ವೈಚಾರಿಕತೆಯ ಅಕ್ಷರ ಕಣಜ

ಕರ್ನಾಟಕದ ದಲಿತ-ಬೌದ್ಧ ಸಾಹಿತ್ಯದಲ್ಲಿ ಸದಾ ಮುಂಚೂಣಿಯಲ್ಲಿ ಕಾಣುವ ಒಂದು ಹೆಸರು ಡಾ. ಮೂಡ್ನಾಕೂಡು ಚಿನ್ನಸ್ವಾಮಿ. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಕೇವಲ ಗ್ರಾಂಥಿಕ ಸರಕಾಗುತ್ತಿದೆಯೇ ಎಂಬ ಆತಂಕ ಇಡೀ ಸಮಾಜವನ್ನು ಆವರಿಸುತ್ತಿರುವ ಹೊತ್ತಿನಲ್ಲಿ, ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ತಳಮಟ್ಟದವರೆಗೂ ಪಸರಿಸುವ ಬೌದ್ಧಿಕ ಜವಾಬ್ದಾರಿಯನ್ನು ಡಾ. ಮೂಡ್ನಾಕೂಡು ಸ್ವತಃ ವಹಿಸಿಕೊಂಡಿದ್ದಾರೆ. ಇವರ ಚಿಂತನೆಗಳ ಮೂಸೆಯಿಂದ ಸಾಹಿತ್ಯ ಲೋಕದಲ್ಲಿ ಬೆಳಕು ಚೆಲ್ಲಿರುವ ಹಲವಾರು ಕೃತಿಗಳ ನಡುವೆ ‘ಊರ ಮಧ್ಯದ ಕಣ್ಣ ಕಾಡಿನೊಳಗೆ’ ಹೆಸರಿನ ಲೇಖನಗಳ ಸಂಗ್ರಹವೂ ಒಂದು.
ನವ ಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ವೈಚಾರಿಕ ಲೇಖನಗಳ ಸಂಗ್ರಹ ವರ್ತಮಾನ ಭಾರತದ ವಾಸ್ತವ ಸ್ಥಿತಿಗತಿಗಳಿಗೆ ಹಿಡಿದ ಕನ್ನಡಿಯಂತೆ ಕಾಣುತ್ತದೆ. ವಿವಿಧ ಸಂದರ್ಭಗಳಲ್ಲಿ ಡಾ. ಮೂಡ್ನಾಕೂಡು ಅವರು ಮಾಡಿರುವ ಭಾಷಣಗಳು, ಮಂಡಿಸಿರುವ ಉಪನ್ಯಾಸಗಳು ಮತ್ತು ಬಿಡಿ ಬರಹಗಳು ಈ ಕೃತಿಯ ಒಟ್ಟು ಹೂರಣ. ಈ ಹೂರಣವನ್ನು ವಿಂಗಡಿಸಿ ನೋಡಿದಾಗ 18 ಬರಹಗಳು ಕಾಣುತ್ತವೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯ ಹಾಗೆ, ಈ 18 ಬರಹಗಳಲ್ಲಿ ಡಾ. ಮೂಡ್ನಾಕೂಡು ಅವರು ಸ್ಪಂದಿಸದ-ಸ್ಪರ್ಶಿಸದ ವಿಚಾರವೇ ಇಲ್ಲ. ಭಾರತೀಯ ಸಮಾಜವನ್ನು ಇನ್ನಿಲ್ಲದೆ ಕಾಡುತ್ತಿರುವ ಎಲ್ಲ ರೀತಿಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಜಾತೀಯ ಹಾಗೂ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳನ್ನು ‘ಊರ ಮಧ್ಯದ...’ ಕೃತಿಯಲ್ಲಿ ಪಡೆಯಬಹುದು.
‘ಬಲ-ಪ್ರಭುತ್ವ ಮತ್ತು ಸಾಂಸ್ಕೃತಿಕ ಹಿಂಚಲನೆ’ ಇದು ಜನಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣ. ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು, ಸಾಹಿತ್ಯಕ ಪರಿಸರವನ್ನು ಕೆಲ ಕಾಲ ತಲ್ಲಣಗೊಳಿಸಿದ್ದ ಹಿಂದುತ್ವ ರಾಜಕಾರಣದ ಪ್ರತಿಗಾಮಿ ಚಟುವಟಿಕೆಗಳ ನಡುವೆ ನಡೆದ ಈ ಸಮ್ಮೇಳನಕ್ಕೆ ಒಂದು ಬೌದ್ಧಿಕ ತಳಪಾಯವನ್ನು ಈ ಉಪನ್ಯಾಸದಲ್ಲಿ ಡಾ. ಮೂಡ್ನಾಕೂಡು ಕಟ್ಟಿಕೊಟ್ಟಿದ್ದರು. ‘‘ರಾಷ್ಟ್ರಗಳನ್ನು ನಿರ್ಮಿಸುವವರು ವ್ಯಾಪಾರಿಗಳಲ್ಲ ಅಥವಾ ರಾಜಕಾರಣಿಗಳಲ್ಲ ಅದನ್ನು ಮಾಡುವವರು ಕಲಾವಿದರು ಮತ್ತು ಕವಿಗಳು’’ ಎಂಬ ಅವರ ಉಪನ್ಯಾಸದ ಕೊನೆಯ ಮಾತುಗಳು, ನಿದ್ರಾವಸ್ಥೆಯಲ್ಲಿರಬಹುದಾದ ಅಥವಾ ಕವಲುಹಾದಿಯಲ್ಲಿರುವ ಸಾಂಸ್ಕೃತಿಕ ಲೋಕವನ್ನು ಅಂದೂ ಬಡಿದೆಬ್ಬಿಸಿತ್ತು, ಈಗಲೂ ಜಾಗೃತಗೊಳಿಸುವಂತಹುದು.
ಈ 18 ಬರಹಗಳಲ್ಲಿ ಡಾ. ಮೂಡ್ನಾಕೂಡು, ತಳಸಮಾಜದ ಸಾಮಾನ್ಯ ಜನರನ್ನು ನಿತ್ಯ ಕಾಡುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಾಮರ್ಶಿಸುತ್ತಾರೆ. ‘ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ...’ ದಲ್ಲಿ ಜಾತಿ ಶ್ರೇಷ್ಠತೆಯಿಂದಾಗುವ ಅಪಾಯಗಳನ್ನು ಓದುಗರ ಮುಂದಿಡುತ್ತಾರೆ. ಇಂದಿಗೂ ಸಹ ಕರ್ನಾಟಕದ ಜನಪ್ರಜ್ಞೆಯನ್ನು ಕಾಡುತ್ತಿರುವ ದಲಿತ ಏಕತೆಯ ಪ್ರಶ್ನೆಯನ್ನು ತಮ್ಮ ‘ಬಣ ಮತ್ತು ಪಂಗಡಗಳಾಚೆ...’ ಲೇಖನದಲ್ಲಿ ಡಾ. ಮೂಡ್ನಾಕೂಡು ವಸ್ತುನಿಷ್ಠವಾಗಿ ಚರ್ಚಿಸುತ್ತಾರೆ. ದೇಶದ ಆಳ್ವಿಕೆಯಲ್ಲಿ ಸಂಘಪರಿವಾರದ ಬ್ರಾಹ್ಮಣಶಾಹಿ ಮತ್ತು ಬಿಜೆಪಿಯ ಬಂಡವಾಳಶಾಹಿಯ ಮೈತ್ರಿ, ತಳಸಮುದಾಯಗಳ ಜೀವನೋಪಾಯದ ಮಾರ್ಗಗಳನ್ನೇ ಕಸಿದುಕೊಳ್ಳುತ್ತಿರುವ ಹೊತ್ತಿನಲ್ಲಿ ಶೋಷಿತ ಸಮುದಾಯಗಳ ಏಕತೆಯ ಅನಿವಾರ್ಯತೆಯನ್ನು ಈ ಪುಟ್ಟ ಬರಹ ಒತ್ತಿ ಹೇಳುತ್ತದೆ.
ಕಟ್ಟುವ, ಮರಳಿ ಕಟ್ಟುವ, ಕಟ್ಟುತ್ತಲೇ ಇರುವ ಉದಾತ್ತ ಆಲೋಚನೆಗಳೊಂದಿಗೆ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಭಾರತ ಇಂದು ಕೆಡವುವ, ಕೆಡವುತ್ತಲೇ ಇರುವ ವಿಕೃತ ಚಿಂತನೆಗಳಿಗೆ ಸಿಲುಕಿ ನಲುಗುತ್ತಿದೆ. ಬುಲ್ಡೋಜರ್ ಎನ್ನುವುದು ತನ್ನ ಯಾಂತ್ರಿಕ ರೂಪವನ್ನು ಕಳೆದುಕೊಂಡು ಬೌದ್ಧಿಕವಾಗಿ ಅವತರಿಸಿರುವುದನ್ನು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ‘ಮಾಧ್ಯಮಗಳ ಬುಲ್ಡೋಜರ್ ಸಂಸ್ಕೃತಿ’ ಲೇಖನದಲ್ಲಿ ಪ್ರಸ್ತಾಪಿಸುತ್ತಾರೆ. ಮೇ ಸಾಹಿತ್ಯ ಮೇಳದ ಈ ಉದ್ಘಾಟನಾ ಭಾಷಣದಲ್ಲಿ ಡಾ. ಮೂಡ್ನಾಕೂಡು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಮತ್ತು ವಾಟ್ಸ್ ಆ್ಯಪ್ ಫಾರ್ವರ್ಡ್‌ಗಳು ಹೇಗೆ ಸಮಾಜವನ್ನು ದಿಕ್ಕು ತಪ್ಪಿಸುತ್ತಿವೆ ಎಂದು ವ್ಯಾಖ್ಯಾನಿಸುತ್ತಾರೆ.
ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷಗಳಾದರೂ ಇನ್ನೂ ಜಾರಿಯಲ್ಲಿರುವ ಬಿಜೆಪಿ ಆಳ್ವಿಕೆಯ ಮತಾಂತರ ನಿಷೇಧ ಕಾಯ್ದೆಯನ್ನು ಛೇದಿಸಿ ನೋಡುವ ‘ಮತಾಂತರ ನಿಷೇಧ ಕಾಯ್ದೆ...’ ಲೇಖನದಲ್ಲಿ ಮೂಡ್ನಾಕೂಡು ಅವರು ಭಾರತದ ಜಾತಿ ವ್ಯವಸ್ಥೆ, ಅಸ್ಪಶ್ಯತೆ ಮತ್ತು ಜಾತಿ ವಿನಾಶ ಕಲ್ಪನೆಯ ನಡುವೆ ನಿಂತು ವರ್ತಮಾನವನ್ನು ವಿಮರ್ಶೆಗೊಡ್ಡುತ್ತಾರೆ. ಮತಾಂತರದ ಕಾರಣಗಳನ್ನು ವಿದೇಶಿ ಕೈವಾಡಗಳಲ್ಲಿ, ಜನಸಂಖ್ಯಾಶಾಸ್ತ್ರದ (ಆemogಡಿಚಿಠಿhiಛಿ) ವ್ಯಾಖ್ಯಾನಗಳಲ್ಲಿ ಗುರುತಿಸುವವರಿಗೆ ತಕ್ಕ ಉತ್ತರ ನೀಡುವ ಈ ಪುಟ್ಟ ಲೇಖನ, ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಅದರಿಂದ ಬಿಡುಗಡೆ ಬಯಸುವ ಶೋಷಿತರ ದನಿಯನ್ನು ಸಮಾನಾಂತರವಾಗಿ ಚರ್ಚಿಸುತ್ತದೆ.
ಸಾಂಸ್ಕೃತಿಕ ನೆಲೆಯಲ್ಲಿ ಎರಡು ಲೇಖನಗಳು ಗಮನ ಸೆಳೆಯುತ್ತವೆ. ‘ಬೌದ್ಧ ಧರ್ಮ ಮಾನವೋಪಕಾರಿ’ ಲೇಖನದಲ್ಲಿ ಮೂಡ್ನಾಕೂಡು ಅವರು ವರ್ತಮಾನದ ದುರವಸ್ಥೆಯನ್ನು ವಿಷಾದದಿಂದ ಗಮನಿಸುತ್ತಲೇ, ವೈಚಾರಿಕತೆ ಮತ್ತು ವೈಜ್ಞಾನಿಕ ಮನಸ್ಥಿತಿಯನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿರುವ ಭಾರತೀಯ ಸಮಾಜಕ್ಕೆ ಬುದ್ಧ ಪ್ರಜ್ಞೆ ಮತ್ತು ಬೌದ್ಧ ಚಿಂತನೆಗಳು ಎಷ್ಟು ನಿರ್ಣಾಯಕ ಎಂದು ನಿರೂಪಿಸುತ್ತಾರೆ. ಪರಂಪರೆಯ ಕೊಳಕನ್ನು ತೊಳೆಯಲು ಇರುವ ಏಕೈಕ ಮಾರ್ಜಕ ಬೌದ್ಧ ಚಿಂತನೆಗಳು ಎಂದು ಸುಸ್ಪಷ್ಟವಾಗಿ ಹೇಳುವ ಮೂಡ್ನಾಕೂಡು ಅವರ ಮಾತುಗಳು ಇನ್ನೂ ಆಳವಾದ ಚರ್ಚೆಗೊಳಗಾಗಬೇಕಿದೆ.
‘ಶರಣ ಧರ್ಮದಲ್ಲಿ...’ ಲೇಖನದಲ್ಲೂ ಜಾತಿ ವ್ಯವಸ್ಥೆಯ ಬಿಗಿ ಬಾಹುಗಳನ್ನು ಭೇದಿಸಿ ನೋಡುವ ಡಾ. ಮೂಡ್ನಾಕೂಡು ಲೇಖನದ ಮತ್ತು ಕೃತಿಯ ಕೊನೆಯಲ್ಲಿ ಹೇಳುವ ‘‘ಬಸವಣ್ಣ ತಂದ ಸುಧಾರಣೆಗಳೆಲ್ಲವೂ ಭಜನೆಗಷ್ಟೇ ಉಳಿದವು’’ ಎಂಬ ನುಡಿಗಳು ವರ್ತಮಾನದ ಸಾಂಸ್ಕೃತಿಕ-ಬೌದ್ಧಿಕ ಹಿನ್ನಡೆಯನ್ನು ಬಿಂಬಿಸುತ್ತವೆ. ಇದು ಬುದ್ಧ, ಅಂಬೇಡ್ಕರ್‌ಗೂ ಅನ್ವಯಿಸುವುದು ಕಾಕತಾಳೀಯವೇನಲ್ಲ. ತಮ್ಮ ಆಳವಾದ ಅಧ್ಯಯನ, ಪ್ರಖರ ಚಿಂತನೆ ಮತ್ತು ಗಂಭೀರ ಆಲೋಚನೆಗಳ ಮೂಲಕ ಸಮಾಜದ, ವಿಶೇಷವಾಗಿ ತಳಸ್ತರದ ಶೋಷಿತ ಸಮುದಾಯಗಳ, ಕಣ್ತೆರೆಸುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಮತ್ತೊಂದು ಅಕ್ಷರ ಕೊಡುಗೆ ‘ಊರ ಮಧ್ಯದ ಕಣ್ಣ ಕಾಡಿನೊಳಗೆ’
ಸಮಾಜಮುಖಿ ಮನಸ್ಸುಗಳೆಲ್ಲವೂ ಓದಲೇಬೇಕಾದ, ಸಂಗ್ರಹಯೋಗ್ಯ ಕೃತಿಯನ್ನು ಹೊರತಂದಿರುವ ಡಾ. ಮೂಡ್ನಾಕೂಡು ಅವರಿಗೆ ಅಭಿನಂದನೆಗಳು.
ಕೃತಿಯ ಮುಖಬೆಲೆ: 130 ರೂ.
ಪ್ರಕಾಶಕರು:
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ. ಲಿ.
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
ಫೋನ್: 080-22161900/ 22161901/ 22161902






