ಮಹಿಳಾ ಮುನ್ನಡೆಗೆ ರುಜು: ಡಾ. ಎಚ್. ಗಿರಿಜಮ್ಮ

ಡಾ. ಎಚ್. ಗಿರಿಜಮ್ಮ ಜೀವನ ಚರಿತ್ರೆ ರಚಿಸಿದವರು ಖ್ಯಾತ ವೈದ್ಯರು, ವೈದ್ಯಕೀಯ ಲೇಖಕರು, ಪ್ರಖರ ಚಿಂತಕರಾದ ಡಾ.ವಸುಂಧರಾ ಭೂಪತಿ ಅವರು. ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ರೂಪಿಸಲಾದ ‘ಮಹಿಳಾ ಮುನ್ನಡೆ’ ಪುಸ್ತಕ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕ. ಕರ್ನಾಟಕ ಸಾಹಿತ್ಯ ಅಕಾಡಮಿ 2026ರಲ್ಲಿ ಪ್ರಕಟಿಸಿದೆ.
ಮೈಸೂರು ರಾಜ್ಯವಾಗಿದ್ದ ಕನ್ನಡ ನಾಡು ಕರ್ನಾಟಕವೆಂದು ಮರು ನಾಮಕರಣವಾಗಿ 2023 ರ ನವೆಂಬರ್ ಒಂದಕ್ಕೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಾಡು ನುಡಿ ಸಾಹಿತ್ಯ ಸಂಸ್ಕೃತಿಗೆ ಗಣನೀಯ ಕೊಡುಗೆ ನೀಡಿದ ನಾಡಿನ ಐವತ್ತು ಜನ ಸಾಧಕೀಯರನ್ನು ಗುರುತಿಸಿ, ರಾಜ್ಯಸರಕಾರ ಗೌರವಿಸಿತ್ತು. ಅಂಥವರನ್ನು ಪರಿಚಯಿಸುವ ಮಾಲಿಕೆ-ಮಹಿಳಾ ಮುನ್ನಡೆ.
ಡಾ. ಗಿರಿಜಮ್ಮನವರ ಬದುಕು ಮತ್ತು ಸಾಧನೆ, ಗಿರಿಜಮ್ಮನವರ ಸಾಹಿತ್ಯ ಲೋಕ, ಕಥಾ ಸಾಹಿತ್ಯ, ಕಾದಂಬರಿಗಳು, ಗಿರಿಜಮ್ಮನವರ ಕೃತಿಗಳ ವಿವರಗಳು, ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಮುಂತಾದ ಆರು ಅಧ್ಯಾಯಗಳು ಡಾ. ಗಿರಿಜಮ್ಮನವರ ಬದುಕು ಬರಹ, ಜೀವನ ಸಾಧನೆಯ ಮೈಲುಗಲ್ಲುಗಳನ್ನು ಕಟ್ಟಿಕೊಡುತ್ತವೆ 116 ಪುಟಗಳ ಪುಸ್ತಕವಿದು.
ಡಾ. ಗಿರಿಜಮ್ಮ ಸಮಾಜದ ಅತ್ಯಂತ ಕೆಳಸ್ತರದ ಕುಟುಂಬದಲ್ಲಿ ಜನಿಸಿ, ಕಡು ಕಷ್ಟಗಳ ನಡುವೆಯೂ ತಮ್ಮ ಪ್ರತಿಭೆ, ಪರಿಶ್ರಮ, ಸೇವೆ, ಮಾನವೀಯ ಅಂತಃಕರಣಗಳಿಂದಾಗಿ ಗೌರವ ಮತ್ತು ಜನ ಮೆಚ್ಚುಗೆಗೆ ಪಾತ್ರರಾದವರು. ಸಾಮಾನ್ಯ ದಲಿತ ಕುಟುಂಬದಿಂದ ಬಂದ ಹೆಣ್ಣು ಮಗಳು ಬಡತನದ ದಯನೀಯ ಪರಿಸ್ಥಿತಿ, ಕೀಳರಿಮೆ ಮತ್ತು ಅವಮಾನಗಳ ಎಲ್ಲೆಯನ್ನು ದಾಟಿ ಎಲ್ಲರೆದುರು ದಿಟ್ಟ ಆತ್ಮವಿಶ್ವಾಸದಿಂದ ಗಟ್ಟಿಗಿತ್ತಿಯಾಗಿ ತನ್ನ ಬದುಕನ್ನು ಯಶಸ್ವಿಯಾಗಿ ರೂಪಿಸಿಕೊಂಡವರು. ಬಹುಮುಖ ಪ್ರತಿಭೆಯಿಂದ ಪ್ರಸಿದ್ಧಿ ಪಡೆದು ಇತರರಿಗೆ ಸ್ಫೂರ್ತಿಯಾಗಿ ನಿಂತವರು ಡಾ.ಎಚ್.ಗಿರಿಜಮ್ಮ.
ಗಿರಿಜಮ್ಮನವರು ವೃತ್ತಿಯಿಂದ ವೈದ್ಯರು. ಪ್ರವೃತ್ತಿಯಿಂದ ಸಾಹಿತಿಗಳು. ಸಾಕ್ಷ್ಯಚಿತ್ರ, ಚಲನಚಿತ್ರ, ಕಿರುತರೆ, ನಿರ್ದೇಶನ, ಚಿಂತನೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವೈದ್ಯರಾಗಿ ಜನಾನುರಾಗಿಯಾಗಿದ್ದವರು. ವೃತ್ತಿಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದವರು. ಅವರ ಎದೆಯ ಮಾತುಗಳು ಅಕ್ಷರವಾಗಿ ಕೃತಿಗಳಲ್ಲಿ ಮೈದಳೆದಿವೆ. ನಾಡಿನ ಮೂಲೆ ಮೂಲೆಯ ಓದುಗರು ಅವರ ಕೃತಿಗಳನ್ನು ಮೆಚ್ಚಿದ್ದು ಗಮನಾರ್ಹ ಅಂಶವಾಗಿದೆ.
ಮಹಿಳಾ ಮುನ್ನಡೆ ಮೊದಲ ಅಧ್ಯಾಯ ಬದುಕು ಸಾಧನೆ, ಇದರಲ್ಲಿ-ಬಾಲ್ಯ ಮತ್ತು ಶಿಕ್ಷಣ, ತಾಯಿಯ ಕನಸು, ಸಾಹಿತ್ಯದ ಸಂಗಾತ, ವೈದ್ಯಕೀಯ ಶಿಕ್ಷಣ, ಬಣ್ಣದ ಕೀಳರಿಮೆ ಮಾಯ, ಮೊದಲ ಕಥೆ, ವೈದ್ಯಕೀಯ ಪದವಿ, ವೃತ್ತಿ ಜೀವನದ ಆರಂಭ, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಸೇವೆ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ, ಖಾಸಗಿ ನರ್ಸಿಂಗ್ ಹೋಮ್, ಮರಳಿ ಸರಕಾರಿ ಸೇವೆಗೆ, ಹೊಸ ಅಧ್ಯಾಯ, ಕಿರುತೆರೆ, ಅಗ್ನಿ ದಿವ್ಯ ಹಾದು ಬಂದವರು, ನಿಧನದ ಸುದ್ದಿ, ಭಾವಯಾನ ಮುಗಿಸಿ, ಮೌನಕ್ಕೆ ಜಾರಿದ ಗಿರಿಜಮ್ಮ ಈ ಉಪ ಶೀರ್ಷಿಕೆಗಳಲ್ಲಿ ಗಿರಿಜಮ್ಮನ ಜೀವನದ ಸಾಹಸಗಾಥೆಯನ್ನು ಚೇತೋಹಾರಿಯಾಗಿ ವಸುಂಧರಾ ಭೂಪತಿಯವರು ನಿರೂಪಿಸಿದ್ದಾರೆ.
ಎರಡನೇ ಅಧ್ಯಾಯ ಸಾಹಿತ್ಯಲೋಕ. ವೈದ್ಯಕೀಯ ಸಾಹಿತ್ಯ, ಪ್ರಸವ - ಗರ್ಭಿಣಿ ಕೈಪಿಡಿ, ಮಿತಿ ಸಂತಾನಕ್ಕೆ ಸರಳ ಮಾರ್ಗಗಳು, ಮಕ್ಕಳ ಮನಸ್ಸು ಮತ್ತು ಬೆಳವಣಿಗೆ, ಬಸಿರು, ಶಿಶು ಪೀಡಕರು ಮತ್ತು ಶವ ಹೇಳಿದ ಸಾಕ್ಷಿಗಳು, ರಕ್ತದ ಕಾಯಿಲೆಗಳು, ಸೀತ್ತ ದೇಹ, ಗರ್ಭಿಣಿ ಮಹಿಳೆಗೊಂದು ಕೈಪಿಡಿ, ಮಕ್ಕಳ ಮಾನಸಲೋಕ, ನಿಮ್ಮ ಮಗು, ಸೀತ್ತರೋಗಗಳು ಮುಂತಾದವು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸ್ವತಃ ವೈದ್ಯರಾದ ಭೂಪತಿಯವರು ಅರ್ಥಪೂರ್ಣ ವಾಗಿ ಪರಿಚಯಿಸಿದ್ದಾರೆ.
ಮೂರನೇ ಅಧ್ಯಾಯ- ಕಥಾ ಸಾಹಿತ್ಯದ ಪಕ್ಷಿನೋಟ. ಹೂ ಬಳ್ಳಿಗೆಲ್ಲಿ ಆಸರೆ, ಬಿರುಕು, ಪೋಸ್ಟ್ ಮಾರ್ಟಂ, ಮಂದಾರ ಹೂ ಗಿರಿಜಮ್ಮನರ ಕಥಾಪ್ರಪಂಚವನ್ನು ಮಾರ್ಮಿಕವಾಗಿ ಪರಿಚಯಿಸಿದ್ದಾರೆ.
ನಾಲ್ಕನೆಯ ಅಧ್ಯಾಯ ಕಾದಂಬರಿ.ಇದರಲ್ಲಿ ಮುಡಿದ ಮಲ್ಲಿಗೆ, ಪ್ರತಿಬಿಂಬ, ಮರೀಚಿಕೆ, ಸೀಮಾ ರೇಖಾ, ಮುಸುಕು, ಒಂಟಿ ತಾರೆ, ಹತ್ಯೆ, ಬೆಂಕಿ ಹೂವು, ಗಾಜಿನ ಮನೆ, ಮೇಘ ಮಂದಾರ, ಅಂಬರ ತಾರೆ, ಪರಿಣಿತಾ, ಸಂಜೆಮಲ್ಲಿಗೆ, ಸ್ತ್ರೀ, ಅಂಕುರ, ಅರ್ಧಾಂಗಿ, ಚಂದಮಾಮ, ಸಾಗರಸೇರುವ ನದಿ, ತಮಸೋಮಾ ಜ್ಯೋತಿರ್ಗಮಯ, ಪ್ರಿಯಾ, ಹೂಬನ, ಸ್ಪಂದನಾ, ಸಾಧನಾ, ಸುಪ್ತ ಮನಸ್ಸಿನ ಸಪ್ತಸರಗಳು ಮತ್ತು ಕಲರವ ಇವು ಗಿರಿಜಮ್ಮನವರ ಕಾದಂಬರಿಗಳಾಗಿವೆ.
ಐದನೇ ಅಧ್ಯಾಯ ಗಿರಿಜಮ್ಮನವರ ಕೃತಿಗಳು. ಆಂದೋಲನ (ಏಡ್ಸ್ ಕುರಿತು 13), ಉದ್ಯೋಗಸ್ಥ ಮಹಿಳೆ (ಮಹಿಳಾ ಸಮಸ್ಯೆಗಳ ಕುರಿತು 13) ನಾಟಕಗಳು, ಒಟ್ಟು 26 ನಾಟಕಗಳ ವಿಹಂಗಮ ನೋಟವಿದೆ.
ಹಂದಿಗೋಡು ಕಾಯಿಲೆ, ಏಡ್ಸ್ ರೋಗ, ಕುಷ್ಠರೋಗ, ಜುಂಜಪ್ಪ, ಕ್ಯಾನ್ಸರ್, ಮಲೇರಿಯಾ ಮುಂತಾದವು ಸಾಕ್ಷ್ಯಚಿತ್ರಗಳಾಗಿವೆ. ಆಶ್ವಾಸನೆ, ಆಶ್ರಯ, ಆಗಮ್ಯ, ಹತ್ಯೆ, ಒಂಟಿ ತಾರೆ, ಬೆಂಕಿಹೂ, ಪರಿಣಿತಾ ಪರಪುಟ್ಟ,ಮರಣೋತ್ತರ, ಆಘಾತ, ಒಲುಮೆಯ ಹೂ, ಬದುಕು ಬೇಕೆಂದವರು, ಕಮರಿದ ಹೂವು, ಒಂದು ಹೆಣ್ಣಿನ ಕಥೆ, ದೀಪದ ಕೆಳಗೆ ಇವು ಟೆಲಿ ಚಿತ್ರಗಳಾಗಿವೆ.ಸ್ಪಂದನ, ಅಂಕುರ, ಪ್ರತಿಬಿಂಬ, ಸುಪ್ತ ಮನಸ್ಸಿನ ಸಪ್ತಸರಗಳು, ಆವಿಷ್ಕಾರ ದೂರದರ್ಶನದ ಧಾರಾವಾಹಿಗಳು. ಕಾಡತಾವ ನೆನಪು ಆತ್ಮಕಥನವಾಗಿದೆ.
ಕಾಡತಾವ ನೆನಪುಗಳು ಬರವಣಿಗೆ ರೀತಿಯೇ ಆತ್ಮನಿವೇದನೆ ಆಪ್ತತೆಯಿಂದ ಕೂಡಿದೆ. ಮಾನಸಪುತ್ರಿಗೆ ಬರೆದ ಪತ್ರ ಮಾದರಿಯ ರೀತಿಯಲ್ಲಿ ನೆನಪುಗಳು ಬಿಚ್ಚಿಕೊಳ್ಳತೊಡಗುತ್ತವೆ ಪ್ರಮುಖ ಘಟನಾವಳಿಗಳು ಆತ್ಮಾವಲೋಕನದ ಮಾದರಿಯಲ್ಲಿ ನಿರೂಪಿತವಾಗಿವೆ. ಬರವಣಿಗೆಯ ವಿಶೇಷತೆ, ಅನನ್ಯತೆ ಎಂದರೆ ತಮ್ಮ ಬದುಕಿನಲ್ಲಿ ಘಟಿಸುವ ಅವಘಡಗಳಿಗೆ ಯಾರನ್ನೂ ದೂಷಿಸದೆ, ತಮ್ಮನ್ನೇ ತಾವು ನಿಕಷಕ್ಕೆ ಒಡ್ಡಿಕೊಂಡು ಬದುಕನ್ನು ಅವಲೋಕಿಸಿದ್ದಾರೆ. ಮಾಗಿದ ಮನಸ್ಥಿತಿ, ನಿವೃತ್ತಿ ಜೀವನದ ಸಂದರ್ಭದಲ್ಲಿ ಪುಸ್ತಕ ಬರೆದಿರುವುದು ಪರಿಪಕ್ವ ಬರವಣಿಗೆಗೆ ನಿದರ್ಶನವಾಗಿದೆ.
ಆರನೆಯ ಅಧ್ಯಾಯದಲ್ಲಿ ಗಿರಿಜಮ್ಮನವರ ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಪಟ್ಟಿಯಿದೆ. ಪುಸ್ತಕದ ಕೊನೆಯಲ್ಲಿ ಕಪ್ಪು ಬಿಳುಪು ಭಾವಚಿತ್ರಗಳಿದ್ದು, ಗಿರಿಜಮ್ಮನವರ ಬದುಕಿನ ದಾಖಲೀಕರಣವಾಗಿದೆ.ಬಹುಮುಖಿ ವ್ಯಕ್ತಿತ್ವದ ಅನಾವರಣವಾಗಿದೆ.ವಿಭಿನ್ನ ಕಾರ್ಯಗಳನ್ನು ಭಾವಚಿತ್ರಗಳು ಸಾಕ್ಷೀಕರಿಸುತ್ತವೆ. ಮೌಲಿಕ ಬದುಕಿನ, ಘನವಾದ ವ್ಯಕ್ತಿತ್ವದ ಪರಿಚಯವಾಗುತ್ತದೆ. ನಿಜಕ್ಕೂ ಮಹಿಳಾ ಮುನ್ನಡೆ ಯೋಜನೆ ಸಾರ್ಥಕ ಪ್ರಯತ್ನವಾಗಿದೆ. ಡಾ. ವಸುಂಧರಾ ಭೂಪತಿ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಲೇಖಕರು: ಡಾ. ವಸುಂಧರಾ ಭೂಪತಿ
ಪ್ರಕಾಶನ: ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು.
ಪುಟ-116, ಬೆಲೆ-80 ರೂ.






