ಸಾಹಿತ್ಯ ವಿಮರ್ಶೆಯ ಅಪೂರ್ವ ಕಥನ

ಕನ್ನಡದಲ್ಲಿ ವಿಮರ್ಶಾ ಸಾಹಿತ್ಯ ಎಂಬ ಪ್ರಕಾರ ಬಹುಶಃ ಇಲ್ಲವೆಂದೇ ಭಾವಿಸಿರುವ ಕಾಲವಿದು. ಜಿ.ಎಚ್. ನಾಯಕರು ಗತಿಸಿದ ಆನಂತರ ಈ ನಿರ್ವಾತ ಇನ್ನೂ ದೊಡ್ಡದಾಯಿತು. ಸಾಹಿತ್ಯ ವಿಮರ್ಶೆಗಾಗಿ ಹಪಹಪಿಸುವ ನಮ್ಮಂತಹ ಓದುಗ/ಬರಹಗಾರರಿಗೆ ಇದು ಕಳಕಳಿಯ ಅಂಶ. ಆದರೆ ಬಾಲಸುಬ್ರಹ್ಮಣ್ಯ ಕಂರ್ಜಪಣೆ ಅವರ ‘ಲೋಕ ಕಥನ - ಸಾಹಿತ್ಯ ಪ್ರಬಂಧಗಳು’ ಕೃತಿಯನ್ನು ಓದುತ್ತಾ ಹೋದಂತೆ, ಅಭಿಜಾತ ಅರ್ಥದಲ್ಲಿ ಅಲ್ಲದಿದ್ದರೂ, ಕನ್ನಡ ಸಾಹಿತ್ಯ ಲೋಕದ ಅಮೂಲ್ಯ ಕೃತಿ-ಕೃತಿಕಾರರನ್ನು ವಸ್ತುನಿಷ್ಠವಾಗಿ ಅವಲೋಕಿಸುವ ಒಂದು ವಿಮರ್ಶಾತ್ಮಕ ಒಳನೋಟ ಕಂಡಿದ್ದಂತೂ ಸತ್ಯ. ಲೇಖಕರ ಅಂಕಣಗಳನ್ನು (ವಾರ್ತಾಭಾರತಿ) ಓದುತ್ತಲೇ ಇರುವ ನನಗೆ, ಈ ಕೃತಿಯಲ್ಲಿ ಕಂಡಿದ್ದು ಭಿನ್ನ ವಿದ್ವತ್ತಿನ ಸಾಹಿತ್ಯ ವಿಶ್ಲೇಷಕ-ವಿಮರ್ಶಕ ಕಂಜರ್ಪಣೆ.
ಪುರಂದರ/ಕನಕರಾದಿ ಯಾಗಿ, ಕನ್ನಡದ ಆಸ್ತಿ ಎಂದೇ ಹೆಸರಾದ ಮಾಸ್ತಿಯವರಿಂದ ಅಪರೂಪದ ಸಾಂಸ್ಕೃತಿಕ ವಿಶ್ಲೇಷಕ ಲಕ್ಷ್ಮೀಶ ತೋಳ್ಪಾಡಿ ಅವರವರೆಗೂ ವಿಸ್ತರಿಸುವ ಸೂಕ್ಷ್ಮ ಒಳನೋಟಗಳ ಹೂರಣ ‘ಲೋಕ ಕಥನ’ದಲ್ಲಿ 45 ಪ್ರಬಂಧಗಳಿವೆ. ಮೊದಲ ಸೋಪಾನ ‘ಮಾಸ್ತಿ ಕಂಡ...’ ಪ್ರಬಂಧದಲ್ಲೇ ಓದುಗರನ್ನು ಬಿಗಿಯಾಗಿ ಹಿಡಿದಿಡುವ ಕಂಜರ್ಪಣೆ ಅವರ ಬರಹ ಶೈಲಿ ಮತ್ತು ವಸ್ತುವಿಷಯವನ್ನು ಛೇದಿಸುವ ಮಾದರಿ ಕೃತಿಯುದ್ದಕ್ಕೂ ವಿಸ್ತರಿಸಿ, ಲೋಕ ಕಥನವನ್ನು ಸಂಗ್ರಹಯೋಗ್ಯ ಪುಸ್ತಕವಾಗಿಸುತ್ತದೆ. ಈ ಪ್ರಬಂಧದಲ್ಲೇ (ಪುಟ 11)ರಲ್ಲಿ ಉಲ್ಲೇಖಿಸಲಾದ ಮಾಸ್ತಿಯವರ ‘‘ಇಂಥದೊಂದು ಲೋಭಕ್ಕೆ ಸೆರೆಸಿಕ್ಕಿ ಧರ್ಮಗ್ರಂಥವೆನಿಸಿಕೊಂಡಿರುವ ರಾಮಾಯಣವನ್ನು...’’ ಎಂಬ ಅಭಿಪ್ರಾಯ ಥಟ್ಟನೆ ಮೂರ್ತಿರಾಯರ ಪೂರ್ವಸೂರಿಗಳೊಡನೆ ಕೃತಿಯನ್ನು ನೆನಪಿಸುತ್ತದೆ.
ವಾಲ್ಮೀಕಿಯ ಕಣ್ಣಲ್ಲಿ ರಾಮಾಯಣವನ್ನು ನೋಡುವ ಮಾಸ್ತಿಯವರ ದರ್ಶನವನ್ನು ಕಂಜರ್ಪಣೆ ಮನಮುಟ್ಟುವಂತೆ ಬಿಡಿಸಿಟ್ಟಿದ್ದಾರೆ. ಎರಡನೇ ಅಧ್ಯಾಯ ‘...ಭಾರತಿ ತೀರ್ಥ’ ಪ್ರಬಂಧದಲ್ಲೂ ಲೇಖಕರು ಮಾಸ್ತಿಯವರು ಪುರಾಣವನ್ನು ನೋಡುವ ಭಿನ್ನ ನೋಟವನ್ನು ಸಮಕಾಲೀನವಾಗಿ ಪ್ರಸ್ತುತಪಡಿಸಿದ್ದಾರೆ. ಇತಿಹಾಸ, ಪುರಾಣದ ಸೃಷ್ಟಿಗಳೆಲ್ಲವನ್ನೂ ವರ್ತಮಾನದ ಜಾತಿ ಸಮೀಕರಣಗಳಿಗೆ ಒಗ್ಗಿಸಿ, ಹಿಗ್ಗಿಸಿ, ಕುಗ್ಗಿಸಿ ನಿರ್ದಿಷ್ಟ-ಅನುಕೂಲಕರ ಆವರಣಗಳೊಳಗೆ (Brackets) ಬಂಧಿಸಲಾಗಿರುವ ಇಂದಿನ ದಿನಗಳಲ್ಲಿ ದಾಸ ಸಾಹಿತ್ಯವನ್ನು, ವಿಶೇಷವಾಗಿ ಕನಕ, ಪುರಂದರರನ್ನು ಹೇಗೆ ನೋಡಬೇಕು ಎಂದು ಕಂಜರ್ಪಣೆ ಸೋದಾಹರಣವಾಗಿ ಕನ್ನಡಿಗರಿಗೆ ಕಟ್ಟಿಕೊಟ್ಟಿರುವುದು ಪ್ರಶಂಸಾರ್ಹ.
ಸಮಕಾಲೀನ-ಆಧುನಿಕ ಸಾಹಿತ್ಯಾವಲೋಕನ ದಲ್ಲಿ ಕಂಜರ್ಪಣೆ ಅವರು, ವರ್ತಮಾನದ ಪೀಳಿಗೆಯು ಕೇಳಿಯೂ ಇರಬಹುದಾದ ನವರತ್ನ ರಾಮರಾವ್ ಅವರನ್ನು (ಅಧ್ಯಾಯ 6) ಪರಿಚಯಿಸಿರುವುದು ಸ್ತುತ್ಯರ್ಹ. ಶಿವರಾಮ ಕಾರಂತರ ‘ಕನ್ಯಾಬಲಿ’ ಕಾದಂಬರಿಯನ್ನೂ ಅಷ್ಟೇ ಪರಿಣಾಮಕಾರಿಯಾಗಿ ಕೆಲವೇ ಪದಗಳಲ್ಲಿ ವಿಶ್ಲೇಷಿಸಿದ್ದಾರೆ. ಯಾವುದೋ ಒಂದು ಕಾರಣಕ್ಕೆ ಕನ್ನಡ ಸಾಹಿತ್ಯ ಲೋಕದಲ್ಲಿ ಸದಾ ಸುದ್ದಿಯಲ್ಲಿರುವ ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಕಾವ್ಯ ಎರಡೂ ಸಹ ಸುಲಭಭೇದ್ಯವಲ್ಲ. ಅಡಿಗರ ಸಾಹಿತ್ಯವನ್ನು ಕುರಿತು ಕನ್ನಡ ಸಾರಸ್ವತ ಲೋಕದಲ್ಲಿರುವ ಭಿನ್ನ ನಿಲುಮೆಗಳೆಲ್ಲವನ್ನೂ ಪರಾಮರ್ಶಿಸಿ ಒಟ್ಟಂದದ ಹೂರಣವನ್ನು ‘ವಿಮರ್ಶೆಗೆ...’ (ಅಧ್ಯಾಯ 10) ಪ್ರಬಂಧದಲ್ಲಿ ಕಂಜರ್ಪಣೆ ಉಣಬಡಿಸಿದ್ದಾರೆ.
ಆಧುನಿಕ ಹವ್ಯಾಸಿ ರಂಗಭೂಮಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿರುವ ಗಿರೀಶ್ ಕಾರ್ನಾಡ್ ಅವರನ್ನು ಕುರಿತ ಎರಡು ಪ್ರಬಂಧಗಳು (ಅಧ್ಯಾಯ 12-13) ಅವರ ವ್ಯಕ್ತಿತ್ವ, ಸಾರ್ವಜನಿಕ ವರ್ಚಸ್ಸು ಮತ್ತು ಸಾಹಿತ್ಯ ಎಲ್ಲವನ್ನೂ ಸ್ಪರ್ಶಿಸಿದ್ದಾರೆ. ಕನ್ನಡದ ಯುವ ಪೀಳಿಗೆಗೆ ಅಗತ್ಯವಾಗಿ ಪರಿಚಯಿಸಲೇಬೇಕಾದ ನಿಸಾರ್ ಅಹಮದ್, ಮೊನಚು ಕವಿ ಚಂಪಾ, ಮೊಗಸಾಲೆ ಈ ಮೂವರು ದಿಗ್ಗಜ ಸಾಹಿತಿಗಳನ್ನು ಕಂಜರ್ಪಣೆ ಅವರ ಸಾಹಿತ್ಯ ರಚನೆಗಳ ಮುಖಾಂತರವೇ ಓದುಗರ ಮುಂದಿಡುತ್ತಾರೆ. ಮೊಗಸಾಲೆ ಅವರ ‘ಧರ್ಮಯುದ್ಧ’ ಕೃತಿಯ ವಿಮರ್ಶಾತ್ಮಕ ಒಳನೋಟ ಮೆಚ್ಚುವಂತಹುದು.
ಸಾಹಿತ್ಯ ಕೃತಿಗಳೊಂದಿಗೇ ಕಂಜರ್ಪಣೆ ಅವರು ತಮ್ಮೊಳಗಿನ ನಾಟಕ ವಿಮರ್ಶಕನನ್ನೂ ಲೋಕ ಕಥನದ ಮುಖಾಂತರ ಪರಿಚಯಿಸುತ್ತಾರೆ. ಮೆಕ್‌ಬೆತ್, ಬೆಕೆಟ್, ಗೆಲಿಲಿಯೋ ಮೊದಲಾದ ನಾಟಕಗಳನ್ನು ವಿಭಿನ್ನ ಆಯಾಮಗಳಲ್ಲಿ, ರಂಗಭೂಮಿಯ ಸೂಕ್ಷ್ಮ ಒಳನೋಟಗಳೊಂದಿಗೆ ಕಂಜರ್ಪಣೆ ಪರಿಚಯಿಸುತ್ತಾರೆ. ‘ಪದಮಿತಿ’ ಎಂಬ ಬರಹಲೋಕದ ಅಲಿಖಿತ ನಿಯಮ ಕಂಜರ್ಪಣೆ ಅವರ ಲೇಖನಿಯ ಓಘಕ್ಕೆ ಅಣೆಕಟ್ಟುಗಳನ್ನು ಕಟ್ಟಿದೆ ಎನಿಸುತ್ತದೆ. ಇಲ್ಲವಾದಲ್ಲಿ ಇವರ ವಿಮರ್ಶಾತ್ಮಕ ಒಳನೋಟಗಳ ವಿಹಂಗಮ ಜಗತ್ತನ್ನು ಅಕ್ಷರಗಳಲ್ಲೇ ವಿನ್ಯಾಸಗೊಳಿಸುತ್ತಿದ್ದರೇನೋ?
‘ವಿಮರ್ಶೆಯ ವಿಮರ್ಶೆ’ ಪ್ರಬಂಧ ನೇರಾನೇರ ಎನಿಸಿದರೂ ಸಹ ಇಂದಿನ ಸನ್ನಿವೇಶದಲ್ಲಿ ಅತ್ಯವಶ್ಯ ಎನಿಸುವ ಹಾಗೆ ಕಂಜರ್ಪಣೆ ಅವರು ಕನ್ನಡ ವಿಮರ್ಶಾಲೋಕದ ಒಳಸುಳಿಗಳನ್ನು ತೆರೆದಿಡು ತ್ತಾರೆ. ‘‘ಕವಿಯ ಬಗ್ಗೆ ಬರೆಯುವಷ್ಟು ನಿರ್ಭೀತಿ ಯಲ್ಲಿ ವಿಮರ್ಶಕರ ಬಗ್ಗೆ ಬರೆಯುವಂತಿಲ್ಲ...’’ (ಪುಟ 193) ಎಂದು ಹೇಳುತ್ತಲೇ ‘‘ಕನ್ನಡ ಸಾಹಿತ್ಯದ ವಿಮರ್ಶೆಯ ವಿಮರ್ಶೆ ಅಷ್ಟಾಗಿ ನಡೆದಿಲ್ಲ’’ (ಪುಟ 194) ಎಂದೂ ವಿಷಾದಿಸುವ ಕಂಜರ್ಪಣೆ, ಇದಕ್ಕೆ ಕಾರಣಗಳನ್ನೂ ಕೃತಿ ನಿಷ್ಠೆ-ವ್ಯಕ್ತಿ ನಿಷ್ಠೆಯ ತಾಕಲಾಟಗಳಲ್ಲಿ ಗುರುತಿಸುವ ಮೂಲಕ ಕಟು ವಾಸ್ತವವನ್ನು ಓದುಗರ ಮುಂದಿಡುತ್ತಾರೆ.
ಯಕ್ಷಗಾನ ಸಾಹಿತ್ಯ, ಪರಿಸರವಾದಿ ಚಂದ್ರಶೇಖರ ನಂಗಲಿ ಅವರ ಪರಿಚಯ, ತಿರುಮಲೇಶ ಭಟ್ಟ ಎಂಬ ಅಪರೂಪದ ವ್ಯಕ್ತಿತ್ವ ಇವೆಲ್ಲವೂ ಸಹ ‘ಲೋಕ ಕಥನ’ ವನ್ನು ನಿಜಾರ್ಥದಲ್ಲಿ ಸಮಕಾಲೀನ ಲೌಕಿಕ ಕಥನವಾಗಿಸುತ್ತದೆ. ಅಷ್ಟೇ ಕುತೂಹಲಕಾರಿಯಾಗಿ ಕಾಣುವುದು ‘ಅರ್ತಿಕಜೆಯೆಂಬ ಪುತ್ತೂರಿನ ಅಚ್ಚರಿ’ ಪ್ರಬಂಧ. ಕರ್ನಾಟಕದ ದಕ್ಷಿಣ ಪ್ರಾಂತಗಳಲ್ಲಿ ಇಂತಹ ನೂರಾರು ವ್ಯಕ್ತಿತ್ವಗಳ ಪರಿಚಯವೇ ಇಲ್ಲದಿರುವ ಸಾಧ್ಯತೆಗಳ ನಡುವೆ ಕಂಜರ್ಪಣೆ ಅವರ ಸಂಕ್ಷಿಪ್ತ ಪ್ರಬಂಧಗಳು, ಓದುಗರನ್ನು ಮತ್ತಷ್ಟು ಓದು ಅಧ್ಯಯನಕ್ಕೆ ಪ್ರೇರೇಪಿಸುತ್ತವೆ. ಈ ಅಪೂರ್ವ ಲಕ್ಷಣವೇ ‘ಲೋಕ ಕಥನ’ವನ್ನು ಸಂಗ್ರಹಯೋಗ್ಯ ಕೈಪಿಡಿಯಾಗಿ ಬಿಂಬಿಸುತ್ತದೆ. ಸಾಹಿತ್ಯಾಸಕ್ತರಿಗೆ ಈ ಕೃತಿಯೊಳಗಿಂದ ದೊರೆಯುವ ಊಥಿಠಿeಡಿಟiಟಿಞಗಳನ್ನು ಶೋಧಿಸುತ್ತಾ ಹೋದರೆ ಬಹುಶಃ ಕನ್ನಡ ಸಾಹಿತ್ಯ, ರಂಗಭೂಮಿ, ಯಕ್ಷಗಾನ ಹೀಗೆ ಎಲ್ಲ ಸಮಾಜಮುಖಿ ಪ್ರಕಾರಗಳಲ್ಲೂ ಅಪೂರ್ವವಾದ ನಿಧಿ ದೊರೆಯುತ್ತಾ ಹೋಗುತ್ತದೆ. ಸಂಗ್ರಹಿಸಿಟ್ಟು ಪದೇಪದೇ ಓದಬಹುದಾದ ಪುಸ್ತಕ ‘ಲೋಕ ಕಥನ’.
ಮುಖಬೆಲೆ: 325 ರೂ.
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ. ಲಿ., ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
ಫೋನ್: 080-22161900/ 22161901/ 22161902






