‘‘ನನ್ನ ಮಾತೇ ಬಂದೂಕು ಗುಂಡು’’ ಮಲ್ಲು ಸ್ವರಾಜ್ಯಂ

ಪ್ರಪಂಚದ ಇತಿಹಾಸವೆಂದರೆ ಒಂದರ್ಥದಲ್ಲಿ ವರ್ಗ ಹೋರಾಟಗಳೇ ಆಗಿವೆ. ಇತಿಹಾಸವು ಗತಕಾಲದ ಘಟನೆಗಳನ್ನು ವಿಮರ್ಶಿಸಿ ನಮ್ಮಲ್ಲಿ ಹೊಸ ಅರಿವಿನ ಮನೋಭಾವವನ್ನು ಮೂಡಿಸುತ್ತದೆ. ಹಿಂದಿನ ಎಲ್ಲಾ ಹೋರಾಟಗಳು ಮತ್ತು ಚಳವಳಿಗಳ ಬಗ್ಗೆ ಪ್ರಾರಂಭ ಕಾಲದಲ್ಲಿ ಸಮಾಜದ ಉಪೇಕ್ಷೆ ಮತ್ತು ತಿರಸ್ಕಾರಗಳು ಇದ್ದೇ ಇರುತ್ತವೆ. ಅಪಹಾಸ್ಯ, ನಿಂದೆ ಮತ್ತು ಹಿಂಸೆಯೂ ಚಳವಳಿಯ ಭಾಗವಾಗಿ ದಮನಿಸುವ ಕಾರ್ಯ ನಡೆಯುತ್ತವೆ. ಕೊನೆಯ ಘಟ್ಟದಲ್ಲಿ ಸಮಾಜದ ಗೌರವ ಲಭಿಸುತ್ತದೆ. ಹೀಗೆ ಈ ಎಲ್ಲಾ ಹಂತಗಳನ್ನು ದಿಟ್ಟತನದಿಂದ ಎದುರಿಸಿ ಚಳವಳಿಗಳ ಮೂಲಕ ಜನ ಜೀವನದ ಪ್ರಗತಿಗೆ ಶ್ರಮಿಸಿದ ಮಲ್ಲು ಸ್ವರಾಜ್ಯಂ ಅವರ ಆತ್ಮಕಥನದ ಒಂದೊಂದು ಅಧ್ಯಾಯವೂ ಬೆವರು ಮತ್ತು ರಕ್ತದ ಮೂಲಕ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ನಿಷ್ಠೆಯಿಂದ ಮಾಡಿದ ಓರ್ವ ಅಪೂರ್ವ ಹೆಣ್ಣು ಮಗಳ ಸಾಹಸಗಾಥೆಯಾಗಿ ನಿರೂಪಿಸಲ್ಪಟ್ಟಿವೆ. ವಿಮಲಾ, ಕಾತ್ಯಾಯಿನಿಯವರು ತೆಲುಗಿನಲ್ಲಿ ನಿರೂಪಣೆ ಮಾಡಿದ ಈ ಜೀವನಗಾಥೆಯನ್ನು ಸ. ರಘುನಾಥ ಅವರು ಕನ್ನಡಕ್ಕೆ ಅನುವಾದಿಸಿ, ಮಹಿಳಾ ಹೋರಾಟದ ಕಥನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ಆಂಧ್ರ ಮಹಾಸಭಾ ಈ ಸಂಘಟನೆಗಳು ಸ್ತ್ರೀ ಶಿಕ್ಷಣ, ಸಮಾನತೆ, ಆಸ್ತಿ ಹಕ್ಕು ಮುಂತಾದ ವಿಷಯಗಳಿಗಾಗಿ ಸಂಘಟಿತ ಹೋರಾಟ ನಡೆಸಿದವು. ದೊರೆಗಳ ಕಬ್ಜಾ ಭೂಮಿಯನ್ನು ಅವರಿಂದ ಕಿತ್ತು ರೈತರಿಗೆ ಹಂಚುವುದು ಅಲ್ಲದೆ ಬಡಜನರಿಗೆ ಪೀಡೆಯಾಗಿದ್ದ ಬಿಟ್ಟಿಚಾಕರಿಯಿಂದ ವಿಮುಕ್ತಿಗೊಳಿಸುವುದು, ತೆಲಂಗಾಣ ರೈತಾಂಗ ಪೋರಾಟಂ, ವೀರ ತೆಲಂಗಾಣ ಪೋರಾಟಂ ಮುಂತಾದ ದೀರ್ಘ ಹೋರಾಟಗಳಲ್ಲಿ ಮಲ್ಲು ಸ್ವರಾಜ್ಯಂ ಅವರು ಮಹಿಳೆಯರ ಮುಂದಾಳುತನ ವಹಿಸಿದರು. ಈ ಹೋರಾಟಗಳಲ್ಲಿ ಆಂಧ್ರದ ರಜಾಕಾರರು, ಭಾರತ ಒಕ್ಕೂಟ ಸೇನೆ, ಜಮೀನ್ದಾರರು ಮತ್ತು ಗೂಂಡಾಗಳು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯ, ಹಿಂಸೆಗಳನ್ನು ಪದಗಳಿಂದ ವರ್ಣಿಸಲಾಗದು. ಆಗ ಸಿಡಿದೆದ್ದ ಜನರು ತೆಲಂಗಾಣ ಸಶಸ್ತ್ರ ರೈತ ಹೋರಾಟವನ್ನು ನಡೆಸಿದರು. ಬಂದೂಕು ಹಿಡಿದು ಗೆರಿಲ್ಲಾ ಮಾದರಿಯ ಕದನವನ್ನು ಮಾಡಿದ ಸ್ವರಾಜ್ಯಂ ಅವರ ಜೀವನವನ್ನು ಹೋರಾಟವೇ ರೂಪಿಸಿದೆ.
ದೊಡ್ಡ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದ (1930) ಅವರಿಗೆ ಬಾಲ್ಯದಲ್ಲೇ ಶಿಕ್ಷಣ ಮತ್ತು ತರಬೇತಿ ಲಭಿಸಿತ್ತು. ಧೈರ್ಯಶಾಲಿಯೂ, ಮಾನವತಾವಾದಿಯೂ ಆದ ಅವರ ಅಮ್ಮನೇ ಅವರಿಗೆ ಸ್ಫೂರ್ತಿ. ಕುಟುಂಬದ ಎಲ್ಲರೂ ಆಂಧ್ರ ಮಹಾ ಸಭಾದ ಚಳವಳಿ, ಸ್ವಾತಂತ್ರ್ಯ ಚಳವಳಿ, ಕಮ್ಯುನಿಸ್ಟ್ ಪಕ್ಷದ ಚಳವಳಿ ಹೀಗೆ ಒಂದಲ್ಲ ಒಂದು ಹೋರಾಟಗಳಲ್ಲಿ ವ್ಯಸ್ತರಾಗಿದ್ದ ಕಾರಣ ಮಲ್ಲು ಅವರಿಗೆ ಚಳವಳಿಗಳಲ್ಲಿ ಭಾಗವಹಿಸುವುದು ಸಹಜ ಕರ್ತವ್ಯವಾಗಿಯೇ ಕಂಡಿತು. ಕೂಲಿಕಾರರ ಮುಷ್ಕರಗಳಲ್ಲಿ ಭಾಗವಹಿಸಿ ಬಡಜನರ ಶ್ರಮದ ಮಹತ್ವವನ್ನು ಸ್ವತಃ ರಚಿಸಿದ ಹಾಡುಗಳ ಮೂಲಕ ಪ್ರಚಾರ ಮಾಡುತ್ತಾ ಹೋರಾಟಕ್ಕೆ ಹುಮ್ಮಸ್ಸನ್ನು ತುಂಬುತ್ತಿದ್ದರು. ಬಡವರ ಕಣ್ಣೀರು ನಿಂತು ಅವರ ಮುಖದಲ್ಲಿ ನಗುವನ್ನು ಅರಳಿಸುವುದೇ ಅವರ ಹೋರಾಟದ ಮುಖ್ಯ ಉದ್ದೇಶವಾಗಿತ್ತು. ಸ್ವರಾಜ್ಯಂ ಅವರ ಜೀವನ ನಾಡಿನ ಜನರ ಬದುಕಿಗೆ ಮೀಸಲಾಗಿತ್ತು. ಅವರ ಚಳವಳಿ ಮಹಿಳಾ ಸಶಸ್ತ್ರ ಪಡೆಯ ಹೋರಾಟದ ಸಮಯದಲ್ಲಿ ಎದುರಿಸಿದ ಸವಾಲು, ಅನುಭವಿಸಿದ ಹಿಂಸೆ, ದೌರ್ಜನ್ಯಗಳ ವಿವರಗಳನ್ನು ಓದುವಾಗ ಸ್ವಾತಂತ್ರ್ಯ ಹೋರಾಟದ ಮುಖ್ಯ ಧಾರೆಯು ಮಹಿಳೆಯರದ್ದೇ ಆಗಿದೆ ಎಂದು ಅನಿಸುತ್ತದೆ. ಚಳವಳಿಯಲ್ಲಿ ಸ್ವತಃ ತಾವೇ ಮುನ್ನುಗ್ಗಿ ಸಾಗಿದ ಧಾರೆ ಒಂದು ಮಹತ್ವದ್ದಾಗಿದ್ದರೆ ಇನ್ನೊಂದು ಪುರುಷರು ಚಳವಳಿಗಳಲ್ಲಿ ಭಾಗವಹಿಸಿದಾಗ ಅವರ ಕುಟುಂಬವನ್ನು ರಕ್ಷಿಸಿದ ಮಾತೆಯಂದಿರ, ಮಡದಿಯರ ಸೇವೆ, ಬಲಿದಾನವು ಬಹಳ ಮಹತ್ವದ್ದೇ ಆಗಿದೆಯಲ್ಲವೇ? ಗರ್ಭಿಣಿಯರು, ವಿಧವೆಯರು ಅನುಭವಿಸಿದ ಒಂಟಿ ತಾಯ್ತನದ ಕಥಾನಕಗಳು ನಮ್ಮ ಕಣ್ಣು ತೇವಗೊಳಿಸುತ್ತದೆ. ಸ್ವರಾಜ್ಯಂ ಅವರ ಪತಿಯೂ ಹೋರಾಟಗಾರರಾಗಿದ್ದು ಮಕ್ಕಳು ಕೂಡ ಚಳವಳಿಯಲ್ಲಿ ನಾಯಕತ್ವ ವಹಿಸಿಕೊಂಡು ಮುಂದುವರಿದಿದ್ದು ವಿಶೇಷ.
ಬಾಲ್ಯ ವಿವಾಹವನ್ನು ವಿರೋಧಿಸಿದ ಹೋರಾಟ ಮತ್ತು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಸಿಗಬೇಕೆಂಬ ಚಳವಳಿ, ನಾಗರಿಕ ಹಕ್ಕುಗಳಿಗಾಗಿ ಹೋರಾಟ ಹೀಗೆ ನಿರಂತರವಾಗಿ ಸಮಾಜದ ಸುಖ, ಶಾಂತಿ, ನೆಮ್ಮದಿಗಾಗಿ ತನ್ನ ಬದುಕನ್ನು ಗಂಧದಂತೆ ತೇದ ಸ್ವರಾಜ್ಯಂ ಅವರು ತಮ್ಮ ಮಕ್ಕಳನ್ನು ಪೋಷಿಸಲು, ಶಿಕ್ಷಣ ಕೊಡಿಸಲು ತುಂಬಾ ಕಷ್ಟ ಪಡಬೇಕಾಯಿತು. ನೇಕಾರನು ಯಾವಾಗಲೂ ಅರೆಬೆತ್ತಲೆ ಎಂಬ ಗಾದೆಯಂತೆ ಜಮೀನ್ದಾರರಾದರೂ ಅಶನ, ವಸನಕ್ಕೂ ತುಂಬಾ ಕಷ್ಟಪಟ್ಟ ಜೀವನ ಅವರದು. ವಿಶೇಷವೆಂದರೆ ಎರಡು ಸಲ ಆಂಧ್ರ ಸರಕಾರದ ವಿಧಾನಸಭೆಯ ಶಾಸಕಿಯಾಗಿ ಕೆಲಸ ಮಾಡಿದರೂ ಅವರ ಜೀವನಮಟ್ಟ ಏರಲಿಲ್ಲ. ಇಂದಿನ ಶಾಸಕರನ್ನು, ರಾಜಕಾರಣಿಗಳನ್ನು ಕಂಡಾಗ ಸ್ವರಾಜ್ಯಂ ಅವರು ಏರಿದ ಎತ್ತರಕ್ಕೆ ನಾವು ತಲೆಬಾಗಲೇಬೇಕು. ಜನರಿಗೆ ತಮ್ಮ ಹಕ್ಕುಗಳ ಮತ್ತು ಹೊಣೆಗಾರಿಕೆಯ ಅರಿವು ಮೂಡಿಸಿದ ಸ್ವರಾಜ್ಯಂ ಅವರು ಈ ಪ್ರಜಾಪ್ರಭುತ್ವದಲ್ಲಿ ಬಲಿಷ್ಠನಿಗಿರುವಷ್ಟೇ ಅವಕಾಶಗಳು ದುರ್ಬಲನಿಗೂ ಸಿಗಬೇಕು ಎಂಬ ತತ್ವಕ್ಕಾಗಿ ತಮ್ಮ ಜೀವಮಾನವಿಡೀ ಹೋರಾಡಿದರು. ಇಲ್ಲಿ ನ್ಯಾಯವು ಯಾವಾಗಲೂ ಬಲಿಷ್ಠನ ಕೈಯಲ್ಲಿರುವ ಬಡಿಗೋಲಿನಂತೆ ಕೆಲಸ ಮಾಡುತ್ತದೆ. ಕಟ್ಟ ಕಡೆಯ ಜನತೆಯು ನ್ಯಾಯವನ್ನು ಗಳಿಸುವಂತೆ ಮಾಡುವುದೇ ಅವರ ಜೀವನದ ಗುರಿಯಾಗಿತ್ತು.
ವಿದ್ಯೆ, ಜ್ಞಾನ, ಶೀಲ, ದಾನ ಗುಣಗಳಿಲ್ಲದ ಮನುಷ್ಯ ಪಶುವಿಗೆ ಸಮಾನವೆಂದು ನಂಬಿದ ಸ್ವರಾಜ್ಯಂ ಅವರು ತಾನು ಕೆಲಸ ಮಾಡಿದ ಕ್ಷೇತ್ರಗಳಲ್ಲಿ ವಿವೇಕ ಮೂಡುವಂತೆ ಪ್ರೇರೇಪಿಸಿದರು. ಲಿಂಗ ತಾರತಮ್ಯದ ನಿವಾರಣೆಗಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಂಡರು. ‘ಸೇವೆ ಮತ್ತು ತ್ಯಾಗಗಳು ಮಾನವ ಗುಡಿಗೋಪುರಗಳ ಅಡಿಗಲ್ಲುಗಳಾಗಿರಬಹುದು. ಆದರೆ ಅದು ಸ್ವಾರ್ಥವೆಂಬ ಸಿಮೆಂಟ್‌ನಿಂದ ಅಂಟಿ ಕೊಳ್ಳುತ್ತದೆ’ ಎಂಬ ಮಾತಿದೆ. ಸ್ವರಾಜ್ಯಂ ಅವರ ಯಾವ ಕೆಲಸಗಳಲ್ಲೂ ಸ್ವಾರ್ಥದ ಕಲೆ ಅಂಟಿಕೊಳ್ಳದಂತೆ ಎಚ್ಚರವಹಿಸಿದರು. ಸ್ವರಾಜ್ಯಂ ಅವರ ಪತಿಯೂ ಪಕ್ಷದ ನಿಸ್ವಾರ್ಥ ಸೇವಕನಾಗಿ ದುಡಿದು ಜನಮನ್ನಣೆ ಗಳಿಸಿದರು. ಕಮ್ಯುನಿಸ್ಟ್ ಪಕ್ಷಕ್ಕೆ ಸರಕಾರ ನಿಷೇಧ ಹೇರಿದಾಗ ಹಲವಾರು ವರ್ಷಗಳ ಕಾಲ ಭೂಗತರಾಗಿ ಕೆಲಸ ಮಾಡಿದ ಶ್ರೇಯಸ್ಸು ಅವರದು.
ಶಾಸಕಿಯಾದ ಮೇಲೆ ಸ್ವರಾಜ್ಯಂ ಅವರು ಕೆಲಸ ಮಾಡಿದ ರೀತಿಯೇ ಒಂದು ಆದರ್ಶದ ಪ್ರತೀಕವಾಗಿದೆ. ಮೊದಲ ಸಲ ಶಾಸಕಿಯಾದಾಗ ವಿಧಾನಸಭೆಯ ಚಪ್ರಾಸಿಯು ಇವರನ್ನು ಒಳಗೆ ಬಿಡದಾಗ ನಡೆದ ಘಟನೆಯನ್ನು ಯಾವುದೇ ಕೀಳರಿಮೆ ಇಲ್ಲದೆ ಹೇಳುವ ರೀತಿಯೇ ಗಮನಾರ್ಹ. ಶಾಸಕಿಯಾಗಿಯೂ ಕೂಲಿಕಾರರಂತೆಯೇ ಬದುಕಿದ ಸ್ವರಾಜ್ಯಂ ಅವರು ಗಾಂಧೀಜಿಯ ತತ್ವಗಳನ್ನು ತನ್ನ ನಡೆಯಲ್ಲಿ ತೋರಿಸಿದರು. ಜಮೀನಿಲ್ಲದವರಿಗೆ ಒಂದು ತುಂಡು ಭೂಮಿ ಕೊಡಿಸಲು ಅವರು ಭೂಮಾಲಕರು, ಪೊಲೀಸರು, ವಕೀಲರು ಮುಂತಾದವರೊಡನೆ ಘರ್ಷಣೆ ಮಾಡುತ್ತಾ ಸಾಗಿದ ಒಂದೊಂದು ಘಟನೆಗಳು ನಮ್ಮ ಅಂತರಂಗವನ್ನು ಕಲಕುವಂತಿದ್ದು ಪ್ರಜ್ಞಾವಂತರು ಪ್ರಣಾಮಗಳನ್ನು ಸಲ್ಲಿಸುವಂತೆ ಮಾಡುತ್ತದೆ. ಭೂದಾನ ಚಳವಳಿಯ ಕಾಲದಲ್ಲಿ ಬಡವರಿಗೆ ಕೊಟ್ಟ ಜಮೀನನ್ನೆಲ್ಲಾ ಭೂಮಾಲಕರು ಕಸಿದು ಕೊಂಡ ಕಾಲದಲ್ಲಿ ಸ್ವರಾಜ್ಯಂ ಅವರು ಹೋರಾಡಿದ ರೀತಿ ಗಮನಾರ್ಹವಾಗಿದೆ. ಮದ್ಯಪಾನ ನಿಷೇಧ ಚಳವಳಿಯಲ್ಲಿ ಮುಂದಾಳ್ತನ ವಹಿಸಿ ಆಗಿನ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರನ್ನು ಸಭೆಗೆ ಆಹ್ವಾನಿಸಿ ಮಹಿಳೆಯರ ಸಮಸ್ಯೆಗಳು, ಅವಕ್ಕೆ ಪರಿಹಾರಗಳು ಹೇಗಿರಬೇಕು, ಬೇಡಿಕೆಗಳು ಯಾವ್ಯಾವುವು ಎಂಬುದನ್ನು ತಿಳಿಸಿ ಮುಖ್ಯಮಂತ್ರಿಗಳು ಜಾರಿಗೆ ತರುವಂತೆ ಮಾಡಿದ ರೀತಿಗೆ ಯಾರಾದರೂ ಬೆರಗಾಗಬೇಕು. ಮಹಿಳೆಯರ ಉನ್ನತಿಗಾಗಿ ಕಾನೂನುಗಳಿವೆ. ಆದರೆ ಅವುಗಳನ್ನು ಜಾರಿಗೆ ತರಬೇಕಾದರೆ ಸ್ವರಾಜ್ಯಂ ಅವರಂತೆ ಚಳವಳಿಗಳನ್ನು ಮಾಡಿಯೇ ಪಡೆಯಬೇಕಾದದು ನಮ್ಮ ದೌರ್ಭಾಗ್ಯವೆನ್ನಬೇಕೆ? ಸೌಭಾಗ್ಯವೆನ್ನಬೇಕೆ? ಗೊತ್ತಿಲ್ಲ.
‘ನನ್ನ ಮಾತೇ ಬಂದೂಕು ಗುಂಡು’ ಎಂದು ಧೈರ್ಯವಾಗಿ ಹೇಳುವ ಸ್ವರಾಜ್ಯಂ ಅವರ ನುಡಿ ಮತ್ತು ನಡೆ ವಿಶಿಷ್ಟವಾದುದು. ಹೋರಾಟಗಾರ್ತಿ ಮಹಿಳೆಯರೇ ವಿರಳ. ಅವರಲ್ಲೂ ಸ್ವರಾಜ್ಯಂ ಅವರಂತೆ ಚಳವಳಿಯನ್ನೇ ಉಂಡು, ಹಾಸಿ ಬದುಕಿದ ವ್ಯಕ್ತಿತ್ವಗಳು ವಿರಳಾತಿ ವಿರಳ. ಅಂತಹ ಅಪೂರ್ವ ವ್ಯಕ್ತಿತ್ವವನ್ನು ಪರಿಚಯಿಸಿದ ಸ. ರಘುನಾಥ ಅವರನ್ನು ಅಭಿನಂದಿಸಲೇಬೇಕು. ಪ್ರಕಟಿಸಿದ ನವ ಕರ್ನಾಟಕ ಸಂಸ್ಥೆಗೂ ಓದುಗರ ಧನ್ಯವಾದಗಳು ಸಲ್ಲುತ್ತವೆ.
ಕೃತಿಯ ಮುಖಬೆಲೆ: 190 ರೂ.
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ. ಲಿ.
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001 ಫೋನ್: 080-22161900/ 22161901/ 22161902
(ಲೇಖಕಿ: ನಿವೃತ್ತ ಶಿಕ್ಷಕರು, ಹಿರಿಯ ಬರಹಗಾರರು)






