ರಹ್ಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲನ್ನು ಸಿಲುಕಿಸಲು ಪೊಲೀಸ್ ಇಲಾಖೆ ಯತ್ನಿಸುತ್ತಿದೆ: ಬಜರಂಗ ದಳ ಆರೋಪ

ಭರತ್ ಕುಮ್ಡೇಲ್
ಮಂಗಳೂರು: ಕೊಳ್ತಮಜಲ್ನಲ್ಲಿ ನಡೆದ ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಬಜರಂಗದಳದ ಭರತ್ ಕುಮ್ಡೇಲ್ನನ್ನು ಸಿಲುಕಿಸಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಯಾವುದೇ ಸಾಕ್ಷ್ಯಗಳಿಲ್ಲದೆ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಹೇಳಿದ್ದಾರೆ.
ನಗರದ ವಿಶ್ವಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಹ್ಮಾನ್ ಪ್ರಕರಣ ವೈಯಕ್ತಿಕ ಅಥವಾ ಮರಳು ದಂಧೆ ಕಾರಣಕ್ಕೆ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಸರಕಾರ ತನಿಖೆ ನಡೆಸಲಿ. ಮುಸ್ಲಿಮರ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿ ಹಿಂದುತ್ವ ಸಂಘಟನೆಯ ನಾಯಕರು, ಕಾರ್ಯಕರ್ತರ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹತ್ಯೆ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನವನ್ನು ಖಂಡಿಸುತ್ತೇವೆ ಎಂದರು.
ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್ ಮಾತನಾಡಿ, ಸಣ್ಣ ಪುಟ್ಟ ಪ್ರಕರಣಗಳು ಇರುವವರಿಗೂ ಪೊಲೀಸರು ಗಡೀಪಾರು ನೋಟಿಸ್ ನೀಡಿದ್ದಾರೆ. ಹಿಂದುತ್ವ ಸಂಘಟನೆ ಕಾರ್ಯಕರ್ತರ ಮಾಹಿತಿ ಪಡೆಯಬೇಕಿದ್ದರೆ ಹಗಲು ಹೋಗಬಹುದಿತ್ತಲ್ವಾ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು.





