ಮಹಿಳಾ ದೃಷ್ಟಿಕೋನದ ವಿಭಿನ್ನ ಆಯಾಮಗಳು ‘ಮೌನ ಮಾತಾದಾಗ’

ಭಾರತೀಯ ಸಮಾಜದ ಸಾರ್ವಜನಿಕ ವಲಯಗಳಲ್ಲಿ, ಬೌದ್ಧಿಕ ವೇದಿಕೆಗಳಲ್ಲಿ ಮಹಿಳಾ ದನಿ ಪ್ರಖರವಾಗಿ ದಾಖಲಾಗತೊಡಗಿದ್ದು 1970ರ ದಶಕದಲ್ಲಿ, ಮಹಿಳಾ ಚಳವಳಿ ತನ್ನದೇ ಆದ ಗಟ್ಟಿ ನೆಲದ ಮೇಲೆ ನಿಂತು ಗಟ್ಟಿ ಧ್ವನಿಯಲ್ಲಿ ಮಾತನಾಡಲಾರಂಭಿಸಿದ ಮೇಲೆ. ಕರ್ನಾಟಕದಲ್ಲೂ ಮರುಧ್ವನಿಸಿದ ಈ ಸ್ತ್ರೀವಾದಿ ಚಿಂತನೆಗಳು ದಿನದಿಂದ ದಿನಕ್ಕೆ ಹರಳುಗಟ್ಟಲು ಕಾರಣವಾಗಿದ್ದು ಭಿನ್ನ ತಾತ್ವಿಕ ನೆಲೆಗಳಲ್ಲಿ ಹುಟ್ಟಿಕೊಂಡ ಮಹಿಳಾ ಸಂಘಟನೆಗಳು. ಬೆಂಗಳೂರು ಕೇಂದ್ರವಾದರೂ ರಾಜ್ಯಾದ್ಯಂತ ಕಂಪನ ಮೂಡಿಸಿದ ವಿಮೋಚನ, ಮಾನಸ ಮತ್ತಿತರ ಗುಂಪುಗಳು ಮಹಿಳಾ ಚಳವಳಿಗಳನ್ನು ಭೌತಿಕ ಚಟುವಟಿಕೆಗಳನ್ನೂ ಮೀರಿ ಸಾಹಿತ್ಯಿಕ-ಬೌದ್ಧಿಕ ವಲಯದೊಳಗೆ ತಂದು ನಿಲ್ಲಿಸಿದ್ದವು.
1986ರಲ್ಲಿ ‘ಮಾನವಿ’ ಹೆಸರಿನಿಂದ ಹುಟ್ಟಿ ತದನಂತರ ‘ಮಾನಸ’ 2007ರಿಂದ ‘ನಮ್ಮ ಮಾನಸ’ ಹೆಸರಿನಲ್ಲಿ ಪ್ರಕಟವಾದ ಪತ್ರಿಕೆಯಾಗಿ 2013ರವರೆಗೂ ನಡೆದುಬಂದ ಪತ್ರಿಕೆಯಲ್ಲಿ ತಾನು ಬರೆಯುತ್ತಿದ್ದ ಲೇಖನಗಳ ಸಂಗ್ರಹವನ್ನು ಹಿರಿಯ ಮಹಿಳಾ ಹೋರಾಟಗಾರ್ತಿ- ಲೇಖಕಿ-ಸಂಶೋಧಕಿ ವೆಂ. ವನಜ ಈಗ ‘ಮೌನ ಮಾತಾದಾಗ’ ಹೆಸರಿನಲ್ಲಿ ಒಂದು ಅಕ್ಷರಗಳ ಗೂಡಿಗೆ ಸೇರಿಸಿದ್ದಾರೆ. ನಾಲ್ಕು ವಿಭಾಗಗಳ 22 ಲೇಖನಗಳ ಈ ಸಂಗ್ರಹ ಓದುಗರನ್ನು ಸಮಕಾಲೀನ ಸಮಾಜದ ಆಗುಹೋಗುಗಳಿಗೆ ಪರಿಚಯಿಸುವುದೇ ಅಲ್ಲದೆ, ಪೌರಾಣಿಕ ಕಥನಗಳ ಸ್ತ್ರೀ ಪಾತ್ರಗಳ ನಡುವೆಯೂ ಕರೆತಂದು ನಿಲ್ಲಿಸುತ್ತದೆ.
‘ಕುಟುಂಬ ಮತ್ತು ಮಹಿಳೆ’ ಲೇಖನದಲ್ಲಿ ವನಜ ಅವರು ಭಾರತೀಯ ಸಮಾಜದ ಕುಟುಂಬ ವ್ಯವಸ್ಥೆ ಹೇಗೆ ಮಹಿಳೆಯ ಬದುಕನ್ನು ನಿಯಂತ್ರಿಸುತ್ತಾ, ನಿರ್ದೇಶಿಸುತ್ತಾ, ನಿರ್ಬಂಧಿಸುತ್ತಾ ನಡೆದು ಬಂದಿದೆ ಎನ್ನುವುದನ್ನು ಚಾರಿತ್ರಿಕ ದಾಖಲೆಗಳ ಮೂಲಕ ನಿರೂಪಿಸುತ್ತಾರೆ. ಇಂದಿಗೂ ಸಮಾನತೆಗಾಗಿ ಹೋರಾಡುತ್ತಿರುವ ಮಹಿಳಾ ಸಂಕುಲದ ಕೌಟುಂಬಿಕ ತಳಪಾಯವನ್ನು ಈ ಅಧ್ಯಾಯ ಪರಿಚಯಿಸುತ್ತದೆ. ‘ಭಾರತೀಯ ಮಹಿಳೆಯರಲ್ಲಿ ಮಾನಸಿಕ ಅಸ್ವಸ್ಥತೆ’ (ವೀಣಾ ಶತ್ರುಘ್ನ) ಮಹಿಳೆ ಸಾಮಾನ್ಯವಾಗಿ ಅನುಭವಿಸುವ ಮಾನಸಿಕ ಅನಾರೋಗ್ಯಗಳಿಗೆ ಸಾಮಾಜಿಕ ಕಾರಣಗಳನ್ನು ಶೋಧಿಸುತ್ತದೆ. ಕೋಮುಗಲಭೆಗಳಲ್ಲಿ, ಮತೀಯ ಸಂಘರ್ಷಗಳಲ್ಲಿ ಹೇಗೆ ಮಹಿಳೆ ಸುಲಭ ತುತ್ತಾಗುತ್ತಾಳೆ ಎನ್ನುವುದನ್ನು ಮಹಿಳೆಯರು ಮತ್ತು ಮತೀಯವಾದ ಲೇಖನದಲ್ಲಿ ವನಜ ಅವರು ಸೋದಾಹರಣವಾಗಿ ದಾಖಲಿಸುತ್ತಾರೆ.
ಕೃತಿಯ ಎರಡನೇ ಭಾಗದಲ್ಲಿ ಲೇಖಕಿಯು ಮಹಿಳಾ ಚಳವಳಿಗಳಿಗೆ ಜಾಗತಿಕ ದೃಷ್ಟಿಕೋನ, ಸೈದ್ಧಾಂತಿಕ ದಿಕ್ಕುದೆಸೆ ತೋರಿದ ಕೆಲವು ಮಹಿಳೆಯರನ್ನು ಪರಿಚಯಿಸುತ್ತಾರೆ. ಮೇರಿ ವುಲ್ಸ್ಸ್ಟನ್ಕ್ರಾಫ್ಟ್, ದುರ್ಬಾ ಬ್ಯಾನರ್ಜಿ, ಪಿಂಕಿ ಪ್ರಮಾಣಿಕ್ ಮೊದಲಾದವರ ಕಠಿಣ ಹಾದಿಗಳ ಸ್ಥೂಲ ಪರಿಚಯ ಮಾಡುತ್ತಾರೆ. ದಲಿತ ಮಹಿಳೆಯ ಮೊದಲ ಆತ್ಮಕತೆ ಎಂದೇ ಖ್ಯಾತಿ ಪಡೆದಿರುವ ಬೇಬಿ ತಾಯಿ ಅವರ ಆತ್ಮಕತೆಯ ಸಂಕ್ಷಿಪ್ತ ಪರಿಚಯ, ಚಲಿಸುವ ಅಂಗಡಿಗಳಂತೆ ವಸ್ತುಗಳ ಮಾರಾಟದಿಂದ ಬದುಕು ಕಟ್ಟುವ ಮಹಿಳೆಯರ ಬವಣೆ, ಪುರುಷ ಸಮಾಜದ ಕಾಮನೆಗಳಿಗೆ ಬಲಿಯಾಗುವ ಬೀದಿ ಬದಿಯ ಹೆಣ್ಣು ಮಕ್ಕಳ ಸಂಕಟಗಳು ಈ ಪುಟಗಳಲ್ಲಿ ತೆರೆದುಕೊಳ್ಳುತ್ತವೆ. ಈ ಭಾಗದ ‘ಸೇವೆಗಾಗಿ ಸೌಂದರ್ಯ ಸ್ಪರ್ಧೆ’ ಲೇಖನ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕುವ ಚರ್ಚಾಸ್ಪದ ಲೇಖನವಾಗಿ ಈ ಕಣಜದಲ್ಲಿದೆ.
ಮೂರನೆಯ ಭಾಗದಲ್ಲಿ 1980ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ಮಹಿಳೆಯರ ಮುಂದಾಳತ್ವದಲ್ಲೇ ನಡೆದ ಸಾರಾಯಿ ನಿಷೇಧ ಹೋರಾಟವನ್ನು ವನಜ ಅವರು ಎಳೆಎಳೆಯಾಗಿ ಬಿಡಿಸಿಡುತ್ತಾರೆ. ಹಾಗೆಯೇ ಪರಿಸರ ರಕ್ಷಣೆಯ ಚಿಪ್ಕೋ ಚಳವಳಿಯಲ್ಲಿ ಮಹಿಳೆಯರ ಕ್ರಿಯಾಶೀಲ ಕೊಡುಗೆಯನ್ನೂ ದಾಖಲಿಸುತ್ತಾರೆ. ಭಾಗ 4ರಲ್ಲಿ ವೆಂ. ವನಜ ಅವರು ‘ಪ್ರಾಚೀನ ಭಾರತದಲ್ಲಿ ಮಹಿಳೆಯರು’ ಎಂಬ ಪ್ರಬಂಧದ ಮುಖೇನ ಓದುಗರಿಗೆ ಭಾರತೀಯ ಸಮಾಜದ ಪ್ರಾಚೀನ ಚಿತ್ರಣವನ್ನು ಬಗೆಬಗೆಯಾಗಿ, ಎಲ್ಲ ಆಯಾಮಗಳಲ್ಲೂ ಪರಿಚಯಿಸುತ್ತಾರೆ. 25 ವರ್ಷಗಳ ಹಿಂದಿನ ಈ ಪ್ರಬಂಧ ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆಯುತ್ತದೆ. ಆಧುನಿಕ ಮಹಿಳೆಯರು ಸಮಕಾಲೀನ ಸಮಾಜದಲ್ಲಿ ನಿಂತು ರಾಮಾಯಣದ ಮಹಾಕಾವ್ಯವನ್ನು ಹೇಗೆ ವ್ಯಾಖ್ಯಾನಿಸಿ, ನಿರ್ವಚಿಸಬಹುದು ಎಂಬ ವಿನೂತನ ಕಲ್ಪನೆಗೆ ‘ಮಹಿಳೆಯರು ರಾಮಾಯಣವನ್ನು ಮತ್ತೆ ಹೇಳಿದಾಗ’ (ಮೂಲ: ನವನೀತ ದೇವಸೇನ್)ಗರಿ ಮೂಡಿಸುತ್ತದೆ.
ವೆಂ. ವನಜ ಅವರ ಮೌನ ವಾಸ್ತವವಾಗಿ ಗಟ್ಟಿ ಮಾತಾಗುವುದು ಈ ಭಾಗದ ಕೊನೆಯ ಮೂರು ಬರಹಗಳಲ್ಲಿ. ದಮಯಂತಿ, ಗಾಂಧಾರಿ ಮತ್ತು ಸುಕನ್ಯೆ, ಈ ಮೂರು ಪೌರಾಣಿಕ ಸೃಷ್ಟಿಗಳನ್ನು ವರ್ತಮಾನದ ಚೌಕದಲ್ಲಿ ತಂದು ನಿಲ್ಲಿಸುವ ವನಜ ಅವರು, ಮೂಲ ಪೌರಾಣಿಕ ಅಥವಾ ಕಾಲ್ಪನಿಕ ಕಥನಗಳನ್ನೂ ದಾಟಿ ಈ ಮೂರು ಸೃಷ್ಟಿಗಳನ್ನು ವರ್ತಮಾನದಲ್ಲಿಟ್ಟು ನೋಡಲು ಪ್ರಯತ್ನಿಸುತ್ತಾರೆ.
ಮಹಾಭಾರತದ ವನಪರ್ವದಲ್ಲಿ ಬರುವ ನಳ-ದಮಯಂತಿ ಕಥೆಯು ಪ್ರೇಮ, ಧೈರ್ಯ ಮತ್ತು ತ್ಯಾಗದ ಹೂರಣವಾಗಿ ಭಾರತದ ಕಾವ್ಯಪರಂಪರೆಯನ್ನು ಅಲಂಕರಿಸಿದೆ. ಆದರೆ ವೆಂ. ವನಜ ಅವರ ಸಂವೇದನಾಶೀಲ ಮನಸ್ಸಿಗೆ ದಮಯಂತಿ ಈ ಔದಾತ್ಯಗಳನ್ನೂ ದಾಟಿದ ವ್ಯಕ್ತಿಯಾಗಿ ಕಾಣುತ್ತಾಳೆ. ಪುರಾಣ ಕಥನದ ಮಹಿಳಾ ಪಾತ್ರಗಳನ್ನು ಸಮಕಾಲೀನ ಬೌದ್ಧಿಕ ಆಲೋಚನಾ ಕ್ರಮಗಳ ಚೌಕಟ್ಟಿನಲ್ಲಿಟ್ಟು ಮರುವ್ಯಾಖ್ಯಾನ ಮಾಡುವುದು ಸುಲಭವಲ್ಲ. ವನಜ ಅವರು ದಮಯಂತಿಯನ್ನು ಹೀಗೆ ಪರಿಚಯಿಸುತ್ತಾರೆ. ಪುರುಷರಿಗೆ ವಿವಾಹ ಎನ್ನುವುದು ಕೇವಲ ಹೆಣ್ಣಿನ ಸಾಂಗತ್ಯಕ್ಕೆ ಕೊನೆಯಾದರೆ ಮಹಿಳೆಗೆ ಅದು ಘನತೆ, ಸ್ವಾಭಿಮಾನ, ಅಸ್ತಿತ್ವ, ಅಸ್ಮಿತೆ ಮತ್ತು ಸಾಮಾಜಿಕ ಸ್ಥಾನಮಾನಗಳ ಸಂಕೇತವಾಗುತ್ತದೆ.
ಪುರಾಣ ಕಾಲದಿಂದಲೂ ಭಾರತ ಈ ಬೌದ್ಧಿಕ ಸಂಘರ್ಷವನ್ನು ಎದುರಿಸುತ್ತಲೇ ಬಂದಿದೆ. ಈ ಸಂಘರ್ಷದಲ್ಲಿ ದಮಯಂತಿ ಮತ್ತು ಮಹಾಭಾರತದ ಕೌರವರ ತಾಯಿ ಗಾಂಧಾರಿ ಎದುರಿಸುವ ಒಳಸಂಕಟಗಳನ್ನು, ಮಾನಸಿಕ ತುಮುಲ-ತಳಮಳಗಳನ್ನು ಹಾಗೂ ಯಾರಲ್ಲೂ ನಿವೇದಿಸಲಾಗದ ನೋವು-ಯಾತನೆಯನ್ನು ವೆಂ. ವನಜ ಅವರು ಎರಡು ಅಧ್ಯಾಯಗಳಲ್ಲಿ ತೆರೆದಿಡುತ್ತಾರೆ. ಚರಿತ್ರೆಯನ್ನು ವರ್ತಮಾನದ ಕಣ್ಣಿಂದ ನೋಡುವ ಒಂದು ಸಂಶೋಧನಾತ್ಮಕ ಒಳನೋಟ ಈ ಲೇಖನಗಳಲ್ಲಿರುವುದು, ಇಡೀ ಪುಸ್ತಕವನ್ನು ಅಧ್ಯಯನಕ್ಕೆ, ಸಂಗ್ರಹಕ್ಕೆ ಪ್ರಥಮ ಆದ್ಯತೆಯಾಗಿಸುತ್ತದೆ.
ಎರಡು ದಶಕಗಳ ಹಿಂದಿನ ಅಮೂಲ್ಯ ಬರಹಗಳ ಗುಚ್ಛ ‘ಮೌನ ಮಾತಾದಾಗ’ ವಿಶಾಲ ಸಮಾಜದೊಡನೆ ಮಾತನಾಡಿಸುವ ಒಂದು ಉಪಯುಕ್ತ ಹೊತ್ತಿಗೆಯಾಗಿ ಕಾಣುತ್ತದೆ. ಈ ಕಾರಣಕ್ಕಾಗಿ ವೆಂ. ವನಜ ಅಭಿನಂದನಾರ್ಹರಾಗುತ್ತಾರೆ.
ಈ ಕೃತಿಯ ಮುಖಬೆಲೆ: 250 ರೂ.
ಪ್ರಕಾಶಕರು: ಮಾನಸ ಪ್ರಕಾಶನ
114/5, 2ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಚಾಮರಾಜಪೇಟೆ - 560018
ಮೊ: 9448066745.
(ಲೇಖಕರು: ಹಿರಿಯ ಬರಹಗಾರರು, ಸಾಮಾಜಿಕ ಹೋರಾಟಗಾರರು)






