Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ಇಮೆಯ್ಯಮ್ ಕಥೆಗಳು-ಒಂದು ಪಕ್ಷಿನೋಟ

ಇಮೆಯ್ಯಮ್ ಕಥೆಗಳು-ಒಂದು ಪಕ್ಷಿನೋಟ

ಬಿ.ಎಂ. ರೋಹಿಣಿಬಿ.ಎಂ. ರೋಹಿಣಿ21 Jun 2026 11:49 AM IST
share
ಇಮೆಯ್ಯಮ್ ಕಥೆಗಳು-ಒಂದು ಪಕ್ಷಿನೋಟ

ಇಮೆಯ್ಯಮ್ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿರುವ ವಿ. ಅಣ್ಣಾಮಲೈ ಅವರು ತಮಿಳು ಭಾಷೆಯಲ್ಲಿ ಬರೆಯುತ್ತಿರುವ ಭಾರತದ ಶ್ರೇಷ್ಠ ಲೇಖಕರಲ್ಲಿ ಒಬ್ಬರು. ಈಗಾಗಲೇ ಇವರ ಹತ್ತು ಕಾದಂಬರಿಗಳು, ಒಂಭತ್ತು ಕಥಾಸಂಕಲನಗಳು ಪ್ರಕಟಗೊಂಡಿವೆ. ‘ಸೆಲ್ಲಾದ ಪಣಂ’ ಎಂಬ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ಲಭಿಸಿದೆ. ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಟ್ರಸ್ಟ್ ಪ್ರತೀ ವರ್ಷ ಭಾರತದ ಬೇರೆ ಭಾಷೆಗಳ ಶ್ರೇಷ್ಠ ಲೇಖಕರಿಗೆ ನೀಡುವ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಲು ಬಂದ ಇವರೊಂದಿಗೆ ನೂರಾರು ಜನಸಾಮಾನ್ಯರು ದೂರದ ತಮಿಳುನಾಡಿನಿಂದ ಕರ್ನಾಟಕದ ಕುಪ್ಪಳಿಗೆ ಎರಡು ಬಸ್ ಮಾಡಿಕೊಂಡು ಬಂದದ್ದು ವಿಶೇಷ. ಸಾಹಿತ್ಯದ ಮೂಲಕ ‘ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ’ ಎಂಬ ಮಾತಿಗೆ ಇವರು ಈ ಮೂಲಕ ಸಾಕ್ಷಿಯಾಗಿದ್ದಾರೆ. ಅಂದು ಅವರೊಂದಿಗೆ ನಡೆದ ಸಂವಾದವು ಜನರ ನಡುವಿನ ಈ ಲೇಖಕನಿಗೆ ಭಾಷೆಯೊಂದು ಅಡ್ಡಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿತು. ಅವರ ‘ಪೆತ್ತವನ್’ ಎಂಬ ನೀಳ್ಗತೆಯು ‘ಭಾಗ್ಯಳ ತಂದೆ’ ಎಂಬ ಶೀರ್ಷಿಕೆಯಲ್ಲಿ ಅಹರ್ನಿಶಿ ಪ್ರಕಾಶನದಿಂದ ಪ್ರಶಸ್ತಿ ಪುರಸ್ಕಾರದಂದೇ ಪ್ರಕಟಗೊಂಡು ಎಲ್ಲರ ಮೆಚ್ಚುಗೆಯನ್ನು ಪಡೆದಿತ್ತು. ಇಮೆಯ್ಯಮ್ ಅವರ ಒಂಭತ್ತು ಕಥೆಗಳುಳ್ಳ ಸಂಕಲನ ಈಗ ನಮ್ಮ ಮುಂದಿದೆ. ಕನಕರಾಜ್ ಆರನಕಟ್ಟೆ ಮತ್ತು ಅಶೋಕ್ ಕುಮಾರ್ ಎಂ. ಇವರು ಈ ಸಂಕಲನವನ್ನು ಅನುವಾದಿಸಿ ಕೊಟ್ಟಿದ್ದಾರೆ. ತಮಿಳುನಾಡಿನ ಸಾಮಾಜಿಕ, ರಾಜಕೀಯ ಬದುಕನ್ನು ಈ ಕಥೆಗಳಲ್ಲಿ ಇಮೆಯ್ಯಮ್ ಅವರು ಚಿತ್ರಿಸಿದ್ದಾರೆ. ಈ ಚಿತ್ರಣವು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಲ್ಲ. ಇಡೀ ಭಾರತಕ್ಕೆ ಸಂಬಂಧಿಸಿದ ಜನರ ನೋವಿಗೆ, ತುಡಿತಗಳಿಗೆ ಸ್ಪಂದಿಸಿದ ಕಥೆಗಳಾಗಿವೆ. ಮಾನವ ಕುಲದ ಏಳಿಗೆಯನ್ನು ಬಯಸುವ ಹೊಣೆಯುಳ್ಳ ಲೇಖಕರು, ಸತ್ಯಕ್ಕೆ ಸಾಕ್ಷಿಯಾಗಿ, ಜೀವಂತಿಕೆಯಿಂದ ಪುಟಿಯುವ ಜನರ ಹೃದಯದ ಮಾತುಗಳಿಗೆ ಧ್ವನಿಯನ್ನು ನೀಡಿದ್ದಾರೆ. ಹಳ್ಳಿ ಪರಿಸರದ ಮುಗ್ಧ ಪಾತ್ರಗಳು ತಮ್ಮ ದೌರ್ಬಲ್ಯಗಳ ಸಮೇತ ಓದುಗರೊಂದಿಗೆ ಮುಖಾಮುಖಿಯಾಗುವ ರೀತಿಯೇ ಅನನ್ಯ. ಕಥಾ ಪಾತ್ರಗಳ ಚಿತ್ರಣ, ವಸ್ತುವಿನ ಆಯ್ಕೆ, ಅವುಗಳಿಗೆ ಸಲ್ಲಿಸಿದ ನ್ಯಾಯ ನಮ್ಮನ್ನು ರಸಾನುಭೂತಿಯಲ್ಲಿ ಮುಳುಗಿಸುತ್ತವೆ. ಸಾಹಿತ್ಯದಿಂದ ಪರಿವರ್ತನೆ ಆಗುತ್ತದೋ ಬಿಡುತ್ತದೋ ಅದು ಮುಖ್ಯವಲ್ಲ. ಆದರೆ ಸಾಹಿತ್ಯದಿಂದ ನಮ್ಮ ಭಾವನೆಗಳು ಉದ್ದೀಪನಗೊಂಡು ನಮ್ಮನ್ನು ಆನಂದ ತುಂದಿಲರನ್ನಾಗಿ ಮಾಡುತ್ತದಲ್ಲ ಅದು ಕಥಾ ಸಾಹಿತ್ಯದ ಅದ್ಭುತ ಶಕ್ತಿ. ಇಂತಹ ಶಕ್ತಿಯುಳ್ಳ ಹಲವು ಕಥೆಗಳಲ್ಲಿ ಒಂಭತ್ತು ಕಥೆಗಳು ಹೇಗೆ ಪ್ರಸ್ತುತಿಗೊಂಡಿವೆ ಎಂದು ನೋಡೋಣ.

ಪೊಲೀಸ್ ಹುದ್ದೆಯಲ್ಲಿದ್ದವನೊಬ್ಬ ತನಗಿಂತ ಕೀಳು ಜಾತಿಯವನ ಹೆಣವನ್ನು ಹೊರಬೇಕಾದ ಪ್ರಸಂಗ ಬಂತು. ಅದು ಚಿತ್ರ ಸಹಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಸಮಾಜದಲ್ಲಿ ತನ್ನ ಮಾನ ಮರ್ಯಾದೆ ನಾಶವಾಯಿತೆಂದು ಅವನು ಹಲುಬುವುದು ಮಾತ್ರವಲ್ಲ, ಕೆಲಸಕ್ಕೆ ರಾಜೀನಾಮೆ ನೀಡಿ ಮಾನ ರಕ್ಷಣೆ ಮಾಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳ ಮುಂದೆ ಅಲವತ್ತು ಕೊಳ್ಳುವ ದೃಶ್ಯಗಳು ಸಮಾಜದಲ್ಲಿ ಜಾತೀಯತೆಯ ಕರಾಳ ರೂಪದ ಒಂದು ಮುಖವನ್ನು ನಮ್ಮ ಕಣ್ಣ ಮುಂದೆ ತೆರೆದಿಡುತ್ತದೆ. ಪೊಲೀಸ್ ಕೆಲಸದಲ್ಲಿ ಜಾತೀಯತೆಯನ್ನು ಪಾಲಿಸಿದರೆ ಎದುರಿಸಬೇಕಾದ ಅಪಾಯಗಳನ್ನು ಅಧಿಕಾರಿಯು ಎಳೆಎಳೆಯಾಗಿ ಬಿಡಿಸಿ ಹೇಳಿದರೂ ಅರ್ಥಮಾಡಿಕೊಳ್ಳದ ಹೆಣ ಹೊತ್ತ ಪೊಲೀಸ್ ತಾನು ಹಳ್ಳಿಯಲ್ಲಿ ದನ ಕಾಯುತ್ತೇನೆ ಎಂಬ ಮೂರ್ಖತನದ ಉತ್ತರ ನೀಡುತ್ತಾನೆ. ಇದು ಹಳ್ಳಿಯ ಜನರ ಮುಗ್ಧತೆಯೋ, ಮೂರ್ಖತನವೋ ಎಂದು ನಮಗೆ ನಾವೇ ಪ್ರಶ್ನಿಸುವಂತೆ ಮಾಡುತ್ತದೆ ಈ ಪೊಲೀಸ್ ಕತೆ. ‘ಆಲಡಿ ಬಸ್’ ಎಂಬ ಕಥೆಯಲ್ಲಿ ಹೆಣ್ಣು ಮಕ್ಕಳು ಬಸ್ ಪ್ರಯಾಣದಲ್ಲಿ ಎದುರಿಸುವ ಸಂಕಷ್ಟ, ಹಿಂಸೆಗಳ ವಾಸ್ತವ ಚಿತ್ರಣವನ್ನು ವ್ಯಂಗ್ಯ ವಿಡಂಬನೆ ಮತ್ತು ವಿನೋದದ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಬಸ್ಸಿನಲ್ಲಿ ಕುಳಿತುಕೊಳ್ಳುವ ಸೀಟಿಗಾಗಿ ಜಗಳ ಕಾದ ಹೆಣ್ಣು ಮಗಳನ್ನು ಪ್ರಯಾಣದ ಕೊನೆಯಲ್ಲಿ ಕುಡುಕನ ಲೈಂಗಿಕ ಹಿಂಸೆಗೆ ಸಿಡಿದೆದ್ದು ಬುದ್ಧಿ ಕಲಿಸಿದ್ದು ಯಾರೊಂದಿಗೆ ಜಗಳ ಕಾದಿದ್ದಳೋ ಆ ಜಗಳಗಂಟಿ ಹೆಣ್ಣು ಮಗಳೇ ಎನ್ನುವುದು ಈ ಕತೆಯ ಶಕ್ತಿ. ಸಿಟ್ಟು, ಸೆಡವುಗಳೇನಿದ್ದರೂ ಆ ಸಮಯಕ್ಕೆ ಮಾತ್ರ. ಅನ್ಯಾಯವನ್ನು ಹೇಗೆ ಎದುರಿಸಬೇಕು ಎಂದು ಈ ಕತೆ ತಮ್ಮ ಸಹಜವಾದ ಹಳ್ಳಿ ಭಾಷೆಯಲ್ಲಿ ಬೈಗುಳಗಳ ಸಮೇತ ಚಿತ್ರಿಸಿದ ರೀತಿ ನಮ್ಮ ಅಂತರಂಗಕ್ಕೆ ತಟ್ಟುತ್ತದೆ.

‘ನನ್ ಮಾರನ್ ಕೊಟ್ಟೈ’ ಈ ಕತೆಯು ಜಾತೀಯತೆಯ ಇನ್ನೊಂದು ಕರಾಳ ಮುಖವನ್ನು ಮುಂದಿಡುತ್ತದೆ. ಎತ್ತುಗಳ ಸ್ಪರ್ಧೆಯಲ್ಲಿ ಕೆಳಜಾತಿಯವನ ಎತ್ತು ಗೆದ್ದಿತೆಂಬ ಒಂದೇ ಕಾರಣಕ್ಕೆ ಸಿಟ್ಟಿನಿಂದ ಅವನನ್ನು ಮತ್ತು ಎತ್ತನ್ನು ಕೊಲ್ಲುವ ಕ್ರೌರ್ಯ ತೋರಿದ ಸಮಾಜದ ರಕ್ಷಣೆಗಾಗಿಯೇ ನ್ಯಾಯ ವ್ಯವಸ್ಥೆ ಕೆಲಸ ಮಾಡುತ್ತದೆ ಎಂಬುದನ್ನು ಅರಿತ ಅವನ ಪತ್ನಿ ಸೆಲ್ವಮಣಿ ಮಕ್ಕಳ ಸಮೇತ ಊರು ಬಿಟ್ಟು ಹೋಗುವ ನಿರ್ಧಾರ ಮಾಡುತ್ತಾ ಶಾಲೆಯಲ್ಲಿ ಮಕ್ಕಳ ಬಿಡುಗಡೆ ಪತ್ರಕ್ಕಾಗಿ ಗೋಗರೆಯುವ ದೃಶ್ಯವೂ ಕರುಣಾಜನಕವಾಗಿ ಚಿತ್ರಿಸಲ್ಪಟ್ಟಿದೆ. ‘ನಮ್ಮವನು’ ಕಥೆಯು ರಾಜಕಾರಣದ ಭ್ರಷ್ಟಾಚಾರ, ಜಾತೀಯತೆ, ಪರಸ್ಪರ ಕಾಲೆಳೆಯುವ ತಂತ್ರಗಳನ್ನು ಆಧುನಿಕ ರಾಜಕೀಯದ ವಾಸ್ತವ ಚಿತ್ರಣವನ್ನು ನಮ್ಮ ಮುಂದಿಡುತ್ತದೆ.

‘ಋಣಬಾರ’ ಈ ಸಂಕಲನದ ವಿಶಿಷ್ಟ ಕಥೆ. ಹೊರಚಾಳಿ ಇರುವ ಗಂಡನ ಪ್ರತಿದಿನದ ಹಿಂಸೆಗೆ ರೋಸಿ ಹೋಗಿ ಪೊಲೀಸ್ ಠಾಣೆಯಲ್ಲಿ ಸೀನಿಯಮ್ಮ ದೂರು ಕೊಡುತ್ತಾಳೆ. ಅದೇ ದೊಡ್ಡ ಅಪರಾಧ. ಅಧಿಕಾರಿಯ ಮುಂದೆ ವಾದ ವಿವಾದಗಳು ನಡೆದು ಮಗುವನ್ನು ನೀಡಿದರೆ ತಾನು ವಿಚ್ಛೇದನ ನೀಡುತ್ತೇನೆಂದ ಗಂಡನ ಮಾತಿಗೆ ಕೆರಳಿ ಸೀನಿಯಮ್ಮ ಈ ಮಗು ನಿನ್ನದಲ್ಲವೆಂದು ಹೇಳಿ ಎಲ್ಲರನ್ನು ತಬ್ಬಿಬ್ಬಾಗುವಂತೆ ಮಾಡುತ್ತಾಳೆ. ದೌರ್ಜನ್ಯಕ್ಕೆ ಸೀನಿಯಮ್ಮ ತೋರಿದ ಪ್ರತಿಭಟನೆ ಅವಳ ಗಂಡನನ್ನು ಷಂಡನೆಂದು ತಿರಸ್ಕರಿಸುವಂತಾಗುತ್ತದೆ. ‘ಆಗಸದ ಸಂದೇಶ’ ಕಥೆಯಲ್ಲಿ ಕಳ್ಳತನದ ದಂಧೆಯಲ್ಲಿ ನಿರತನಾದ ಮುನಿರಾಜನು ದೇವರ ಸಂದೇಶಕ್ಕಾಗಿ ಕಾಯುವ ಕಾತರ, ಅಂತರಂಗದ ಅಳಲು, ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳ ಚಿತ್ರಣಗಳೊಂದಿಗೆ ದೇವರೊಂದಿಗೆ ಅವನ ಸಂವಾದವು ನಮಗೆ ಕಚಗುಳಿ ಇಡುತ್ತದೆ. ದೇವರಿಗೆ ಲಂಚ ನೀಡುತ್ತಾ ಕಳ್ಳತನ ಮಾಡುವ ಅವನ ಪಾತ್ರವು ಓದುಗನ ಸಹಾನುಭೂತಿಯನ್ನು ಗಳಿಸುತ್ತದೆ.

‘ದೂರುಪತ್ರ’ ಕತೆಯು ಹಳ್ಳಿಯ ಜನರ ಮೂಢ ನಂಬಿಕೆಗಳು ಮತ್ತು ಅದನ್ನು ನಗದೀಕರಿಸಲು ಸಮಾಜ ರೂಪಿಸಿದ ತಂತ್ರಗಳ ನೈಜ ಚಿತ್ರಣವಿದೆ. ಮನೆಯಲ್ಲಿ ಕಳವಾದ ಚಿನ್ನವನ್ನು ಪಡೆಯಲು ತಂಗಮಣಿ ಕೊಳಂಜಿಯಪ್ಪರ್ ದೇವಾಲಯದಲ್ಲಿ ದೂರು ಪತ್ರ ಬರೆಸಲು ಬರುತ್ತಾಳೆ. ಇಲ್ಲಿ ಅನಕ್ಷರಸ್ಥಳಾದ ಆಕೆಯನ್ನು ವಂಚಿಸುವ, ಹೆದರಿಸುವ ವ್ಯವಸ್ಥೆಯ ಅನ್ಯಾಯಗಳನ್ನು, ಪೂಜಾರಿಗಳ ತಂತ್ರವನ್ನು ವಿವರವಾಗಿ ಚಿತ್ರಿಸಲ್ಪಟ್ಟಿದೆ.

‘ಪಕ್ಷದ ಕಾರ್ಯಕರ್ತ’ ಇದು ರಾಜಕೀಯದ ವಸ್ತುವುಳ್ಳ ಕತೆ. ಓರ್ವ ಪ್ರಾಮಾಣಿಕ ಕಾರ್ಯಕರ್ತನಾದ ಪೊನ್ನು ಸ್ವಾಮಿ ಪಂಚಾಯತ್ ಎಲೆಕ್ಷನ್‌ಗೆ ನಿಲ್ಲಲು ಪ್ರಯತ್ನಿಸಿ ಹತಾಶನಾಗುವ ರೀತಿಯನ್ನು ಮನಮುಟ್ಟುವಂತೆ ವಿವರಿಸಲಾಗಿದೆ. ರಾಜಕೀಯದಲ್ಲಿ ಉಳಿಯಲು, ಮೇಲೇರಲು ಕಾರ್ಯಕರ್ತನಲ್ಲಿರಬೇಕಾದ ಯೋಗ್ಯತೆಗಳೇನು ಎಂಬುದನ್ನು ತೆರೆದಿಡುತ್ತದೆ. ಅಯೋಗ್ಯನ ಕೊನೆಯ ತಾಣವೇ ರಾಜಕೀಯವೆಂಬ ಮಾತು ಸಾಬೀತು ಗೊಳಿಸಿದ ಕತೆಯಿದು. ‘ಪಣಿಯಾರಕಾರಮ್ಮ’ ಕಥೆಯು ಕಣ್ಣನ್ ಚೆಟ್ಟಿಯಾರ್ ಮತ್ತು ಪಣಿಯಾರಕಾರಮ್ಮ ಇವರೊಳಗಿನ ದೈವಿಕ ಪ್ರೇಮದ ಕಥನ. ಕಾಶಿಗೆ ಹೋಗುವ ಹಿಂದಿನ ದಿನ ಚೆಟ್ಟಿಯಾರ್ ಅವರು ಪಣಿಯಾರಕಾರಮ್ಮನ ಬಳಿ ಬಂದು ‘‘ನಾನು ಒಂದು ದಿನ ನಿನ್ನ ಜೊತೆ ಇರಬೇಕು’’ ಎಂದು ಸಣ್ಣ ಧ್ವನಿಯಲ್ಲಿ ಹೇಳಿದಾಗ ಅವಳ ಹೃದಯದಲ್ಲಿ ಉಂಟಾದ ಭಾವತರಂಗ, ಅವಳ ಸಂಭ್ರಮ, ಸಡಗರದ ಚಿತ್ರಣವೇ ಸೊಗಸಾಗಿದೆ. ನೋಟ ಮತ್ತು ಮಾತಿಗೆ ಸೀಮಿತವಾಗಿದ್ದ ಅವರಿಬ್ಬರೊಳಗಿನ ದೀರ್ಘಕಾಲದ ಪ್ರೇಮವು ಅವರ ಇಳಿವಯಸ್ಸಿನಲ್ಲಿ ಹೀಗೆ ಪ್ರಕಟಗೊಂಡಾಗ ಅವಳ ಭಾವನಾತ್ಮಕವಾದ ಮಾತುಗಳು ಹೃದಯಕ್ಕೆ ತಂಪೆರೆಯುತ್ತವೆ. ಪ್ರೇಮ ಸಂಚಾರವಿಲ್ಲದ ಹೃದಯವು ಸ್ಮಶಾನಕ್ಕೆ ಸಮ. ಬೇಡಿ ಪಡೆದ ಪ್ರೇಮ ಒಳ್ಳೆಯದು. ಬೇಡದೆಯೇ ಕೊಟ್ಟದ್ದು ಇನ್ನೂ ಒಳ್ಳೆಯದು ಎಂಬ ಮಾತಿನಂತೆ ಪಣಿಯಾರಕಾರಮ್ಮನ ಬಳಿಗೆ ಚೆಟ್ಟಿಯಾರ್ ಬಂದಿದ್ದಾರೆ. ಅವಳೊಡನೆ ಮಾತನಾಡುತ್ತಾ ಒಂದು ಲೋಟ ನೀರು ಕೇಳಿ ಪಡೆದು ಹಿಂದಿರುಗುವ ಚೆಟ್ಟಿಯಾರ್‌ರನ್ನು ಕಂಡು ಪಣಿಯಾರಕಾರಮ್ಮನಿಗೆ ಎಲ್ಲವನ್ನೂ ಕಳಕೊಂಡ ಅನುಭವವಾಗುತ್ತದೆ. ಈ ಪ್ರೇಮಿಗಳು ಪರಸ್ಪರ ಮಾತನಾಡುವುದೇ ನಮ್ಮ ಹೃದಯಕ್ಕೆ ಆಪ್ತವಾಗುತ್ತದೆ. ಇಂತಹದೊಂದು ಪ್ರೇಮಕಥನವೂ ಈ ಸಂಕಲನದಲ್ಲಿದೆ. ಮನುಷ್ಯನ ಆಸೆ-ದುರಾಸೆ, ಸುಖ- ಕಷ್ಟ, ತವಕ-ತಲ್ಲಣ, ಮದ-ಮತ್ಸರ ಹೀಗೆ ಎಲ್ಲಾ ತುಡಿತ ಮಿಡಿತಗಳನ್ನು ಕೇಳಿಸಿಕೊಂಡ ಲೇಖಕ ಅವುಗಳಿಗೆ ಧ್ವನಿಯಾಗಿ ಪ್ರಕಟಿಸಿದ್ದಾನೆ. ಈ ಕಥೆಗಳ ಗ್ರಾಮ್ಯ ಭಾಷೆಯ ಸಂಭಾಷಣಾ ಶೈಲಿಯೇ ನಮ್ಮನ್ನು ಆಕರ್ಷಿಸುತ್ತದೆ. ಇವರ ‘ಪೆತ್ತವನ್’ ಕತೆಯು ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಯ ಕುರಿತಾದ ವಸ್ತುವನ್ನೊಳಗೊಂಡಿದೆ. ‘ಇಮೆಯ್ಯಮ್ ಕಥೆಗಳು’ ಎಂಬ ಈ ಸಂಕಲನದಲ್ಲಿರುವ ಎಲ್ಲಾ ಕತೆಗಳ ಪಾತ್ರಗಳು ನಮ್ಮ ಮನಸ್ಸನ್ನು ಅರಳಿಸುತ್ತದೆ. ಹೃದಯವನ್ನು ತಟ್ಟುತ್ತದೆ. ಲೇಖಕರು, ಅನುವಾದಕರು ಮತ್ತು ಪ್ರಕಟಿಸಿದ ಅಹರ್ನಿಶಿ ಪ್ರಕಾಶನದವರೆಲ್ಲರೂ ಓದುಗರ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಕೃತಿಯ ಬೆಲೆ: 185 ರೂ.

ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ-577203. ಮೊ:9449174662, 8861100584

Tags

ImeyyamBird's Eye Viewstories
share
ಬಿ.ಎಂ. ರೋಹಿಣಿ
ಬಿ.ಎಂ. ರೋಹಿಣಿ
Next Story
X