ರಾಯಚೂರು: 'ಮತಗಳ್ಳರೆ ಕುರ್ಚಿ ಖಾಲಿ ಮಾಡಿ' ಕಾಂಗ್ರೆಸ್ ನಿಂದ ಪ್ರತಿಭಟನೆ, ಸಹಿ ಸಂಗ್ರಹ

ರಾಯಚೂರು: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು 'ವೋಟ್ ಚೋರ್ ಗದ್ದಿ ಚೋಡ್'( ಮತಗಳ್ಳರೆ ಖುರ್ಚಿ ಖಾಲಿ ಮಾಡಿ) ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಮಾನ ನಡೆಯಿತು.
ಪ್ರತಿಭಟನಾನಿರತ ಮುಖಂಡರು 'ಓಟ್ ಚೋರ್ ಗದ್ದಿ ಚೋಡ್' ಎಂಬ ಘೋಷಣೆ ಮೊಳಗಿಸಿ ಕೇಂದ್ರದ ಬಿಜೆಪಿ ಸರಕಾರ ಹಾಗೂ ಚುನಾವಣೆ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್ ಮಾತನಾಡಿ, ಮತಗಳ್ಳತನ ಎನ್ನುವದು ಬಿಜೆಪಿಯ ನಿಜಬಣ್ಣವಾಗಿದೆ. ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ ಒಂದೂ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ, ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಹುಡುಕಿ ಹುಡುಕಿ ತೆಗೆದುಹಾಕುವುದು ಮತ್ತು ತಮಗೆ ಬೇಕಾದ ಮತದಾರರನ್ನು ಅಕ್ರಮವಾಗಿ ಸೇರಿಸುವ ಮೂಲಕ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿರುವುದು ದೇಶದ ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ ಎಂದು ಹೇಳಿದರು.
ಚುನಾವಣೆಗಳು ಪಾರದರ್ಶಕ ವಾಗಿ ನಡೆಯಬೇಕು, ಪ್ರತಿಯೊಬ್ಬ ನಾಗರಿಕರಿಗೆ ಮತದಾನದ ಹಕ್ಕು ಸಿಗಬೇಕು, ಮತಗಳ್ಳತನ ನಡೆಯಬಾರದೆಂದು ನಮ್ಮ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಹೋರಾಟ ಮಾಡಿರುವುದರಿಂದಲೇ ಇಂದು ಚುನಾವಣಾ ಆಯೋಗ ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆದುಹಾಕಲು ಓಟಿಪಿ ಮಾದರಿ ಜಾರಿಗೊಳಿಸಿದೆ, ಇದು ನಮ್ಮ ಹೋರಾಟಕ್ಕೆ ಸಿಕ್ಕಗೆಲುವು ಅಲ್ಲದೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಚುನಾವಣಾ ಆಯೋಗಕ್ಕೆ ಹಲವು ನಿರ್ದೇಶನ ನೀಡಿದೆ ಎಂದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಚುನಾವಣೆ ಆಯೋಗವನ್ನು ಬಳಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣೆ ಪ್ರಕ್ರಿಯೆ ನಡೆಸಿದೆ. ಮತದಾರರ ಪಟ್ಟಿಯಿಂದ ಕಾಂಗ್ರೆಸ್ ಮತದಾರರ ಹೆಸರು ತೆಗೆದು ಹಾಕುವುದು, ಕಾನೂನುಬಾಹಿರವಾಗಿ ಮತದಾರರನ್ನು ಸೇರಿಸುವುದು ತಮಗೆ ಅನುಕೂಲಕ್ಕೆ ತಕ್ಕಂತೆ ರಚನೆ ಮಾಡಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದೆ. ಚುನಾವಣೆ ಆಯೋಗ ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್, ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು ಮಾತನಾಡಿದರು.
ಮುಖಂಡರಾದ ಕೆ.ಶಾಂತಪ್ಪ, ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಇಟಗಿ, ರುಡಾ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಪಾಮಯ್ಯ ಮುರಾರಿ, ಡಾ.ರಝಾಕ ಉಸ್ತಾದ, ಕೆ.ಅಸ್ಲಂ ಪಾಶಾ, ಅಬ್ದುಲ್ ಕರೀಂ, ಆಂಜನೇಯ ಕುರುಬದೊಡ್ಡಿ, ಡಿ.ಕೆ.ಮುರಳಿ ಯಾದವ, ನಿರ್ಮಲಾ ಬೆಣ್ಣೆ ಹಾಗೂ ಇತರರು ಉಪಸ್ಥಿತರಿದ್ದರು.







