Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ಗಾನಯಾನ ಕಾವ್ಯ ಮಿಲನ-ಪ್ರತಿಫಲನ

ಗಾನಯಾನ ಕಾವ್ಯ ಮಿಲನ-ಪ್ರತಿಫಲನ

ಬಿ.ಎಂ. ರೋಹಿಣಿಬಿ.ಎಂ. ರೋಹಿಣಿ19 July 2026 10:00 AM IST
share
ಗಾನಯಾನ ಕಾವ್ಯ ಮಿಲನ-ಪ್ರತಿಫಲನ

‘‘ಸಂಗೀತವು ಆಧ್ಯಾತ್ಮಿಕ ಮತ್ತು ಐಹಿಕ ಜೀವನವನ್ನು ಜೋಡಿಸುವ ಕೊಂಡಿಯಾಗಿದೆ’’ ಎಂಬ ಮಾತಿದೆ. ಸಂಗೀತ ಮಾತ್ರ ಎಲ್ಲರೂ ಅರಿಯಲು ಸಾಧ್ಯವಾಗಿರುವ ವಿಶ್ವ ಭಾಷೆಯಾಗಿದೆ. ಕರ್ನಾಟಕದಲ್ಲಿ ಸುಗಮ ಸಂಗೀತ ಅಕಾಡಮಿಯನ್ನು ಪ್ರಪ್ರಥಮವಾಗಿ ಸ್ಥಾಪಿಸಿ ಕವಿಗಳ ಕವನಗಳಿಗೆ ಸಹೃದಯರ ಮೆಚ್ಚುಗೆ ಮತ್ತು ಗೌರವವನ್ನು ತಂದುಕೊಟ್ಟವರು ಎಚ್.ಆರ್. ಲೀಲಾವತಿಯವರು. ಕಳೆದ ವರ್ಷವಷ್ಟೇ ‘ಹಾಡಾಗಿ ಹರಿದಾಳೆ’ ಎಂಬ ಆತ್ಮಕಥನವನ್ನು ಪ್ರಕಟಿಸಿ ಕನ್ನಡಿಗರ ಅಭಿಮಾನವನ್ನು ಹೆಚ್ಚಿಸಿಕೊಂಡ ಲೀಲಾವತಿಯವರು ‘ಗಾನಯಾನ ಕಾವ್ಯ ಮಿಲನ’ವೆಂಬ ಕೃತಿಯಲ್ಲಿ ಕವಿ-ಕಾವ್ಯ ಮಿಲನದ ಸ್ವಾರಸ್ಯವಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ೧೮ ಮಂದಿ ಖ್ಯಾತ ಕವಿಗಳ ಜೊತೆಗಿನ ಅವರ ಒಡನಾಟದ ಸ್ಮತಿ ಸಂಚಯವಿದು. ಕಾವ್ಯ-ಸಂಗೀತ ಪ್ರೇಮಿಗಳನ್ನು ತನ್ಮಯತೆಯಿಂದ ಓದಿಸಿಕೊಂಡು ಹೋಗುವ ಈ ಕೃತಿಯು ಕನ್ನಡ ಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆಯಾಗಿದೆ. ಸಾಹಿತ್ಯ ಮತ್ತು ಸಂಗೀತವನ್ನು ತನ್ನ ಎರಡು ಕಣ್ಣುಗಳೆಂದೇ ಭಾವಿಸಿ ದೀರ್ಘಕಾಲದಿಂದ ಸಾಧನೆ ಮಾಡುತ್ತಾ ಬಂದಿರುವ ಲೀಲಾವತಿಯವರಿಗೆ ‘ಸುಗಮ ಸಂಗೀತವೆಂದರೆ ಲೀಲಾವತಿ, ಲೀಲಾವತಿ ಎಂದರೆ ಸುಗಮ ಸಂಗೀತ’ ಎಂಬ ಗೌರವ ಸೂಚಕ ಅನ್ವರ್ಥನಾಮವೂ ಇದೆ.

‘ಗ್ರೀಕ್ ದೇವತೆಯಂತೆ’ ಕಾಣುವ ಕುವೆಂಪು ಅವರೊಂದಿಗಿನ ಒಡನಾಟದ ನೆನಪುಗಳು ಸ್ವಾರಸ್ಯ ಪೂರ್ಣವಾಗಿ ಲೀಲಾವತಿಯವರ ಲೇಖನಿಯಿಂದ ಹರಿದು ಬಂದಿದೆ. ಕುವೆಂಪು ಅವರ ಹಲವು ಕವನಗಳಿಗೆ ರಾಗ ಸಂಯೋಜನೆ ಮಾಡಿ ಆಕಾಶವಾಣಿ ಮತ್ತು ಸಭೆ ಸಮಾರಂಭಗಳಲ್ಲಿ ಪ್ರಸ್ತುತಪಡಿಸಿದ್ದನ್ನು ಕೇಳಿದ ಮಹಾಕವಿ ‘‘ನೀವು ನನ್ನ ಕವನಗಳನ್ನು ಹಾಡದಿದ್ದರೆ ನನ್ನ ಪುಸ್ತಕಗಳೆಲ್ಲ ಬೀರುವಿನಲ್ಲೇ ಇರುತ್ತಿತ್ತು’’ ಎಂದು ಹೇಳಿದ್ದು ಹಾಡುಗಾರ್ತಿಗೆ ಸಂದ ದೊಡ್ಡ ಪ್ರಶಸ್ತಿಯೆಂದೇ ಲೇಖಕಿ ಭಾವಿಸಿದ್ದಾರೆ. ‘ಕಡಲತೀರದ ಭಾರ್ಗವ’ನೆಂದು ಖ್ಯಾತರಾದ ಶಿವರಾಮ ಕಾರಂತರೊಂದಿಗೆ ಲೇಖಕಿಯ ಗೆಳೆತನವು ಲೋಕಕ್ಕೆ ಅರಿಯದ ಕಾರಂತರ ಹಲವು ಮುಖಗಳನ್ನು ತೆರೆದಿಡುತ್ತದೆ. ಅವುಗಳಲ್ಲಿ ಒಂದು ಘಟನೆ ಹೀಗಿದೆ ಒಮ್ಮೆ ನಾಗರಾಜು ಎಂಬ ಯುವಕನ ಜೊತೆಗೆ ಕಾರಂತರ ಪುತ್ತೂರಿನ ಮನೆಗೆ ಹೋದಾಗ ರಾತ್ರಿ ಅವನನ್ನು ಮಂಚದ ಮೇಲೆ ಮಲಗುವಂತೆ ಹೇಳಿ, ತಾನು ಕೆಳಗೆ ಮಲಗುತ್ತೇನೆ ಎಂದಾಗ ಗಾಬರಿಯಾದ ನಾಗರಾಜ ‘‘ನಾನು ಚಿಕ್ಕವನು ತಾವು ಹಿರಿಯರು’’ ಎಂದು ನಿರಾಕರಿಸಿದನಂತೆ. ಆಗ ಕಾರಂತರು ‘‘ಮೊದಲು ಹೋಗುವುದು ನಾನೋ ನೀವೋ?’’ ಎಂದು ಖಾರವಾಗಿ ಹೇಳಿ ಬಾಯಿ ಮುಚ್ಚಿಸಿದರಂತೆ. ನಿಷ್ಠುರವಾದಿಯಾದ ಕಾರಂತರು ಮಾನವೀಯ ಗುಣಗಳ ಗಣಿಯೇ ಆಗಿದ್ದರು ಎಂಬ ಹಲವು ನಿದರ್ಶನಗಳನ್ನು ಲೇಖಕಿ ಸಾದರಪಡಿಸಿದ್ದಾರೆ. ವ್ಯಾಸ ಪೀಠದ ಮುಂದೆ ಸದಾ ಓದುತ್ತಾ, ಬರೆಯುತ್ತಾ ಸಾಹಿತ್ಯ ಕೃಷಿಯಲ್ಲಿ ತಲ್ಲೀನರಾದ ವಿ. ಸೀತಾರಾಮಯ್ಯನವರ ‘ಎಮ್ಮ ಮನೆಯಂಗಳದಿ’ ಎಂಬ ಹಾಡು ಬಹಳ ಪ್ರಸಿದ್ಧವಾಗಿದೆ. ಅವರ ಸಂಗೀತ ಜ್ಞಾನ ಮತ್ತು ಸಾಹಿತ್ಯ ಪ್ರೇಮದ ಕಥನಗಳು ಮನಮುಟ್ಟುವಂತೆ ವರ್ಣಿಸಲಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ಅಪಾರಜ್ಞಾನವುಳ್ಳ ಪುತಿನ ಅವರೊಂದಿಗಿನ ವಿರಸ ಮತ್ತು ಸ್ಮರಣೀಯವಾದ ಹಲವು ಘಟನೆಗಳು ಗಮನಾರ್ಹವಾಗಿದೆ. ಲೀಲಾವತಿಯವರ ಗುರು ಪದ್ಮಚರಣ್ ಅವರ ಸ್ವಾರ್ಥದಿಂದ ಉಂಟಾದ ನೋವನ್ನು ನುಂಗಿಕೊಂಡು ಬದುಕಬೇಕಾದ ಅನಿವಾರ್ಯ ಸನ್ನಿವೇಶಗಳನ್ನು ಮರೆಯಲಾಗದು. ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕೃತಿ ‘ಮೈಸೂರು ಮಲ್ಲಿಗೆ’ ೩೨ ಮುದ್ರಣಗಳನ್ನು ಕಂಡದ್ದು ಪ್ರಾಯಶಃ ಕಾವ್ಯಲೋಕದ ದಾಖಲೆಯೇ ಸರಿ. ದನ ಕಾಯುವ ಹುಡುಗನೂ ಕೂಡ ತನ್ನ ಕವನವನ್ನು ಹಾಡುವುದನ್ನು ಕೇಳಿ ಕವಿ ರೋಮಾಂಚನಗೊಂಡಿದ್ದಾರೆ. ಇದು ಕಾವ್ಯಕ್ಕೆ ದೊರೆತ ಪುರಸ್ಕಾರ.

‘‘ನನ್ನ ಜೀವಿತದ ಪರಮ ಧ್ಯೇಯಗಳಲ್ಲಿ ಒಂದಾದ ನನ್ನ ಕಾಸರಗೋಡು ಆತ್ಮವನ್ನು ಕರ್ನಾಟಕದ ಪರಮಾತ್ಮನಲ್ಲಿ ಸೇರಿಸಿ ಎಂದು ನಿರಂತರವಾಗಿ ಜಪಿಸುವವನು ನಾನು’’ ಎಂದು ಹೇಳಿದ ಕೈಯಾರ ಕಿಞ್ಞಣ್ಣ ರೈಯವರ ಒಡನಾಟದ ಘಟನೆಗಳನ್ನು ದೃಶ್ಯಗಳಂತೆ ಚಿತ್ರಿಸಿದ್ದಾರೆ. ‘ಅಳುವ ಕಡಲೊಳಗಿನ ಹಾಯಿದೋಣಿ’ಯಾದ ಎಸ್.ವಿ. ಪರಮೇಶ್ವರ ಭಟ್ಟರು ಎದೆಯ ನೋವಿನ ಸಂಕಟ ಗಳಿಗೆಗಳನ್ನು ಎಂದೂ ತೋರ್ಪಡಿಸಲಿಲ್ಲ. ವೈವಿಧ್ಯಮಯವಾದ, ವಿಪುಲವಾದ ಕಾವ್ಯ ಕೃಷಿ ಮಾಡಿದ ಎಸ್.ವಿ.ಪಿ.ಯವರು ನಮ್ಮ ಜಿಲ್ಲೆಯಲ್ಲಿ ಕನ್ನಡದ ಪ್ರೀತಿಯನ್ನು ಬಿತ್ತಲು ‘ಮನೆ ಮನೆಗೆ ಸರಸ್ವತಿ’ಯನ್ನು ಒಯ್ದವರು. ‘‘ಅತ್ಯಂತ ಮಧುರವಾದ ಹಾಡುಗಳು ಅತ್ಯಂತ ದುಃಖದಿಂದ ಕೂಡಿದವುಗಳಾಗಿರುತ್ತವೆ’’ ಎಂಬ ಪಿ.ಬಿ. ಶೆಲ್ಲಿಯ ಮಾತುಗಳು ಎಸ್.ವಿ.ಪಿ.ಯವರ ಮಟ್ಟಿಗೆ ಸತ್ಯವಾಗಿದೆ. ‘ಕಾವ್ಯವು ಸಂಗೀತ ಮುಕ್ತ’ವಾಗಿರಬೇಕು ಎಂದು ಪ್ರತಿಪಾದಿಸಿದ ನವ್ಯ ಕಾವ್ಯದ ಹರಿಕಾರ ಗೋಪಾಲಕೃಷ್ಣ ಅಡಿಗರದ್ದು ಮೋಹಕ ನಗೆಯೊಂದಿಗಿನ ಅದ್ಭುತ ಮಾತುಗಾರ ಎಂದು ಹೇಳುತ್ತಾ ಲೇಖಕಿ ಕವಿಯೊಂದಿಗೆ ಅವರ ಕೊನೆಗಾಲದ ನಂಟಿನ ಬಗ್ಗೆ ಭಾವುಕರಾಗಿ ಬರೆದಿದ್ದಾರೆ. ದಿವ್ಯಾಂಬರ ಸಂಚಾರಿಯಾದ ಜಿ.ಎಸ್. ಶಿವರುದ್ರಪ್ಪನವರ ಕವನಗಳು ಜೀವನ ಪ್ರೇಮ ಮತ್ತು ಮಾಧುರ್ಯದ ಮೋಡಿ ಮಾಡಿ ಆಕರ್ಷಿಸುವ ಶಕ್ತಿಯುಳ್ಳವುಗಳಾಗಿವೆ. ರಾಷ್ಟ್ರ ಕವಿಗಳಾದರೂ ಹಮ್ಮು ಬಿಮ್ಮುಗಳಿಲ್ಲದ ಅವರ ಸರಳ ಸುಂದರ ವ್ಯಕ್ತಿತ್ವದೊಂದಿಗೆ ಲೀಲಾವತಿಯವರ ಗಾನಯಾನದ ಕಥನಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಲೀಲಾವತಿಯವರ ಕಾಲೇಜು ಸಹಪಾಠಿ ಹಾ.ಮಾ. ನಾಯಕರೊಂದಿಗಿನ ಗಾನಯಾನವು ಕುತೂಹಲದಾಯಕವಾಗಿದೆ. ನಾಯಕರು ಅಂಕಣಕಾರರೆಂದೇ ಪ್ರಸಿದ್ಧರು. ಅವರ ರೂಪಕಗಳ ಕೃತಿ ಬಗ್ಗೆ ಲೇಖಕಿ ಹೇಳಿದ್ದೇ ಸಾಕ್ಷಿ.

ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರೊಂದಿಗಿನ ಕಾವ್ಯ ಗಾನಯಾನದ ಬಗ್ಗೆ ಬರೆಯುತ್ತಾ ಲೇಖಕಿಯು ಅವರ ವಿಸ್ತಾರವಾದ ಸಾಹಿತ್ಯ ಕೃಷಿಯ ಬಗ್ಗೆ ಗಮನಸೆಳೆಯುತ್ತಾರೆ. ಮೈಸೂರು ಅನಂತಸ್ವಾಮಿಯವರು ತಾವು ಸಿದ್ಧಪಡಿಸಿದ್ದ ರಾಗಕ್ಕೆ ಸಾಹಿತ್ಯ ಬರಿ ಎಂದು ನಿಸಾರ್ ಅವರನ್ನು ಒತ್ತಾಯ ಮಾಡಿದ್ದರಿಂದ ಹುಟ್ಟಿದ ಕವನವೇ ‘ಬೆಣ್ಣೆ ಕದ್ದ ನಮ್ಮ ಕೃಷ್ಣ’. ಇದು ಜನಮಾನಸದಲ್ಲಿ ಸ್ಥಿರ ಸ್ಥಾಯಿಯಾಗಿ ಉಳಿದುಬಿಟ್ಟಿದೆ. ಹಾಡಬಾರದು ಕವಿತೆಯನ್ನು ಎಂದು ಆದೇಶಿಸಿದ ಬಿ.ಸಿ. ರಾಮಚಂದ್ರ ಶರ್ಮ ಅವರಿಗೆ ಒಮ್ಮೆ ಲೇಖಕಿಯ ಪ್ರಶ್ನೆ ‘‘ಸಾರ್, ನಿಮ್ಮ ಕವನ ರಾಗದುಡಿಗೆ ತೊಟ್ಟು ಪ್ರಸಾರವಾಯಿತಲ್ಲ’’ ಎಂದಾಗ ‘‘ಬಿಡಿ ಮೇಡಂ ಕೂಸು ತಾಯಿ ಗರ್ಭದಲ್ಲಿರುವವರೆಗೂ ತಾಯಿಗೆ ಸೇರಿದ್ದು, ಹಡೆದ ಮೇಲೆ ಎಲ್ಲರಿಗೂ ಸೇರಿದ್ದು’’ ಎಂದು ಹೇಳಿದರಂತೆ. ಕಡುಬಡತನದಲ್ಲಿ ಬೆಳೆದು ವಾರಾನ್ನ, ಬೀದಿ ದೀಪದ ಬೆಳಕಿನಲ್ಲಿ ಓದಿದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರೊಂದಿಗಿನ ಲೇಖಕಿಯ ಒಡನಾಟಗಳು ತುಂಬಾ ಆತ್ಮೀಯವಾಗಿ ಚಿತ್ರಿತವಾಗಿದೆ. ಶಿಶುನಾಳ ಶರೀಫರಿಗೆ ಪ್ರಸಿದ್ಧಿಯನ್ನು ಕೊಡಿಸಿದ ಮಕ್ಕಳ ಕವನಗಳ ಮೂಲಕ ಕನ್ನಡ ಪ್ರೀತಿಯನ್ನು ಬಿತ್ತಿ, ಬೆಳೆಸುವ ಕಾಯಕದಲ್ಲಿ ಶ್ರದ್ಧೆಯಿಂದ ದುಡಿದ ಅವರ ನೆನಪುಗಳಿಂದ ಲೇಖಕಿ ಹನಿಗಣ್ಣಾಗುತ್ತಾರೆ. ಸುಮತೀಂದ್ರ ನಾಡಿಗರು ಲೀಲಾವತಿಯವರ ಸಾಹಿತ್ಯ ಮತ್ತು ಸುಗಮ ಸಂಗೀತದ ಸಾಧನೆಗೆ ಸ್ಫೂರ್ತಿ ತುಂಬಿದ ಘಟನೆಗಳನ್ನು ವಿವರಿಸಿದ್ದಾರೆ. ಕವಿತೆಗೆ ಸಂಭ್ರಮ ತೊಡಿಸಿದ ಎಚ್.ಎಸ್. ವೆಂಕಟೇಶಮೂರ್ತಿ ಅವರೊಂದಿಗಿನ ಒಡನಾಟವನ್ನು ತುಂಬಾ ಆತ್ಮೀಯವಾಗಿ ವಿವರಿಸಿದ್ದಾರೆ. ಸರಳ ಸಜ್ಜನ ಮೂರ್ತಿಯಾದ ಎಚ್.ಎಸ್.ವಿ.ಯವರು ಸಕ್ಕರೆಯಂತಹ ಮನಸ್ಸಿನಿಂದ ಅಕ್ಕರೆಯ ಸಾಹಿತ್ಯ ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಸಮೃದ್ಧವಾದ ಕೃತಿ ಸಂಪತ್ತನ್ನು ನೀಡಿದ್ದಾರೆ. ಎದೆಯ ಬೇಗುದಿಯೇ ಬಂಡಾಯದ ಹಾಡಾಗಿಸಿದ ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೆಲೆ, ಶಿಕ್ಷಣ ಪಡೆಯಲು ಪಟ್ಟ ಕಷ್ಟ ಇತ್ಯಾದಿಗಳನ್ನು ವಿವರಿಸುತ್ತಾ ಕವಿಯ ಕಾವ್ಯದ ಮಹತ್ವವನ್ನು ವರ್ಣಿಸಿದ್ದಾರೆ. ‘ಆದಿತ್ಯ’ ಎಂಬ ಹೆಸರಿನಲ್ಲಿ ಪ್ರೇಮ ಕವನ ಬರೆದು ಪ್ರಶಸ್ತಿ ಗಿಟ್ಟಿಸಿಕೊಂಡ ಕಥೆಯೂ ಸ್ವಾರಸ್ಯವಾಗಿದೆ. ಆಕಾಶವಾಣಿಯ ಉಭಯ ಕುಶಲೋಪರಿಯ ಎನ್ಕೆ ಕುಲಕರ್ಣಿಯವರು ಸುಗಮ ಸಂಗೀತಕ್ಕೆ ನೀಡಿದ ಪ್ರೋತ್ಸಾಹಗಳನ್ನು ಲೇಖಕಿ ಮನ ತುಂಬಿ ಸ್ಮರಿಸಿದ್ದಾರೆ. ಹಾಗೆಯೇ ‘ಕಿಟಿಕಿ ಬಾಗಿಲ ತೆರೆದು ಬರಮಾಡು ಒಳಗೆ’ ಎಂದ ಆಕಾಶವಾಣಿಯ ಕಾರ್ಯನಿರ್ವಾಹಕ ರಾಘವೇಂದ್ರ ಇಟಗಿಯವರೊಂದಿಗೆ ಲೇಖಕಿಯ ಗಾನಯಾನದ ಘಟನೆಗಳನ್ನು ಸ್ಮರಿಸಿದ್ದಾರೆ. ಈ ಎಲ್ಲಾ ಲೇಖಕರ ಜೀವನ ಚರಿತ್ರೆಯೊಂದಿಗೆ ಲೇಖಕಿಯ ಜೀವನ ಚರಿತ್ರೆಯೂ ಬೆರೆತಿದೆ. ಇದು ಒಂದು ವಿನೂತನವಾದ ರೀತಿಯಲ್ಲಿ ಕಟ್ಟಿಕೊಟ್ಟ ಆತ್ಮ ಚರಿತ್ರೆಯಾಗಿದೆ. ಕನ್ನಡದಲ್ಲಿ ಮಹಿಳಾ ಕವಿಗಳಿಗೆ ಕೊರತೆ ಇಲ್ಲ. ಈ ಕೃತಿಯಲ್ಲಿ ಎದ್ದು ಕಾಣುವ ಕೊರತೆ ಎಂದರೆ ಅವರೊಂದಿಗೆ ಲೇಖಕಿಗೆ ಸಂಪರ್ಕ ಇರಲಿಲ್ಲವೇ? ಅವರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿಲ್ಲವೇ? ಇದು ನನ್ನಲ್ಲಿ ಮೂಡಿದ ಪ್ರಶ್ನೆ. ನಮ್ಮನ್ನು ನಾವೇ ಗುರುತಿಸಬೇಕು ತಾನೇ? ಏನೇ ಇರಲಿ, ಲೇಖಕಿಯ ಈ ಪ್ರಯತ್ನ ಶ್ಲಾಘನೀಯ. ಬಹುರೂಪಿ ಪ್ರಕಾಶನಕ್ಕೂ ಸಹೃದಯರ ಅಭಿನಂದನೆಗಳು ಸಲ್ಲುತ್ತವೆ.

Tags

Ganayana Kavya milan
share
ಬಿ.ಎಂ. ರೋಹಿಣಿ
ಬಿ.ಎಂ. ರೋಹಿಣಿ
Next Story
X