‘ಅವಳು’ ಒಂದು ಅವಲೋಕನ

ಪ್ರಪಂಚದ ಎಲ್ಲಾ ಭಾಷೆಗಳ ಸಾಹಿತ್ಯವನ್ನು ಪರಾಮರ್ಶಿಸಿದರೂ ಹೆಣ್ಣಿನ ಚರಿತ್ರೆಯನ್ನು ಬರೆದವನು ಪುರುಷನೇ. ಅವಳಿಗೂ ಸ್ಪಂದಿಸುವ ಹೃದಯವಿದೆ, ಯೋಚಿಸುವ ಶಕ್ತಿಯುಳ್ಳ ಮನಸ್ಸಿದೆ ಎಂಬುದನ್ನು ಕಡೆಗಣಿಸಿ ತಮ್ಮ ಅನುಕೂಲಕ್ಕೆ ಬೇಕಾದಂತೆ ಚಿತ್ರಿಸಿದವುಗಳೇ ಹೆಚ್ಚು. ಹೆಣ್ಣನ್ನು ಒಂದು ಚೌಕಟ್ಟಿನೊಳಗೆ ಬಂಧಿಸಿ, ಲಕ್ಷ್ಮಣರೇಖೆಗಳನ್ನೆಳೆದು ಪ್ರಶ್ನಿಸುವ ಹಕ್ಕು ಇಲ್ಲದಂತೆ ಅವಳ ಧ್ವನಿಯನ್ನೇ ಕಿತ್ತುಕೊಂಡ ಕಥೆಗಳು ಚರಿತ್ರೆಯಲ್ಲಿ, ಕಾವ್ಯ, ಸಾಹಿತ್ಯಗಳಲ್ಲಿ ದಾಖಲಾಗಿವೆ. ಕಳೆದೆರಡು ಶತಮಾನಗಳಿಂದೀಚೆಗೆ ಹೆಣ್ಣಿಗೂ ಶಿಕ್ಷಣ ಲಭಿಸಿ, ಆರ್ಥಿಕ ಸ್ವಾವಲಂಬನೆಯ ಯುಗವು ಪ್ರಾರಂಭವಾದ ಮೇಲೆ ಆಕೆ ವ್ಯವಸ್ಥೆಯನ್ನು ಪ್ರಶ್ನಿಸುವ ಹಕ್ಕನ್ನು ಗಳಿಸಿದ್ದಾಳೆ. ತನ್ನ ಅಂತಃಸಾಕ್ಷಿಗನುಸಾರವಾಗಿ ಬದುಕುವುದನ್ನು ಕಲಿತಿದ್ದಾಳೆ. ಪುರುಷ ಪ್ರಧಾನವಾಗಿದ್ದ ಸಮಾಜವೀಗ ಸ್ತ್ರೀಪ್ರಧಾನವಾದ ಸಮಾಜವಾಗಿ ಪರಿವರ್ತನೆಗೊಳ್ಳುತ್ತಿರುವ ಸಂಕ್ರಮಣ ಕಾಲವಿದು. ಇದರ ಜೊತೆಜೊತೆಗೆ ಮಾತೃ ಪ್ರಧಾನ ವ್ಯವಸ್ಥೆಯಿದ್ದ ಸಮಾಜದ ಹಲವು ಸಮುದಾಯಗಳು ಪಿತೃಪ್ರಧಾನ ವ್ಯವಸ್ಥೆಯತ್ತ ಹೊರಳುತ್ತಿರುವುದರ ಸಂಕಷ್ಟವನ್ನೂ ಕಾಣುತ್ತಿದ್ದೇವೆ. ‘‘ಗರಿಕೆಯ ಕುಡಿಯಂಗ ಹಬ್ಬಾಲೆ ಅವಳ ರಸ ಬಳ್ಳಿ’’ ಎಂದು ಜಾನಪದ ಕವಯಿತ್ರಿ ಸ್ತ್ರೀ ಸಮುದಾಯಕ್ಕೇ ರೂಪಕವಾಗಿ ಹೇಳಿದ್ದನ್ನು ಈಗ ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಗರಿಕೆಯ ಹುಲ್ಲು ಯಾವ ಬಿರುಗಾಳಿಗೂ ಬಾಗದು, ಬಗ್ಗದು. ಹಾಗೆಯೇ ಹೆಣ್ಣು ತನಗೆ ಕಂಡ ಮತ್ತು ತನಗೆ ದಕ್ಕಿದ ಅತಿ ಚಿಕ್ಕ ವಸ್ತುವಿನಿಂದಲೇ ಮಹತ್ತನ್ನು ಸಾಧಿಸಬಲ್ಲ ಶಕ್ತಿ ಉಳ್ಳವಳು. ಆ ಶಕ್ತಿಯನ್ನು ಅರಿತು ಒಪ್ಪುವವರು ಮತ್ತು ಗೌರವಿಸುವವರು ಈ 21ನೇ ಶತಮಾನದಲ್ಲೂ ವಿರಳ ಸಂಖ್ಯೆಯವರು ಎಂಬುದನ್ನು ಖೇದದಿಂದಲೇ ಹೇಳಬೇಕಾಗಿದೆ. ಆದುದರಿಂದಲೇ ಆಕೆಯ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ನಿತ್ಯ ವರ್ತಮಾನಗಳಾಗಿವೆ. ವಿಚಿತ್ರವೆಂದರೆ ಸ್ತ್ರೀಯರು ಕೂಡ ಪುರುಷ ಪ್ರಧಾನ ಚಿಂತನೆಯುಳ್ಳವರಾಗಿ ತಮ್ಮನ್ನು ಎರಡನೇ ದರ್ಜೆಯ ಪ್ರಜೆಯಾಗಿಯೇ ಒಪ್ಪಿಕೊಂಡು ಪಿತೃ ಪ್ರಧಾನ ವ್ಯವಸ್ಥೆಯ ಸಂಸ್ಕೃತಿಯ ರಕ್ಷಕರಾಗಿ ಮುಂಚೂಣಿಯಲ್ಲಿ ನಿಂತು ಸಮಾಜದಲ್ಲಿ ಗೊಂದಲವನ್ನು ಹೆಚ್ಚಿಸುವ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಎಲ್ಲಾ ಮಾತುಗಳ ಪೀಠಿಕೆ ಯಾಕೆಂದರೆ ಯೋಗೇಶ್ ಮಾಸ್ಟರ್ ಅವರು ಬರೆದ ‘ಅವಳು’ (ಗಂಡು ಹೇಳಿದ ಹೆಣ್ಣಿನ ಕಥೆಗಳು) ಈಗ ನಮ್ಮ ಮುಂದಿದೆ. ‘‘ನನ್ನ ಎದೆಗೂಡಲ್ಲಿ ಬೆಚ್ಚಗೆ ಕೂತಿರುವ ಹೆಣ್ಣುಗಳ ಕಥೆಗಳಿವು. ನಿಜದ ಬೀಜದಿಂದ ಬಂದಿರುವವುಗಳಿವು’’ ಎಂದು ಮೊದಲ ನುಡಿಯಲ್ಲಿ ಹೇಳುತ್ತಾ ತನ್ನ ಜೀವನದ ಪರಿಣಾಮಕಾರಿ ಹೆಣ್ಣುಗಳಾದ ಅಜ್ಜಿ, ಅಮ್ಮ, ಪತ್ನಿ ಮತ್ತು ಹೆಣ್ಣು ಮಕ್ಕಳಿಗೆ ಈ ಕೃತಿಯನ್ನು ಅರ್ಪಿಸಿದ್ದಾರೆ. ವಿಶೇಷವೆಂದರೆ ಈ ಕೃತಿಯ ಪ್ರಕಾಶಕಿಯೂ ಲೇಖಕರ ಮಗಳು ಕೈವಲ್ಯ. ಅವರು ತನ್ನ ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ.
ಒಟ್ಟು 12 ಮಂದಿ ವಿಭಿನ್ನ ವ್ಯಕ್ತಿತ್ವವುಳ್ಳ ಮಹಿಳೆಯರ ಬಗ್ಗೆ ಹೆಣೆಯಲ್ಪಟ್ಟ ಈ ಕಥಾ ಸಂಕಲನವು ಬೆರಗನ್ನು ಮೂಡಿಸುತ್ತದೆ. ಈ 12 ಮಂದಿ ಸ್ತ್ರೀ ಪಾತ್ರಗಳೂ ಓದುಗರ ಮನದಲ್ಲಿ ಚಿರಕಾಲ ಉಳಿಯುತ್ತವೆ. ಸಾಹಿತ್ಯದಲ್ಲಿ ಕಲ್ಪಿತವಾದ ಸಿದ್ಧಚೌಕಟ್ಟಿನಿಂದ ಹೊರಜಿಗಿದ ಇವರು ಸಂಪ್ರದಾಯವಾದಿಗಳು ಹುಬ್ಬೇರುವಂತೆ ಬದುಕಿದರೂ, ನಮ್ಮ ಬದುಕು ನಮ್ಮದು ಎಂಬಂತೆ ಮುಕ್ತವಾದ ಮನಸ್ಸಿನಿಂದ ಸಮಾಜದ ವಕ್ರ ನೋಟ, ಕಿಡಿ ನುಡಿ, ಅಪಮಾನ ಯಾವುದಕ್ಕೂ ಬಾಗದೆ ನೇರ ನಡೆನುಡಿಗಳಿಂದ ಬಾಳಿ ಬದುಕಿದ ರೀತಿಯೇ ಅನನ್ಯ. ‘ಪಾರ್ವತಿ’ ಕಥೆಯ ನಾಯಕಿ ಇಬ್ಬರು ಗಂಡಂದಿರ ಜೊತೆಗೆ ಮದುವೆಯಾಗಿ, ಮಕ್ಕಳಾಗಿ ನೆಮ್ಮದಿಯಿಂದ ಬಾಳಿದವಳು. ಮಹಾಭಾರತದ ದ್ರೌಪದಿಗೂ ಮಿಗಿಲಾದ ಧೈರ್ಯ, ಸ್ಥೈರ್ಯವನ್ನು ಪಾರ್ವತಿ ರೂಢಿಸಿಕೊಂಡ ರೀತಿ ಗಮನಾರ್ಹವಾಗಿದೆ.
‘ಭೀಮಾ’ ಕಥೆಯ ನಾಯಕಿ ವಿಧವೆಯಾಗಿಯೂ ಗಂಡಿನಂತೆ ದುಡಿದು ಸಂಸಾರವನ್ನು ಸಾಕಿದವಳು. ಅವಳ ಮರು ಮದುವೆಯ ಬಗ್ಗೆ ಕುಹಕವಾಡಿದವರು ಕೊನೆಗೆ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತಾದದ್ದು ಖುಷಿ ಕೊಡುತ್ತದೆ. ‘ಸರ್ವಮಂಗಳಾ’ ಕಥೆಯ ನಾಯಕಿ ಒಬ್ಬ ವೇಶ್ಯೆ. ದೇಹದ ಹಸಿವನ್ನು ನೀಗಿಸುವುದು ನಾಚಿಕೆಯ ವಿಷಯವಲ್ಲವೆಂದು ನಂಬಿ ತನ್ನ ವೃತ್ತಿಗೆ ನ್ಯಾಯ ಸಲ್ಲಿಸುತ್ತಾಳೆ. ಲೇಖಕ ಅವಳನ್ನು ತನ್ನ ಮನೆಯ ಗೌರಿ ಪೂಜೆಗೆ ಆಹ್ವಾನಿಸಿ ದೊಡ್ಡಮ್ಮ ಎಂದು ಪರಿಚಯಿಸಿ ಗೌರವಿಸಿದ್ದು, ಈ ವೃತ್ತಿನಿರತ ಮಹಿಳೆಯರನ್ನು ನಮ್ಮ ಹೃದಯಕ್ಕೆ ಅಪ್ಪಿಕೊಳ್ಳುವಂತೆ ಮಾಡಿದ್ದಾರೆ. ಅಮಿತಾ ಕಥೆಯ ನಾಯಕಿ ವಿಧವೆ. ಆಕೆ ಗಂಡು ವೇಶ್ಯೆಯರ ಸಂಪರ್ಕವಿರಿಸಿಕೊಂಡವಳು. ಸೋದರ ಅಲೋಕನು ಗಂಡು ವೇಶ್ಯೆಯಾಗಿ ಸೇವೆ ಸಲ್ಲಿಸುವವನು. ಈ ವಿಷಯ ತಿಳಿದು ಮನೆಯಲ್ಲಿ ರಣರಂಗವೇರ್ಪಟ್ಟಾಗ ಅಮಿತಾ ಅಪ್ಪನನ್ನು ಕರೆದು ‘‘ಹೋಟೆಲ್‌ನಲ್ಲಿ ಸರ್ವರ್ ಚೆನ್ನಾಗಿ ಊಟ ಬಡಿಸಿದನೆಂದು ನಿಮ್ಮ ಮನೆಯ ಅಡುಗೆಯವನನ್ನಾಗಿಸಿಕೊಳ್ಳಲಾಗದು’’ ಎಂದು ಧ್ವನ್ಯಾತ್ಮಕವಾಗಿ ಮಾತನಾಡುತ್ತಾಳೆ. ಅಣಿಮಾ ಕಥೆಯ ನಾಯಕಿ ತನಗಿಂತ 24 ವರ್ಷ ಕಿರಿಯವನಾದ ಯುವಕನೊಂದಿಗೆ ಸಂಪರ್ಕ ಬೆಳೆಸಿ ಒಂದು ಮಗುವನ್ನು ಪಡೆಯುತ್ತಾಳೆ. ಇವೆಲ್ಲ ನೀತಿಕೆಟ್ಟ ಕಥೆಗಳು ಎಂದು ಹೀಗಳೆಯುವವರು ಇದ್ದರೂ ಅವಳಿಗದು ನಗಣ್ಯ. ಆ ಯುವಕನಿಗೂ, ಮಗುವಿಗೂ ಯಾವ ತೊಂದರೆಯೂ ಆಗದಂತೆ ಅಣಿಮಾ ಕೈಗೊಂಡ ನಿರ್ಧಾರಗಳಿಂದಾಗಿ ಅವಳ ಓದುಗರ ಮನದಲ್ಲಿ ಚಿರಸ್ಥಾಯಿಯಾಗುತ್ತಾಳೆ.
ಕಾಂತಿ ಕಥೆಯ ನಾಯಕಿ ತಾನು ಬಂಜೆ ಎಂಬ ಶಾಪದಿಂದ ಮುಕ್ತಳಾಗಲು ಮಾಡಿದ ಹೋರಾಟ, ಗಂಡನ ಹೆಣ್ಣುಬಾಕತನ ಇವೆಲ್ಲವನ್ನು ಕಂಡು ಮಾನಸಿಕ ಸ್ಥಿಮಿತ ಕಳಕೊಳ್ಳುವುದು ಓದುಗರ ಕಣ್ಣು ತೇವಗೊಳಿಸುತ್ತದೆ. ‘ಅವಳು’ ಕಥೆಯ ನಾಯಕಿ ಮೊಬೈಲ್ ಚಾಟಿಂಗ್‌ನಲ್ಲೇ ಪ್ರೇಮ ಸಲ್ಲಾಪ ಮಾಡಿ ಲೇಖಕನಿಗೆ ಒಂದು ಬ್ಲೂ ಶರ್ಟನ್ನು ಕಾಣಿಕೆಯಾಗಿ ಕಳಿಸಿ ಸುಮ್ಮನಾದವಳು. ‘ಅಭಿಮಾನಿ’ ಕಥೆಯಲ್ಲಿ ಮಗನೊಬ್ಬ ತನ್ನ ವಿಧವೆ ತಾಯಿಗೆ ಡೇಟಿಂಗ್ ಮಾಡಬೇಕೆಂದು ಲೇಖಕನನ್ನು ವಿನಂತಿಸಿದ ಘಟನೆ. ಮೊಬೈಲ್‌ನಲ್ಲಿ ತನ್ನ ಅಂತರಂಗದ ಮಾತುಗಳನ್ನಾಡುತ್ತಾ ಆಕೆ ಅಕಾಲ ಮೃತ್ಯುವಿಗೆ ತುತ್ತಾಗುವುದರಿಂದ ಲೇಖಕ ಪಶ್ಚಾತ್ತಾಪ ಪಡುವಂತಾಗುತ್ತದೆ. ‘ಲುಬೈನಾ’ ಕಥೆಯ ನಾಯಕಿ ತನಗೆ ಬಂದ ಪ್ರೇಮಪತ್ರವನ್ನು ಬರೆದವನಿಗೆ ಹಿಂದಿರುಗಿಸಲು ಲೇಖಕನಿಗೆ ಹೇಳುವುದು ಆತ ಆ ಕರ್ತವ್ಯ ನಿರ್ವಹಿಸಿ ದುಃಖತಪ್ತನಾಗುವುದು ತುಂಬಾ ಆಪ್ತವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ. ವರ್ಷಗಳ ನಂತರ ಅವಳು ಗಂಡನ ಸಮೇತ ಲೇಖಕನನ್ನು ಭೇಟಿಯಾದಾಗ ಅದೇ ಘಟನೆಯನ್ನು ಆಕೆ ನೆನಪಿಸಿದಾಗ ತಾನು ಆಕೆಯನ್ನು ಪ್ರೀತಿಸಿದ್ದು, ಅವಳನ್ನು ಮರೆಯಲು ದುಃಖಿಸಿದ್ದು ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡಾಗ ಕಥಾ ನಾಯಕಿಗೇ ಆಶ್ಚರ್ಯ ಉಂಟಾಗುವ ಸನ್ನಿವೇಶಗಳನ್ನು ಹಾಸ್ಯಭರಿತವಾದ ಶೈಲಿಯಲ್ಲಿ ಚಿಂತಿಸಿದ್ದಾರೆ. ‘ಚಾಮುಂಡಿ’ ಕಥೆಯ ನಾಯಕಿಯನ್ನು ರೂಪಕವಾಗಿ ಬಳಸಿಕೊಂಡು ಆಕೆ ಕನ್ನಡದ ಮೇಲ್ಮೈಯನ್ನು ಕನ್ನಡಿಗರ ಕೀಳರಿಮೆಯನ್ನು ನೀಗಿಸುವುದಕ್ಕೆ ಪ್ರಯತ್ನಿಸುತ್ತಾಳೆ. ಇವರಿಬ್ಬರ ಸಂಭಾಷಣೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತದೆ. ಈ ಚಾಮುಂಡಿ ತನ್ನ ತಾಯಿಯ ಪ್ರತಿರೂಪ ಎಂದು ಲೇಖಕ ಹೇಳಿಕೊಂಡಿದ್ದಾರೆ. ಕೊನೆಯ ಕತೆ ‘ಚಂದ್ರಿಕಾ’ ಎಲ್ಲ ಊರುಗಳಲ್ಲಿಯೂ ನಡೆಯುವಂತಹದ್ದೇ. ಯುವ ಪ್ರೇಮಿಗಳು ಹೆತ್ತವರ ವಿರೋಧದ ಮಧ್ಯೆಯೂ ಓಡಿಹೋಗಿ ಮದುವೆಯಾಗಿ ಒಂದು ಮಗು ಆದ ಮೇಲೆ ಅಪಘಾತದಲ್ಲಿ ಇಬ್ಬರು ನಿಧನರಾಗುತ್ತಾರೆ. ಅವರಿಗೆ ಹುಟ್ಟಿದ ಗಂಡು ಮಗುವನ್ನು ಚಂದ್ರಿಕಾಳ ಹೆತ್ತವರಿಗೆ ಒಪ್ಪಿಸುತ್ತಾರೆ. ಕಥನ ಶೈಲಿ ಸೊಗಸಾಗಿದೆ.
ಈ ಎಲ್ಲಾ ಕಥೆಗಳಲ್ಲೂ ಲೇಖಕನೂ ಒಂದು ಪಾತ್ರವಾಗಿ ಬರುತ್ತಾನೆ. ಆ ಪಾತ್ರಗಳೊಂದಿಗೆ ಲೇಖಕನಿಗೆ ಒಂದು ಆತ್ಮೀಯವಾದ ಸಂಬಂಧವಿದೆ. ಆದುದರಿಂದ ಈ ಸಂಕಲನಕ್ಕೆ ‘ಗಂಡು ಹೇಳಿದ ಹೆಣ್ಣಿನ ಕಥೆಗಳು’ ಎಂಬ ಉಪಶೀರ್ಷಿಕೆ ಇದೆ. ಹೆಣ್ಣಿನ ಧೀಶಕ್ತಿ, ಕೋಮಲ ಭಾವನೆ, ಇಚ್ಛಾಶಕ್ತಿ ಎಲ್ಲವನ್ನು ಗೌರವಿಸುತ್ತಾ ಹೆಣೆದ ಈ ಸ್ತ್ರೀ ಪಾತ್ರಗಳು ನಮ್ಮನ್ನು ಯೋಚನೆಗೆ ಪ್ರೇರೇಪಿಸುತ್ತವೆ. ಯೋಗೇಶ್ ಮಾಸ್ತರ್ ಕಾವ್ಯ, ಕಥೆ, ಕಾದಂಬರಿ, ಪ್ರಬಂಧ, ಗೀತ ನಾಟಕ, ಗೀತ ಸಾಹಿತ್ಯ, ನಾಟಕ ರಚನೆ, ನಾಟಕ ನಿರ್ದೇಶನ, ಚಲನಚಿತ್ರ ರಂಗದಲ್ಲಿ ನಿರ್ದೇಶನ ಹೀಗೆ ಸಾಹಿತ್ಯದ ಮತ್ತು ದೃಶ್ಯಮಾಧ್ಯಮದ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಸುಮಾರು 280ರಷ್ಟು ಕೃತಿಗಳು ಇವರಿಂದ ಪ್ರಕಟಗೊಂಡಿವೆ. ಇವರ ಈ ಸಾಧನೆಗೆ, ಪ್ರಕಾಶಕರ ಪ್ರೀತಿಗೆ ಸಹೃದಯರೆಲ್ಲರ ಅಭಿನಂದನೆಗಳು ಸಲ್ಲುತ್ತವೆ.






