ಮೆಮೊರಬಲ್ ಟ್ರಯಲ್ಸ್ ಅವಿಸ್ಮರಣೀಯ ಪ್ರಕರಣಗಳು

ನ್ಯಾಯಾಲಯದಲ್ಲಿ ನಡೆದ ಕೆಲವು ಅವಿಸ್ಮರಣೀಯ ಪ್ರಕರಣಗಳನ್ನು ‘ಮೆಮೊರಬಲ್ ಟ್ರಯಲ್ಸ್’ ಎಂಬ ಈ ಕೃತಿಯಲ್ಲಿ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ಅವರು ಪರಿಚಯಿಸಿದ್ದಾರೆ. ಕಾನೂನಿನ ದೃಷ್ಟಿಕೋನದಿಂದ ಈ ಪ್ರಕರಣಗಳನ್ನು ಪರಿಶೀಲಿಸಿದ್ದಾರೆ. ಹಾಗೆ ನೋಡಿದರೆ ಪ್ರಪಂಚದ ನಾಗರಿಕತೆಗೆ ಕಾನೂನುಗಳೇ ತಳಪಾಯ. ಜೈಲುಗಳನ್ನು ಕಟ್ಟಿದ್ದೇ ಕಾನೂನಿನ ಇಟ್ಟಿಗೆಗಳಿಂದ. ನಿರಂಕುಶ ಪ್ರಭುತ್ವದಲ್ಲಿ ಶಸ್ತ್ರಾಸ್ತ್ರಗಳೇ ಹಿಂಸೆ, ದೌರ್ಜನ್ಯಗಳ ಮೂಲಕ ಕಾನೂನುಗಳು ಅರಸರ ಮರ್ಜಿಗನುಸಾರವಾಗಿದ್ದವು. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಹಾಗಾಗಬಾರದು ಎಂಬುದು ನಮ್ಮ ಆಶಯ. ಕಾನೂನು ಸಂಹಿತೆಗಳಿಗನುಸಾರವಾಗಿಯೇ ನ್ಯಾಯಾಧೀಶರು ಪ್ರಕರಣಗಳನ್ನು ವಿಚಾರಣೆ ಮಾಡುತ್ತಾರಾದರೂ ಅವರನ್ನು ಮುಟ್ಟುವವರೆಗಿನ ಹಾದಿ ಸುಗಮವಾಗಿಲ್ಲ. ಸಾಕ್ಷಿ, ಪುರಾವೆ, ವಶೀಲಿ, ಪ್ರಭಾವ, ಲಂಚ ಮುಂತಾದವುಗಳ ಮೇಲಾಟದಿಂದ ಸೊಳ್ಳೆಗಳು ಸಿಕ್ಕಿಕೊಳ್ಳುತ್ತವೆ, ದುಂಬಿಗಳು ಕಾನೂನಿನ ಬಲೆಯನ್ನು ಹರಿದು ಹೊರಬರುತ್ತಿರುವ ನಿದರ್ಶನಗಳನ್ನು ಕಂಡಿದ್ದೇವೆ. ಅದಕ್ಕೇ ಇರಬೇಕು ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡದ್ದು! ನಾಗಮೋಹನ್ ದಾಸ್ ‘ಸಂವಿಧಾನದ ಓದು’ ಕೃತಿಯ ಮೂಲಕ ಇಡೀ ದೇಶದಲ್ಲಿ ಮಾದರಿಯಾದ ಜನಾಂದೋಲನ ಮಾಡಿ ಪ್ರಸಿದ್ಧರಾಗಿದ್ದಾರೆ. ಏನೇ ಇರಲಿ ಅನ್ಯಾಯದ ವಿರುದ್ಧ ಪ್ರತಿಭಟನೆ, ನ್ಯಾಯಕ್ಕಾಗಿ ಕಾನೂನು ಸಮರ ನಡೆಸಿದ ಸಾವಿರಾರು ಪ್ರಕರಣಗಳು ಗಮನಾರ್ಹವಾಗಿವೆ. ಅವುಗಳಲ್ಲಿ ಲೇಖಕರು 21 ಪ್ರಕರಣಗಳ ಅವಿಸ್ಮರಣೀಯವಾದ ಘಟನೆಗಳನ್ನು ವಿವರಿಸಿದ್ದಾರೆ. ಅನ್ಯಾಯ, ಶೋಷಣೆಗಳ ವಿರುದ್ಧ ಧ್ವನಿ ಎತ್ತಿದ, ತ್ಯಾಗ, ಬಲಿದಾನ ಮಾಡಿದ ಈ ಪ್ರಕರಣಗಳು ಆಧುನಿಕ ಯುವ ಪೀಳಿಗೆಗೆ ಪ್ರೇರಣೆ ನೀಡಲಿ ಎಂಬುದು ಲೇಖಕರ ಆಶಯವಾಗಿದೆ. ಜಾಗತಿಕ ಮಟ್ಟದ ಪ್ರಕರಣಗಳು, ಭಾರತದ ಸ್ವಾತಂತ್ರ್ಯ ಚಳವಳಿಯ ಕಾಲದ ಪ್ರಕರಣಗಳು ಪ್ರತ್ಯೇಕವಾಗಿ ವಿವರಿಸಲ್ಪಟ್ಟಿವೆ.
ಕ್ರಿಸ್ತಪೂರ್ವದಲ್ಲಿ ಗ್ರೀಸ್ ದೇಶದ ತತ್ವಜ್ಞಾನಿ ಸಾಕ್ರೆಟಿಸ್‌ನ ಪ್ರಕರಣವು ಜನ ಪಂಚಾಯತಿದಾರರ ಸಮ್ಮುಖದಲ್ಲಿ ವಿಚಾರಣೆಗೊಳಪಟ್ಟಿತು. 280 ಜನ ಸಾಕ್ರೆಟಿಸನನ್ನು ಅಪರಾಧಿಯೆಂದೂ, 220 ಮಂದಿ ನಿರಪರಾಧಿ ಎಂದೂ ತೀರ್ಮಾನಿಸಿದರು. ಯುವಕರನ್ನು ದುರ್ಮಾರ್ಗಕ್ಕೆ ಎಳೆಯುತ್ತಿದ್ದಾನೆಂಬುದೇ ಸಾಕ್ರೆಟಿಸನ ಮೇಲೆ ಹೊರಿಸಿದ ಆರೋಪ. ಆ ಕಾರಣಕ್ಕಾಗಿಯೇ ಅವನಿಗೆ ವಿಷವನ್ನು ನೀಡಿ ಕೊಲ್ಲಲಾಯಿತು. ಏಸುಕ್ರಿಸ್ತನು ಮಾಡಿದ ಉಪದೇಶಗಳಿಂದ ಪ್ರಭಾವಿತರಾದ ಜನರನ್ನು ಕಂಡು ಆತಂಕಗೊಂಡ ಧರ್ಮ ಗುರುಗಳು ಮತ್ತು ಅರಸರು ಅವನ ಮೇಲೆ ದೇವನಿಂದನೆಯ ಸುಳ್ಳು ಆರೋಪ ಹೊರಿಸಿ ಶಿಲುಬೆಗೇರಿಸಿದ್ದು ಮುಂದೆ ಜಾಗತಿಕವಾಗಿ ಎಂತಹ ಪರಿವರ್ತನೆಯನ್ನು ಉಂಟು ಮಾಡಿತು ಎಂಬುದು ನಾವು ಕಂಡ ಸತ್ಯ. ರಾಜನಿಗೆ ಏಸು ನಿರಪರಾಧಿ ಎಂದು ಗೊತ್ತಿದ್ದೂ ಧರ್ಮಗುರುಗಳ ಒತ್ತಡಕ್ಕೆ ಮಣಿದು ಶಿಕ್ಷೆ ವಿಧಿಸಿದ. ಆದರೆ ಏಸು ಮಾತ್ರ ‘‘ದೇವರೇ, ಇವರು ಏನು ಮಾಡುತ್ತಾರೆಂದು ಇವರಿಗೇ ಗೊತ್ತಿಲ್ಲ, ಅವರನ್ನು ಕ್ಷಮಿಸು’’ ಎಂದು ಮೊರೆ ಇಟ್ಟದ್ದು ಮಾತ್ರ ದೇವರು, ಧರ್ಮ, ನ್ಯಾಯ ಎಲ್ಲವನ್ನೂ ಪ್ರಶ್ನಿಸುವಂತಿತ್ತು.
ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂಬ ಸಿದ್ಧಾಂತವು ಚರ್ಚ್‌ನ ಬೋಧನೆಗಳಿಗೆ ವಿರುದ್ಧವಾಗಿವೆ ಎಂಬ ಕಾರಣಕ್ಕಾಗಿ ಗೆಲಿಲಿಯೋನ್ನನ್ನು ರೋಮ್‌ನ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿ ಅವನನ್ನು ಆಜೀವ ಪರ್ಯಂತ ಗೃಹಬಂಧನದಲ್ಲಿರಿಸಲಾಯಿತು. ಆತನು ಬರೆದ ಕೃತಿಗಳನ್ನು ವಿತರಿಸಿದವರಿಗೆ ಮರಣದಂಡನೆಯನ್ನೂ ವಿಧಿಸಲಾಯಿತು. ಮೌಢ್ಯಗಳು ಹಿಂಸೆಗೆ ಪ್ರಚೋದನೆ ನೀಡಿದ ಘಟನೆಗಳಿಗೆ ಸಾಕ್ಷಿಯಿದು. ವರ್ಣಭೇದ ನೀತಿ ಜಾರಿಯಲ್ಲಿದ್ದ ಅಮೆರಿಕದಲ್ಲಿ ಜಾರ್ಜ್ ಸ್ಟೈನಿ ಎಂಬ 14 ವರ್ಷದ ನೀಗ್ರೋ ಹುಡುಗನೊಬ್ಬ ಬಿಳಿಯರ ಹುಡುಗಿಯನ್ನು ಅತ್ಯಾಚಾರ ಮಾಡಿದನೆಂದು ಸುಳ್ಳು ಆರೋಪ ಹೊರಿಸಿ, ದೋಷಾರೋಪ ಪಟ್ಟಿ ಸಲ್ಲಿಸಿ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಇದು ನಡೆದದ್ದು 1944ರಲ್ಲಿ ಈ ಘಟನೆ ನಡೆದ 60 ವರ್ಷಗಳ ಬಳಿಕ ಹಿಂದಿನ ದಾಖಲೆಗಳನ್ನು ಸಂಗ್ರಹಿಸಿದಾಗ ಜಾರ್ಜ್ ಸ್ಟೈನಿ ಎಂಬ ಮುಗ್ಧ ಬಾಲಕ ನಿರಪರಾಧಿ ಎಂದು ಸಾಬೀತಾದರೂ ಆ ಕಾಲದ ಕಾನೂನು ಮಾಡಿದ್ದು ಸರಿಯೆಂದೇ ನ್ಯಾಯಾಲಯ ವಾದಿಸಿತು. ನ್ಯಾಯ ದೇವತೆಯ ಕಟುಕತನಕ್ಕೆ ಇದು ಸಾಕ್ಷಿಯಾಗಿದೆ.
ಎರಡನೇ ಮಹಾಯುದ್ಧದ ಬಳಿಕ ಮಿತ್ರರಾಷ್ಟ್ರಗಳ ನ್ಯಾಯಾಧೀಶರು ಮಾಡಿದ ನ್ಯೂರೆಂಬರ್ಗ್ ವಿಚಾರಣೆಯು ಬಹಳ ಮಹತ್ವದ್ದು. ಅಪರಾಧಿಗಳಿಗೆ ಶಿಕ್ಷೆಯಾಗುವುದರ ಜೊತೆಗೆ ಅಂತರ್‌ರಾಷ್ಟ್ರೀಯ ಅಪರಾಧ ನ್ಯಾಯ ಮಂಡಳಿಯನ್ನು ಸ್ಥಾಪಿಸಲಾಯಿತು. ಮಾನವ ಹಕ್ಕುಗಳ ಘೋಷಣೆಗೆ ಕಾರಣವಾಯಿತು. ಕ್ಯೂಬಾದಲ್ಲಿ ಜನಪರ ಹೋರಾಟದ ಮೂಲಕ ಸರ್ವಾಧಿಕಾರಿಯನ್ನು ಮಣಿಸಿ ಹೊಸ ಶಕೆಯನ್ನು ಪ್ರಾರಂಭಿಸಿದ ಫಿಡೆಲ್ ಕ್ಯಾಸ್ಟ್ರೋ ನ್ಯಾಯಾಲಯದಲ್ಲಿ ತಾನೇ ವಾದಿಸಿ ಕೈದಿಗಳನ್ನು ಬಿಡುಗಡೆ ಮಾಡಿಸಿದ ಪ್ರಕರಣವು ಗಮನಾರ್ಹವಾಗಿದೆ. ಸುಮಾರು 27 ವರ್ಷಗಳ ಕಾಲ ಸೆರೆಮನೆವಾಸಿಯಾಗಿ ದಾಖಲೆ ನಿರ್ಮಿಸಿದ ನೆಲ್ಸನ್ ಮಂಡೇಲಾ ಅವರದ್ದೂ ನ್ಯಾಯಾಲಯದ ವಿಶಿಷ್ಟ ಪ್ರಕರಣವಾಗಿದೆ. ವರ್ಣಭೇದ ವ್ಯವಸ್ಥೆಯನ್ನು ಗೆರಿಲ್ಲಾ ಯುದ್ಧದ ಮೂಲಕ ಕೊನೆಗೊಳಿಸಬೇಕೆಂಬ ಪಣತೊಟ್ಟ ಮಂಡೇಲಾ ದಕ್ಷಿಣ ಆಫ್ರಿಕದಲ್ಲಿ ಕ್ರಾಂತಿಕಾರಿ ತಂತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಜಗತ್ತಿನ ವಿಮೋಚನಾ ಹೋರಾಟಗಳಿಗೆ ಮಂಡೇಲಾ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅಮೆರಿಕದಲ್ಲಿ ಕರಿಯರನ್ನು (ನೀಗ್ರೋ) ನಿಕೃಷ್ಟವಾಗಿ ಕಾಣುತ್ತಿದ್ದ ಕಾಲದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಆ ಸಮುದಾಯದಲ್ಲೇ ಹುಟ್ಟಿ, ಶಿಕ್ಷಣ ಪಡೆದು ಬಿಳಿಯರಿಗೆ ಸವಾಲಾಗಿ ನಿಂತು ವರ್ಣಭೇದ ನೀತಿಯ ವಿರುದ್ಧ ಅಹಿಂಸಾ ಮಾರ್ಗದ ಹೋರಾಟ ಪ್ರಾರಂಭಿಸಿದರು. ಕ್ರಿಸ್ತನ ಪ್ರೇಮ, ಗಾಂಧೀಜಿಯ ಅಹಿಂಸೆ ಎಂಬ ಎರಡು ಅಸ್ತ್ರಗಳ ಮೂಲಕ ಅಮೆರಿಕದ ಪ್ರಜೆಗಳಲ್ಲಿ ಹೊಸ ಅರಿವು ಮೂಡಿಸಿದರು. ಆದರೂ 1968ರ ಎಪ್ರಿಲ್ ನಾಲ್ಕರಂದು ಕಿಂಗ್ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು. ಪಾಕಿಸ್ತಾನದ ಅಧ್ಯಕ್ಷರಾಗಿ 1971ರಲ್ಲಿ ಚುನಾಯಿತರಾದ ಝುಲ್ಫಿಕರ್ ಅಲಿ ಭುಟ್ಟೋ ಅವರ ಪ್ರಕರಣವು ಜಗತ್ತಿನ ಇತಿಹಾಸದಲ್ಲೇ ‘ಜುಡಿಶಿಯಲ್ ಮರ್ಡರ್’ ಎಂಬ ಅಪಖ್ಯಾತಿಗೊಳಗಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮೂಲಕ ಗೆದ್ದು ಅಧ್ಯಕ್ಷ ಪಟ್ಟವೇರಿದ ಭುಟ್ಟೋ ಅವರು ಮೋಸದಿಂದ ಜಯಗಳಿಸಿದ್ದಾರೆ, ಇಸ್ಲಾಂ ಧರ್ಮವಿರೋಧಿ ಎಂಬ ಕಾರಣ ನೀಡಿ ವಿರೋಧ ಪಕ್ಷಗಳು ನ್ಯಾಯಾಲಯದಲ್ಲಿ ವಾದಿಸಿ 1979ರ ಎಪ್ರಿಲ್ ನಾಲ್ಕರಂದು ಭುಟ್ಟೋ ಅವರನ್ನು ಗಲ್ಲಿಗೇರಿಸಲಾಯಿತು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಚೌರಿ ಚೌರಾ ಪ್ರಕರಣದಲ್ಲಿ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರಿಂದ ಪೊಲೀಸರು ಮತಪಟ್ಟರು. ಸೆಶನ್ಸ್ ನ್ಯಾಯಾಲಯದಲ್ಲಿ ಎಂಟು ತಿಂಗಳ ಕಾಲ ವಿಚಾರಣೆ ನಡೆದು 122 ಮಂದಿಗೆ ಮರಣ ದಂಡನೆ ವಿಧಿಸಲಾಯಿತು. ಗಾಂಧೀಜಿಯವರು ಈ ಘಟನೆಯಿಂದ ಬೇಸರಗೊಂಡು ಚಳವಳಿಯನ್ನು ನಿಲ್ಲಿಸಿದ್ದರು. ಅದರಿಂದಾಗಿ ಅಸಮಾಧಾನಗೊಂಡ ಯುವ ಹೋರಾಟಗಾರರು ಜೈಲಿನಲ್ಲಿ ಸಾಗಿಸುತ್ತಿದ್ದ ಸರಕಾರದ ಹಣದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡರು. ಈ ಪ್ರಕರಣವೇ ಕಾಕೋರಿ ಪ್ರಕರಣ. ಈ ಪ್ರಕರಣದಲ್ಲಿ ರಾಮಪ್ರಸಾದ ಬಿಸ್ಮಿಲ್, ರೋಶನ್ ಸಿಂಗ್ ಮತ್ತು ಅಷ್ಫಾಕುಲ್ಲಾ ಖಾನ್ ಅವರನ್ನು ಗಲ್ಲಿಗೇರಿಸಿದರು. ಇದೇ ಮುಂದೆ ಭಗತ್‌ಸಿಂಗ್‌ನಂತಹ ಯುವ ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡಿತು. ಭಗತ್‌ಸಿಂಗ್ ಕೇಂದ್ರ ಶಾಸನಸಭೆಯಲ್ಲಿ ಬಾಂಬ್ ಸಿಡಿಸಿ, ‘ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ’ ಎಂದು ಘೋಷಿಸಿ ಬಂಧನಕ್ಕೊಳಗಾಗಿ ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದಿಸಿ ಕೊನೆಗೂ ಗಲ್ಲಿಗೇರಿಸಲ್ಪಟ್ಟರು. 1919ರಲ್ಲಿ ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡಯರ್ ನಿಶಸ್ತ್ರರಾಗಿದ್ದ ಜನ ಸಮುದಾಯಕ್ಕೆ ಯಾವ ಮುನ್ಸೂಚನೆಯನ್ನು ನೀಡದೆ ಗುಂಡಿನ ಮಳೆಗರೆದನು. 21 ವರ್ಷಗಳ ಬಳಿಕ ಉದಾಮ್‌ಸಿಂಗ್ ಈ ಆಕ್ರೋಶದಿಂದ ಲಂಡನ್ ನಗರದ ಕಾಕ್‌ಸ್ಟನ್ ಹಾಲ್‌ನಲ್ಲಿ ಜನರಲ್ ಡಯರ್‌ನನ್ನು ಗುಂಡಿಟ್ಟು ಕೊಂದನು. ಈ ಪ್ರಕರಣವೂ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಹರಿಸಿದ ನೆತ್ತರ ಹೊಳೆಗೆ ಸೇರಿಕೊಂಡಿತು.
ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬ್ರಿಟಿಷರು ಮಾಧ್ಯಮಗಳ ಗಂಟಲೊತ್ತುವ ಕೆಲಸ ಪ್ರಾರಂಭಿಸಿದಾಗ ಸ್ವತಂತ್ರವಾಗಿ ಕಾಂಗ್ರೆಸ್ ರೇಡಿಯೊ ಸ್ಥಾಪಿಸಿದ ಉಷಾ ಮತ್ತು ಅವರ ಸಂಗಡಿಗರ ಪ್ರಯತ್ನಗಳು ಗಮನಾರ್ಹ. ಬ್ರಿಟಿಷ್ ಸರಕಾರಕ್ಕೆ ಸವಾಲಾದ ಈ ಕಾರ್ಯಕರ್ತರನ್ನು ದಂಡಿಸಿದ ಪ್ರಕರಣಗಳೂ ಬಹಳ ಮಹತ್ವವೆನಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಸಾಮಾನ್ಯ ಜನರು ಅದರಲ್ಲೂ ರೈತರು ನಡೆಸಿದ ಹೋರಾಟಗಳು, ಬ್ರಿಟಿಷ್ ಸರಕಾರವನ್ನು ನಿದ್ದೆಗೆಡುವಂತೆ ಮಾಡಿದ ಪ್ರಕರಣಗಳು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿವೆ.
ರಾಮದುರ್ಗದ ಬಂಡಾಯದಲ್ಲಿ ಜನರು ನಡೆಸಿದ ಧ್ವಜಸ್ತಂಭ ಪ್ರಕರಣ, ಕೇರಳಂನ ಕಾಸರಗೋಡಿನ ಕಯ್ಯೂರಿನ ರೈತರು ನಡೆಸಿದ ಹೋರಾಟದ ಪ್ರಕರಣ, ಶಿವಮೊಗ್ಗದ ಶಿಕಾರಿಪುರದ ಈಸೂರಿನ ಗ್ರಾಮದ ರೈತರು, ಕಾರ್ಮಿಕರು, ಆದಿವಾಸಿಗಳು ಎಲ್ಲರೂ ಸೇರಿ ನಡೆಸಿದ ಬಂಡಾಯವು ಬ್ರಿಟಿಷರನ್ನು ಕಂಗೆಡಿಸಿದ್ದು ಇತಿಹಾಸ. ಈ ಪ್ರಕರಣದಲ್ಲಿ ನ್ಯಾಯಾಲಯವು ಬಹಳ ಕ್ರೂರವಾಗಿ ನಡೆದುಕೊಂಡು ಸ್ವಾತಂತ್ರ್ಯ ಚಳವಳಿಯ ಸಾಗರಕ್ಕೆ ನೂರಾರು ತೊರೆಗಳು ಸೇರುವಂತೆ ಮಾಡಿತು. ಬ್ರಿಟಿಷರ ಕಾನೂನು ಹೋರಾಟಗಾರರನ್ನು ಮಣಿಸಲು ಕಾನೂನಿನ ಅಸ್ತ್ರವನ್ನು ನಿರ್ದಯವಾಗಿ ಬೀಸಿತು. ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಲೇರುವವರು ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ. ನ್ಯಾಯ ಸಂಹಿತೆಗಳು, ನ್ಯಾಯಾಧೀಶರ ಮೂಲಕ ಜನರಿಗೆ ಕೊಡುವ ನ್ಯಾಯದಾನವು ಹೇಗಿರುತ್ತದೆ ಎಂಬುದನ್ನು ಸರಳ ಶೈಲಿಯಲ್ಲಿ ತಿಳಿಸುವ ಈ ಕೃತಿಯ ಲೇಖಕರಾದ ಎಚ್.ಎನ್. ನಾಗಮೋಹನ್ ದಾಸ್ ಅವರಿಗೆ ಮತ್ತು ಕೃತಿಯನ್ನು ಪ್ರಕಟಿಸಿದ ಜನಪ್ರಕಾಶನಕ್ಕೆ ಪ್ರಜ್ಞಾವಂತರು ಕೃತಜ್ಞತೆ ಸಲ್ಲಿಸುತ್ತಾರೆ.
(ಲೇಖಕಿ: ನಿವೃತ್ತ ಶಿಕ್ಷಕರು, ಹಿರಿಯ ಬರಹಗಾರರು)
ಈ ಕೃತಿಯ ಮುಖಬೆಲೆ: 150 ರೂ.
ಪ್ರಕಾಶನ: ಜನ ಪ್ರಕಾಶನ, ಜನ ಸಂಸ್ಕೃತಿ ಅಧ್ಯಯನ ಮತ್ತು ಪ್ರಕಾಶನ, ನಂ.184, 36ನೇ ‘ಬಿ’ ಕ್ರಾಸ್, 7ನೇ ಬ್ಲಾಕ್, ಜಯನಗರ, ಬೆಂಗಳೂರು-560070 ಮೊ: 9632329955, 7483950580






