ಕನ್ನಡ ಶಾಲೆಗಳನ್ನು ಉಳಿಸಿ ಸಬಲೀಕರಿಸಿ: ನಾಡೋಜ ಕುಂ.ವೀರಭದ್ರಪ್ಪ ಸಲಹೆ

ರಾಯಚೂರು, ಸೆ.15: ಕನ್ನಡ ಶಾಲೆಗಳನ್ನು ಉಳಿಸುವ ಮತ್ತು ಸಬಲೀಕರಣ ಮಾಡುವ ಕಾರ್ಯಕ್ಕೆ ಸರಕಾರ ಮುಂದಾಗಬೇಕು ನಾಡೋಜ ಡಾ.ಕುಂ.ವೀರಭದ್ರಪ್ಪ ಒತ್ತಾಯಿಸಿದ್ದಾರೆ.
ಅವರು ರವಿವಾರ ರಾಯಚೂರಿನ ಪಂ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಏರ್ಪಡಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
'ಕನ್ನಡ ಉಳಿದರೆ ಮಾತ್ರ ನಾಡು ಉಳಿಯುತ್ತದೆ, ನಮ್ಮ ನುಡಿಯನ್ನು ನಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು, ಕನ್ನಡ ಭಾಷೆ ಸಂಬಂಧ ವಾಚಕಗಳಿಂದ ಸಮೃದ್ದವಾಗಿದೆ, ಕನ್ನಡಕ್ಕೆ ಮಾತ್ರ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ಇದೆ' ಎಂದು ಹೇಳಿದರು.
'ಇಂದು ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುತ್ತಿರುವ ಇಂಗ್ಲಿಷ್ ಭಾಷೆ ವಸಾಹತುಶಾಹಿಯ ದಾಸ್ಯದ ಸಂಕೇತ, ಅದು ಅಂಗಳ ದಾಟಿ ಅಡುಗೆ ಮನೆಯನ್ನು ಆಕ್ರಮಿಸದಂತೆ ಎಲ್ಲರೂ ಎಚ್ಚರ ವಹಿಸಬೇಕು. ನಮ್ಮ ಕನ್ನಡ ಭಾಷೆ ಬಗ್ಗೆ ಆಸಕ್ತಿಯನ್ನು ಕೆರಳಿಸುವುದು ಪ್ರತೀ ಶಿಕ್ಷಕನ ಹೊಣೆ ಎಂದು ಹೇಳಿದರಲ್ಲದೆ, ಶೈಕ್ಷಣಿಕ ಕ್ಷೇತ್ರಕ್ಕೆ ಸಾವಿತ್ರಿ ಭಾಯಿ ಫುಳೆಯವರ ಕೊಡುಗೆ ಸಾರ್ವಕಾಲಿಕ ಶ್ರೇಷ್ಠ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಚಿತ್ರನಟಿ, ನಿರ್ದೇಶಕಿ ಬರಹಗಾರ್ತಿ ಕಲಾವಿದೆ ರಂಜನಿ ರಾಘವನ್ ಅವರಿಗೆ 'ಹೆಮ್ಮೆಯ ಕನ್ನಡತಿ' ಬಿರುದು ನೀಡಿ ಸತ್ಕರಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಶಿಕ್ಷಕರನ್ನು ಗೌರವಿಸಲಾಯಿತು, ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ವಸಂತ ಕುಮಾರ್ ಮಾತಾಡಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಕೆ.ಅಸ್ಲಂ ಪಾಷಾ, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್. ಶ್ರೀದೇವಿ ಆರ್.ವಿ. ನಾಯಕ್. ದಾವಣಗೆರೆ ಜಿಲ್ಲಾ ಕನಕ ನೌಕರರ ಬಳಗದ ಅಧ್ಯಕ್ಷ ಶಿವಾನಂದ ದಳವಾಯಿ. ಜಿಲ್ಲಾ ಜೆಡಿಎಸ್ ಕಾರ್ಯಕರ್ತ ವಕೀಲ ಎನ್.ಶಿವಶಂಕರ, ದಾವಣಗೆರೆ ಸಿದ್ದಗಂಗಾ ಶಾಲೆಯ ನಿರ್ದೇಶಕರಾದ ಜಯಂತ್. ಅತಿಥಿಗಳಾಗಿ ವೇದಿಕೆ ಮೇಲೆ ಇದ್ದರು.
ರಾಯಚೂರಿನ ಒಪೆಕ್ ಆಸ್ಪತ್ರೆಯ ಕ್ಯಾನ್ಸರ್ ರೋಗದ ತಜ್ಞ ಡಾ.ರಮೇಶ್ ಸಾಗರ್ ಇವರಿಗೆ 'ರಾಜ್ಯಮಟ್ಟದ ವೈದ್ಯರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೋವಾ ಮತ್ತು ದಾವಣಗೆರೆ ಚಿಕ್ಕಬಳ್ಳಾಪುರ ಕೋಲಾರ ತುಮಕೂರ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಸೇರಿದಂತೆ 30 ಶಿಕ್ಷಕರಿಗೆ, 10 ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೊದಲಿಗೆ ಅಮರಗೌಡ ಸಂತೋಸಿ, ರಾಕ್ ಸ್ಟಾರ್ ಜ್ಯೋತಿ ಇವರಿಂದ ಗಾಯನ ಮತ್ತು ಡ್ಯಾನ್ಸ್ ವಂಶಿ ಡ್ಯಾನ್ಸ್ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳಿಂದ ನೃತ್ಯ ಜನಮನ ಸೂರೆಗೊಂಡಿತು. ಕಲಾ ಸಂಕುಲ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಾರುತಿ ಬಡಿಗೇರ ಸ್ವಾಗತಿಸಿದರು. ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಕಾರ್ಯಕ್ರಮ ನಿರ್ವಹಿಸಿದರು. ರಾಯಚೂರು ನಗರದ ಶಿಕ್ಷಕಿಯರಾದ ವಡವಾಟಿ ವನಮಾಲ, ಗೌಸ್ ನಗರ ಶಾರದಾ, ಕಾಕಾತೀಯ ಶಾಲೆಯ ಶಿಲ್ಪ ಹಿರೇಮಠ, ಚೈತನ್ಯ ಶಾಲೆಯ ಅನುರಾಧಾ ಹಡಗಲಿಯವರಿಗೆ ಶಿಕ್ಷಕರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.







