‘ಉನ್ನತ ಶಿಕ್ಷಣದ ಒಳಗೂ ಹೊರಗೂ’ ಒಂದು ಅವಲೋಕನ

ನಮ್ಮ ದೇಶದ ಶಿಕ್ಷಣರಂಗವನ್ನು ಪೂರ್ಣವಾಗಿ ಕಾರ್ಪೊರೇಟೀಕರಣದ ಪ್ರಕ್ರಿಯೆಗಳಿಗೆ ಒಳಪಡಿಸುತ್ತಾ ಬರಲು ತೊಡಗಿ ಮೂರು ದಶಕಗಳಿಗೂ ಹೆಚ್ಚಿನ ಕಾಲವಾಗಿದೆ. ಅಂದರೆ ಜಾಗತೀಕರಣದ ಒಪ್ಪಂದಗಳಿಗೆ ಸಹಿಹಾಕುತ್ತಾ ಬರಲು ತೊಡಗಿದ ನಂತರದ ಕಾಲವಿದು. ದೇಶದ ಇತರ ಎಲ್ಲಾ ರಂಗಗಳಂತೆ ಶಿಕ್ಷಣರಂಗವನ್ನೂ ಕೂಡ ಜಾಗತಿಕ ಕಾರ್ಪೊರೇಟುಗಳಿಗೆ ಉದ್ಯಮವಾಗಿಸಿ ಪೂರ್ಣವಾಗಿ ತೆರೆದಿಡಲು ತೊಡಗಿದಂದಿನಿಂದ ದೇಶದ ಮೂಲಭೂತ ವರ್ಗದ ಜನರಿಗೆ ಶಿಕ್ಷಣ ಮರೀಚಿಕೆಯಾಗುತ್ತಾ ಬಂದಿತು. ಉನ್ನತ ಶಿಕ್ಷಣ ಹೆಚ್ಚೂ ಕಡಿಮೆ ಭಾರೀ ಕಾರ್ಪೋರೇಟುಗಳ ಉದ್ಯಮವಾಗಿ ಮಾರ್ಪಡಿಸಿ ಇಟ್ಟಾಗಿದೆ. ಈಗ ಎಲ್ಕೆಜಿ ಹಂತದಿಂದಲೂ ಆ ಕಾರ್ಯ ಬಿರುಸುಗೊಂಡಿದೆ.
ಶಿಕ್ಷಣ ಕಾರ್ಪೊರೇಟೀಕರಣವಾಗುವಾಗ ಸಹಜವಾಗಿ ಅದು ಹಣ ನೀಡುವವರಿಗೆ ಮಾತ್ರ ಎಂದಾಗುತ್ತದೆ. ಹಾಗಾದಾಗ ತಳಪಾಯದ ಜನಸಮುದಾಯಗಳು ಶಿಕ್ಷಣದ ಹತ್ತಿರಕ್ಕೂ ಸುಳಿಯುವ ಅವಕಾಶ ಇರುವುದಿಲ್ಲ. ಇದು ನೇರವಾಗಿ ಮನುವಾದಿ ನೀತಿಗೆ ಪೂರಕವಾಗಿ ಪ್ರವರ್ತಿಸುತ್ತದೆ. ಬಡ, ಮಧ್ಯಮ ವರ್ಗದ ಮಕ್ಕಳಿಗೂ ಶಿಕ್ಷಣ ಬಹಳ ದುಬಾರಿಯಾಗಿ ಕಾಡುತ್ತಿವೆ. ಮೇಲ್ಮಧ್ಯಮ ವರ್ಗ ಕೂಡ ಶಿಕ್ಷಣದ ಕಾರ್ಪೊರೇಟೀಕರಣದಿಂದಾಗಿ ಏದುಸಿರು ಬಿಡುವಂತಹ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಎಲ್ಕೆಜಿಯಲ್ಲಿ ಅವಕಾಶ ಸಿಗಲು ಲಕ್ಷಗಟ್ಟಲೆ ಹಣವನ್ನು ಕೊಟ್ಟು ಮುಂಗಡವಾಗಿ ಕಾದಿರಿಸಬೇಕಾದ ಪರಿಸ್ಥಿತಿಯನ್ನು ತಂದಿಡಲಾಗಿದೆ. ಈಗ ನಮ್ಮ ದೇಶದ ಪರಿಸ್ಥಿತಿ ಇದಾಗಿದೆ. ದಶಕದ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಶಿಕ್ಷಣದ ಹಕ್ಕು ಎಂಬ ಕಾಯ್ದೆಯನ್ನು ತಂದಿದ್ದು ಇವರ ಇಂತಹ ಕಾರ್ಯಗಳನ್ನು ಮರೆಮಾಚಲು ಮಾಡಿರುವ ಸಾರ್ವಜನಿಕ ನಿಭಾವಣೆಯ ಒಂದು ಕಸರತ್ತು ಆಗಿತ್ತು ಎನ್ನುವುದು ಈಗ ಸ್ಪಷ್ಟವಾಗಿದೆ. ಯಾಕೆಂದರೆ ಆಗಲೇ ಶಿಕ್ಷಣದ ಕಾರ್ಪೊರೇಟೀಕರಣವು ಜಾರಿಯಾಗುತ್ತಿತ್ತು.
ಕಾರ್ಪೊರೇಟೀಕೃತವಾಗುತ್ತಿರುವ ಶಿಕ್ಷಣವು ಮಕ್ಕಳಿಗೆ ಅಗತ್ಯವಾದ ಜ್ಞಾನ ಶಿಸ್ತುಗಳನ್ನು ಕಲಿಯುವ, ಕ್ರಿಯಾಶೀಲತೆ, ಸೃಜನಶೀಲತೆ, ಪ್ರಶ್ನೋತ್ತರಗಳು, ಪ್ರಜಾತಾಂತ್ರಿಕತೆ, ಚರ್ಚೆ, ಸಂವಾದ ಮೊದಲಾದ ಕಲಿಕಾ ಅವಕಾಶಗಳು ಮಾತ್ರವಲ್ಲದೆ; ಬೌದ್ಧಿಕತೆಯು ಅರಳಿ ಬೆಳೆಯುವ ಅವಕಾಶಗಳನ್ನು ಕಿತ್ತುಕೊಳ್ಳುತ್ತಾ ಸಾಗುತ್ತದೆ. ಕಾರ್ಪೊರೇಟ್ ಸಂಸ್ಥೆಗಳ ಅಗತ್ಯಗಳನ್ನು ಪೂರೈಸುವುದಕ್ಕಷ್ಟೇ ಶಿಕ್ಷಣವನ್ನು ಏಕಮುಖವಾಗಿ ತಾಂತ್ರೀಕರಣ ಮಾಡುವ ಇಲ್ಲವೇ ಸೀಮಿತಗೊಳಿಸುತ್ತಾ ಹೋಗುತ್ತದೆ. ಇದರಿಂದಾಗಿ ಸಾಮಾಜಿಕ ಪರಿಣಾಮ ಮುಂದಿನ ದಿನಗಳಲ್ಲಿ ಭೀಕರವಾಗಲಿದೆ. ಜೊತೆಗೆ ಶಿಕ್ಷಣದ ಡಿಜಿಟಲೀಕರಣ ಮಾಡುತ್ತಾ ಕೃತಕ ಬುದ್ಧಿಮತ್ತೆಯ ಬಳಕೆಗಳನ್ನು ಹೆಚ್ಚಿಸುತ್ತಾ ಹೋಗಲಾಗುತ್ತಿದೆ. ಇದು ನಮ್ಮಂತಹ ದೇಶಗಳ ಮಾನವ ಸಂಪನ್ಮೂಲದ ಅಭಿವೃದ್ಧಿಯ ಬದಲಿಗೆ ವಿನಾಶಕ್ಕೆ ಅಂದರೆ ಬೌದ್ಧಿಕ ವಿನಾಶಕ್ಕೆ ಕಾರಣವಾಗಲಿದೆ.
ಇಂತಹ ಶಿಕ್ಷಣ ರಂಗದ ಗಂಭೀರ ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಚರ್ಚಿಸುವ ನಿಟ್ಟಿನಲ್ಲಿ ಬಿ. ಶ್ರೀಪಾದ ಭಟ್ ‘ಉನ್ನತ ಶಿಕ್ಷಣದ ಒಳಗೂ ಹೊರಗೂ -ನವ ಉದಾರೀಕರಣದ ಭಾರತ’ ಎಂಬ ಕೃತಿಯನ್ನು ರಚಿಸಿದ್ದಾರೆ. ಶ್ರೀಪಾದ ಭಟ್ ಸಾಮಾಜಿಕ ಕಾರ್ಯಕರ್ತರಾಗಿ ಹಾಗೂ ಶಿಕ್ಷಣ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಶಿಕ್ಷಣದ ಕುರಿತಂತೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಹಲವಾರು ವೀಡಿಯೊ ಸಂವಾದಗಳನ್ನು ನಡೆಸಿದ್ದಾರೆ. ಸಾರ್ವಜನಿಕ ಸಂವಾದ, ಚರ್ಚೆಗಳನ್ನು ನಡೆಸಿದ್ದಾರೆ. ಶಿಕ್ಷಣದ ಬಗೆಗಿನ ‘ವಿಷವಟ್ಟಿ ಸುಡುವಲ್ಲಿ’ ಮತ್ತು ‘ಉನ್ನತ ಶಿಕ್ಷಣದ ಒಳಗೂ ಹೊರಗೂ’ ಎಂಬ ಎರಡು ಪ್ರಮುಖ ಕೃತಿಗಳನ್ನು ರಚಿಸಿ ಹೊರತಂದಿದ್ದಾರೆ.
ಮೊದಲನೆಯದರಲ್ಲಿ ಶಿಕ್ಷಣದ ಬ್ರಾಹ್ಮಣಶಾಹಿ ಕೋಮುವಾದೀಕರಣದ ಬಗ್ಗೆ ಚರ್ಚಿಸಿದ್ದರೆ ಎರಡನೆಯದರಲ್ಲಿ ಉನ್ನತ ಶಿಕ್ಷಣವನ್ನು ಸಮಾಜದ ತಳಪಾಯದ ಜನರು ಹಾಗೂ ಇನ್ನಿತರ ಬಡಜನರಿಂದ ಕಸಿಯುತ್ತಿರುವುದನ್ನು ಚರ್ಚಿಸಿದ್ದಾರೆ.
ಉನ್ನತ ಶಿಕ್ಷಣದ ಒಳಗೂ ಹೊರಗೂ- ನವ ಉದಾರೀಕರಣದ ಭಾರತ ಕೃತಿಯನ್ನು ದಸಂಸ (ಅಂಬೇಡ್ಕರ್ ವಾದ) ಪ್ರಕಟಿಸಿದೆ. ಇದಕ್ಕೆ ಡಾ. ರವಿಕುಮಾರ್ ಬಾಗಿ ಮುನ್ನುಡಿ ಬರೆದಿದ್ದಾರೆ.
ಈ ಕೃತಿಯನ್ನು ಬೆಂಗಳೂರು, ಕಲಬುರಗಿ ಮೊದಲಾದೆಡೆಗಳಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿತ್ತು. ಅಲ್ಲೆಲ್ಲಾ ಸಂವಾದಗಳು ಕೂಡ ನಡೆದವು. ಚಿಕ್ಕಮಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಈ ಪುಸ್ತಕ ಹಾಗೂ ವಿಚಾರದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಇಂದಿನ ಉನ್ನತ ಶಿಕ್ಷಣದ ಬಿಕ್ಕಟ್ಟುಗಳನ್ನು ಚರ್ಚಿಸುವಾಗ ಈ ಕೃತಿಯಲ್ಲಿ ಅದರ ಸ್ವರೂಪವನ್ನು ಈ ರೀತಿ ತೆರೆದಿಡುತ್ತದೆ. ಕರ್ನಾಟಕದಲ್ಲಿ 41 ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ 4,709 ಬೋಧಕ, 9,317 ಬೋಧಕೇತರ ಹುದ್ದೆಗಳಿಗೆ ಅನುಮತಿ ಕೊಡಲಾಗಿದೆ. ಆದರೆ 1,986 ಬೋಧಕ, 2,989 ಬೋಧಕೇತರ ಹುದ್ದೆಗಳಿಗೆ ಮಾತ್ರ ನೇಮಕಾತಿಯಾಗಿದೆ. 2,723 ಬೋಧಕ (ಶೇ. 57), 6,328 ಬೋಧಕೇತರ (ಶೇ. 67.91) ಹುದ್ದೆಗಳು ಖಾಲಿ ಇವೆ. 2025ರ ‘ದ ಹಿಂದೂ’ ಪತ್ರಿಕೆಯಲ್ಲಿ ಜಯಂತ್ ಆರ್. ಅವರ ವರದಿ ಪ್ರಕಾರ ಹೊಸದಾಗಿ ಸ್ಥಾಪಿತಗೊಂಡ 10 ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಖಾಯಂ ಉದ್ಯೋಗಿಗಳಿಲ್ಲ. 2017ರಲ್ಲಿ ಸ್ಥಾಪಿತವಾದ ‘ಅಂಬೇಡ್ಕರ್ ಸ್ಕೂಲ್ ಆಫ್ ಇಕಾನಮಿ’ ವಿವಿಯಲ್ಲಿ 17 ಬೋಧಕ ಮತ್ತು 49 ಬೋಧಕೇತರ ಹುದ್ದೆಗಳಿವೆ. ಆದರೆ ಯಾವುದೇ ಹುದ್ದೆಗಳಿಗೂ ನೇಮಕಾತಿ ಮಾಡಿಕೊಂಡಿಲ್ಲ. ಗಂಗೂ ಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯಕ್ಕೆ 15 ಬೋಧಕ ಮತ್ತು 19 ಬೋಧಕೇತರ ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳಿಗೂ ನೇಮಕಾತಿ ಮಾಡಿಕೊಂಡಿಲ್ಲ. ಇದೇ ರೀತಿಯಲ್ಲಿ ಮಂಡ್ಯ(92), ನೃಪತುಂಗ(100), ಹಾವೇರಿ(59), ಹಾಸನ(27), ಕೊಡಗು(80), ಕೊಪ್ಪಳ(12), ಬೀದರ್(29), ಚಾಮರಾಜನಗರ (36) ಈ ಎಲ್ಲಾ ವಿವಿಗಳಲ್ಲಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಯೇ ಇಲ್ಲ. ಹಳೆಯ ವಿಶ್ವ ವಿದ್ಯಾನಿಲಯಗಳಲ್ಲಿಯೂ ನೇಮಕಾತಿ ನಡೆಯುತ್ತಿಲ್ಲ. ಮೈಸೂರು ವಿವಿಯಲ್ಲಿ 379, ಕರ್ನಾಟಕ ವಿವಿಯಲ್ಲಿ 414, ಬೆಂಗಳೂರು ವಿವಿಯಲ್ಲಿ 150, ಮಂಗಳೂರು ವಿವಿಯಲ್ಲಿ 141, ಗುಲ್ಬರ್ಗ ವಿವಿಯಲ್ಲಿ 170 ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿವೆ.
ಜುಲೈ 2022ರಂದು ಕೇಂದ್ರ ಶಿಕ್ಷಣ ಇಲಾಖೆಯ ವರದಿಯ ಪ್ರಕಾರ 45 ಕೇಂದ್ರ ವಿವಿಗಳಲ್ಲಿ 6,549 ಹುದ್ದೆಗಳು ಖಾಲಿ ಇವೆ. ದಿಲ್ಲಿ ವಿವಿಯಲ್ಲಿ 900, ಹೈದರಾಬಾದ್ ವಿವಿಯಲ್ಲಿ 622 ಹುದ್ದೆಗಳು ಖಾಲಿಯಿವೆ. ಕೆಲವು ನಿವೃತ್ತ ಉಪಕುಲಪತಿಗಳು ಗುಣಮಟ್ಟದ ಪ್ರಾಧ್ಯಾಪಕರ ಕೊರತೆ ಇದೆ ಎಂದು ಹೇಳುತ್ತಾರೆ. ಇದು ಸತ್ಯವಲ್ಲ. ವಿವಿ ನೇಮಕಾತಿಯಲ್ಲಿನ ಭ್ರಷ್ಟಾಚಾರ, ಜಾತೀಯತೆಯ ಕಾರಣದಿಂದ ಶೇ. 50ಕ್ಕೂ ಹೆಚ್ಚು ಪ್ರತಿಭಾವಂತ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗುತ್ತಿಲ್ಲ. ಇವರಲ್ಲಿ ಬಹುತೇಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಸಮುದಾಯಗಳಿಗೆ ಸೇರಿದವರು. ಅತಿಥಿ ಶಿಕ್ಷಕರಿಗೆ 20,000 ರೂ. ವೇತನ ಕೊಡುತ್ತಾರೆ. ಉದ್ಯೋಗ ಭದ್ರತೆ ಇರುವುದಿಲ್ಲ. ಇವು ವಿವಿಗಳಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿವೆ. (ಪುಟ ಸಂಖ್ಯೆ 29-30 ಉನ್ನತ ಶಿಕ್ಷಣದ ಒಳಗೂ ಹೊರಗೂ-ನವ ಉದಾರೀಕರಣದ ಭಾರತ) ಹೀಗೆ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಕೆಲವು ಭೀಕರ ವಾಸ್ತವಗಳನ್ನು ತೆರೆದಿಡುತ್ತಾರೆ.
ಆದರೆ ಈ ಕೃತಿಯು ಇಂದಿನ ತುರ್ತಿಗೆ ಹಾಗೂ ಶಿಕ್ಷಣರಂಗದ ಬಿಕ್ಕಟ್ಟಿಗೆ ಹೋಲಿಸಿದಾಗ ಅಗತ್ಯವಾದ ಚರ್ಚೆಗೆ ಒಳಪಡಲಿಲ್ಲ ಎನಿಸುತ್ತದೆ. ಅದರಲ್ಲೂ ವಿದ್ಯಾರ್ಥಿ ಸಮುದಾಯಗಳ ನಡುವೆ ತಲುಪಿಲ್ಲ. ತಲುಪಿಸುವ ಕಾರ್ಯವೂ ಸರಿಯಾಗಿ ನಡೆದಿಲ್ಲ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು, ಬುದ್ಧಿಜೀವಿ ವಲಯ, ಪ್ರಾಧ್ಯಾಪಕ ವಲಯ ಶ್ರಮಿಸುತ್ತಿಲ್ಲ ಎನಿಸುತ್ತದೆ.
ಶೈಕ್ಷಣಿಕ ನಿಷ್ಕ್ರಿಯತೆ ಇಲ್ಲವೇ ಬೌದ್ಧಿಕ ಬೇಜವಾಬ್ದಾರಿತನ ಹಾಗೂ ಸ್ವಾರ್ಥ ಉದಾಸೀನತೆ ರಾಜ್ಯದ ವಿದ್ಯಾರ್ಥಿ ಸಮುದಾಯವನ್ನು, ಶಿಕ್ಷಕ ಹಾಗೂ ಪ್ರಾಧ್ಯಾಪಕ ಸಮುದಾಯವನ್ನು ಎಷ್ಟು ಮಟ್ಟಕ್ಕೆ ಬಾಧಿಸುತ್ತಿವೆ ಎನ್ನುವುದಕ್ಕೆ ಇದೂ ಕೂಡ ಒಂದು ಉದಾಹರಣೆ ಎನ್ನಬಹುದು.
ಈ ಕೃತಿಯನ್ನು ಪ್ರಕಟಿಸಿರುವ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಗತ್ಯವಾಗಿದ್ದ ಹಾಗೂ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದೆ. ಸಾಮಾಜಿಕ ಸಂಘಟನೆಗಳು ಇಂತಹ ಜಾಗೃತಿ ಮೂಡಿಸುವ ಕಾರ್ಯಗಳನ್ನು ಈಗಿನ ಸಂಕೀರ್ಣಗೊಳಿಸಿರುವ ಪರಿಸ್ಥಿತಿಯಲ್ಲಿ ಹೆಚ್ಚು ಮಾಡಬೇಕಾದ ಅಗತ್ಯ ಬಹಳ ಇದೆ.
ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಜಾಗತಿಕವಾಗಿಯೇ ಅತ್ಯಂತ ಕಳಪೆಯ ಸ್ಥಾನದಲ್ಲಿ ಒಂದಾಗಿದೆ ಎನ್ನುವುದನ್ನೂ ಇಲ್ಲಿ ನಾವು ಗಮನಿಸಬೇಕು. ಸರಿಪಡಿಸುವ ಕಡೆ ಗಮನ ನೀಡಬೇಕು. ವಿದ್ಯಾರ್ಥಿ ಯುವಜನ ಹಾಗೂ ಪೋಷಕ ಸಮೂಹಗಳು ಆ ಬಗ್ಗೆ ಗಂಭೀರವಾದ ಪ್ರಯತ್ನಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ತೊಡಗಬೇಕಾದ ಅಗತ್ಯವಿದೆ. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ಹಾಗೂ ದೇಶದ ಭವಿಷ್ಯ ಬಹಳ ಕರಾಳವಾಗಲಿದೆ.
ಆಸಕ್ತರು ಕೃತಿಗಾಗಿ: ಬಿ. ಶ್ರೀಪಾದ ಭಟ್, ಮೊಬೈಲ್ ಸಂಖ್ಯೆ- 98804 53799 ಬೆಂಗಳೂರು
ಅಥವಾ
ದಸಂಸ(ಅಂಬೇಡ್ಕರ್ ವಾದ), 151, 9ನೇ ಮುಖ್ಯ ರಸ್ತೆ, ಲಾಲ್ಬಾಗ್ ಕೋಟೆ ರಸ್ತೆ, ದೊಡ್ಡ ಮಾವಳ್ಳಿ, ಬೆಂಗಳೂರು-560004 ಇವರನ್ನು ಸಂಪರ್ಕಿಸಬಹುದು.






