PUTTUR | ಮಾದಕ ವಸ್ತು ಸಾಗಾಟ: ಮೂವರು ಆರೋಪಿಗಳ ಬಂಧನ

ಪುತ್ತೂರು: ನಿಷೇಧಿತ ಮಾದಕ ವಸ್ತು ಎಂಡಿಎಂ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರು ಯುವಕರನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕೋಝಿಕ್ಕೋಡ್ ಪೆರುವಾಯಲ್ ನಿವಾಸಿ ಮುಹಮ್ಮದ್ ಅಜ್ಜಲ್ ಸಿ.(30), ಕೊಯ್ಲಾಡಿ ನಿವಾಸಿ ಸಂಶೀರ್(27) ಹಾಗೂ ವಯನಾಡ್ ನಿವಾಸಿ ಇಸ್ಮಾಯೀಲ್(28) ಬಂಧಿತ ಆರೋಪಿಗಳು. ಇವರಿಂದ 55 ಗ್ರಾಂ ಎಂಡಿಎಂ ಮತ್ತು ಒಂದು ತಲುವಾರು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಗುಣಪಾಲ ಜೆ ಅವರು ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿದ್ದ ವೇಳೆ
ಖಚಿತ ಮಾಹಿತಿಯ ಆಧಾರದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪುತ್ತೂರು ಕಡೆಯಿಂದ ಬಂದ ಕೇರಳ ನೋಂದಣಿಯ ಕಾರೊಂದನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪರಿಶೀಲಿಸಿದಾಗ ಮಾದಕ ವಸ್ತು ಮತ್ತು ಚಾಲಕನ ಸೀಟಿನ ಅಡಿಯಲ್ಲಿ ಒಂದು ತಲವಾರು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






