ಬೆಳಕಿನ ಹಾದಿಯಲ್ಲಿನ ಮಕ್ಕಳ ಕಥೆಗಳು...

ಮಕ್ಕಳ ಶಿಕ್ಷಣ ಹಾಗೂ ಸಾಹಿತ್ಯದಲ್ಲಿ ಅಪಾರ ಶ್ರದ್ಧೆ ಮತ್ತು ಆಸಕ್ತಿಯನ್ನು ಇರಿಸಿಕೊಂಡಿರುವ ಹಿರಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರ ಲೇಖನಿಯಿಂದ ಹತ್ತು ಹಲವು ಮಕ್ಕಳ ಕಥಾಸಂಕಲನಗಳು ಈಗಾಗಲೇ ಒದ್ದೆ ನೆಲದಲ್ಲಿ ಹಸಿರು ಸಹಜವಾಗಿ ಮೂಡುವಷ್ಟು ಮೂಡಿಬಂದಿವೆ. ಅವೆಲ್ಲವುಗಳೂ ಮಕ್ಕಳ ಸಾಹಿತ್ಯದ ಹಾದಿಯಲ್ಲಿ ಮೈಲಿಗಲ್ಲಿನಂತಿವೆ. ಎಳೆಯರ ಸಮೃದ್ಧ, ಸುಂದರ ಬದುಕಿಗೆ ತೋರುದೀಪದಂತಿವೆ.
ಜಾಗತೀಕರಣೋತ್ತರ ಕಾಲಘಟ್ಟದಲ್ಲಿ ನಾವೆಲ್ಲ ತೀರ ಧಾವಂತದ ಬದುಕಿನ ಶೈಲಿಯನ್ನು ನಮ್ಮದಾಗಿಸಿಕೊಂಡಿದ್ದೇವೆ. ಬದುಕು ಇನ್ನಿಲ್ಲದಂತೆ ಯಾಂತ್ರೀಕೃತವಾಗುತ್ತಿದೆ. ಮಗುವಿಗೆ ಜನ್ಮ ನೀಡಿದ ನಂತರ ಅದು ಬೆಳೆದು ದೊಡ್ಡದಾಗಿ ತನ್ನ ಬದುಕು ತಾನು ಕಟ್ಟಿಕೊಳ್ಳುವವರೆಗೆ ಅದನ್ನು ಲಾಲಿಸಬೇಕಾದದ್ದು, ಪಾಲಿಸಬೇಕಾದದ್ದು ತಂದೆ ಅದರಲ್ಲೂ ತಾಯಿಗೆ ನಿಸರ್ಗ ನೀಡಿರುವ ಬಹುದೊಡ್ಡ ಜವಾಬ್ದಾರಿಯನ್ನು ನಾವಿಂದು ದೂರಕ್ಕೆ ಸರಿಸಿದ್ದೇವೆ. ಮಗುವಿನ ಹುಟ್ಟಿನಿಂದಲೇ ನಮ್ಮ ಜವಾಬ್ದಾರಿಯನ್ನು ಬೇಬಿ ಕೇರ್ ಕೇಂದ್ರಗಳಿಗೆ ಒಪ್ಪಿಸುವುದನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದೇವೆ. ಮಕ್ಕಳ ಬಾಲ್ಯವನ್ನು ನಮ್ಮ ದುರಾಸೆಗಳಿಗೆ ಬಲಿಗೊಡುತ್ತಿದ್ದೇವೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ಹ.ಮ. ಪೂಜಾರ ಅವರಂತಹ ಹಿರಿಯ ಮಕ್ಕಳ ಸಾಹಿತಿಗಳು ಒಂದಿನಿತೂ ಸ್ಥಗಿತಗೊಳ್ಳದೇ ಮಕ್ಕಳ ಹೆಗಲ ಮೇಲೆ ಆಪ್ತಭಾವದ ಕೈಯಿರಿಸಿ ಮಾಗದರ್ಶನ ತೋರುವ ‘ಗುರುವಂದನೆ’ ಮಕ್ಕಳ ಕಥಾ ಸಂಕಲನ ತನ್ನೊಡನೆ ಹಿತವಾದ ತಂಗಾಳಿ ಅಲೆಯೊಂದನ್ನು ಮೆಲ್ಲನೆ ಸೃಜಿಸಿ ಮಕ್ಕಳ ಮನಸ್ಸನ್ನು ಅರಳಿಸುವ ಜವಾಬ್ದಾರಿಯನ್ನು ಹೊತ್ತು ಬರುತ್ತಿರುವುದು ಸ್ವಾಗತಾರ್ಹವಾಗಿದೆ.
ಪ್ರಸ್ತುತ ಕಥಾಸಂಕಲನದಲ್ಲಿ ಒಟ್ಟು 15 ಕಥೆಗಳಿದ್ದು ಪ್ರತಿಯೊಂದು ಕಥೆಯೂ ತನ್ನದೇ ಗಟ್ಟಿತನವನ್ನು ಹೊಂದಿದ್ದು ಪ್ರಸ್ತುತ ಪ್ರಪಂಚದಲ್ಲಿನ ಮಕ್ಕಳಿಗೆ ತೀರ ಅಗತ್ಯವೆನಿಸುವ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸುತ್ತದೆ. ಮೊಬೈಲ್, ರೀಲ್ಸ್, ವಾಟ್ಸ್‌ಆ್ಯಪ್, ಯೂಟ್ಯೂಬ್, ಗೂಗಲ್ ನಮಗೆ ಇಂದು ಮಾರ್ಗದರ್ಶನ ತೋರುವ ಮಹಾನ್ ಗುರುಗಳಾಗಿವೆ. ಒಂದಷ್ಟು ವಿವೇಚನೆ ಇಲ್ಲದೆ ಇವುಗಳು ತೋರುವುದೆಲ್ಲವನ್ನು ಅಂಧಾನುಕರಣೆ ಮಾಡುವ ಗೀಳು ನಮ್ಮದು. ಅದು ಹೇಳಿದ್ದೆಲ್ಲವೂ ನೂರಕ್ಕೆ ನೂರು ಸತ್ಯ ಎಂಬ ನಂಬಿಕೆಗೆ ಜೋತು ಬಿದ್ದು ನಮ್ಮ ಬದುಕನ್ನೇ ಬಲಿಕೊಡುತ್ತಿದ್ದೇವೆ. ಇದು ನಮ್ಮ ಅವನತಿಗೆ ಕಾರಣವಾಗುತ್ತದೆ ಎಂಬ ಸಂಗತಿಯನ್ನು ಮೊದಲ ಕಥೆ ‘ವ್ಯಾಪಾರಿಯ ಮೂರು ಮಾತು’ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಕೆಲವು ಬಾರಿ ಸುಖಾಸುಮ್ಮನೆ ಸಲ್ಲದ ಸಂಗತಿಗಳಲ್ಲಿ ಬಂದಿಯಾಗಿ ನಮ್ಮ ನಂಬಿಕೆಗಳೇ ಶ್ರೇಷ್ಠ ಎಂಬ ಬಾವಿಯ ಕಪ್ಪೆಯ ಮನೋಸ್ಥಿತಿಯನ್ನು ನಾವು ರೂಢಿಸಿಕೊಂಡಿರುತ್ತೇವೆ. ಅವುಗಳು ಸತ್ಯವಲ್ಲದಿದ್ದರೂ, ನಮ್ಮ ಬದುಕಿಗೆ ಹಾನಿಯುಂಟು ಮಾಡುತ್ತಿದ್ದರೂ ಅದನ್ನರಿಯದೇ ಅದರಲ್ಲಿಯೇ ಸಂತಸ ಅನುಭವಿಸುವ ಭ್ರಮೆಯಲ್ಲಿರುತ್ತೇವೆ. ಜಿಪುಣ ಅಜ್ಜಿಗೆ ಸರಿಯಾದ ಮಾರ್ಗ ತೋರುವಲ್ಲಿ ‘ಯುವಕನ ತಂತ್ರ’ ಕಥೆ ಸಫಲವಾಗುತ್ತದೆ. ಹಠಮಾರಿತನ ಸ್ವಭಾವ ಇಂದಿನ ಮಕ್ಕಳಲ್ಲಿ ತೀರ ಸಹಜವಾಗಿದೆ. ಹಠಮಾರಿ ಶಿಲ್ಪಾಗೆ ಅವಳ ತಾಯಿ ಉಪಾಯದಿಂದ ಅದನ್ನು ಮನವರಿಕೆ ಮಾಡಿ ಅವಳನ್ನು ಸರಿಯಾದ ಮಾರ್ಗಕ್ಕೆ ತರುವುದನ್ನು ‘ಹಟಮಾರಿ ಕಲಿತ ಪಾಠ’ ಕಥೆ ಮಾರ್ಮಿಕವಾಗಿ ಬಿಂಬಿಸುತ್ತದೆ.
ನಮಗೆಲ್ಲ ಪರಿಚಿತವಾಗಿರುವ ಗೋವಿನ ಕಥೆಯಲ್ಲಿ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತನ್ನ ಪ್ರಾಣವನ್ನು ಹುಲಿಗೆ ಒಪ್ಪಿಸಲು ಹುಲಿಯ ಮುಂದೆ ಬಂದು ನಿಲ್ಲುತ್ತದೆ. ಗೋವಿನ ಸತ್ಯ ಪರಿಪಾಲನೆಯ ಗುಣಕ್ಕೆ ತಲೆಬಾಗಿದ ಹುಲಿ ತನ್ನ ಪ್ರಾಣ ಕಳೆದುಕೊಳ್ಳುತ್ತದೆ. ಸತ್ಯದ ಮೌಲ್ಯ ಇಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದ್ದರೂ ಇನ್ನೊಂದು ಪ್ರಾಣಿಯನ್ನು ಕೊಂದೇ ತಾನು ಬದುಕುಳಿಬೇಕಾದ ಅನಿವಾರ್ಯತೆಯನ್ನು ನಿಸರ್ಗವೇ ನೀಡಿದ್ದು ಇದರಲ್ಲಿ ಹುಲಿಯು ಅಮಾಯಕವಾಗಿ ತನ್ನ ಜೀವವನ್ನು ತಾನು ಕಳೆದು ಕೊಳ್ಳುತ್ತದೆ. ಗುರುಶಿಷ್ಯರ ಸಂಬಂಧ ತೀರ ವಿರೂಪಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಥಾ ಸಂಕಲನದ ಶೀರ್ಷಿಕೆ ಕಥೆ ‘ಗುರುವಂದನೆ’ ನಮ್ಮ ನೆಲದ ಬಹುದೊಡ್ಡ ಮೌಲ್ಯ ಗುರು ಎಂಬುದನ್ನು ಮತ್ತೆ ಮತ್ತೆ ಸಾಕ್ಷೀಕರಿಸುತ್ತದೆ. ತಮ್ಮ ಬದುಕಿಗೆ ದಾರಿ ತೋರಿದ ಗುರುವಿಗೆ ಅವರ ಶಿಷ್ಯರೆಲ್ಲರೂ ಗುರುಗಳಿಗೆ ಒಂದಿನಿತು ಗೊತ್ತಾಗದಂತೆ ಸುಸಜ್ಜಿತ ಸೂರೊಂದನ್ನು ನಿರ್ಮಿಸಿ ಗುರುಕಾಣಿಕೆಯಾಗಿ ಕೊಡುವ ಮೂಲಕ ನಿಜವಾದ ಸಾರ್ಥಕ ಬದುಕಿನ ಹಾದಿಗೆ ದಾರಿ ತೋರುತ್ತಾರೆ.
ಇನ್ನುಳಿದಂತೆ ಕಥಾಸಂಕಲನದಲ್ಲಿ ಇರುವ ತಂತ್ರಕ್ಕೆ ಪ್ರತಿ ತಂತ್ರ, ತಪ್ಪು ದಾರಿ ತುಳಿದ ಬಾಲಕ, ಮೂರ್ಖ ಮಂಗ ಕಥೆಗಳು ಕೂಡ ತಮ್ಮದೇ ಆದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಇಂದಿನ ಬದುಕಿಗೆ ತೀರ ಪ್ರಸ್ತುತವೆನಿಸುವ ಸಂಗತಿಗಳನ್ನು ಆಪ್ತವಾಗಿ ತೆರೆದಿಡುತ್ತವೆ. ಪ್ರತಿಯೊಂದು ಕಥೆಯಲ್ಲೂ ಮಕ್ಕಳ ಹಂಬಲಕ್ಕೆ ಪೂರಕವಾಗಿ ಉತ್ತಮ ಮೌಲ್ಯವನ್ನು ತಿಳಿಸುತ್ತವೆ. ಮನಸ್ಸನ್ನು ತಣಿಸುವ ಪೂಜಾರ ಅವರ ಕಥೆ ಕಟ್ಟುವ ತಂತ್ರ, ಕೌಶಲ ಗಮನ ಸೆಳೆಯುತ್ತದೆ. ಮಕ್ಕಳ ಮನೋವಿಕಾಸಕ್ಕೆ ಮುನ್ನುಡಿ ಬರೆಯುತ್ತದೆ.
ಲೇಖಕರು ನಮ್ಮ ನೆಲದ ನಾಳಿನ ನಾಗರಿಕರಾಗುವ ಇಂದಿನ ಮಕ್ಕಳಿಗೆ ತಮ್ಮ ಅನುಭವದ ಆಳದಲ್ಲಿ ಅದ್ದಿ ಚಿಂತನೆಯ ಮೂಸೆಯಲ್ಲಿ ಪುಟಕ್ಕಿಕ್ಕಿದ ಇಲ್ಲಿನ ಕಥೆಗಳ ಮೂಲಕ ಹೊಸ ಹೊಸ ಭರವಸೆ ಹುಟ್ಟಿಸುತ್ತಾರೆ. ಅನುಭವ ವಾಚಾಳಿ, ಅನುಭಾವ ಮೌನಿ ಎನ್ನುವ ಮಾತಿನಂತೆ ಹ.ಮ. ಪೂಜಾರ ಅವರು ಹತ್ತು ಮಾತಿನಲ್ಲಿ ಹೇಳಬಹುದಾದದ್ದನ್ನು ಒಂದೇ ಮಾತಿನಲ್ಲಿ ಹೊಳೆಯಿಸುವ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕತ್ತಲೆಯ ಬಗ್ಗೆ ಕನಿಕರಿಸುತ್ತಲೇ ಬೆಳಕು ತೋರುತ್ತಾರೆ. ಭಗವಂತ ಮಾತನಾಡಬೇಕಾದಾಗ ಮಗುವಿನ ನಾಲಿಗೆಯಾಗುತ್ತಾನೆ ಎನ್ನುವ ಅನುಭವಿಗಳ ಮಾತನ್ನು ಹ.ಮ. ಪೂಜಾರ ಅವರ ‘ಗುರುವಂದನೆ’ ನೆನಪಿಸುತ್ತದೆ.






