ನವೆಂಬರ್‌ನಲ್ಲಿ ಆರ್.ಅಶೋಕ್, ವಿಜಯೇಂದ್ರರನ್ನು ಕೆಳಗಿಳಿಸುತ್ತಾರೆ : ಎಂ.ಲಕ್ಷ್ಮಣ್

ಮೈಸೂರು : ಕ್ರಾಂತಿ ಭ್ರಾಂತಿ ಎಲ್ಲಾ ಬಿಜೆಪಿಯಲ್ಲಿ ನಡೆಯುವುದು. ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್‌ನಲ್ಲಿ ಆರ್.ಅಶೋಕ್ ಮತ್ತು ಬಿ.ವೈ.ವಿಜಯೇಂದ್ರ ಅವರನ್ನೇ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಕ್ರಾಂತಿಯೂ ಇಲ್ಲ ಏನೂ ಇಲ್ಲ. ಬಿಜೆಪಿ ಪಕ್ಷದಲ್ಲೇ ಕ್ರಾಂತಿಯಾಗಲಿದೆ. ಬಿಹಾರ ಚುನಾವಣೆ ನಂತರ ಕೆಲವು ಬದಲಾವಣೆ ಮಾಡುವುದಾಗಿ ಅಮಿತ್ ಶಾ ಅವರೇ ಹೇಳಿದ್ದಾರೆ. ಹಾಗಾಗಿ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಐದು ವರ್ಷ ಆಡಳಿತ ನಡೆಸಿ ಎಂದು ಜನ ನಮಗೆ ಅಧಿಕಾರ ನೀಡಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉತ್ತಮ ಅಡಳಿತ ನಡೆಸುತ್ತಿದ್ದೇವೆ. 2028ಕ್ಕೂ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಲಿದೆ. ಹಾಗಾಗಿ ನವೆಂಬರ್ ನಲ್ಲಿ ಯಾವುದೇ ಕ್ರಾಂತಿ ಇಲ್ಲ. ಕ್ರಾಂತಿ ಭ್ರಾಂತಿ ಎಲ್ಲಾ ಬಿಜೆಪಿಯಲ್ಲೇ ನಡೆಯಲಿದೆ ಎಂದರು.
ಮತಗಳ್ಳತನದ ಮೂಲಕ ನರೇಂದ್ರ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ಇವರ ಮತಗಳ್ಳತನದ ಬಗ್ಗೆ ರಾಹುಕ್ ಗಾಂಧಿ ಸಾಕ್ಷಿ ಸಮೇತ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದು ದೇಶದ ಜನರಿಗೆ ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಹೇಳಿದರು.







