ರಾಯಚೂರು: ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಖಾಲಿಯಾಗಿ ಕ್ಯಾನ್ಸರ್ ರೋಗಿ ಮೃತ್ಯು; ಆರೋಪ

ರಾಯಚೂರು: ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಒಪೆಕ್) ಆಸ್ಪತ್ರೆಯಿಂದ ಸ್ಕ್ಯಾನಿಂಗ್ ಉದ್ದೇಶಕ್ಕಾಗಿ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆ ಕ್ಯಾನ್ಸರ್ ರೋಗಿಯೊಬ್ಬರು ಮೃತಪಟ್ಟಿದ್ದು, ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಖಾಲಿಯಾಗಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಯಚೂರಿನ ಎಲ್ ಬಿಎಸ್ ನಗರದ ಶ್ರೀನಿವಾಸ (35) ಮೃತಪಟ್ಟ ಯುವಕ. ಶ್ರೀನಿವಾಸ್ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಸಿಟಿ ಸ್ಕ್ಯಾನಿಂಗ್ ಮಾಡಿಸುವುದಕ್ಕಾಗಿ ಅವರನ್ನು ಆಸ್ಪತ್ರೆಯ ಸಿಬ್ಬಂದಿ ಗ್ಯಾಸ್ ಆಕ್ಸಿಜನ್ ಸೌಲಭ್ಯವಿರುವ ಆಂಬುಲೆನ್ಸ್ ಮೂಲಕ ಓಪೆಕ್ ಆಸ್ಪತ್ರೆಯ ಅನತಿ ದೂರದಲ್ಲೇ ಇರುವ ರಿಮ್ಸ್ಗೆ ಕರೆದೊಯ್ದಿದ್ದಾರೆ. ದಾರಿಮಧ್ಯೆ ಶ್ರೀನಿವಾಸ್ ಆ್ಯಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದಾರೆ.
ಆ್ಯಂಬುಲೆನ್ಸ್ ನಲ್ಲಿ ಆಕ್ಸಿಜನ್ ಖಾಲಿಯಾದ ಕಾರಣ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಅವರ ಸಾವಿಗೆ ಕಾರಣ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆಗಾಗಿ ಒಪೆಕ್ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ರಮೇಶ ಬಿ. ಸಾಗರ್ ಅವರನ್ನು ವಾರ್ತಾಭಾರತಿ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.





