ವೈಚಾರಿಕ ಅರಿವಿನ ಹಣತೆಯ ಹಾದಿಯಲಿ...

ನಾವಿಂದು ಅತ್ಯಂತ ಮುಂದುವರಿದ ಕಾಲಘಟ್ಟದಲ್ಲಿದ್ದೇವೆ. ವೈಜ್ಞಾನಿಕ ಆವಿಷ್ಕಾರಗಳು, ತಂತ್ರಜ್ಞಾನದಲ್ಲಿಯ ಅಗಾಧ ಪ್ರಗತಿಯಿಂದಾಗಿ ಬದುಕಿನ ರೀತಿ-ರಿವಾಜುಗಳೆಲ್ಲ ಬಹುತೇಕ ಬದಲಾಗಿಬಿಟ್ಟಿವೆ, ಪ್ರತಿಯೊಂದನ್ನೂ ವೈಜ್ಞಾನಿಕತೆಯ ಮೂಸೆಯಲ್ಲಿ ಪುಟಕ್ಕಿಕ್ಕಿಯೇ ಸ್ವೀಕರಿಸುತ್ತಿದ್ದೇವೆ ಎನ್ನುವಂತೆ ತೋರಿದರೂ ಅದು ಸಂಪೂರ್ಣ ಸತ್ಯವಂತೂ ಅಲ್ಲ. ಕೆಲವು ನಿಶ್ಚಿತವಾದ ಪ್ರಜ್ಞೆಗಳಲ್ಲಿ ನಾವು ಇಂದಿಗೂ ಬೇರೂರಿರುವ ಕಾರಣಕ್ಕಾಗಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ನಮ್ಮ ಶಿಕ್ಷಣ ಕ್ರಮವೂ ಕೂಡ ಇಂತಹದೊಂದು ಪ್ರಜ್ಞೆಯನ್ನು ಸಮರ್ಥವಾಗಿ ಬಿತ್ತುವಲ್ಲಿ ನವೀಕರಣಗೊಂಡಿಲ್ಲವೆನಿಸುತ್ತಿದೆ. ಕೇವಲ ಜ್ಞಾನವನ್ನು ತಲೆಗೆ ತುರುಕುವಲ್ಲಿ ಒಂದಷ್ಟು ಸಫಲತೆಯನ್ನು ಸಾಧಿಸಿದರೂ ವೈಜ್ಞಾನಿಕ ವಿಚಾರಗಳನ್ನು, ವಿವೇಚನಾ ಶಕ್ತಿಯನ್ನು ಪ್ರಚೋದಿಸುವಲ್ಲಿ ಸೋಲುತ್ತಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಜನರ ಧಾರ್ಮಿಕ ಭಾವನೆಗಳನ್ನು ತಮ್ಮ ಅನುಕೂಲತೆಗೆ ತಕ್ಕಂತೆ ವ್ಯಾಖ್ಯಾನಿಸಿ ಶೋಷಿಸುತ್ತಿದ್ದಾರೆ. ದೇವರು, ದೆವ್ವದ ಹೆಸರುಗಳಲ್ಲಿ, ಮೂಢನಂಬಿಕೆಗಳನ್ನು ಇನ್ನಷ್ಟು ಸ್ಥಿರೀಕರಿಸುವ ತನ್ಮೂಲಕ ತಮ್ಮ ಐಷಾರಾಮಿ ಬದುಕನ್ನು ಜನಸಾಮಾನ್ಯರ ಶೋಷಣೆಯ ಪಾತಳಿಯ ಮೇಲೆ ನಿರ್ಮಿಸಿಕೊಳ್ಳುವ ಹುಚ್ಚುತನಕ್ಕೆ ಕೈ ಹಾಕುತ್ತಲೇ ಇದ್ದಾರೆ. ಇದಕ್ಕೆ ಕೊನೆ ಎಂದು ಎನ್ನುವುದು ಇಂದಿಗೂ ನಮ್ಮೆದುರು ಯಕ್ಷಪ್ರಶೆಯಾಗಿಯೇ ಉಳಿದುಕೊಂಡಿದೆ. ಭಯ-ಭಕ್ತಿಯ ನೆಲೆಯಲ್ಲಿ ಮೌಢ್ಯಗಳನ್ನು ಆರಾಧಿಸುತ್ತ ಪ್ರಚೋದಿಸುವುದು ನಿಜಕ್ಕೂ ಖಂಡನೀಯ. ಸಾಮಾಜಿಕ ಬದುಕನ್ನು ವಿರೂಪಗೊಳಿಸುವ, ಮಾನವೀಯ ಸಂಬಂಧಗಳನ್ನು ಒಡೆದು ಹಾಕುವ ಸಂಗತವಲ್ಲದ ಶೋಷಕ ಶಕ್ತಿಗಳ ವಿರುದ್ಧ ದನಿಯೆತ್ತುವ ಮತ್ತು ವಿವೇಕ ಮತ್ತು ಔಚಿತ್ಯಪ್ರಜ್ಞೆಯನ್ನು ಜನಮನದಲ್ಲಿ ಜಾಗ್ರತಗೊಳಿಸುವ ಕಾರ್ಯಗಳು ನಿರಂತರವಾಗಿರಬೇಕು. ಲೇಖಕನಾದವನು ಅದಕ್ಕೆ ತಕ್ಕ ವೈಚಾರಿಕತೆಯ ವಾತಾವರಣವನ್ನು ನಿರ್ಮಿಸುವಲ್ಲಿ ತನ್ನ ಪ್ರಜ್ಞೆಯಿಂದ ತನ್ನ ಸುತ್ತಣ ಸಮಾಜದಲ್ಲಿನ ಬದುಕನ್ನು ತನ್ನ ಅನುಭವದ ತೆಕ್ಕೆಯೊಳಗೆ ತೆಗೆದುಕೊಂಡು ಅದರ ಸುತ್ತಲೂ ಆವರಿಸಿರುವ ತಮಂಧವನ್ನು ಸರಿಸಿ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಬೇಕು. ಈ ಹಿನ್ನೆಲೆಯಲ್ಲಿ ಲೇಖಕ, ಪ್ರಕಾಶಕ, ಸಮಾಜ ಸೇವಕ, ಸಂಘಟಕ, ಪತ್ರಿಕಾ ಸಂಪಾದಕ ಹೀಗೆ ಹತ್ತು ಹಲವು ಉಪಾದಿಗಳನ್ನು ತಮ್ಮ ಬೆನ್ನಿಗಿರಿಸಿಕೊಂಡ ಕೊಪ್ಪಳದ ಜಿ.ಎಸ್.ಗೋನಾಳರು ಪ್ರಸ್ತುತ ಬದುಕಿಗೆ ತೀರ ಅಗತ್ಯವೆನಿಸುವ ‘ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯಗಳ ಆರಾಧಕರು’ ಎಂಬ ಕೃತಿಯನ್ನು ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ. ಮಾನವೀಯ ಸಂವೇದನೆಗಳನ್ನು ತಮ್ಮೆದೆಯಲ್ಲಿ ಕಾಪಿಟ್ಟುಕೊಂಡ, ಸಮಾಜವಾದಿ ಕಾಳಜಿ ಮತ್ತು ವಾಸ್ತವ ಚಿಂತನೆಗಳಿಂದ ತಮ್ಮದೇ ಆದ ಸತ್ವವನ್ನು ರೂಢಿಸಿಕೊಂಡ ಅವರು ಸದಾ ತನ್ನ ಜನ, ತನ್ನ ಸುತ್ತಣ ಪರಿಸರವನ್ನು ಸಾಧ್ಯವಾದಷ್ಟು ಶುದ್ಧೀಕರಿಸುವ ತಹತಹ ಹೊಂದಿದವರು. ಬದುಕಿನ ಅಸ್ತವ್ಯಸ್ತತೆಯನ್ನು ದೂರಕ್ಕೆ ಸರಿಸಿ ಮನುಷ್ಯನ ಬದುಕನ್ನು ಹಸನಾಗಿಸಬೇಕೆನ್ನುವ ಅವರ ಅತುಳ ಹಂಬಲವನ್ನು ಕೃತಿ ಸಾಕ್ಷೀಕರಿಸುತ್ತದೆ.
ನಮ್ಮ ದೇಶಿಯ ಸಂಸ್ಕೃತಿಗಳನ್ನು ವಿಕಾರಗೊಳಿಸುವ, ಸೃಜನಶೀಲತೆಗೆ ಮಾರಕವಾಗುವ, ಮೌಢ್ಯಗಳನ್ನು, ಮೂಢನಂಬಿಕೆಗಳನ್ನು, ಅವೈಜ್ಞಾನಿಕ ಆಚಾರಗಳನ್ನು ಯಾವ ಹಿಂಜರಿಕೆಯೂ ಇಲ್ಲದೇ ನಮ್ಮ ಬಹುತೇಕ ಜನತೆ ತಮ್ಮ ಬದುಕಿನ ಭಾಗವಾಗಿ ತಣ್ಣಗೆ ಒಪ್ಪಿಕೊಂಡು ಶೋಷಣೆಗೆ ಒಳಗಾಗುತ್ತಲೇ ಇರುವುದು ಅಮಾನವೀಯವಾಗಿದೆ. ಲೇಖಕ ಜಿ.ಎಸ್.ಗೋನಾಳ ಪ್ರಸ್ತುತ ಕೃತಿಯಲ್ಲಿ ಮೌಢ್ಯಗಳ ಬಲೆಯಲ್ಲಿ ನೆರಳುವ ಜನತೆಗೆ ಸತ್ಯದರ್ಶನ ಮಾಡಿಸುವ ಮೂಲಕ ತಮ್ಮ ಸುತ್ತಣ ಜಗತ್ತನ್ನು ಸುಂದರಗೊಳಿಸುವ, ಸುಖಮಯವಾಗಿಸುವ, ಇನ್ನಷ್ಟು ವೈಚಾರಿಕವಾಗಿ ಕಟ್ಟಿಕೊಡುವ ಸಾರ್ಥಕ ಪ್ರಯತ್ನ ಮಾಡಿದ್ದಾರೆೆ. ಭೌಗೋಳಿಕ ಸ್ಥಿತಿಗತಿಗಳ ಮೇಲೆ ಬಹುತೇಕ ಅವಲಂಬಿತವಾಗಿ ಬೆಳೆದು ಬಂದಿರುವ ಆಹಾರ ಪದ್ಧತಿಯನ್ನು ಜಾತಿ, ಮತ, ಪಂಥಗಳ ನಿಲುವುಗಳಲ್ಲಿ ಸಿಲುಕಿಸುವ ಮೌಢ್ಯಗಳನ್ನು ಅವರು ತಮ್ಮ ಲೇಖನದಲ್ಲಿ ಖಂಡಿಸುತ್ತಾರೆ. ಜ್ಯೋತಿಷ್ಯದ ಹೆಸರಿನಲ್ಲಿ ನಡೆಯುವ ವ್ಯವಸ್ಥಿತವಾದ ಶೋಷಣೆಯ ಷಡ್ಯಂತ್ರಗಳನ್ನು, ಲೇಖಕ ಗೋನಾಳ ಅವರು ತಮ್ಮ ಲೇಖನಗಳಲ್ಲಿ ಮಾರ್ಮಿಕವಾಗಿ ಪ್ರಸ್ತಾಪಿಸುತ್ತಾರೆ. ವೈಚಾರಿಕ ಸಂಗತಿಗಳನ್ನು ಚರ್ಚಿಸುತ್ತ ಆರೋಗ್ಯಕರ ನಂಬಿಕೆಗಳನ್ನು ಇಂಬುಗೊಳಿಸುತ್ತಾರೆ. ಇಂದಿಗೂ ತನ್ನದೇ ಕಂಬಂಧ ಬಾಹುಗಳ ಚಾಚಿಕೊಂಡಿರುವ ಮೂಢನಂಬಿಕೆಗಳಿಂದ ಹೊರತರುವ ಲೇಖಕರ ಪ್ರಯತ್ನ ಮೆಚ್ಚುಗೆ ಗಳಿಸುತ್ತದೆ.
ಇಲ್ಲಿನ ಲೇಖನಗಳ ಒಡಲಿನಲ್ಲಿ ಲೇಖಕರು ದೈನಂದಿನ ಬದುಕಿನಲ್ಲಿ ತೀರ ಸಹಜವೆನ್ನುವಂತೆ ನಡೆದು ಹೋಗುವ ಸಂಗತಿಗಳ ಹಿಂದಿನ ಶೋಷಕ ಶಕ್ತಿಗಳ ಕರಾಳ ಮುಖಗಳನ್ನು ಅನಾವರಣಗೊಳಿಸಿದ್ದಾರೆ. ವಾಸ್ತವ ಸಂಗತಿಗಳಿಗೆ ಶಿಸ್ತಿನೊಂದಿಗೆ ಸಾಹಿತ್ಯಿಕ ಸ್ಪರ್ಶ ನೀಡಿದ್ದಾರೆ. ಅಚ್ಚುಕಟ್ಟಾದ ನಿರೂಪಣೆ ಶೈಲಿಯಿಂದ ಅಬ್ಬರವಿಲ್ಲದೆ ಅರಿವಿನ ಬೆಳಕು ಹಚ್ಚಿದ್ದಾರೆ. ಸಾಮಾಜಿಕ ವಾಸ್ತವಗಳನ್ನು ಅರಗಿಸಿಕೊಂಡು ಹೊಸ ಸಾಧ್ಯತೆಗಳ ಹೊಳಹು ಮೂಡಿಸಲು ಕಾರಣವಾಗಿದ್ದಾರೆ.






