ಅಳವು ಅರಿಯದ ಭಾಷೆ : ಕಲೆ, ಸಮಾಜ, ಇತಿಹಾಸ

ಕಲೆ-ಸಂಸ್ಕೃತಿಯ ರಹಸ್ಯ ಮತ್ತು ಸೂಕ್ಷ್ಮ ಸ್ಪಂದನವನ್ನು, ಮಾನವ ಬದುಕಿನ ಸಂಕೀರ್ಣವಾದ ವಿಷಯಗಳನ್ನು, ನಿರ್ದಿಷ್ಟವಾದ ಐತಿಹಾಸಿಕ ಕಾರಣಗಳಿಂದ ಸಮಾಜದ ಮನಸ್ಥಿತಿಯ ಪಲ್ಲಟಗಳನ್ನು, ವಕ್ರಗತಿಯಲ್ಲಿ ಸಾಗುವ ವೈಖರಿಗಳನ್ನು, ಈ ಶತಮಾನ ಕಂಡ ಅತಿ ಮಹತ್ವದ ವಿದ್ಯಮಾನವನ್ನು ಸಾಕ್ಷಿ, ಪುರಾವೆಗಳ ಸಹಿತ ಕಟ್ಟಿಕೊಟ್ಟ ಈ ಕೃತಿ ಹಲವು ವಿಶೇಷ ಕಾರಣಗಳಿಗಾಗಿ ಗಮನಾರ್ಹವಾಗಿದೆ. 2006ರವರೆಗೂ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ಕುಣಿದ ನಿತ್ಯಾನಂದ ಬಿ. ಶೆಟ್ಟರು ನಂತರದ ದಿನಗಳಲ್ಲಿ ಯಕ್ಷಗಾನ ಕಲೆಯನ್ನು ಗಂಭೀರವಾಗಿ ಅಧ್ಯಯನ ಮಾಡಿದರು. ಈ ಕಲೆಯ ಹುಟ್ಟು, ಬೆಳವಣಿಗೆ ಕಲಾವಿದರ ಪ್ರವೇಶ, ಪ್ರಸಿದ್ಧಿ, ಮೇಳಗಳ ಸ್ಥಾಪನೆ, ಕಲೆ-ಕಲಾವಿದರಲ್ಲಿ ಉಂಟಾದ ಪರಿವರ್ತನೆ ಇತ್ಯಾದಿಗಳ ಬಗ್ಗೆ ಅಧ್ಯಯನಾತ್ಮಕವಾಗಿ ಮತ್ತು ಸಂಶೋಧನಾತ್ಮಕವಾದ ವಿವರಗಳಿಂದ ದಾಖಲಾದ ಇದು ಅಪೂರ್ವ ಕೃತಿಯಾಗಿದೆ.
ಒಂದು ಕಾಲದಲ್ಲಿ ದಲಿತರು ಮಾತ್ರ ಅಭಿನಯಿಸುತ್ತಿದ್ದ ಕಲೆಯು ತನ್ನ ಮಡಿವಂತಿಕೆಯನ್ನು ಕಳೆದುಕೊಂಡು, ಮೇಲ್ವರ್ಗದವರ ಅಂಕಿತದಿಂದಲೇ ಗೌರವ ಮತ್ತು ಕೀರ್ತಿಯನ್ನು ಗಳಿಸಿದ ಚರಿತ್ರೆಯೇ ಕುತೂಹಲದಾಯಕ. ದೇವದಾಸಿಯರಿಂದ ದೇವಸ್ಥಾನಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಸಾದಿರ್ ಎಂಬ ನೃತ್ಯ ಪ್ರಕಾರವೂ ಕೂಡ ತನ್ನ ಕಳಂಕವನ್ನು ಕಳೆದುಕೊಂಡು ಭರತನಾಟ್ಯವೆಂಬ ಹೆಸರಿನಲ್ಲಿ ಎಲ್ಲಾ ಸಮುದಾಯದವರ ಪ್ರೀತಿಗೆ, ಮೆಚ್ಚುಗೆಗೆ ಅರ್ಹವಾದಂತೆ ಯಕ್ಷಗಾನವು ಕೂಡ ಮೇಲ್ವರ್ಗಕ್ಕೆ ನಿಷೇಧಿತ ಕಲೆಯಾಗಿತ್ತು. ಆದರೆ ಈಗ ಕಲೆಯ ವಿಶ್ವವ್ಯಾಪಕತೆ ಅಚ್ಚರಿ ಹುಟ್ಟಿಸುತ್ತದೆ. ಮಾತುಗಾರಿಕೆಯ ಪ್ರತ್ಯುತ್ಪನ್ನ ಮತಿತ್ವ, ಸೃಜನಶೀಲ ಪ್ರತಿಭೆ, ಪೌರಾಣಿಕ ಘಟನೆಗಳಲ್ಲಿರುವ ವಿಸಂಗತಿಗಳ ಜಿಜ್ಞಾಸೆ, ದಾರ್ಶನಿಕ ಸಂಗತಿಗಳ ತಾತ್ವಿಕ ಮಥನವೇ ಯಕ್ಷಗಾನದ ಮೂಲ ದ್ರವ್ಯ. ಆಟ ಮತ್ತು ಕೂಟಗಳಲ್ಲಿ ಕಾವ್ಯ ಪುರಾಣಗಳ ಭಾವುಕಲೋಕ, ರಸಲೋಕ, ವಿಮರ್ಶಾ ಲೋಕಗಳು ಸಹೃದಯರನ್ನು ರಂಜಿಸುವುದರ ಜೊತೆಗೆ ವೈಚಾರಿಕವಾಗಿ ಯೋಚಿಸುವಂತೆ ಮಾಡುವ ಕೆಲಸವನ್ನು ಒಂದು ಕಾಲದಲ್ಲಿ ಈ ಕಲೆ ಮಾಡುತ್ತಿತ್ತು. ಈ ಎಲ್ಲಾ ಧನಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಈಗ ಈ ಕಲೆಯು ಸಾಗುತ್ತಿರುವ ದಾರಿಯ ಬಗ್ಗೆ, ಆ ದಾರಿಯ ನಿರ್ಮಾಣದ ಬಗ್ಗೆ, ಅದಕ್ಕಾಗಿ ಶ್ರಮಿಸಿದವರ ಬಗ್ಗೆ, ಆ ದಾರಿಯಲ್ಲಿ ಸಾಗಿದವರ ಮನಃಪರಿವರ್ತನೆಯಿಂದ ಸಮಾಜದಲ್ಲಿ ವ್ಯಾಪಿಸುತ್ತಿರುವ ಕೇಡಿನ ಅಂಶಗಳು, ದುಷ್ಪರಿಣಾಮಗಳು ಮುಂತಾದ ಎಲ್ಲಾ ಅಂಶಗಳನ್ನು ವಿವರವಾಗಿ ಇಲ್ಲಿ ಚರ್ಚಿಸಿದ್ದಾರೆ.
ಯಕ್ಷಗಾನದ ಮೇಳಗಳನ್ನು ದೇವಸ್ಥಾನಗಳ ಕಕ್ಷೆಯಿಂದ ಸಾರ್ವಜನಿಕ ಪ್ರದೇಶಗಳಿಗೆ ಕರೆತಂದದ್ದೇ ಒಂದು ಕ್ರಾಂತಿ. ಪುರಾಣ ಕಾವ್ಯಗಳ ಪ್ರಸಂಗಗಳ ಜೊತೆಗೆ ಜನಪದರ ದೈವಗಳು ನಾಯಕರಾಗಿ ಮೆರೆದದ್ದು, ಜನಪದ ಕಥೆಗಳ ಪ್ರಸಂಗಗಳು ಜನಪ್ರಿಯಗೊಂಡದ್ದು, ಸಾಮಾಜಿಕ ವಿಷಯಗಳೂ ಯಕ್ಷಗಾನದ ಪ್ರಸಂಗಗಳಾಗಿ ಪ್ರಚಾರ ಪಡೆದದ್ದು ಮುಂತಾದ ಹಂತಗಳಲ್ಲಿ ಕಲಾ ಪ್ರೇಮಿಗಳನ್ನು ಸೆಳೆಯುವ ತಂತ್ರವಾಗಿ ಈ ಕಲೆಯ ಗುಣ ಮತ್ತು ಅವಗುಣಗಳನ್ನು ಓರ್ವ ಸಹೃದಯಿ ಪ್ರೇಕ್ಷಕನಾಗಿ ಲೇಖಕರು ಅಮೂಲ್ಯವಾದ ಒಳನೋಟಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಮನುಷ್ಯ ನಿರ್ಮಿತವಾದ ಮಾನಸಿಕವಾದ, ಭಾವನಾತ್ಮಕವಾದ ಗಡಿಗಳನ್ನು ದಾಟುವ, ಉಲ್ಲಂಘಿಸುವ, ಮೀರುವ ದರ್ಶನವನ್ನು ನೀಡುತ್ತಾ ಬಂದ ಈ ಕಲೆ ಇಂದು ಹೊಸ ಗಡಿಗಳನ್ನು ಸ್ಥಾಪಿಸುವುದಕ್ಕೆ ಹೇಗೆ ಕಾರಣವಾಗಿದೆ ಎಂಬುದನ್ನು ವಿಶ್ಲೇಷಣೆ ಮಾಡಿದ್ದಾರೆ. ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿ ಬಪ್ಪ ಬ್ಯಾರಿಯನ್ನು ಜೀವಂತವಾಗಿರಿಸಿದ ಉದ್ದಾಮ ಕಲಾವಿದ ಶೇಣಿಯವರ ವಿಶಿಷ್ಟವಾದ ಮಾತುಗಾರಿಕೆ ಕುಂಬ್ಳೆ ಸುಂದರ್ ರಾಯರಿಂದಾಗಿ ವಿರುದ್ಧ ನಡೆಯಲ್ಲಿ ಸಾಗುವಂತಾಗಿ, ಸಮಾಜದಲ್ಲಿದ್ದ ಸೌಹಾರ್ದ ಮನೋಭಾವದ ಶಾಂತವಾದ ಕೊಳವನ್ನು ಬಗ್ಗಡಗೊಳಿಸಿ, ರಾಡಿಯೆಬ್ಬಿಸಿದ ಘಟನೆಗಳನ್ನು ಆತ್ಮಕಥೆಗಳ ಉದಾಹರಣೆಗಳ ಮೂಲಕ ವಿವರಿಸಿದ ಲೇಖಕರು ನಮ್ಮ ಆತ್ಮ ಸಾಕ್ಷಿಯನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡಿದ್ದಾರೆ. ಕಳೆದ 40 ವರ್ಷಗಳಿಂದ ಈಚೆಗೆ ದೇವಸ್ಥಾನ, ದೈವಸ್ಥಾನಗಳಲ್ಲಿ ಜಾತ್ರೆಗಳಲ್ಲಿ ಉಂಟಾದ ಪರಿವರ್ತನೆಗಳು ಕರಾವಳಿಯ ನಾಗರಿಕರು ಜಗತ್ತಿನ ಮುಂದೆ ತಲೆತಗ್ಗಿಸುವಂತೆ ಮಾಡಿದೆ. ಧಾರ್ಮಿಕ ರಾಜಕಾರಣದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದುದರಿಂದ ‘‘ಉಣ್ಣುವ ಅನ್ನದ ಬೆಲೆ ಕಡಿಮೆಯಾಗಿ, ದೇವರಿಗೆ ಬಡಿಸುವ ನೈವೇದ್ಯದ ಮೌಲ್ಯ ಹೆಚ್ಚಾಯಿತು’’ ಎಂಬ ಮಾತಿಗೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ರಾಜಕೀಯ ಮುಕ್ತವೆಂಬ ಅನೂಹ್ಯದ ಊಹೆ ಎಂಬ ಅಧ್ಯಾಯದಲ್ಲಿ ಕರಾವಳಿ ಪ್ರದೇಶದುದ್ದಕ್ಕೂ ಘಟಿಸಿರುವ ಸಾವಿರಾರು ಘಟನೆಗಳ ಪೈಕಿ ಮಹತ್ವದ್ದು ಎಂದು ಭಾವಿಸಿರುವ ನೂರು ಘಟನೆಗಳನ್ನು ಲೇಖಕರು ಪಟ್ಟಿ ಮಾಡಿಕೊಟ್ಟಿದ್ದಾರೆ. ಕರಾವಳಿಯನ್ನು ಆರ್ಥಿಕವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸುಭದ್ರಗೊಳಿಸಲು ಎಲ್ಲಾ ಸಮುದಾಯದ ಜನರು ಶ್ರಮಿಸಿದ ಚಿತ್ರಣವನ್ನು ಈ ಘಟನೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ‘ನಾನು’, ‘ಅನ್ಯ’ ಎಂಬ ವಿಘಟನೆ ಅವಿವೇಕತನದ ಕೆಲಸವಾಗಿದೆ ಎಂಬ ಅರಿವು ಪ್ರಜ್ಞಾವಂತರಲ್ಲಿ ಮೂಡಬೇಕಾಗಿದೆ ಎಂಬುದನ್ನು ವಿವರಿಸಿದ ರೀತಿಯಿದೆಯಲ್ಲ ಇದು ಎಲ್ಲರ ಹೃದಯವನ್ನು ತಟ್ಟುತ್ತದೆ. ಸಮಾಜದ ಅಂತಃಕರಣದ ಸಾಕ್ಷಿ ಪ್ರಜ್ಞೆಯನ್ನು ಮುಟ್ಟಿ ಎಚ್ಚರಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಸಮುದಾಯದ ಮನಸ್ಸನ್ನು ಕೆರಳಿಸದೆ ಅರಳಿಸುವಂತಾಗಬೇಕು. ಹಾಗೆಯೇ ಯಾವುದೇ ಕಲೆಗಳು ಮಾಡಬೇಕಾದ ಮಹತ್ವದ ಪುಣ್ಯ ಕಾರ್ಯವೆಂದರೆ ಅದೇ ತಾನೇ? ಭಾಷೆಯ ಕೊಳಕನ್ನು ತೊಳೆಯುವುದರ ಮೂಲಕ, ಲೋಕದ ಕೊಳಕನ್ನೂ ತೊಳೆಯಬಹುದು ಎಂಬ ಆಶಯ ಎಲ್ಲರದೂ ಆಗಬೇಕಾಗಿದೆ. ಕರಾವಳಿಯ ತುಳು ನಾಟಕ ಪರಂಪರೆ ಮಾಡಿದ ದಿಗ್ವಿಜಯದ ಬಗ್ಗೆಯೂ ಲೇಖಕರು ಅಧ್ಯಯನಪೂರ್ಣವಾದ ವಿವರಗಳನ್ನು ನೀಡಿದ್ದಾರೆ. ಮತೀಯವಾದ, ಜಾತೀಯವಾದದ ನಂಜು ಇಲ್ಲದ ಈ ನಾಟಕಗಳು ಜನರ ಮನಸ್ಸನ್ನು ಗೆದ್ದ ರೀತಿಯನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ‘‘ಇವನಾರವ ಇವನಾರವ ಎಂದು ಕೇಳದೆ ಇವ ನಮ್ಮವ ಇವ ನಮ್ಮವ’’ ಎಂದು ಅಪ್ಪಿಕೊಂಡರೆ ಮಾತ್ರ ನೆಮ್ಮದಿಯ ಸಮಾಜ ನಿರ್ಮಾಣಗೊಳ್ಳುತ್ತದೆ ಎಂಬುದೇ ಲೇಖಕರ ಆಶಯ.
ಈ ಕೃತಿಯ ಇನ್ನೊಂದು ವಿಶೇಷವೆಂದರೆ ಎಂಟು ಮಂದಿ ಪ್ರಸಿದ್ಧ ವಿದ್ವಾಂಸರ ಮರು ಮಾತು ಎಂಬ ಅಧ್ಯಾಯ ಗಮನಸೆಳೆಯುತ್ತದೆ. ಖ್ಯಾತ ಲೇಖಕಿ ದು. ಸರಸ್ವತಿಯವರು ಜೀವ ವಿರೋಧಿಯಾದ ಹಿಂದುತ್ವದ ರಾಜಕೀಯಕ್ಕೆ ಯಾವ ಕೌಶಲವೂ ಇಲ್ಲ, ಯಾವ ಸಾಮರ್ಥ್ಯವೂ ಇಲ್ಲ ಎಂದು ಹೇಳಿದ್ದಾರೆ. ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ನೋಯುವುದು ಕಷ್ಟ. ಅದು ಸರಳವಾದ ಮಾತಲ್ಲ. ತನಗಾದ ನೋವನ್ನು ಕಲೆಯ ಮೂಲಕ ತೀರಿಸುವುದುಂಟೇ ಎಂದು ಪ್ರಶ್ನಿಸಿದ್ದಾರೆ. ಖ್ಯಾತ ಲೇಖಕರಾದ ಎನ್.ಎ.ಎಂ. ಇಸ್ಮಾಯೀಲ್ ಅವರು ಕ್ರೈಸ್ತರ ಮತ್ತು ಮುಸ್ಲಿಮರ ಮಟ್ಟಿಗೆ ಯಕ್ಷಲೋಕ ಸದಾ ಅನ್ಯವೇ. ಸಾಂಸ್ಕೃತಿಕ ಬದುಕಿನಲ್ಲಿ ಕೇಡು ಮಾಮೂಲಿಯಾದಾಗ ಸಾಯುವುದು ಮನುಷ್ಯರಷ್ಟೇ ಅಲ್ಲ ಚಿಂತನೆಯ ವಿವೇಕವೂ ನಾಶವಾಗುತ್ತದೆ ಎಂದಿದ್ದಾರೆ. ಖ್ಯಾತ ವಿಮರ್ಶಕ ಟಿ. ಎಸ್. ಸತ್ಯನಾಥ್ ಅವರು ಜಾಗತಿಕ ಮಟ್ಟದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟಗಳ ವಿಶ್ಲೇಷಣೆ ಮಾಡುತ್ತಾ ಕರ್ನಾಟಕ ಕಲೆಗಳಲ್ಲಿ ಉಂಟಾದ ಪರಿವರ್ತನೆಗಳನ್ನು ಬಹಳ ದೀರ್ಘವಾಗಿ ಚರ್ಚಿಸಿದ್ದಾರೆ. ಖ್ಯಾತ ಲೇಖಕ ಎ. ನಾರಾಯಣ ಅವರು ಯಕ್ಷಗಾನವು ಆತ್ಮ ಘಾತಕ ಹಾದಿ ಹಿಡಿದ ಕಥನವೂ ಹೌದು, ಯಕ್ಷಗಾನ ಅಸಹಾಯಕತೆಯ ಕಥನವೂ ಹೌದು ಎಂಬುದನ್ನು ವಿಮರ್ಶಿಸಿದ್ದಾರೆ.
ಖ್ಯಾತ ಕಲಾವಿದ, ಲೇಖಕ, ರಘುನಂದನ ಅವರು ಪಾಶ್ಚಾತ್ಯ ದೇಶಗಳ ಸಾಮಾಜಿಕ, ಆರ್ಥಿಕ ಬೆಳವಣಿಗೆ, ಸಮಾಜವಾದ, ಸಮತಾವಾದ, ಫ್ಯಾಶಿಸಂಗಳ ಹುಟ್ಟಿದ ಚರಿತ್ರೆ ಮತ್ತು ಕಲೆಯ ಮೇಲೆ ಅವುಗಳ ಪರಿಣಾಮಗಳನ್ನು ದೀರ್ಘವಾಗಿ ಓಜೆಯಿಲ್ಲದ ನಾಡು ಹೇಗಿರುತ್ತದೆ ಎಂದು ವಿವರಿಸಿದ್ದಾರೆ. ಕಲಾವಿದ ಐವನ್ ಫ್ರಾನ್ಸಿಸ್ ಲೋಬೋ ಅವರು ಯಕ್ಷಗಾನ ಸಮಾಜವಾದಿ ದಾರಿಗಳಿಗೆ ಹೊರಳಬೇಕು ಬೆಕ್ಕಿಗೆ ಘಂಟೆ ಕಟ್ಟುವವರು ಇಲಿಗಳೇ ಹೊರತು ಬೆಕ್ಕುಗಳಲ್ಲ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಖ್ಯಾತ ವಿದ್ವಾಂಸರೂ, ಯಕ್ಷಗಾನ ಕಲಾವಿದರೂ ಆದ ಪ್ರಭಾಕರ ಜೋಶಿ ಅವರು ಇಲ್ಲಿನ ಅತಿರೇಕದ ತರ್ಕಗಳನ್ನು ಒಪ್ಪಲಾಗದು, ಇಲ್ಲಿನ ವಿವರಗಳ ಬಗ್ಗೆ ವ್ಯತಿರಿಕ್ತವಾದ ಅಭಿಪ್ರಾಯಗಳಿವೆ ಎಂದು ಷರಾ ಬರೆದಿದ್ದಾರೆ. ಅಂತೂ ವಿನೂತನ ರೀತಿಯ, ವಿಶಿಷ್ಟ ಚಿಂತನೆಗಳಿಂದ ತುಂಬಿದ ಈ ಕೃತಿಯ ಲೇಖಕರಿಗೆ, ಪ್ರಕಾಶಕರಾದ ಕನ್ನಡ ಸಂಘ ಕಾಂತಾವರಕ್ಕೆ ಸಹೃದಯರ ಅಭಿನಂದನೆಗಳು.






