Raichur | ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ, ಬೈಕ್ ರ್ಯಾಲಿ

ರಾಯಚೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಎದ್ದೇಳು ಕರ್ನಾಟಕ, ಎಸ್‌ಐಆರ್ ವಿರೋಧಿ ಸಂಘಟನೆ, ದಲಿತಪರ ಹಾಗೂ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಯಿತು.
ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಅಂಗವಾಗಿ, ಕಲ್ಯಾಣ ಕರ್ನಾಟಕ ಭಾಗದಿಂದ ಹೊರಡಲಿರುವ ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಕ್ಕೆ ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ಕ್ರೀಡಾಂಗಣ ಬಳಿಯ ಗಾಂಧಿ ಪುತ್ಥಳಿಯಿಂದ ಆರಂಭವಾದ ಜನಜಾಗೃತಿ ಜಾಥಾ ಹಾಗೂ ಬೈಕ್ ರ್ಯಾಲಿ ಕೇಂದ್ರ ಬಸ್ ನಿಲ್ದಾಣದ ಮಾರ್ಗವಾಗಿ ತೀನ್ ಖಂದಿಲ್ ನಲ್ಲಿ ಸಂಚರಿಸಿ ಮುಕ್ತಾಯಗೊಂಡಿತು.
ದಲಿತಪರ ಹೋರಾಟಗಾರ ಎಂ.ಆರ್.ಭೇರಿ, ಅಂಬಣ್ಣ ಅರೋಲಿ ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹೆಸರಿನಲ್ಲಿ ದೇಶಾದ್ಯಂತ ಲಕ್ಷಾಂತರ ಅರ್ಹ ಮತದಾರರ ಸಾಂವಿಧಾನಿಕ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮೂಲಕ ಮುಸ್ಲಿಮರ, ದಲಿತ, ಆದಿವಾಸಿಗಳ ಮತದಾನದ ಹಕ್ಕು ಕಸಿದುಕೊಂಡಿದ್ದಾರೆ. ಆ ಮೂಲಕ ಬಿಜೆಪಿ ಗೆಲ್ಲಲು ಕುತಂತ್ರ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಬಿಜೆಪಿ ಗೆಲ್ಲಲು ಎಲ್ಲಾ ಕಸರತ್ತು ನಡೆಸುತ್ತಿದ್ದು, ಇದನ್ನು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಸಂವಿಧಾನದ ಮೂಲಕ ನೀಡಿದ ಹಕ್ಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಜಾಥಾದ ಮೂಲಕ ಸಂಚರಿಸುತ್ತಿದ್ದೇವೆ. ಎಲ್ಲರೂ ಜಾಗೃತರಾಗಿ ಒಗ್ಗಟ್ಟಿನ ಹೋರಾಟ ಮಾಡಿದಾಗ ಮಾತ್ರ ಅವರ ಕುತಂತ್ರ ವಿಫಲಗೊಳಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎದ್ದೇಳು ಕರ್ನಾಟಕದ ಜಿಲ್ಲಾಧ್ಯಕ್ಷ ಶರಣಕುಮಾರ ಎಂ, ಮಾರೆಪ್ಪ ಹರವಿ, ಕಾಂಗ್ರೆಸ್ ಮುಖಂಡ ಮಹಮ್ಮದ್ ಶಾಲಂ, ಶ್ರೀನಿವಾಸ ರೆಡ್ಡಿ, ಫೈಸಲ್ ಖಾನ್, ಆಂಜನೇಯ ಕುರುಬದೊಡ್ಡಿ, ಜಮಾತೆ ಇಸ್ಲಾಂ ಜಿಲ್ಲಾಧ್ಯಕ್ಷ ಅಸಿಮುದ್ದೀನ್ ಅಖ್ತರ್, ಸಮದ್ ಪಾಶ, ಎಸ್ ಮಾರೆಪ್ಪ, ಮತ್ತಿತರರು ಇದ್ದರು.






