ಕಾಲ್ದಾರಿ - ಇದು ವಿಮರ್ಶೆಯ ದಶಪಥ ಹೆದ್ದಾರಿ

ಕರ್ನಾಟಕದ ಸಮಕಾಲೀನ ಚರಿತ್ರೆಯಲ್ಲಿ 1970ರ ದಶಕ ನಿರ್ಣಾಯಕವಾದದ್ದು. ಕಾರಣ ಆಗ ಉಗಮಿಸಿದ ಸಾಹಿತ್ಯಿಕ, ಬೌದ್ಧಿಕ, ಬಂಡಾಯದ, ಕ್ರಾಂತಿಕಾರಿ ಮನಸ್ಸುಗಳು. ವ್ಯವಸ್ಥೆ ಮತ್ತು ಸಂಪ್ರದಾಯಗಳ ವಿರುದ್ಧ ಪ್ರಖರ ದನಿಯನ್ನು ದಾಖಲಿಸಿದ ಆ ದಶಕದ ಬೌದ್ಧಿಕ ಉತ್ಪನ್ನಗಳಲ್ಲಿ ಒಬ್ಬರು ಅಗ್ರಹಾರ ಕೃಷ್ಣಮೂರ್ತಿ. ಅವರ ಬರಹಗಳ ಸಂಕಲನ ‘ಕಾಲ್ದಾರಿ’- ಕೃತಿ ವಿಮರ್ಶೆ ಲೋಕ ವಿಮರ್ಶೆ ಓದುತ್ತಾ ಹೋದಂತೆ, ಆ ದಶಕದಲ್ಲಿ ತಳಸಮಾಜದ ಗರ್ಭದಿಂದ ಉದ್ಭವಿಸಿದ ಅಭಿವ್ಯಕ್ತಿಯ ಎಲ್ಲ ಆಯಾಮಗಳೂ ಕಣ್ಣ ಮುಂದೆ ಹಾದು ಹೋಗುತ್ತವೆ. ಅಗ್ರಹಾರ ಅವರು ಬಹುಶಃ ಕವಲೊಡೆದ ಚಿಂತನೆಗಳನ್ನು ತಲುಪಲು ತಾವು ಕ್ರಮಿಸಿದ ವಿಭಿನ್ನ ಹಾದಿಗಳನ್ನು ಕಾಲ್ದಾರಿ ಎಂದು ನಿರ್ವಚಿಸಿರಬಹುದು ಆದರೆ ಈ ಕೃತಿಯನ್ನು ಮೌಲಿಕ ನೆಲೆಯಲ್ಲಿ ನೋಡಿದಾಗ ದಶಪಥ ಹೆದ್ದಾರಿಯ ಹಲವು ಕವಲುಗಳನ್ನು ಗುರುತಿಸಬಹುದು.
30 ಬರಹಗಳ ‘ಕಾಲ್ದಾರಿ - ಕೃತಿ ವಿಮರ್ಶೆ ಲೋಕ ವಿಮರ್ಶೆ’ ವಿಮರ್ಶಾತ್ಮಕ ದೃಷ್ಟಿಯನ್ನೂ ದಾಟಿ ನೋಡುವಂತಹ ಸೃಜನಶೀಲ ಅಭಿವ್ಯಕ್ತಿಗಳ ಸುಂದರ ಗುಚ್ಛ. ಮೊದಲ ಬರಹ ‘ಅಭಿವ್ಯಕ್ತಿ ಸ್ವಾತಂತ್ರ್ಯ...’’ ಲೇಖಕರ ಈ ದೂರಗಾಮಿ ನೋಟಕ್ಕೆ ನಾಂದಿ ಹಾಡುವಂತಿದೆ. ‘‘ಅಕಾಡಮಿ (ಸಾಹಿತ್ಯ) ತನ್ನ ಮನೆಯೊಳಗೆ ಪ್ರಜಾಸತ್ತಾತ್ಮಕತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿರುವ ಎಷ್ಟೋ ಉದಾಹರಣೆಗಳಿವೆ’’ (ಪುಟ 19) ಈ ಸಾರ್ವಕಾಲಿಕ ಅಭಿವ್ಯಕ್ತಿ ಅಗ್ರಹಾರ ಅವರ ನೇರನುಡಿಗೆ ಒಂದು ಸಾಕ್ಷಿಯಷ್ಟೇ. ಇಂದಿಗೂ ಇದು ಸತ್ಯ ಎನ್ನುವುದನ್ನು ದುರಂತ ಎನ್ನಬೇಕೋ, ಸ್ವಾಭಾವಿಕ ಎನ್ನಬೇಕೋ? ಈ ಜಿಜ್ಞಾಸೆಯೊಂದಿಗೇ ಅಗ್ರಹಾರ ಕೃತಿ ವಿಮರ್ಶೆಗಳು ಮತ್ತು ಮುನ್ನುಡಿಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ.
ಅಗ್ರಹಾರ ಅವರ ಮುನ್ನುಡಿ ಬರೆಯುವ ವಿಧಾನ ಮತ್ತು ವಿಮರ್ಶೆಯ ಶೈಲಿ ಎರಡರಲ್ಲೂ ಕಾಣಬಹುದಾದ ಸಮಾನ ಎಳೆ ಎಂದರೆ, ತಮಗೆ ದಕ್ಕಿದ ಸಾಹಿತ್ಯ ಕೃತಿಯ ಒಳಹೂರಣವನ್ನು ಸ್ಪಷ್ಟವಾಗಿ ಓದುಗರ ಮುಂದೆ ತೆರೆದಿಡುವುದು. ಆದರೆ ಹೀಗೆ ತೆರೆದಿಡುವಾಗ ಅಗ್ರಹಾರ ಅವರ ಅಗ್ರ ನೋಟ ಕೃತಿಯ ಆಳಕ್ಕಿಳಿದು, ಒಳಸೂಕ್ಷ್ಮಗಳನ್ನೆಲ್ಲಾ ಹೊರಬಗೆದು ಕೃತಿಕಾರರಿಗೆ ಉಪಯುಕ್ತವಾಗಬಹುದಾದ ಸಾಹಿತ್ಯಿಕ ಸೂಕ್ಷ್ಮಗಳನ್ನು ಮಂಡಿಸುವುದು ಇವರ ಮತ್ತೊಂದು ವಿಶಿಷ್ಟ ಶೈಲಿ. ಕನ್ನಡದಲ್ಲಿ ವಿಮರ್ಶಾ ಸಾಹಿತ್ಯ ಬಹುಮಟ್ಟಿಗೆ ಮರೆಯಾಗಿರುವ ಹೊತ್ತಿನಲ್ಲಿ ಅಗ್ರಹಾರ ಅವರ ವಿಮರ್ಶೆಗಳು (ಹಳೆಯದೇ ಆದರೂ) ಹೊಸ ಹುರುಪು ಸೃಷ್ಟಿಸುತ್ತದೆ. ಖeಜಿಡಿeshiಟಿg ಎನಿಸುತ್ತದೆ.
‘ಬಡವರ ಬದುಕಿನ ಶಕ್ತಿ’ ಲೇಖನದಲ್ಲಿ ಡಾ. ಎಲ್. ಹನುಮಂತಯ್ಯನವರ ಸಮಗ್ರ ಸಾಹಿತ್ಯವನ್ನು ನಿಕಷಕ್ಕೊಡ್ಡಿರುವ ಡಾ. ಲಕ್ಷ್ಮೀನಾರಾಯಣಸ್ವಾಮಿ ಅವರ ವಿಮರ್ಶಾ ವ್ಯಾಖ್ಯಾನವನ್ನು ಅಗ್ರಹಾರ ಅವರು ಬಹುಮಟ್ಟಿಗೆ ಪುನರ್ ವಿಮರ್ಶೆ ಮಾಡಿದ್ದಾರೆ. ಈ ಲೇಖನದ ಓದುಗರಿಗೆ ಮೂಲ ವಿಮರ್ಶೆಯನ್ನು ಓದದೆಯೇ ಡಾ. ಎಲ್.ಎಚ್. ಅವರ ಸಾಹಿತ್ಯದ ಒಳಸೂಕ್ಷ್ಮಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಇದು ವಿಮರ್ಶೆಯ ವಿಮರ್ಶೆ ಅಲ್ಲ ಆದರೆ ಡಾ. ಎಲ್.ಎಚ್. ಅವರ ಕಾವ್ಯಗಳ ಮೀಮಾಂಸೆಯ ಹಾಗೆ ಕಾಣುತ್ತದೆ. ಇದು ಅಗ್ರಹಾರ ಅವರ ಬರಹ ಶೈಲಿಯ ಸೌಂದರ್ಯ ಎಂದರೆ ಉತ್ಪ್ರೇಕ್ಷೆಯಾಗಲಾರದು. ಮುಂದೆ ಬರುವ ಎಲ್ಲ ಬರಹಗಳಲ್ಲೂ, ಮುನ್ನುಡಿಗಳಲ್ಲೂ ಸಹ ಇದೇ ಛಾಯೆಯನ್ನು ಗುರುತಿಸುತ್ತಾ ಹೋಗಬಹುದು.
‘ಭಾವಕೋಶ ಅರಳುವ ಪರಿ’ ಲೇಖನದಲ್ಲಿ ಅಗ್ರಹಾರ ಅವರು ಜಪಾನಿನ ಪ್ರಸಿದ್ಧ ಲೇಖಕ ಹರುಕಿ ಮರಕುಮಿ ಅವರ ಕಥಾ ಸಂಕಲನದ ಅನುವಾದಿತ ಕೃತಿಯನ್ನು (ಮಂಜುನಾಥ ಚಾರ್ವಾಕ) ವಿಮರ್ಶೆಗೊಡ್ಡುತ್ತಾರೆ. ಈ ಕೃತಿಯ ಜೀವ ಪ್ರೇಮಿ ಕಥನಗಳನ್ನು ವಿಮರ್ಶಿಸುತ್ತಲೇ ಲೇಖಕರು ಸ್ವಾನುಭವದ ನೆಲೆಯಲ್ಲಿ ವಿವರಿಸುವ ಗಜಪಯಣದ ಪ್ರಸಂಗ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಈಗ 90-100ರ ಪ್ರಾಯದಲ್ಲಿರಬಹುದಾದ ಮಾವುತನೊಬ್ಬನ ಸಾಂದರ್ಭಿಕ ಭೇಟಿಯನ್ನು ನೆನಪು ಮಾಡಿಕೊಳ್ಳುವ ಮೂಲಕ ಅಗ್ರಹಾರ ಅವರು, ಸಮಕಾಲೀನ ಭಾರತದ ಸ್ಮರಣೀಯ ವ್ಯಕ್ತಿಗಳಾದ ನೆಹರೂ ಮತ್ತು ಇಂದಿರಾ ಅವರ ಜೀವಪ್ರೀತಿಯ ಪರಿಚಯವನ್ನೂ ಮಾಡಿಕೊಡುತ್ತಾರೆ. ಬರಹಗಳ ಈ ವ್ಯಾಪ್ತಿಯೇ ಪುಸ್ತಕದ ಮೌಲ್ಯವನ್ನು ಹೆಚ್ಚಿಸುತ್ತದೆ.
ಜಗದೀಶ್ ಕೊಪ್ಪ ಅವರ ‘ಪದಗಳಿವೆ ಎದೆಯೊಳಗೆ’ ಎಂತಹ ಓದುಗರನ್ನಾದರೂ ಮಂತ್ರಮುಗ್ಧರನ್ನಾಗಿಸುವ ಕೃತಿ. ಈ ಕೃತಿಯ ವಸ್ತುನಿಷ್ಠ ವಿಮರ್ಶೆಯನ್ನು ಅಗ್ರಹಾರ ಅವರು ‘‘ದಿವ್ಯಸ್ಥೀಯರ ದುರಂತ’’ ಬರಹದಲ್ಲಿ ಮಂಡಿಸಿದ್ದಾರೆ. ಮೂಲ ಕೃತಿಯಲ್ಲಿ ಜಗದೀಶ್ ಕೊಪ್ಪ ಅವರು ದೇವದಾಸಿಯರ ಕೊಡುಗೈಯನ್ನು ಪ್ರಶಂಸಿಸುತ್ತಾರೆ, ಇದನ್ನು ಅಗ್ರಹಾರ ಅವರು ‘‘ಇದು ಒಂದು ರೀತಿಯಲ್ಲಿ ಶೋಷಣೆಗೊಳಗಾದವರನ್ನೇ ಮತ್ತೆ ಮತ್ತೆ ‘ನಾಜೂಕಿನ ಶೋಷಣೆಗೆ’ ಸೆಳೆದ ಮಾರ್ಗವಾಗಿದೆ’’ ಎಂದು ವಿಮರ್ಶಿಸುತ್ತಾರೆ. ಈ ಸಾಲುಗಳು ಕೃತಿಯ ಓದುಗರನ್ನು ವಿಚಾರ ಮಂಥನಕ್ಕೆ ಹಚ್ಚುವಂತಿದೆ. ವಿಮರ್ಶಕನ ತೀಕ್ಷ್ಣ ಒಳನೋಟ ಎಂದರೆ ಹೀಗಿರಬೇಕು !
‘ಕಾಲ್ದಾರಿ’ ಹೆಸರಿನ ಹೆದ್ದಾರಿಯಲ್ಲಿ ಕಾಣಸಿಗುವ ಅಮೂಲ್ಯ ಸಂಪತ್ತು ‘ಒಂದು ಅಂಕಣದ ನೆನಪು’ ಬರಹದಲ್ಲಿದೆ. ಕನ್ನಡ ಸಾಹಿತ್ಯ ಲೋಕದ ಆಂತರಿಕ ತಲ್ಲಣಗಳನ್ನು, ವ್ಯತ್ಯಯ-ವಿರೋಧಾಭಾಸಗಳನ್ನು ಮನಮುಟ್ಟುವಂತೆ ಬಿಡಿಸಿಡುವ ಈ ಲೇಖನದೊಳಗಿನ ಬರಹಗಳು ವರ್ತಮಾನಕ್ಕೂ ವಾಸ್ತವ ಎನಿಸುತ್ತದೆ. ಸಾಹಿತ್ಯಿಕ ಹೂರಣದೊಂದಿಗೆ ಸಾಹಿತ್ಯಲೋಕದ ಹುಳುಕುಗಳನ್ನು ಒಂದೊಂದಾಗಿ ತೆರೆದಿಡುವ ಅಗ್ರಹಾರ ಕೃಷ್ಣಮೂರ್ತಿ ಅವರ ಬರಹ ಶೈಲಿ ಅಪ್ಯಾಯಮಾನ ಎನಿಸುತ್ತದೆ.
ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮ ಮತ್ತು ಸಮಾಜ ಇವೆಲ್ಲವನ್ನೂ ಒಂದೇ ಬತ್ತಳಿಕೆಯಲ್ಲಿ ಸಂಚಯಿಸಿಡುವ ‘ಕಾಲ್ದಾರಿ’ ಉಪಯುಕ್ತ ಎನಿಸುವುದು ಅದರೊಳಗಿನ ವಸ್ತು ವಿಷಯಗಳಿಂದ ಮತ್ತು ಅವುಗಳ ಸುತ್ತ ತಮ್ಮದೇ ಆದ ತೀಕ್ಷ್ಣ ಕಣ್ಣೋಟದಿಂದ ಮರು ವ್ಯಾಖ್ಯಾನಿಸುವ ಅಗ್ರಹಾರ ಕೃಷ್ಣಮೂರ್ತಿ ಅವರ ಬೌದ್ಧಿಕ ವಿಸ್ತಾರವೂ ಸಹ ಯುವಜನರಿಗೆ ಉಪಯುಕ್ತವಾಗುತ್ತದೆ. ಇಲ್ಲಿ ವಿಮರ್ಶಿಸಿರುವ/ಮುನ್ನುಡಿಸಿರುವ ಎಲ್ಲ ಕೃತಿಗಳನ್ನೂ ಕೊಂಡು ಓದಬೇಕು ಎಂಬ ಹಂಬಲವನ್ನು ‘ಕಾಲ್ದಾರಿ’ ಮೂಡಿಸುತ್ತದೆ. ಆದ್ದರಿಂದಲೇ ಇದು ದಶಪಥ ಹೆದ್ದಾರಿ.
ಕೃತಿಯ ಮುಖಬೆಲೆ: 230 ರೂ.
ಪ್ರಕಾಶಕರು: ಪಲ್ಲವ ಪ್ರಕಾಶನ, ಚೆನ್ನಪಟ್ಟಣ ಅಂಚೆ,
ವಯಾ ಎಮ್ಮಿಗನೂರು, ಬಳ್ಳಾರಿ-583113
ಮೊ: 8880087235






