Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ‘ಖ್ಯಾತ ಶಿಕ್ಷಣ ಸಿದ್ಧಾಂತಿಗಳು’ ಒಂದು...

‘ಖ್ಯಾತ ಶಿಕ್ಷಣ ಸಿದ್ಧಾಂತಿಗಳು’ ಒಂದು ಕಿರುನೋಟ

ಬಿ.ಎಂ. ರೋಹಿಣಿಬಿ.ಎಂ. ರೋಹಿಣಿ25 Oct 2026 12:12 PM IST
share
‘ಖ್ಯಾತ ಶಿಕ್ಷಣ ಸಿದ್ಧಾಂತಿಗಳು’ ಒಂದು ಕಿರುನೋಟ

19 ಮತ್ತು 20ನೇ ಶತಮಾನವು ಇಡೀ ಜಗತ್ತಿನಲ್ಲೇ ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿಯನ್ನುಂಟು ಮಾಡಿದ ಕಾಲವಾಗಿದೆ. ಕೆಲವರಿಗೆ ಮಾತ್ರ ಇದ್ದ ಶಿಕ್ಷಣ ಎಲ್ಲರಿಗೂ ದಕ್ಕುವಂತಾಗಬೇಕು ಎಂಬ ಕಾಳಜಿ ಈ ಕಾಲದಲ್ಲಿ ಪ್ರಾರಂಭವಾಯಿತು. ಇದರಿಂದಾಗಿ ಒಂದು ಯುಗವೇ ಪಲ್ಲಟಗೊಂಡಿತು. ಈ ಬದಲಾವಣೆಗೆ ಅನೇಕ ಶಿಕ್ಷಣ ತಜ್ಞರು ಬೇರೆ ಬೇರೆ ರೀತಿಯ ಸಲಹೆಗಳನ್ನು, ಸಿದ್ಧಾಂತಗಳನ್ನು ರೂಪಿಸಿ, ಪರಿಣಾಮಕಾರಿಯಾದ ಶಿಕ್ಷಣವು ದೋಷರಹಿತವಾಗಿ, ಗುಣಭರಿತವಾಗಿರುವಂತೆ ನೋಡಿಕೊಂಡು ಕಾಲದಿಂದ ಕಾಲಕ್ಕೆ ಹೊಸ ದೃಷ್ಟಿಕೋನದಿಂದ ಶಿಕ್ಷಣದ ಫಲಶ್ರುತಿಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳನ್ನು ಮಾಡುತ್ತಾ ಕ್ರಮ, ನಿಯಮಗಳನ್ನು ಪರಿಷ್ಕರಿಸಿದರು. ಹೀಗೆ ಈ ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಶೀಲರಾಗಿ ದುಡಿದ ಹಲವು ಮಹಾಪುರುಷರಲ್ಲಿ ಕೆಲವರ ಸಾಧನೆಗಳು, ಅವರು ಈ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ‘ಖ್ಯಾತ ಶಿಕ್ಷಣ ಸಿದ್ಧಾಂತಿಗಳು’ ಎಂಬ ಕೃತಿಯಲ್ಲಿ ಡಾ. ಮಹಾಬಲೇಶ್ವರ ರಾವ್ ಅವರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಶಿಕ್ಷಕ ಶಿಕ್ಷಣ ಮಹಾವಿದ್ಯಾನಿಲಯದಲ್ಲಿ ದೀರ್ಘಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಮಹಾಬಲೇಶ್ವರ ರಾವ್ ಅವರು ಕೂಡ ಶಿಕ್ಷಣ ತಜ್ಞರಾಗಿಯೇ ಪ್ರಸಿದ್ಧರು. ಅವರ ಅಪಾರ ಅನುಭವ ಮತ್ತು ಅಧ್ಯಯನದ ಫಲಶ್ರುತಿಯಾಗಿ ಅನೇಕ ಕೃತಿಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಕಟವಾಗಿವೆ. ಅವರು ಈ ಕೃತಿಯಲ್ಲಿ ಜಗತ್ತಿನ ಪ್ರಸಿದ್ಧ ಶಿಕ್ಷಣ ತಜ್ಞರು ಮಾಡಿದ ಕೆಲಸಗಳ ಬಗ್ಗೆ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಕ್ರಿಸ್ತ ಪೂರ್ವದ ಗ್ರೀಕ್ ತತ್ವ ಜ್ಞಾನಿ ಪ್ಲೇಟೊನ ಸಿದ್ಧಾಂತವು ಬಾಲ್ಯದ ಶಿಕ್ಷಣವು ಮನೋರಂಜಕವಾಗಿರಬೇಕು. ಬಲವಂತದ ಕಲಿಕೆ ಸಲ್ಲದು, ಮಕ್ಕಳು ಗುರುಗಳನ್ನು ಪ್ರಶ್ನಿಸಬೇಕು. ತಮ್ಮ ಸಂದೇಹಗಳನ್ನು ತಾವೇ ಪರಿಹರಿಸಿಕೊಳ್ಳುವ ಬೋಧನಾ ಪದ್ಧತಿಯನ್ನು ಹೇಳುತ್ತದೆ. 17ನೇ ಶತಮಾನದ ಜಾನ್ ಎಮೊಸ್ ಕೂಮೆನಿಯಸ್ ಜೆಕೊಸ್ಲೊವಾಕಿಯಾದ ಶಿಕ್ಷಣ ಸುಧಾರಕನೂ, ಧಾರ್ಮಿಕ ಮುಖಂಡನೂ ಆಗಿದ್ದ. ಇವನನ್ನು ಆಧುನಿಕ ಶಿಕ್ಷಣದ ತಂದೆ ಎಂದು ಗೌರವಿಸುತ್ತಾರೆ. ಆಟ, ನಾಟಕಗಳ ಮೂಲಕ ಮಕ್ಕಳು ಕಲಿಯುತ್ತಾರೆ. ವೈಜ್ಞಾನಿಕ, ತಾಂತ್ರಿಕ, ದಾರ್ಶನಿಕ, ಧಾರ್ಮಿಕ ಮತ್ತು ರಾಜಕೀಯ ಜ್ಞಾನವನ್ನು ಸಮರಸಗೊಳಿಸುವ ಜ್ಞಾನ (ಸಾಕಲ್ಯ ದರ್ಶನ)ವನ್ನು ಶಿಕ್ಷಣವು ನೀಡಬೇಕು ಎಂದು ಪ್ರತಿಪಾದಿಸಿದನು. 18ನೆಯ ಶತಮಾನದ ಫ್ರಾನ್ಸ್‌ನ ಜೀನ್ ಜಾಕ್ಸ್ ರೂಸೊ ಶಿಕ್ಷಣ ಮತ್ತು ರಾಜಕೀಯ ತತ್ವ, ಸಿದ್ಧಾಂತಗಳ ಪತಿಪಾದಕ. ‘‘ಗೋಡೆಗಳನ್ನು ಒಡೆಯಿರಿ, ಪುಸ್ತಕಗಳನ್ನು ಸುಡಿರಿ, ಮಗುವನ್ನು ಪ್ರಕೃತಿಯ ಮಡಿಲಿಗೆಸೆಯಿರಿ’’, ‘‘ಬೆತ್ತ ಪ್ರಯೋಗ ಮಾಡಿ ಮಗುವನ್ನು ಹಾಳು ಮಾಡಬೇಡಿ’’ ಎಂದು ದಿಟ್ಟ ಧ್ವನಿಯಲ್ಲಿ ಸಾರಿದ ರೂಸೊ ಮಗುವನ್ನು ಸೆರೆಮನೆಯಿಂದ ಬಿಡಿಸಿ ಬಿಡುಗಡೆಯ ಬಯಲಿಗೆ ತಂದ ಧೀಮಂತ ತತ್ವಜ್ಞಾನಿಯಾಗಿದ್ದಾನೆ. 18ನೇ ಶತಮಾನದ ಜೊಹಾನ್ ಹೆನ್ರಿಕ್ ಪೆಸ್ಟಾಲಜಿ ಜ್ಯೂರಿಚ್‌ನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಿಸಿದನು. ಶಿಕ್ಷಣದಲ್ಲಿ ಹಿಂದೆ ವಸ್ತು ಮುಖ್ಯವಾಗಿದ್ದು ಮಗು ಗೌಣವಾಗಿತ್ತು. ಆದರೆ ಪೆಸ್ಟಾಲಜಿಯು ಮಗುವೇ ಪ್ರಧಾನ ಎಂದು ಪ್ರತಿಪಾದಿಸಿ ಶಿಕ್ಷಣವನ್ನು ಮಾನವೀಯಗೊಳಿಸಿದನು. ಶಿಕ್ಷಕರ ಶಿಕ್ಷಣವನ್ನು ಮೊತ್ತ ಮೊದಲಿಗೆ ಜಗತ್ತಿನಲ್ಲಿ ರೂಪಿಸಿದ ತಜ್ಞನೆಂಬ ಗೌರವಕ್ಕೆ ಇವನು ಪಾತ್ರನಾಗಿದ್ದಾನೆ. ಹದಿನೆಂಟನೇ ಶತಮಾನದ ಜೋಹಾನ್ ಫ್ರೆಡ್ರಿಕ್ ಹರ್ಬರ್ಟ್ ಜರ್ಮನಿಯಲ್ಲಿ ಶಿಕ್ಷಣದ ಪ್ರಗತಿಗೆ ಶ್ರಮಿಸಿದನು. ಇಂದಿಗೂ ಶಿಕ್ಷಣ ಕಾಲೇಜುಗಳಲ್ಲಿ ಪ್ರಧಾನ ಸಿದ್ಧಾಂತವಾಗಿ ಕಲಿಸಲ್ಪಡುವ ಪಂಚ ಸೋಪಾನಗಳು ಕಲಿಸುವಿಕೆಗೆ ಒಂದು ಶಿಸ್ತು ಮತ್ತು ಒಂದಿಷ್ಟು ಸ್ವಾತಂತ್ರ್ಯವೂ ಇರಬೇಕು ಎಂದು ಹೇಳಿದನು. ಉತ್ತಮ ಬೋಧನೆ ಮಾತ್ರ ಶಿಕ್ಷಣವನ್ನು ಜನಪ್ರಿಯಗೊಳಿಸಬಹುದು ಎಂದು ನಂಬಿದ್ದನು. ಜರ್ಮನಿಯವನೇ ಆದ ಫ್ರೆಡ್ರಿಕ್ ಫ್ರೊಬೆಲ್ ಕಿಂಡರ್ ಗಾರ್ಟನ್ (ಮಕ್ಕಳ ಉದ್ಯಾನ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದವನು. ಫ್ರೊಬೆಲ್ ಕ್ರೀಡೆಗೆ ನೀಡಿದ ಒತ್ತು ಆಧುನಿಕ ಶಿಕ್ಷಣದಲ್ಲಿ ಪ್ರಮುಖವಾದ ಕ್ರೀಡಾ ಪದ್ಧತಿಯ ಉಗಮಕ್ಕೆ ಕಾರಣವಾಯಿತು.

19ನೇ ಶತಮಾನದಲ್ಲಿ ಹರ್ಬರ್ಟ್ ಸ್ಪೆನ್ಸರ್ ಶಿಕ್ಷಣದಲ್ಲಿ ಸಪ್ತ ಸೂತ್ರಗಳ ಮೂಲಕ ಪರಿಣಾಮಕಾರಿಯಾದ ಶಿಕ್ಷಣವನ್ನು ನೀಡಬಹುದು ಎಂದು ಪ್ರತಿಪಾದಿಸಿದನು. ಶಿಕ್ಷಕರು ಆದಷ್ಟು ಕಡಿಮೆ ಹೇಳಬೇಕು. ಮಕ್ಕಳು ಆದಷ್ಟು ಹೆಚ್ಚು ಕಂಡು ಹಿಡಿಯಲು ಪ್ರೇರಣೆ ನೀಡಬೇಕು ಎಂದು ಸಾರಿದನು. ಅಮೆರಿಕದ ಜಾನ್ ಡ್ಯೂಯಿ ತತ್ವಜ್ಞಾನಿಯೂ, ಮನೋವಿಜ್ಞಾನಿಯೂ ಆಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಿದನು. ಪಠ್ಯಗಳು ಮಗುವಿನ ಅಭಿರುಚಿಗನುಸಾರವಾಗಿರಬೇಕು. ಅನುಭವದಿಂದ ಅನುಭವಕ್ಕಾಗಿ ಅನುಭವದ ಶಿಕ್ಷಣ ನೀಡಬೇಕು ಎಂದು ಸಾರಿದನು. ಇಟಲಿಯ ಮರಿಯ ಮಾಂಟೆಸಾರಿಯು ಶಿಶು ಕೇಂದ್ರಿತ ಶಿಕ್ಷಣದ ಪ್ರತಿಪಾದಕಳಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾಳೆ. ಸ್ಕಾಟ್ಲೆಂಡ್‌ನ ಎ.ಎಸ್. ನೀಲ್ ತನ್ನ ‘ಸಮರ್ ಹಿಲ್’ ಎಂಬ ಕೃತಿಯಲ್ಲಿ, ಶಿಕ್ಷಕರೂ ವಿದ್ಯಾರ್ಥಿಗಳೂ ಸಮಾನರು. ಮಕ್ಕಳಿಗೆ ಹೋಂವರ್ಕ್ ಕೊಡಬಾರದು. ಬಹುಮಾನಗಳನ್ನು, ಅಂಕಗಳನ್ನು ನೀಡಬಾರದು. ಶಾಲೆಯು ಪ್ರೀತಿ ಮತ್ತು ಸ್ವಾತಂತ್ರ್ಯದ ಪ್ರಾತ್ಯಕ್ಷಿಕೆಯ ನೆಲೆಯಾಗಿರಬೇಕು. ಧರ್ಮಾಧಾರಿತ ನೀತಿ ಬೋಧನೆಗೆ ಶಾಲೆಯಲ್ಲಿ ಅವಕಾಶವಿರಬಾರದು ಎಂದು ಸಾರಿದನು. 20ನೇ ಶತಮಾನದ ಬ್ರೆಝಿಲ್‌ನ ಪಾವ್ಲೊ ಪ್ರೆಯರೆ ಶಿಕ್ಷಣವು ಶೋಷಿತರ ಬಿಡುಗಡೆಯ ಅಸ್ತ್ರವಾಗಬೇಕು. ಅಕ್ಷರ ಜ್ಞಾನ ಮತ್ತು ಸಾಮಾನ್ಯ ಶಿಕ್ಷಣವು ಜನರಲ್ಲಿ ಅರಿವು ಮೂಡಿಸಿ, ವೈಚಾರಿಕ ಜಾಗೃತಿಯನ್ನುಂಟು ಮಾಡಬೇಕು ಎಂದು ಸಾರಿದನು. ಆಸ್ಟ್ರಿಯಾ ದೇಶದ ಇವಾನ್ ಇಲಿಚ್ ‘ಶಾಲಾ ಮುಕ್ತ ಸಮಾಜ’ ಎಂಬ ಕೃತಿಯಲ್ಲಿ ಹಲವು ಕ್ರಾಂತಿಕಾರಿ ವಿಷಯಗಳನ್ನು ಪ್ರತಿಪಾದಿಸಿದನು. ಶಿಕ್ಷಣವು ಮಾರಾಟದ ಸರಕಾಗಿ ಪರಿವರ್ತಿಸಲ್ಪಟ್ಟಿರುವುದನ್ನು ತೀವ್ರವಾಗಿ ವಿರೋಧಿಸಿದನಾದರೂ ಅದಕ್ಕೆ ಪರ್ಯಾಯ ದಾರಿಯನ್ನು ತೋರಿಸಲಿಲ್ಲ. ಸ್ತ್ರೀವಾದಿ ಚಿಂತಕಿಯಾದ ಬೆಲ್‌ಹುಕ್ಸ್ ಶಿಕ್ಷಣ ಜೀವದಾಯಿನಿಯಾದ, ಮನೋವಿಸ್ತರಣೆಯ, ಪರಸ್ಪರ ಬಿಡುಗಡೆಯ ನೆಲೆಯಾಗಬೇಕು ಎಂದು ಸಾರಿದಳು.

ಪಾಶ್ಚಾತ್ಯ ಚಿಂತಕರು ಹೇಳಿದ ಶಿಕ್ಷಣದ ಸಿದ್ಧಾಂತಗಳ ಜೊತೆಗೆ ಭಾರತದಲ್ಲಿ ಹೇಗೆ ಶಿಕ್ಷಣ ಪ್ರಸರಣಗೊಂಡಿತು, ಯಾರಿಂದ ಎಂಬುದನ್ನು ಫುಲೆ ದಂಪತಿಯ ಜಾತಿ ವಿನಾಶ ಶಿಕ್ಷಣದಿಂದ ಪ್ರಾರಂಭಿಸಿದ್ದಾರೆ ಲೇಖಕರು. ಸನಾತನ ಗುರುಕುಲ ಪದ್ಧತಿಯು ಇಲ್ಲಿನ ಬಹುದೊಡ್ಡ ಸಮುದಾಯವನ್ನು ಅಕ್ಷರ ವಂಚಿತರನ್ನಾಗಿ ಮಾಡಿತ್ತು. ಅಂತಹ ಸಮಯದಲ್ಲಿ ಫುಲೆ ದಂಪತಿ ಭಾರತೀಯ ಸ್ತ್ರೀಯರ ಬಿಡುಗಡೆಗಾಗಿ, ವಿಧವೆಯರ ರಕ್ಷಣೆಗಾಗಿ ಮಾಡಿದ ಕೆಲಸಗಳು ಅಮೂಲ್ಯವಾದವು. ಸರಿ-ತಪ್ಪುಗಳ ನಡುವೆ, ಸತ್ಯ-ಅಸತ್ಯದ ನಡುವೆ, ಧರ್ಮ-ಅಧರ್ಮದ ನಡುವೆ ಆಯ್ಕೆ ಮಾಡಿಕೊಳ್ಳಲು ಅಗತ್ಯವಾದ ವಿವೇಕ-ವಿವೇಚನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದೇ ಫುಲೆಯವರ ಸಿದ್ಧಾಂತವಾಗಿತ್ತು. ಪಂಡಿತ ಮದನಮೋಹನ ಮಾಲವೀಯರು ಪ್ರಾಚೀನ ಭಾರತೀಯ ಶಾಸ್ತ್ರ ಗ್ರಂಥಗಳ ಜೊತೆ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ ಇತ್ಯಾದಿಗಳನ್ನು ಕಲಿಸುವ ಯೋಚನೆ ಮಾಡಿದರು. ಸ್ವಾಮಿ ವಿವೇಕಾನಂದರು ‘‘ದೇಹ, ಮನಸ್ಸು, ಆತ್ಮ ಇತ್ಯಾದಿಗಳ ಸರ್ವಾಂಗೀಣ ವಿಕಾಸವಾಗಬೇಕು. ವಿದ್ಯಾರ್ಥಿಗಳು ಗೀತಾ ಪಠಣಕ್ಕಿಂತ ಹೆಚ್ಚಾಗಿ ಫುಟ್‌ಬಾಲ್ ಆಡುವುದರ ಮೂಲಕ ಸ್ವರ್ಗಕ್ಕೆ ಸಮೀಪವಾಗುತ್ತಾರೆ’’, ‘‘ಜಾಗೃತರಾಗಿರಿ ಗುರಿ ಮುಟ್ಟುವ ತನಕ ವಿರಮಿಸದಿರಿ’’ ಎಂದು ಸಾರಿದರು. ರವೀಂದ್ರನಾಥ ಠಾಗೋರರು ಶಾಂತಿನಿಕೇತನವೆಂಬ ವಸತಿ ಶಾಲೆಯನ್ನು ಸ್ಥಾಪಿಸಿ ಕಲಿಕೆಯು ಪ್ರಕೃತಿಯ ಮಡಿಲಿನಲ್ಲಾಗಬೇಕು, ಮಾನವೀಯತೆ ಮತ್ತು ರಾಷ್ಟ್ರೀಯತೆ, ಭಾರತೀಯ ಸಂಸ್ಕೃತಿಯನ್ನು ಭಾರತೀಯ ಶಿಕ್ಷಣದಲ್ಲಿ ಪ್ರಸಾರ ಮಾಡಬೇಕು ಎಂದು ಸಾರಿದರು. ಮಹಾತ್ಮಾ ಗಾಂಧೀಜಿಯವರು ಬುನಾದಿ ಶಿಕ್ಷಣವನ್ನು ರೂಪಿಸಿ ಜೀವನಕೇಂದ್ರಿತ, ಜೀವನಾಧಾರಿತ, ಅದು ಬದುಕಿನಿಂದ ಬದುಕಿಗಾಗಿ ಇರುವ ಶಿಕ್ಷಣವೆಂದು ಸಾರಿದರು.

ಗುಜರಾತ್‌ನ ‘ಬಾಲ ಸಾಹಿತ್ಯ ಬ್ರಹ್ಮ’ನೆಂದೇ ಪ್ರಸಿದ್ಧರಾದ ಗಿಜುಭಾಯ್ ಬಧೇಕ ಅವರು ಆಟಗಳೇ ನಿಜವಾದ ಶಿಕ್ಷಣ, ಆಟಗಳು ಚಾರಿತ್ರ್ಯ ನಿರ್ಮಾಣದ ಸಾಧನಗಳು ಎಂದು ಪ್ರಚಾರ ಮಾಡಿದರು. ಮೌಲಾನ ಅಬುಲ್ ಕಲಾಂ ಆಝಾದ್ ಅವರು ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಪಠ್ಯಕ್ರಮದಲ್ಲಿ ವಿಶೇಷ ಮಹತ್ವ ನೀಡಿದರು. ಶಿಕ್ಷಕರು ರಾಷ್ಟ್ರೀಯ ಏಕತೆಯ ರೂವಾರಿಗಳು ಮತ್ತು ನೈತಿಕತೆಯ ವಾರಿಸುದಾರರು ಎಂದು ನಂಬಿದವರು. ಡಾ.ಎಸ್. ರಾಧಾಕೃಷ್ಣನ್ ಅವರು ಮೌಲ್ಯಗಳನ್ನು ಕಲಿಸಲು ಸಾಧ್ಯವಿಲ್ಲ. ಅವಲೋಕನ, ಮನವೊಲಿಕೆ ಮತ್ತು ಉಪದೇಶಗಳ ಮೂಲಕ ಅವುಗಳನ್ನು ಗಳಿಸಬೇಕು ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಗುಣಾಧಾರಿತ ಸಮಾಜ ಕಟ್ಟಲು ಶಿಕ್ಷಣವೇ ಸಾಧನ ಎಂದು ನಂಬಿ ಅಂಚಿಗೆ ತಳ್ಳಲ್ಪಟ್ಟವರ ಶಿಕ್ಷಣಕ್ಕೆ ವಿಶೇಷ ಸೌಲಭ್ಯಗಳನ್ನು ನೀಡಬೇಕು. ಸ್ತ್ರೀಪುರುಷರೆಂಬ ಭೇದವಿಲ್ಲದೆ ಎಲ್ಲರಿಗೂ ಘನತೆಯಿಂದ ಬದುಕುವ ಅವಕಾಶ ನೀಡಬೇಕೆಂದರು. ಜಿಡ್ಡು ಕೃಷ್ಣಮೂರ್ತಿಯವರು ಭಾರತೀಯ ಪರ್ಯಾಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದರು. ವ್ಯಕ್ತಿಯ ಆಂತರಿಕ ಜಗತ್ತು ಪುನರ್‌ನವೀಕರಣಗೊಳ್ಳುವಂತಹ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು. ಡಾ. ಝಾಕಿರ್ ಹುಸೇನ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಮಾನವನನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇರಿಸಬೇಕು. ರಾಷ್ಟ್ರೀಯ ಸೇವೆಗೆ ಒತ್ತು ಕೊಡುವಂತಹ ವಾರ್ಧಾ ಶಿಕ್ಷಣ ಯೋಜನೆಯನ್ನು ಜಾರಿಗೊಳಿಸಿದರು. ಬಹುಮುಖ ಪ್ರತಿಭೆಯ ಸಾಹಿತಿಯಾದ ಕೆ. ಶಿವರಾಮ ಕಾರಂತರದು ಶಿಶುಸ್ನೆಹಿ ಶಿಕ್ಷಣ. ಶಾಲೆಯಲ್ಲಿ ಬೋಧನೆಗೆ ಎರಡನೇ ಸ್ಥಾನ ನೀಡಿ ಪ್ರಚೋದನೆಗೆ ಪ್ರಥಮ ಸ್ಥಾನ ನೀಡಿದರು. ಶಬ್ದ ಬೋಧನೆಯ ಮೂಲಕ ಅಕ್ಷರ ಕಲಿಕೆಯ ತತ್ವವನ್ನು ಪ್ರತಿಪಾದಿಸಿದರು. ತಮ್ಮದೇ ಶೈಕ್ಷಣಿಕ ಸಿದ್ಧಾಂತಗಳನ್ನು ಪ್ರಯೋಗಿಸಿ ಪಠ್ಯಪುಸ್ತಕಗಳನ್ನು ರಚಿಸಿದರು. ಮಹಾರಾಷ್ಟ್ರದ ಶಿಕ್ಷಣ ತಜ್ಞ ಜೆ.ಪಿ. ನಾಯ್ಕ್ ಅವರು ಭಾರತದ ಅತ್ಯಂತ ಮಹತ್ವದ ಶೈಕ್ಷಣಿಕ ನಿಯಮಗಳನ್ನು ರೂಪಿಸಿದರು. ಕೊಠಾರಿ ಶಿಕ್ಷಣ ಆಯೋಗದ ರಚನೆಯ ಮೂಲಕ ಶಿಕ್ಷಣ ರಂಗವನ್ನು ಸುವ್ಯವಸ್ಥೆಗೊಳಿಸಿದರು. ಪ್ರಯೋಗಶೀಲ, ವಿವೇಕಶೀಲ ಶಿಕ್ಷಣ ತಜ್ಞರಾದ ಇವರು ಹತ್ತು ಹಲವು ವಿನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಧುನಿಕ ಶಿಕ್ಷಣದ ಪಿತಾಮಹ ಎಂಬ ಬಿರುದು ಗಳಿಸಿದರು. ಹೀಗೆ ಪಾಶ್ಚಾತ್ಯ ಮತ್ತು ಪೌರಾತ್ಯ ಶಿಕ್ಷಣ ತಜ್ಞರಲ್ಲಿ ಪ್ರಮುಖರ ಸಿದ್ಧಾಂತಗಳನ್ನು ಪರಿಚಯಿಸಿದ ಈ ಕೃತಿ ಶಿಕ್ಷಣ ಪ್ರೇಮಿಗಳಿಗೆ ಜ್ಞಾನದ ಬೆಳಕನ್ನು ನೀಡುವ ಕೃತಿಯಾಗಿದೆ. ಶಿಕ್ಷಣವು ನಮ್ಮ ಅಂತರಾಳದ ಸ್ವಯಂಪ್ರಭೆಯಾಗಬೇಕು. ವಿವೇಚನೆ ಇಲ್ಲದ ಶಿಕ್ಷಣವು ಮರುಭೂಮಿಯನ್ನು ಉತ್ತ ಹಾಗೆ ನಿಷ್ಪ್ರಯೋಜಕ ಎಂಬ ಸತ್ಯವನ್ನು ತಿಳಿಸಿದೆ. ಆದುದರಿಂದ ಲೇಖಕ ಡಾ. ಮಹಾಬಲೇಶ್ವರ ರಾವ್ ಮತ್ತು ಪ್ರಕಾಶಕರಾದ ಕ್ರಿಯೇಟಿವ್ ಪುಸ್ತಕ ಮನೆ ಇವರಿಗೂ ಕನ್ನಡಿಗರು ಅಭಿನಂದನೆಗಳನ್ನು ಸಲ್ಲಿಸಬೇಕು.

(ಲೇಖಕಿ: ನಿವೃತ್ತ ಶಿಕ್ಷಕರು, ಹಿರಿಯ ಬರಹಗಾರರು)

ಈ ಕೃತಿಯ ಮುಖಬೆಲೆ: 175 ರೂ.

ಪ್ರಕಾಶನ: ಕ್ರಿಯೆಟೀವ್ ಪುಸ್ತಕ ಮನೆ, #4-64/11 ಅದಿಧನ್ ದುರ್ಗಾ ಎನ್‌ಕ್ಲೇವ್, ಜೋಡು ರಸ್ತೆ, ಕಾರ್ಕಳ-576117, ಮೊ: 9606474289

share
ಬಿ.ಎಂ. ರೋಹಿಣಿ
ಬಿ.ಎಂ. ರೋಹಿಣಿ
Next Story
X