‘ತಿತ್ತಿಬ್ವಾಸನ ಟೈಟಾನ್ ವಾಚು’-ಒಂದು ಪ್ರತಿಧ್ವನಿ

‘ತಿತ್ತಿಬ್ವಾಸನ ಟೈಟಾನ್ ವಾಚು’ ದಿಲೀಪ್ ಎನ್ಕೆ ಅವರ ಎರಡನೇ ಕಥಾ ಸಂಕಲನ. ಎರಡು ಕವನ ಸಂಕಲನಗಳನ್ನೂ ಪ್ರಕಟಿಸಿರುವ ಇವರು ಕಾವ್ಯ ಕಟ್ಟುವ ಕಲೆಯಲ್ಲೂ ಪರಿಣಿತರಾಗಿ ಕಾವ್ಯ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ‘ತಿತ್ತಿಬ್ವಾಸನ ಟೈಟಾನ್ ವಾಚು’ ಈ ಕಥಾ ಸಂಕಲನದಲ್ಲಿ ಒಂಭತ್ತು ಕಥೆಗಳಿವೆ. ಇವರು ಇಲ್ಲಿನ ಕಥೆಗಳಿಗೆ ಆಯ್ಕೆ ಮಾಡಿದ ಕಥಾವಸ್ತುವಿನಲ್ಲಿ ಒಂದು ವೈಶಿಷ್ಟ್ಯವಿದೆ. ಕಥನ ಶೈಲಿಯಲ್ಲೂ ಒಂದು ನಾವೀನ್ಯತೆ ಇದೆ. ಯಾವುದೇ ಸಾಹಿತ್ಯವು ಲೇಖಕನ ಪ್ರತಿಭೆಯನ್ನು ಮಾತ್ರ ಅವಲಂಬಿಸದೆ ಒಂದು ಸಮುದಾಯದ, ಒಂದು ಜನಾಂಗದ ಸಂಸ್ಕೃತಿ ಮತ್ತು ವೈಚಾರಿಕಥೆಯನ್ನೂ ಒಳಗೊಂಡಿರುತ್ತದೆ. ಮನುಷ್ಯರ ಬದುಕಿನ ವಿಧಾಯಕ ವಿಮರ್ಶೆ ಮಾಡಬೇಕಾದದ್ದು ಲೇಖಕನಾದವನ ಕರ್ತವ್ಯ. ಅವನು ಏಕ ಕಾಲದಲ್ಲಿ ವ್ಯಕ್ತಿಯೂ ಆಗಿರಬೇಕು. ಹಾಗೆಯೇ ಸಮಾಜದ, ಸಮುದಾಯದ ಭಾಗವೂ ಆಗಿರಬೇಕು. ಈ ಶಕ್ತಿ ದಿಲೀಪ್ ಅವರಿಗೆ ಒಲಿದಿದೆ. ಬಡತನವು ಶಾಪವಲ್ಲ. ಅದರಿಂದ ಹೊರಬರಲು ಪ್ರಯತ್ನಿಸದಿರುವುದೇ ಶಾಪ ಎಂಬ ಮಾತಿದೆ. ಈ ಮಾತಿಗೆ ನಿದರ್ಶನವಾಗಿ ಎರಡು ಕಥೆಗಳು ಈ ಸಂಕಲನದಲ್ಲಿವೆ. ಅಂಧ ವಿಶ್ವಾಸ, ಅಜ್ಞಾನಗಳು ಸಮಾಜದ ಅಧೋಗತಿಗೆ ಕಾರಣವಾಗುವುದು. ಅದರಿಂದ ಹೊರಬರಲಾರದೆ ತತ್ತರಿಸುವ ಮನಸ್ಸುಗಳ ನೋವು ಇಲ್ಲಿನ ಕಥೆಗಳಲ್ಲಿ ಅಭಿವ್ಯಕ್ತಿಗೊಂಡ ರೀತಿಗೆ ಸಹೃದಯರು ಹನಿಗಣ್ಣಾಗುವಂತಿದೆ. ಮನುಷ್ಯ ಸಂಬಂಧಗಳು ಬೆಸೆಯುವ ಮತ್ತು ವಿಘಟಿಸುವ ವಿಸ್ಮಯಗಳು ನಮ್ಮನ್ನು ತಲ್ಲಣಗೊಳ್ಳುವಂತೆ ಮಾಡುತ್ತದೆ. ಭಾವನೆ ಮತ್ತು ಭಾಷೆ ಸಮರಸದಲ್ಲಿ ಸಂಯೋಗಗೊಂಡು ಒಂದು ಪ್ರದೇಶದ ನುಡಿಗಟ್ಟು, ಆಡು ನುಡಿಗಳನ್ನು ಯಥಾವತ್ತಾಗಿ ಈ ಕಥಾ ಪಾತ್ರಗಳು ಆಡುತ್ತವೆ. ಅದೂ ಚಾಮರಾಜನಗರದ ಪರಿಸರದ ಜನರಾಡುವ ಭಾಷೆಯನ್ನು ನಮ್ಮ ಹೃದಯಕ್ಕೂ ಮುಟ್ಟಿಸುತ್ತದೆ. ಸಾಹಿತ್ಯದ ಕೆಲಸ ಅದೇ ತಾನೇ? ಹೃದಯದಲ್ಲಿ ಹುಟ್ಟಿ ಹೃದಯಕ್ಕೆ ತಲುಪಿಸುವ ಕೆಲಸ ಮಾಡುತ್ತದೆ. ನಮ್ಮ ಜನಪದ ಸಾಹಿತ್ಯದಲ್ಲಿ ಕಥನ ಸಾಹಿತ್ಯ ಪರಂಪರೆಯು ಶ್ರೀಮಂತವಾಗಿದೆ. ಆ ಶ್ರೀಮಂತಿಕೆ ದಿಲೀಪ್ ಅವರ ಈ ಸಂಕಲನದ ಕಥೆಗಳಲ್ಲಿ ತುಂಬಿಕೊಂಡಿವೆ.
‘ತಿತ್ತಿಬ್ವಾಸನ ಟೈಟಾನ್ ವಾಚು’ ಕಥೆಯಲ್ಲಿ ತಿತ್ತಿಬ್ವಾಸ ಮತ್ತು ಕೊಕ್ಕರಕ್ಕಿ ಕಡು ದಾರಿದ್ರ್ಯದಲ್ಲೂ ಕಾಲೇಜು ವ್ಯಾಸಂಗ ಮಾಡುವುದು, ಹಾಸ್ಟೆಲ್‌ಗೆ ರಜೆ ಇದ್ದಾಗ ಊಟಕ್ಕೆ ಪರದಾಡುವುದು, ಮೂರು ದಿನಗಳ ಉಪವಾಸದ ಬಳಿಕ ತನ್ನ ಕೈಯಲ್ಲಿದ್ದ ಟೈಟಾನ್ ವಾಚನ್ನೇ ಹೋಟೆಲ್ ಮಾಲಕನಿಗೆ ಕೊಡುವುದು, ಆ ವಾಚ್‌ನಲ್ಲಿ ತಾಯಿಯ ಪ್ರೀತಿ ಧ್ವನಿಯೇ ಕೇಳುವುದು, ಅಪ್ಪನ ಹೊರಚಾಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆಕೆ ಶಿಕ್ಷಣದ ಮಹತ್ವವನ್ನು ಅರೆದು ಕುಡಿಸಿದ್ದು.. ಇವೆಲ್ಲವೂ ವರ್ಣಿಸಲ್ಪಟ್ಟಿವೆ. ವಿಶೇಷವೆಂದರೆ ಕಥೆಯು ಕಥನ ಕಾವ್ಯದಂತೆ ಬರೆಯಲ್ಪಟ್ಟಿದೆ. ಮುಂದೆ ಮಲತಾಯಿಯ ಹಾದರದ ಘಟನೆಯನ್ನು ಕಂಡ ತಿತ್ತಿಬ್ವಾಸನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದು, ಜೈಲು ಸೇರಿದ್ದು ಇವೆಲ್ಲವೂ ಬಹಳ ಮಾರ್ಮಿಕವಾಗಿ ನಿರೂಪಣೆಗೊಂಡಿದೆ.
‘ಸುಟ್ಟಿರದೇ ಮೂರು ದ್ವಾಸ’ಯಲ್ಲಿ ಸಿದ್ಧನು ಬಾಲ್ಯದಲ್ಲಿ ಶಾಲೆ ತಪ್ಪಿಸಿ ಬೇಜವಾಬ್ದಾರಿಯಿಂದ ವರ್ತಿಸಿದ್ದು, ತಂದೆಯನ್ನು ಕೆಲಸದ ಸ್ಥಳದಲ್ಲಿ ನಿಂದಿಸುವ ಮಾತು, ತಾಯಿಯನ್ನು ಶ್ರೀಮಂತರ ಮನೆಯ ಒಡತಿಯರು ಶೋಷಿಸುವ ರೀತಿಯನ್ನು ಕಂಡ ಸಿದ್ಧನ ಮನ ಪರಿವರ್ತನೆಯಾಗಿ ಕುಟುಂಬದ ಕನಸು ಅರಳುವಂಥಾದದ್ದು ಸೊಗಸಾಗಿ ಚಿತ್ರಿಸಲ್ಪಟ್ಟಿದೆ. ಹಳ್ಳಿ ಪರಿಸರದ ಬಡ ಕುಟುಂಬದ ಮಕ್ಕಳಿಗೆ ಅದರಲ್ಲೂ ಡ್ರಾಪೌಟ್ ಆಗುವ ಮಕ್ಕಳಿಗೆ ಭರವಸೆ ತುಂಬುತ್ತದೆ. ಅವರ ಪಾಠ ಪುಸ್ತಕದಲ್ಲಿ ಈ ಕಥೆ ಇದ್ದರೆ ಕೆಲವರಿಗಾದರೂ ಸ್ಫೂರ್ತಿ ತುಂಬಬಹುದು.
‘ದೊಡ್ಡ ಸಂಪಿಗೆ ತಿರುವು’ ಕಥೆಯಲ್ಲಿ ಹುಚ್ಚಾಲಮ್ಮ ತನ್ನ ಗಂಡ ಮನೆ ಬಿಟ್ಟು ಹೋದವ ಬರಲಿಲ್ಲವೆಂದು ದಿನ, ವಾರ, ತಿಂಗಳುಗಟ್ಟಲೆ ಪರಿತಪಿಸುತ್ತಾಳೆ. ವಾಸ್ತವವೇನೆಂದರೆ ಪೊಲೀಸ್ ಇಲಾಖೆಯ ಕ್ರೌರ್ಯವು ಅಮಾಯಕನಾದ ತಂಗರಾಜುವನ್ನು ಸುಳ್ಳು ಕೇಸಿನಲ್ಲಿ ಜೈಲಿಗೆ ಹಾಕಿರುತ್ತದೆ. ನಮ್ಮ ವ್ಯವಸ್ಥೆಯಲ್ಲಿ ಎಂತೆಂತಹ ದೌರ್ಜನ್ಯಗಳು ನಡೆಯುತ್ತವೆ ಎಂಬುದಕ್ಕೆ ಈ ಕಥೆ ಸಾಕ್ಷಿ. ದೊಡ್ಡವರ ದುಃಖಗಳನ್ನು ಸಮಾಜ ವೈಭವೀಕರಿಸುತ್ತದೆ. ಬಡವರ ದುಃಖವನ್ನು ಯಾರೂ ಗಮನಿಸುವುದಿಲ್ಲವಲ್ಲ. ‘ಕಾಕ್ಟೇಲ್’ ಕಥೆಯಲ್ಲಿ ವೀರೇಶನ ಮಿತ್ರ ಬಳಗದ ಪ್ರದೀಪನು ಸಲಿಂಗ ಕಾಮದ ಪಾಪಪ್ರಜ್ಞೆಯಿಂದ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಪತ್ರವು ವಿರೇಶನ ಭಾವೀಪತ್ನಿಯ ಕೈಗೆ ಸಿಕ್ಕಿದ್ದು, ಪ್ರದೀಪನ ಸಾವಿಗೆ ವೀರೂನ ಅಕ್ಕನ ಮನೆಯವರೇ ಕಾರಣವೇ? ಎಂಬ ಪ್ರಶ್ನೆಯನ್ನು ಉಳಿಸಿಬಿಡುತ್ತದೆ. ‘ಕುಂಟು ಸೇತುವೆ’ಯು ಕಾಲೇಜಿನ ಪ್ರಣಯದ ವೈಫಲ್ಯವನ್ನು ಮತ್ತು ಅದರ ವೈಪರೀತ್ಯವನ್ನು ನವಿರಾಗಿ ಚಿತ್ರಿಸಿದ ಕಥೆ. ಯುವಕರು ಯವ್ವನದಲ್ಲಿ ಯುವತಿಯರನ್ನು ವಸ್ತುವಿನಂತೆ ಬಳಸಿ ಬಿಸಾಡುವ ಕಥೆಗಳು ಎಷ್ಟೋ ಇವೆ. ಹಾಗೆಯೇ ಯುವತಿಯರೂ ಯುವಕರನ್ನು ಬಳಸಿ ಬಿಸಾಡುವ ಕ್ರೌರ್ಯ ತೋರಿಸುತ್ತಾರೆ ಎಂಬುದನ್ನು ಸೂಚಿಸುವ ಕಥೆಯಿದು.
ಸುಭಗ, ಸುಸಂಸ್ಕೃತ ಎನಿಸಿಕೊಂಡವರು ಎಂತೆಂತಹ ಕ್ರೌರ್ಯವೆಸಗಬಲ್ಲರು ಎಂಬುದನ್ನು ‘ಅಂಬಾಸಿಡರ್ ಕಾರು’ ಕಥೆ ವರ್ಣಿಸುತ್ತದೆ. ಹಸುಳೆಯನ್ನು ಅಂಬಾಸಿಡರ್ ಕಾರಿನಲ್ಲಿ ಅತ್ಯಾಚಾರ ಮಾಡಿದ ಮೇಲೆ ಆಘಾತಗೊಂಡ ಆ ಮಗು ಮುಂದೆ ವರ್ಷಗಳ ಬಳಿಕ ಅದೇ ಅಂಬಾಸಿಡರ್ ಕಾರನ್ನು ಕಂಡು ವಿಚಿತ್ರ ರೀತಿಯಲ್ಲಿ ಆಕ್ರಂದನ ಮಾಡಿದ್ದು ನಮ್ಮ ಕರುಳಲ್ಲಿ ಕತ್ತರಿಯಾಡಿಸಿದಂತೆ ಆಗುತ್ತದೆ. ‘ಬೈರೂಪ’ವು ಸಲಿಂಗ ಕಾಮದ ಬಗ್ಗೆ ಹೇಳುತ್ತದೆ. ವಿಚಿತ್ರವೆಂದರೆ ಸಂಬಂಧದಲ್ಲಿ ಈ ಹೆಣ್ಣು ಮಕ್ಕಳು ಅಣ್ಣತಮ್ಮನ ಮಕ್ಕಳು. ಒಂದರ್ಥದಲ್ಲಿ ಒಡಹುಟ್ಟಿದವರು. ಹೀಗೂ ಸಾಧ್ಯವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ನಮ್ಮ ಬದುಕು ಕೃತಕವಾಗಬಾರದು ಎಂದು ಆಶಿಸುತ್ತೇವಲ್ಲವೇ, ಹಾಗೆಯೇ ಸಾಹಿತ್ಯವೂ ಕೃತಕವಾಗಬಾರದು. ಈ ಪ್ರಜ್ಞೆ ಸಮಾಜದಲ್ಲೂ ಇದ್ದರೆ ಸಾಹಿತ್ಯದಲ್ಲೂ ಇರುತ್ತದೆ. ಸತ್ಯವಾದ ವಿಷಯವನ್ನು ಸುಂದರವಾಗಿ ಹೇಳಲು ಲೇಖಕರು ಪ್ರಯತ್ನಿಸಿದ್ದಾರೆ. ‘ಕ್ವಲ್ಲನಂಜಿ’ ಇದು ಅಯ್ಯ ಮತ್ತು ನಂಜಿಯ ದಾಂಪತ್ಯದ ಪ್ರೇಮ ಲಹರಿಯನ್ನು ಅಲೆ ಅಲೆಯಾಗಿ ತೇಲಿಬಿಟ್ಟಿರುವ ಕಥೆ. ನಂಜಿ ತೀರಿದಂದಿನಿಂದ ಊಟ ಮಾಡದೆ, ಮೂರನೇ ದಿನದ ಹಾಲುತುಪ್ಪದ ಕಾರ್ಯಕ್ರಮದಂದು ತಾನೇ ನಂಜಿಯ ಸಮಾಧಿಯ ಬಳಿಗೆ ಹೋಗಿ ಮರಳಿ ಬಂದು ಮಲಗಿದವನೂ ಮರಣ ಹೊಂದಿದ ಅಮರ ಪ್ರೇಮದ ಕಥೆಯಿದು. ‘ವಿಕಾರಿ’ ಇದು ಕುಲಕಸುಬನ್ನು ತಿರಸ್ಕರಿಸಬೇಕು ಎಂಬ ಮನಸ್ಸಿದ್ದರೂ ತಿರಸ್ಕರಿಸಲಾಗದ ಯುವಕನ ಮಾನಸಿಕ ತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟ ಕಥೆ. ಮಲ ಸ್ವಚ್ಛಗೊಳಿಸುವ ಕೆಲಸವು ಸರಕಾರಿ ಕೆಲಸವೆಂದೇ ನಂಬಿದ ತಾಯಿಗೆ ಮಗ ಆ ಕೆಲಸವನ್ನು ಮಾಡಲೇಬೇಕು ಎಂಬ ಆಸೆ ಇದೆ. ಆದರೆ ಮಗನಿಗೆ ಆ ಕೆಲಸದ ಬಗ್ಗೆ ತಿರಸ್ಕಾರವಿದೆ. ಆದರೆ ಬದುಕಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಧೈರ್ಯವಿಲ್ಲದೆ ಅದೇ ಕೆಲಸವನ್ನು ಆಯ್ಕೆ ಮಾಡುವುದು ಕಥೆಗೆ ಒಳ್ಳೆಯ ಮುಕ್ತಾಯವಲ್ಲ ಎಂದು ನನ್ನ ಭಾವನೆ.
ಲೇಖಕರು ಈ ಸಂಕಲನದಲ್ಲಿ ಪ್ರಾದೇಶಿಕ ಭಾಷೆಯನ್ನು ಹೆಚ್ಚು ಬಳಸಿದ್ದಾರೆ. ಹೆಣ್ಣು ಮಕ್ಕಳ ಮಾತನ್ನು ಬಂದ, ಹೋದ ಎಂದು ಪುಲ್ಲಿಂಗ ವಾಚಕದಲ್ಲೂ ನಪುಂಸಕ ಲಿಂಗದಲ್ಲೂ ಹೇಳಿಸುವುದು ನನಗೆ ವಿಶಿಷ್ಟವಾಗಿ ಕಂಡಿತು. ಓದುತ್ತ ಹೋಗುವಾಗ ಅನ್ನದ ಅಗುಳಿನಲ್ಲಿ ಕಲ್ಲು ಸಿಕ್ಕಿದಂತೆ ನಾನು ನಿಧಾನಿಸಿದೆ. ಸಂಕಲನದುದ್ದಕ್ಕೂ ರೂಪಕ ಮತ್ತು ಉಪಮೆಗಳ ಸಾಲುಗಳು ಲೇಖಕರ ಪ್ರತಿಭಾ ಶಕ್ತಿಗೆ ಸಾಕ್ಷಿಯಾಗಿವೆ. ‘ಅಕ್ಷರಸ್ಥ ದಲಿತರ ತಲ್ಲಣಗಳು’ ಎಂಬ ವಿಷಯದ ಬಗ್ಗೆ ಪಿಎಚ್.ಡಿ. ಮಾಡಿದ ಇವರಲ್ಲಿ ಆ ಸಮುದಾಯದ ನಾಡಿಮಿಡಿತದ ಅರಿವಿದೆ. ಹಾಗೆಯೇ ಸಮಾಜವನ್ನು ಆರೋಗ್ಯ ಪೂರ್ಣವಾದ ಸ್ಪಂದನಶೀಲ, ಸಹನಾಶೀಲವಾಗಿ ರೂಪಿಸಬೇಕೆಂಬ ತುಡಿತವಿದೆ. ಇವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರ ಬರಲಿ.






