ಜಿಎಸ್ ಟಿ ದರ ಇಳಿಕೆ: ರಾಯಚೂರಿನಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ

ರಾಯಚೂರು: ಕೇಂದ್ರ ಸರಕಾರ ಕೆಲ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗಳ ದರ ಇಳಿಕೆ ಮಾಡಿದ್ದನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ನಗರದಲ್ಲಿಂದು ಸಂಭ್ರಮಾಚರಣೆ ನಡೆಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ ಜಿಎಸ್ಟಿ ಇಳಿಕೆಗೆ ಉಡುಗೊರೆ ಮೋದಿ ಸರಕಾರಕ್ಕೆ ಧನ್ಯವಾದಗಳು ಘೋಷ ವಾಕ್ಯದ ಅಡಿಯಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ನಗರ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಕೇಂದ್ರ ಸರಕಾರ ಜಿಎಸ್ ಟಿ ಇಳಿಕೆ ಮಾಡಿ ಜನರಿಗೆ ನವರಾತ್ರಿ ಉಡುಗೊರೆ ನೀಡಿದೆ. ದೇಶದ ಇತಿಹಾಸದಲ್ಲಿ ಜಿಎಸ್ ಟಿ ಏರಿಸಿದ್ದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಸಿದ ಉದಾಹರಣೆ ಇಲ್ಲ. ನರೇಂದ್ರ ಮೋದಿ ಈ ಕೆಲಸ ಮಾಡಿ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಎಂಎಲ್ ಸಿ ಎನ್.ಶಂಕ್ರಪ್ಪ, ಕಡಗೋಲ ಅಂಜನೇಯ, ರವಿ ಜಲ್ದಾರ್, ರಾಮಚಂದ್ರ ಕಡಗೋಲ, ಸೈಯದ್ ಮುಕ್ತಿಯಾರ್ ಮತ್ತಿತರರು ಉಪಸ್ಥಿತರಿದ್ದರು.





