ಗಾಂಧಿ ಕಣ್ಣಿಂದ ಭಾರತ ದರ್ಶನ

ವರ್ತಮಾನ ಭಾರತದ ಸಾಮಾಜಿಕ- ರಾಜಕೀಯ-ಸಾಂಸ್ಕೃತಿಕ ಸಂಕಥನಗಳು ವಸ್ತುನಿಷ್ಠವೂ, ಅರ್ಥಪೂರ್ಣವೂ ಆಗಬೇಕಾದರೆ, ಪರ ಇರಲಿ ವಿರೋಧ ಇರಲಿ, ಗಾಂಧಿ ಇದ್ದೇ ಇರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ-ಸಮುದಾಯದಿಂದ ಅತ್ಯುನ್ನತ ಅಧಿಕಾರ ಕೇಂದ್ರಗಳವರೆಗೂ ವಿಸ್ತರಿಸಬಹುದಾದ ಚರ್ಚೆಯ ಹಂದರದಲ್ಲಿ ಗಾಂಧಿ ಇಣುಕಿ ನೋಡುತ್ತಲೇ ಇರುತ್ತಾರೆ. ಒಂದು ವೇಳೆ ಗಾಂಧಿ ಬಂದರು ಎಂದು ಕಲ್ಪಿಸಿಕೊಂಡರೆ, ಅವರ ದೇಶ ಪರ್ಯಟನೆಯಲ್ಲಿ ಏನೆಲ್ಲಾ ನೋಡಲು ಸಾಧ್ಯ? ಈ ಪ್ರಶ್ನೆಗೆ ಉತ್ತರವನ್ನು ಚೀ.ಜ. ರಾಜೀವ ಅವರು ತಮ್ಮ ‘ಪ್ರಿಯ ಗಾಂಧಿ...ಮಹಾತ್ಮನಿಗೆ ಬರೆದ ಪತ್ರಗಳು’ ಸಂಕಲನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರಾದ ರಾಜೀವ ಅವರು ಬರೆದ 50 ಅಂಕಣಗಳ ಸಂಕಲನ ‘ಪ್ರಿಯ ಗಾಂಧಿ...’’. ಈ ಬರಹಗಳ ವಸ್ತು-ವಿಷಯದ ಹಂದರ ದೊಡ್ಡದು, ಇದಕ್ಕಿಂತಲೂ ವಿಶೇಷ ಎನಿಸುವುದು ರಾಜೀವ ಅವರು ಆಯ್ದುಕೊಂಡಿರುವ ಶೈಲಿ. ನಮ್ಮೊಡನೆ ಇಲ್ಲವಾಗಿರುವವರೊಡನೆ ಸಂಭಾಷಿಸಲು ತೊಡಗಿದಾಗ, ಅಂಥವರು ಬರಹಗಾರನ ಮನಸ್ಸಿನಲ್ಲಿ ಅಮೂರ್ತವಾಗಿ ನೆಲೆಸಿಬಿಡುತ್ತಾರೆ. ಇಲ್ಲಿ ಲೇಖಕರು ಗಾಂಧಿಯನ್ನು ಇಳಿಸಿಕೊಂಡಿದ್ದಾರೆ. ಆಳವಾಗಿ ಯೋಚಿಸಿದಾಗ ಇನ್ನಾರಲ್ಲಿ ನಮ್ಮ ತುಮುಲ, ತಲ್ಲಣ, ಸಾಮಾಜಿಕ ಕಳಕಳಿಯನ್ನು ತೋಡಿಕೊಳ್ಳುವುದು ಎನಿಸದಿರದು.
ಪತ್ರಕರ್ತರ ಕಣ್ಣೋಟಕ್ಕೆ ಗಡಿರೇಖೆಗಳು ಇರುವುದಿಲ್ಲ. ಹಾಗೆಯೇ ಸೂಕ್ಷ್ಮ ಕಣ್ಣುಗಳ ಒಳನೋಟಕ್ಕೂ ಮಿತಿ ಇರುವುದಿಲ್ಲ. ಇದನ್ನು ಚೀ.ಜ. ರಾಜೀವ ಅವರ ಎಲ್ಲ ಲೇಖನಗಳಲ್ಲೂ ಗಮನಿಸಬಹುದು. ಸಮಕಾಲೀನ ಭಾರತ ಎದುರಿಸುತ್ತಿರುವ ಎಲ್ಲ ಜಟಿಲ ಸಿಕ್ಕುಗಳನ್ನೂ ಬಿಡಿಸುವ ಸಲಹೆ ಸೂಚನೆಗಳನ್ನು ಲೇಖಕರು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುತ್ತಲೇ ಕೊನೆಯಲ್ಲಿ ಅದನ್ನು ಗಾಂಧಿಗೆ ಒಪ್ಪಿಸುತ್ತಾರೆ. ಇಲ್ಲಿ ಗಾಂಧಿ ಏನು ಹೇಳುತ್ತಿದ್ದರು/ಹೇಳಬಹುದಿತ್ತು ಎನ್ನುವುದು ಓದುಗರ ಕಲ್ಪನೆಗೆ ಬಿಟ್ಟಿದ್ದು. ಈ ವಿಶಿಷ್ಟ ಶೈಲಿಯೇ ‘ಪ್ರಿಯ ಗಾಂಧಿ...’ಯನ್ನು ಪ್ರಿಯವಾಗಿಸುತ್ತದೆ.
ವರ್ತಮಾನದ ವಿದ್ಯಮಾನಗಳತ್ತ ಗಮನಹರಿಸಿದಾಗ ಲೇಖಕರು ಸ್ಪಂದಿಸದೆ ಇರುವ ವಿಚಾರಗಳೇ ಇಲ್ಲ ಎನಿಸುವುದು ವಾಸ್ತವ. ಸಮಾಜ, ಸಂಸ್ಕೃತಿ, ಬದುಕು, ರಾಜಕೀಯ, ಧರ್ಮ ಹೀಗೆ ಎಲ್ಲ ಆಯಾಮಗಳಲ್ಲೂ ತಮ್ಮ ಖಚಿತ ಅನಿಸಿಕೆಗಳನ್ನು ಅಭಿವ್ಯಕ್ತಿಸಿರುವ ಲೇಖಕರು ಎಲ್ಲವನ್ನೂ ತಮ್ಮ ಕಣ್ಣೋಟದಿಂದಲೇ ಗ್ರಹಿಸಿದರೂ ಗಾಂಧಿಗೆ ಅರ್ಪಿಸುವ ಮೂಲಕ, ನಮ್ಮ ಸಮಾಜದಲ್ಲಿ ಕಳೆದುಹೋಗುತ್ತಿರುವ ಮಾನವೀಯ ಸಂವೇದನೆಗಳನ್ನು ಮರಳಿ ಪಡೆಯುವ ಪ್ರಯತ್ನ ಮಾಡುತ್ತಾರೆ. ಈ ದೃಷ್ಟಿಯಿಂದ ‘ಪ್ರಿಯ ಗಾಂಧಿ...’ ಆಪ್ತ ಎನಿಸುತ್ತದೆ.
‘ಜೇನು ಕುರುಬರ...’ ಲೇಖನದಲ್ಲಿ ಜೇನು ಸಂಗ್ರಹದ ಒಂದು ಪ್ರಸಂಗ ನಮ್ಮ ಅಭಿವೃದ್ಧಿ ಮತ್ತು ಪ್ರಗತಿಯ ವಿಮರ್ಶಾತ್ಮಕ ನೋಟವನ್ನು ಪ್ರಚೋದಿಸುತ್ತದೆ. ಹಾಡಿಯ ಜನ ‘‘ಜೇನು ತುಪ್ಪವು ಜೇನ್ನೊಣಗಳಿಗೆ ಸೇರಿದ್ದು... ಅವುಗಳ ಕ್ಷಮೆ ಕೋರಿಯೇ ಜೇನು ಕಿತ್ತೆವು.’’ (ಪುಟ 41) ಎಂದು ಹೇಳುವುದು ನಿಸರ್ಗ ಜೀವಚರ ಮತ್ತು ಮಾನವ ಸಮಾಜದ ನಡುವಿನ ಸಂಬಂಧಗಳನ್ನು ಮರುನಿರ್ವಚಿಸುವಂತೆ ಮಾಡುತ್ತದೆ. ‘ದೌರ್ಜನ್ಯ ಎಸಗುವುದು...’ ಲೇಖನದಲ್ಲಿ ಲೇಖಕರು ನಿತ್ಯ ಸುದ್ದಿಯಾಗುತಿರುವ ಅತ್ಯಾಚಾರ, ಹತ್ಯೆ ಇತರ ಕೃತ್ಯಗಳು ಸಮಾಜವನ್ನು ಅವನತಿಯತ್ತ ಕರೆದೊಯ್ಯುತ್ತಿರುವುದನ್ನು ಕಳಕಳಿಯಿಂದ ದಾಖಲಿಸುತ್ತಾರೆ. ಮಾನವೀಯ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಗಾಂಧಿ ಸಹಜವಾಗಿ ನೆನಪಾಗುತ್ತಾರೆ.
ಕುಸಿಯುತ್ತಿರುವ ಪ್ರಜಾತಂತ್ರದ ಸ್ತಂಭಗಳಿಗೆ ಸಾಕ್ಷಿಯಾಗಿರುವ ಶಾಸನ ಸಭೆಗಳ ಕಲಾಪಗಳನ್ನು ಲೇಖಕರು ‘ಸಂಸತ್ತಿನ ಭವ್ಯತೆ...’ ಲೇಖನದಲ್ಲಿ ದಾಖಲಿಸಿರುವುದು ಸಕಾಲಿಕ, ಸಮಯೋಚಿತ. ಡೆಮಾಕ್ರಸಿ ತನ್ನ ಮೂಲಾರ್ಥವನ್ನೇ ಕಳೆದುಕೊಂಡಿರುವ ಸಂದರ್ಭದಲ್ಲಿ ಭಾರತ ವಿಕಾಸದತ್ತ ಸಾಗುತ್ತಿದೆ. ಕೇವಲ ಸುಂದರ ಸ್ಥಾವರವಾಗಿ ಒಳಗಿರಬೇಕಾದ ಜಂಗಮರೂಪದ ಮೌಲ್ಯಗಳೇ ಇಲ್ಲದ ಸನ್ನಿವೇಶದಲ್ಲಿ ಈ ಲೇಖನ ಅತ್ಯಂತ ಪ್ರಸ್ತುತ. ಲೇಖಕರ ಮಾನವೀಯ ಕಾಳಜಿಗೆ ಕನ್ನಡಿ ಹಿಡಿದಂತಿರುವ ಲೇಖನ ‘ಮಣಿಪುರಕ್ಕೆ ಚಿಕಿತ್ಸೆ...’. ನೌಖಾಲಿಯ ಗಾಂಧಿಯನ್ನು ಮಣಿಪುರದಲ್ಲಿ ರೂಪಕದ ಹಾಗೆ ತಂದು ನಿಲ್ಲಿಸುವ ಮೂಲಕ ಲೇಖಕರು ವರ್ತಮಾನದ ಆಳ್ವಿಕೆಯ ನೈತಿಕತೆಯನ್ನೇ ಪ್ರಶ್ನಿಸುತ್ತಾರೆ.. ಈ ಲೇಖನದ ಕೊನೆಯಲ್ಲಿ ‘‘ಧ್ರುವೀಕರಣಕ್ಕೆ ಯಾವ ಬಣ್ಣದ ಅಂಗಿ ತೊಡಿಸಿದರೂ ಆಳದಲ್ಲಿ ಅದು ವಿಕಾರ ರೂಪವನ್ನೇ ಹೊಂದಿರುತ್ತದೆ’’ (ಪುಟ 159) ಎಂಬ ಮಾತುಗಳು ಎಷ್ಟು ಔಚಿತ್ಯಪೂರ್ಣ.
ಸ್ವತಂತ್ರ ಭಾರತದ ಅರ್ಥಿಕ ಅಭಿವೃದ್ಧಿಯ ಹಾದಿಯಲ್ಲಿ ಅತ್ಯಂತ ದಾರುಣವಾಗಿ ಬಲಿಯಾಗಿರುವುದು ದೇಶದ ಸಮಸ್ತರನ್ನು ಪೊರೆಯುವ ನಿಸರ್ಗ ಮತ್ತು ಪ್ರಕೃತಿಯೊಡಲಿನ ಸಂಪನ್ಮೂಲ. ಕಳೆದ ವಾರವಷ್ಟೇ ವಯನಾಡ್ ಮತ್ತೊಮ್ಮೆ ನಮ್ಮನ್ನು ಎಚ್ಚರಿಸಿದೆ. ಆದರೆ ದೀರ್ಘನಿದ್ರೆಯಲ್ಲಿದ್ದೇವೆ. ‘ಹೊಸ್ತಿಲು ದಾಟಿದ ವೈಪರೀತ್ಯದ ಪ್ರವಾಹ’ ಲೇಖನ ಬದಲಾಗುತ್ತಿರುವ ಭಾರತದ ಹವಾಮಾನ ಮತ್ತು ಅದರ ದುರಂತ ಪರಿಣಾಮಗಳನ್ನು ಚಿಕ್ಕ ಲೇಖನದಲ್ಲೇ ಮನಮುಟ್ಟುವಂತೆ ವಿವರಿಸಿದ್ದಾರೆ. ನಿಸರ್ಗಕ್ಕೆ ಸ್ನೇಹ ಹಸ್ತ ಚಾಚುವ ಬದಲು ಭಾರತದ ಆಳುವ ವ್ಯವಸ್ಥೆ ತನ್ನ ಕಬಂಧ ಬಾಹುಗಳನ್ನು ಚಾಚಿ ಎಲ್ಲವನ್ನೂ ಬರಿದಾಗಿಸುತ್ತಿದೆ. ಕೂಡಿಬಾಳುವ ಗಾಂಧಿಯ ಕಲ್ಪನೆಯ ಸಾಲಿನಲ್ಲಿ ಮೊದಲು ಇರಬೇಕಾಗುವುದು ಪ್ರಕೃತಿಯೇ ಎನ್ನುವುದನ್ನು ಈ ಬರಹ ದೃಢೀಕರಿಸುತ್ತದೆ.
ಇಂತಹ ಸೂಕ್ಷ್ಮ ವಿಚಾರಗಳ ಚಿಂತನ-ಮಂಥನವನ್ನು ಚೀ.ಜ. ರಾಜೀವ ಅವರು ತಮ್ಮ ಪದಮಿತಿಗೊಳಪಟ್ಟ ಲೇಖನಗಳ ಮೂಲಕ ಕನ್ನಡಿಗರ ಮುಂದಿಟ್ಟಿದ್ದಾರೆ. 50 ಲೇಖನಗಳೂ ಸಾಂದರ್ಭಿಕವೇ ಆದರೂ ಒಳಹೂರಣ ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆಯುತ್ತವೆ. ಈ ಸಾರ್ವಕಾಲಿಕತೆಗೆ ಮತ್ತಷ್ಟು ಮೆರುಗು ನೀಡುವುದು 50 ಬಾರಿ ಗಾಂಧಿಯ ಸಂಪರ್ಕ ಮತ್ತು ಗಾಂಧಿಯೊಡನೆ ಸಂವಾದ. ಭವಿಷ್ಯದ ತಲೆಮಾರು ಗಾಂಧಿಯನ್ನು ಅನುಸರಿಸಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ಉತ್ತರ ಇಲ್ಲಿ ಸಿಗುತ್ತದೆ.
ಗಾಂಧಿಯನ್ನು ಅನುಸರಿಸಿ ಅಂಧಭಕ್ತರಾಗುವ ಬದಲು ಗಾಂಧಿ ಹಿಂಬಾಲಿಸುತ್ತಾ ನಮ್ಮನ್ನು ನೋಡುತ್ತಿದ್ದಾರೆ ಎಂಬ ನೈತಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದು ಅಗತ್ಯ. ಈ ದೃಷ್ಟಿಯಿಂದ ಚೀ.ಜ. ರಾಜೀವ ಅವರ ‘ಪ್ರಿಯ ಗಾಂಧಿ’ ಪ್ರಶಂಸನೀಯ, ಸಂಗ್ರಹಯೋಗ್ಯ ಪುಸ್ತಕ.
ಕೃತಿಯ ಮುಖಬೆಲೆ: 300 ರೂ.
ಪ್ರಕಾಶಕರು: ಬಹುರೂಪಿ,
ಆರ್.ಪಿ. ರೀಜೆನ್ಸಿ, ಎಫ್-1, 2ನೇ ಮಹಡಿ, 50/7, ಪಿ ಆಂಡ್ ಟಿ ಕಾಲನಿ, ಆರ್‌ಟಿ ನಗರ, ಬೆಂಗಳೂರು-560032
ಮೊ: 7019182729






