಟರಾವ್ ಅವರ ಕಾದಂಬರಿ, ಕೆ. ವಿ. ತಿರುಮಲೇಶ್, ಇಂದೂಧರ ಹೊನ್ನಾಪುರ, ಕಮಲಾಕರ ಕಡವೆ ಹಾಗೂ ಮಹಾದೇವ ಶಂಕನಪುರ ಅವರ ಕವನಗಳು, ಪ್ರಬಂಧಗಳು, ಕೇರೂರ ವಾಸುದೇವಾಚಾರ್ಯರ, ದೀಪಾ ಹೀರೆಗುತ್ತಿಯವರ ಕತೆಗಳನ್ನು ಇಂಗ್ಲಿಷ್ಗೆ ಹಾಗೂ ರಶ್ಯ, ಜರ್ಮನಿಯ ಸರ್ವಾಧಿಕಾರಕ್ಕೆ, ಸಾಮ್ರಾಜ್ಯ ವಿಸ್ತರಣೆಯ ದಾಹಕ್ಕೆ ತುತ್ತಾಗಿ ನರಳಾಡಿದ ದೇಶಗಳಾದ ಲಾಟ್ವಿಯಾ, ಲಿಥುವೇನಿಯಾ ಹಾಗೂ ಎಸ್ಟೋನಿಯಾ ದೇಶಗಳ ಕವಿತೆಗಳನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿರುವ ಜಯಶ್ರೀನಿವಾಸರಾವ್ ಅವರಿಗೆ ಈ ಅನುವಾದ ಕಲೆ ಚೆನ್ನಾಗಿ ಸಿದ್ಧಿಸಿದೆ ಎಂಬುದು ಈ ರೆಕ್ವಿಯೆಮ್ ಕವನಗಳ ಅನುವಾದ ಮತ್ತೊಮ್ಮೆ ಸಾಬೀತು ಪಡಿಸಿದೆ. ಯಾವ ಇಂಗ್ಲಿಷ್ ಅನುವಾದದಿಂದ ಮರು ಅನುವಾದಿಸಲಾಗಿದೆ ಎಂಬುದನ್ನು ಸೂಚಿಸಲು ಈ ಕವನಗಳನ್ನು ಇಂಗ್ಲಿಷ್ಗೆ ಅನುವಾದಿಸಿದ ಅನುವಾದಕರ ಹೆಸರುಗಳನ್ನು ನೀಡಿದ್ದಾರೆ ಜಯಶ್ರೀನಿವಾಸರಾವ್. ಕವನಗಳನ್ನು ಸರಿಯಾಗಿ ಗ್ರಹಿಸಲು ಪೂರಕವಾದ ಅಡಿ ಟಿಪ್ಪಣಿಗಳನ್ನು ನೀಡಿರುವುದು ಹಾಗೂ ಕನ್ನಡದ ಖ್ಯಾತ ಸಾಹಿತಿ, ಕವಿ ಎಚ್. ಆರ್. ಸುಜಾತ ಅವರ ‘ಆನ್ನಾ ಎಂಬ ನಕ್ಷತ್ರ’ ಲೇಖನವನ್ನೂ ಇಲ್ಲಿ ಸೇರಿಸಿರುವುದು ಆನ್ನಾ ಈ ಕವನಗಳನ್ನು ಬರೆಯುವ ಸಮಯದಲ್ಲಿ ಇದ್ದ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ. ಅದೇ ರೀತಿ ಡಾ. ಮಧು ಬೀರಾದಾರ ‘ಹೆಪ್ಪುಗಟ್ಟಿದ ನೇವಾ ನದಿಯ ಮಂಜುಗಡ್ಡೆ ಮತ್ತು ನೆತ್ತಿ ಮೇಲೆ ಇಣುಕುವ ನಕ್ಷತ್ರ’, ‘ರೆಕ್ವಿಯೆಮ್ ಕವನಗಳ ಕುರಿತು’, ‘ರೆಕ್ವಿಯೆಮ್ ಅನುವಾದದ ಕುರಿತು’ ಎಂಬ ತಲೆ ಬರಹಗಳಡಿ ಮೂರು ವಿಭಾಗಗಳಲ್ಲಿ ಬರೆದಿರುವ ಮನೋಜ್ಞ ಮುನ್ನುಡಿ ಈ ಕವನಗಳನ್ನು ಸರಿಯಾಗಿ ಗ್ರಹಿಸಲು ಪ್ರವೇಶಿಕೆಯಂತಿರುವುದು ಈ ಅನುವಾದದ ವೈಶಿಷ್ಟ್ಯ. ಸತ್ವಯುತವಾದ ಈ ಕವನಗಳನ್ನು ಕನ್ನಡಕ್ಕೆ ಜಯಶ್ರೀನಿವಾಸರಾವ್ ಅವರು ಅಚ್ಚುಕಟ್ಟಾಗಿ ಅನುವಾದಿಸಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.
ಪ್ರಕಾಶಕರು: ಮಿಂಚುಳ್ಳಿ ಪ್ರಕಾಶನ
ಬೆಲೆ: ರೂ.100






