ಅಮ್ಮಮ್ಮನ ಕವಿತೆಗಳು

ಡಾ. ಎಚ್.ಎಸ್. ಅನುಪಮಾ ಕನ್ನಡದ ವಿಶಿಷ್ಟ ಲೇಖಕಿ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಅವರದ್ದು ಅದ್ಭುತ ಪ್ರತಿಭೆ. ಅವರ ಪ್ರತಿಯೊಂದು ಕೃತಿಯೂ ಕನ್ನಡಿಗರ ಮನಸ್ಸನ್ನು ತಟ್ಟಿದೆ, ಮುಟ್ಟಿದೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದುಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೃತಿಗಳು ನಿಜವಾಗಿಯೂ ಅನುಪಮ ಎಂಬ ಅವರ ಹೆಸರನ್ನು ಸಾರ್ಥಕಗೊಳಿಸಿದೆ. ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಜೀವನ ಚರಿತ್ರೆ, ಪ್ರವಾಸ ಕಥನ, ಲೇಖನ ಸಂಕಲನ, ವೈದ್ಯಕೀಯ ವಿಜ್ಞಾನ, ಅನುವಾದ, ಸಂಪಾದನೆ ಮುಂತಾದವುಗಳಿಂದ ಅವರ ಸಾಹಿತ್ಯ ಕೃಷಿ ಸಂಪನ್ನಗೊಂಡಿದೆ. ಇತ್ತೀಚಿನ ಅವರ ಕೃತಿ ‘ಅಮ್ಮಮ್ಮನ ಕವಿತೆಗಳು’ ಹುಟ್ಟಿದ ಸನ್ನಿವೇಶವೇ ನಮ್ಮನ್ನು ಪುಳಕಗೊಳಿಸುತ್ತದೆ. ಮೊಮ್ಮಗುವನ್ನೇ ಕೇಂದ್ರವಾಗಿರಿಸಿಕೊಂಡು ಅವರು ತನ್ನ ಸೃಷ್ಟಿಶೀಲ ಪ್ರತಿಭೆಯಿಂದ ಹೆಣೆದು ಪೋಣಿಸಿದ 30 ಕವಿತೆಗಳು ನಮ್ಮನ್ನು ಖುಷಿಪಡಿಸಿ ಮನವನ್ನರಳಿಸುತ್ತವೆ. ಈ ಹಿಂದೆ ಯಾವ ಅಜ್ಜಿಯರೂ ಹೀಗೆ ಕವನ ಸಂಕಲನ ಪ್ರಕಟಿಸಿದ್ದು ನನಗೆ ಗೊತ್ತಿಲ್ಲ. ಅಜ್ಜ-ಅಜ್ಜಿಯರು ಒಂದೊಂದು ಕವನವೋ ಕತೆಯೋ ಬರೆದು ಸಂತೃಪ್ತರಾಗಿರುವುದುಂಟು. ಇಡೀ ಸಂಕಲನವನ್ನೇ ಮೊಮ್ಮಗುವಿಗಾಗಿ ಮೀಸಲಿಟ್ಟದ್ದು ಕನ್ನಡದಲ್ಲಿ ಪ್ರಾಯಶಃ ಇದೇ ಮೊದಲು. ತುಳುವಿನಲ್ಲಿ ಕವಯಿತ್ರಿ ಶಾರದಾ ಶೆಟ್ಟಿಯವರು ಬಾಲಕೃಷ್ಣೆ ಜಾಲ್‌ಗ್ ಬತ್ತೆ (ಬಾಲಕೃಷ್ಣ ಅಂಗಳಕ್ಕೆ ಬಂದ) ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಶಿಶುವನ್ನು ದೇವರ ಸಮಾನವೆಂದು ಮತ್ತು ಕೃಷ್ಣನ ಪ್ರತಿರೂಪವೆಂದು ಭಾವಿಸುವುದು ನಮ್ಮ ನಾಡಿನ ಸಂಪ್ರದಾಯವೇ ಆಗಿದೆಯಲ್ಲವೇ? ಶಾರದಾ ಶೆಟ್ಟಿಯವರು (ಮಗಳ ಮಗು) ಮೊಮ್ಮಗುವಿನ ಪ್ರತೀ ಚಲನವಲನಗಳಲ್ಲಿ ಶ್ರೀಕೃಷ್ಣನನ್ನು ಕಂಡು ಭಾವಪರವಶರಾಗಿ ಕವಿತೆ ಕಟ್ಟಿದ್ದಾರೆ. ಅನುಪಮಾ ಅವರ ಮೊಮ್ಮಗು (ಮಗಳ ಮಗು) ‘ಸೂರ್ಯ’ನನ್ನು ಕಂಡಾಗಿನಿಂದ ಅವರಲ್ಲಿ ಉಂಟಾದ ನವಿರಾದ ಭಾವನೆಗಳನ್ನು ಪೋಣಿಸಿ ಒಂದೊಂದು ಗುಚ್ಛವಾಗಿ ಜೋಡಿಸಿದ ರೀತಿಯೇ ಅನನ್ಯ. ಕವಿಹೃದಯದ ಅಜ್ಜಿ ಅನುಪಮಾ ಸೂರ್ಯನ ಉಸಿರಲ್ಲಿ ಉಸಿರಾಗಿ ಬೆರೆತು ಜೋಗುಳ ಹಾಡಿ ರಮಿಸಿದ್ದಾರೆ. ಲೋಕದ ಎಲ್ಲಾ ತಾಯಂದಿರೂ ತಾಯ್ತನದ ಸುಖವನ್ನು ನೆನೆದು, ಶಿಶುವಿನ ಕಾಲ್ಗೆಜ್ಜೆಯ ದನಿಯನ್ನು ಕೇಳಿಸಿಕೊಂಡು ಸಂತೃಪ್ತರಾಗುವಂತೆ ಈ ಕವನಗಳು ಮಾಡುತ್ತವೆ. ಶಿಶುವಿನ ಬೆಳವಣಿಗೆಯ ಚಿತ್ರಗಳ ಸಂಪುಟವಂತೂ ಎಲ್ಲರ ಕಣ್ಮನಗಳನ್ನು ತುಂಬುವಂತೆ ಮಾಡುತ್ತದೆ.
ಈ ಕವನಗಳೊಳಗಿನ ಮಧುರ ಭಾವವು ಮನೆ-ಮನಗಳಲ್ಲಿ ಸಂತೋಷದ ಚಿಲುಮೆಯನ್ನೇ ಚಿಮ್ಮಿಸುವಂತಿದೆ. ಅನಾದಿ ಜ್ಯೋತಿಯಿಂದ ಹೊರಹೊಮ್ಮಿದ ಕಿರಣವೊಂದು ‘ಸೂರ್ಯ’ ಶಿಶುವಾಗಿ ಹುಟ್ಟಿದೆ. ಆ ಕಿರಣವು ಬಾಲ ಏಸು, ಅಕ್ಕ, ಬುದ್ಧರಂತೆ ಲೋಕದ ಕತ್ತಲೆಯನ್ನು ಓಡಿಸಿ, ವಿಮಲವಾದ ಬೆಳಕಿನ ಭರವಸೆಯನ್ನು ನೀಡುತ್ತದೆ. ಶಿಶುವಿನ ಬಗ್ಗೆ ಎಲ್ಲ ತಾಯಂದಿರ ಹಾರೈಕೆಯಾದರೂ ಏನು? ಶಿಶು ಕಂಡ ಕನಸುಗಳನ್ನು ಲೋಕ ನಂಬಬೇಕು. ಉಬ್ಬಿದೆದೆಯ ನಾಯಕರು ಉದ್ದುದ್ದ ಭಾಷಣಗಳನ್ನು ನಿಲ್ಲಿಸಬೇಕು. ಲಿಂಗ ಮೆಚ್ಚಿ ಅಹುದಹುದು ಎನ್ನುವಂತಹ ಸೊಲ್ಲುಗಳನ್ನು ಕೇಳಿಸಬೇಕು. ಲೋಕದ ಜನರು ಗೋಡೆ, ಬೇಲಿಗಳನ್ನು ಎಬ್ಬಿಸಿ ಇದೇ ನಮ್ಮ ಗುರುತು ಎಂದು ವಾದಿಸದೆ ಮುಕ್ತವಾಗಿ ಬೆಳೆಯುವ ಅವಕಾಶ ನೀಡಬೇಕು. ನೆಲಮುಗಿಲ ಸತ್ವ ಹೀರಿ ಹರಡಿಕೊಂಡ ಬೋಧಿ ಸತ್ವನಂತೆ ಬೆಳೆದು ಲೋಕದ ನಾಡಿಮಿಡಿತವನ್ನು ತನ್ನ ಪ್ರಾಣದುಸಿರು ಎಂದು ನಂಬುವಂತಾಗಬೇಕು. ಇಂತಹ ಹಾರೈಕೆ ಫಲಿಸಿದಾಗ ಅಮ್ಮನ ಕಾಲ ಬಳಿಯಲ್ಲಿ ಸ್ವರ್ಗವೇ ಬೀಳುತ್ತದೆ ಎಂಬ ಮಾತು ಸಾರ್ಥಕವಾಗುತ್ತದೆ.
ಹಾಲುಣಿಸುವಾಗ ಲೋಕದ ತಾಯಂದಿರನ್ನೆಲ್ಲ ಸ್ಮರಿಸುವ ಅಮ್ಮ ಸಮಗಾರ ಭೀಮವ್ವ, ಉಡುತಡಿಯ ಅಕ್ಕ ಮಹಾದೇವಿ, ಮೊಲೆ ಕತ್ತರಿಸಿಟ್ಟ ನಂಗೇಲಿಯವ್ವ, ಹರಿಗಾಗಿ ತವರನ್ನು ತೊರೆದ ಬೀಬಿ ನಚಿಯಾರಮ್ಮ, ಹಲವು ಮಕ್ಕಳ ತಾಯಿ ತೆರೇಸಮ್ಮ, ಕೃಷ್ಣ, ಕ್ರಿಸ್ತ, ಸೂಫಿ ಸಂತರಾದ ರೂಮಿ, ರಾಬಿಯಾ, ಬಸವ, ಕಬೀರ ಮುಂತಾದವರನ್ನೆಲ್ಲ ಕರೆದು ಸೂರ್ಯ ಶಿಶುವಿಗೆ ಜ್ಞಾನದ ಹಾಲನ್ನು ಕುಡಿಸಿರಿ ಎಂದು ಬೇಡಿಕೊಳ್ಳುತ್ತಾಳೆ. ದೃಷ್ಟಿ ಕವಿತೆಯಲ್ಲಿ ಮಗುವಿನ ದೃಷ್ಟಿ ತೆಗೆಯುವುದೇಕೆ ‘‘ಬೀಳಬೇಕು ಕೂಸಿನ ಮೇಲೆ ಕಾಳಿ ಬೋಳಿಯರ ದಿಟ್ಟಿ’’ ಬಲವಾಗಿ ಬೆಂಬಲದ ಬಾಳರಿವಾಗಿ ಅವರ ದೃಷ್ಟಿ ನೆಲೆ ನಿಲ್ಲಲಿ ಎಂಬ ಮಾತಿಗೆ ಹೃದಯವಂತರು ಶರಣು ಎನ್ನಲೇ ಬೇಕು ಅಲ್ಲವೇ. ಹೀಗೆ ಈ ಸಂಕಲನದ ಒಂದೊಂದು ಕವಿತೆಯೂ ಒಂದೊಂದು ಮಧುರ ಭಾವಗಳನ್ನು, ಜೊತೆಗೆ ವೈಚಾರಿಕ ಚಿಂತನೆಯ ಹೊಳಪನ್ನು, ಸುಗಂಧವನ್ನು ಸೂಸುವಂತಾಗಿದೆ. ಚಿನ್ನಕ್ಕೆ ಪರಿಮಳ ಬರುತ್ತದಲ್ಲಾ ಹಾಗೆ.
ಸೂರ್ಯ ಶಿಶು ಹುಟ್ಟಿದಾಗ ಕುಟುಂಬದ ಎಲ್ಲರೂ ತಮ್ಮ ಪಾತ್ರಗಳಲ್ಲಿ ಭಡ್ತಿ ಹೊಂದಿದ ರೀತಿಯನ್ನು ಮತ್ತು ಅವರೆಲ್ಲರನ್ನೂ ಹೊಸ ಅಂಟು ನಂಟಿದ ಬಂಧನಕ್ಕೊಳಪಡಿಸಿದ ಜಾದುಗಾರನ ಮೂಡಿ ಮೋಹಕವಾಗಿದೆ. ಒಡ್ಡೋಲಗ ಕವಿತೆಯು ಪ್ರಕೃತಿಯಲ್ಲಿ ಹೂ ಸೋಜಿಗಪಟ್ಟದ್ದು. ನೀಲಿ ಹಕ್ಕಿಯು ತನ್ನ ಹಾಡು ಶಿಶುವಿಗೆ ಕೇಳಿಸಬೇಕೆಂದು ಅವಸರಿಸಿದ್ದು, ಚಂದ್ರತಾರೆಯರೆಲ್ಲ ಹೊಸ ಕಿರಣಕ್ಕೆ ದಾರಿ ಮಾಡಿದ್ದು, ಕಾಗೆ, ಕಾಂಚಾಣಗಳೆಲ್ಲ ರೆಕ್ಕೆ ಬಡಿದು ಲೋಕವನ್ನು ಎಚ್ಚರಿಸಿದ್ದು, ಶಿಶುನಾಳದ ಧ್ವನಿಗಾಗಿ ಹೊಸ್ತಿಲಲ್ಲಿ ನಿಂತ ಋತು ಕಾದು ಕೂತದ್ದು, ಅಜ್ಜ ಅಜ್ಜಿಯರೆಲ್ಲ ಆಡಲು ಹಂಬಲಿಸಿದ್ದು ಹೀಗೆ ಲೋಕವೇ ಒಡ್ಡೋಲಗಕ್ಕೆ ಸಿದ್ಧವಾದ ಪರಿಯೇ ವಿಸ್ಮಯ ಹುಟ್ಟಿಸುತ್ತದೆ.
ಇನ್ನು ಬಾಣಂತನ ವೆಂದರೆ ಬದುಕಿಡೀ ಬರೆದರೂ ಮುಗಿಯದ ಜ್ಞಾಪಕ ಚಿತ್ರವೆಂದು ಹೇಳುವ ಕವಿತೆ ಅರಿಯದ ಮಕ್ಕಳಿಗೆ ಮಗು ಹುಟ್ಟಿದ ಸಂಭ್ರಮವನ್ನು ಮತ್ತು ಶಿಶುವಿನಿಂದ ತಾವು ಬೆಳೆದುದನ್ನು ವರ್ಣಿಸುತ್ತದೆ. ಮಕ್ಕಳು ಜೀವನದ ಅವ್ಯಕ್ತ ಕಲಾವಿದರು ಎಂಬ ಮಾತು ಸುಳ್ಳಲ್ಲ. ಅಮ್ಮಮ್ಮನಾಗುವುದೆಂದರೆ ಏಕಕಾಲಕ್ಕೆ ಅಮ್ಮನೂ ಮಗುವೂ, ಮೊಮ್ಮಗುವೂ ಆಗುವುದು ಎಂದು ಕವಿಹೃದಯ ಹೇಳುತ್ತದೆ. ಶಿಶುವಿನ ಬೆಳವಣಿಗೆಯ ಹಂತಗಳನ್ನು ಸೂಕ್ಷ್ಮವಾಗಿ ಗಮನಿಸಿ ಆ ಮಧುರವಾದ ಅನುಭವಗಳನ್ನು ಸೊಗಸಾಗಿ ಭಟ್ಟಿ ಇಳಿಸಿ ಕಟ್ಟಿಕೊಟ್ಟಿದೆ.
ಕೈ ರಥದ ಮೇಲೆ ಕುಳಿತ ಸೂರ್ಯ ಶಿಶುವಿನ ಸವಾರಿ ಹೊಸಿಲ ದಾಟಿ ಹೊರಟ ಸಂಭ್ರಮವನ್ನು ‘‘ಕಣ್ಣ ಹನಿಗಳ ತೈಲ ಉರಿದು ದೀಪ ಇಲ್ಲೂ ಅಲ್ಲೂ ಬೆಳಗಿತು’’ ಎಂದು ತನ್ನನ್ನು ತಾನೇ ಸಂತೈಸಿಕೊಳ್ಳುವ ಅಮ್ಮಮ್ಮ ಇಲ್ಲಿ ಎಲ್ಲ ಅಜ್ಜಿಯರ ಪ್ರತೀಕವಾಗಿದ್ದಾಳೆ. ಪುಟ್ಟ ಶಿಶುವಿನ ತೊದಲು ನುಡಿಗಳು ಕೊಳಲ ನಾದಕ್ಕಿಂತ, ವೀಣೆಯ ನುಡಿತಕ್ಕಿಂತ ಇಂಪು ಎನ್ನುತ್ತಾರೆ. ಮಗುವಿನೊಂದಿಗಿನ ಸಂವಾದ, ಅದರ ಚಲನವಲನಗಳ ವರ್ಣನೆಗಳು ಹಲವು ಕವನಗಳಲ್ಲಿ ಚಿತ್ರವತ್ತಾಗಿ ಮೂಡಿ ಬಂದಿದೆ. ಶಿಶುವಿನ ಆಪ್ತ ಬಳಗ ವಿಸ್ತರಿಸಿದೆ ಈಗ ಅದು ಕಲಿಸಿದ್ದನ್ನು, ಕಲಿಸದಿರುವುದನ್ನೂ ಕಲಿಯುತ್ತಿದೆ. ‘ಆಗುವುದು ಎಂದರೆ’ ಕವಿತೆಯು ಇಡೀ ಸಂಕಲನಕ್ಕೆ ತಿಲಕವಿಟ್ಟಂತಹ ಕವಿತೆಯಾಗಿ ಮೂಡಿ ಬಂದಿದೆ.
ಈ ಕವನ ಸಂಕಲನದ ಎಲ್ಲಾ ಕವನಗಳು ನಮ್ಮ ಬಾಲ್ಯಕಾಲವನ್ನು ನೆನಪಿಸುತ್ತಾ ಆ ಸಂತಸದಲ್ಲಿ ಮುಳುಗೇಳುವಂತೆ ಮಾಡುತ್ತವೆ. ಪುಸ್ತಕ ಓದುವ ವಲಯವನ್ನೇ ಮೆಚ್ಚಿಕೊಂಡಿರುವ ಲಡಾಯಿ ಪ್ರಕಾಶನದ ಬಸೂ ಅವರಿಗೆ ಮತ್ತು ಡಾ.ಎಚ್.ಎಸ್. ಅನುಪಮಾ ಅವರಿಗೆ ಅಭಿನಂದನೆಗಳು. ಓದುಗ ವಲಯವು ಅವರ ಮುಂದಿನ ಕೃತಿಗಾಗಿ ಕಾತರದಿಂದ ಕಾಯುತ್ತಿದೆ.
(ಲೇಖಕಿ: ನಿವೃತ್ತ ಶಿಕ್ಷಕರು, ಹಿರಿಯ ಬರಹಗಾರರು)
ಈ ಕೃತಿಯ ಮುಖಬೆಲೆ: 100 ರೂ.
ಪ್ರಕಾಶಕರು: ಲಡಾಯಿ ಪ್ರಕಾಶನ, #21, ಪ್ರಸಾದ್ ಹಾಸ್ಟೆಲ್, ಗದಗ-582101. ಫೋನ್: 9480286844






