ರಾಯಚೂರು: ದಲಿತ ಬಾಲಕಿಯ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ರಾಯಚೂರು: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ ದಲಿತ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರಗೈದು ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ದೇವದುರ್ಗ ಘಟಕ ವತಿಯಿಂದ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ತಹಶೀಲ್ದಾರ್ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ಬಾಲಕಿಯನ್ನು ಅತ್ಯಾಚಾರ ಮಾಡಿ 12 ತಾಸು ನಿರಂತರ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರು ವಿಕೃತ ಕಾಮಿಗಳನ್ನು ಯಾವುದೇ ಕಠಿಣ ಶಿಕ್ಷೆಗೆ ಒಳಪಡಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರಿ, ದಲಿತ ಬಾಲಕಿಯ ಅತ್ಯಾಚಾರ-ಕೊಲೆ ನಡೆದಿದ್ದರೂ ಸ್ಥಳೀಯ ಶಾಸಕರು, ಸಂಸದರು ಅಥವಾ ರಾಜ್ಯದ ಕಾಂಗ್ರೆಸ್ ಮುಖಂಡರು ಯಾರೂ ಕೂಡಾ ಆ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಅವರು ಆರೋಪಿಸಿದರು.
“ಮೇಲ್ವರ್ಗದ ಕುಟುಂಬದ ಬಾಲಕಿಯಾಗಿದ್ದರೆ ಎಲ್ಲ ಪಕ್ಷಗಳ ನಾಯಕರು, ಅಧಿಕಾರಿಗಳು ತಕ್ಷಣ ಧಾವಿಸಿ ಸಾಂತ್ವನ ಹೇಳುತ್ತಿದ್ದರು. ಆದರೆ ದಲಿತ ಬಾಲಕಿಯ ಪ್ರಕರಣದಲ್ಲಿ ಎಲ್ಲರೂ ಮೌನ ವಹಿಸಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮ್ ಆರ್ಮಿ ತಾಲೂಕಾಧ್ಯಕ್ಷ ವಿಶ್ವನಾಥ್ ಬಲ್ಲಿದೇವ ಮಾತನಾಡಿದರು.
ಪ್ರತಿಭಟನೆಯಲ್ಲಿ ಮೋಹನ ಬಿಲ್ಲಿದೇವ್, ಬಾಬು ಕವಾಸ, ಮಹಾಂತೇಶ ಭವಾನಿ, ಮಲ್ಲಯ್ಯ ಕಟ್ಟಿಮನಿ, ಪರಶುರಾಮ, ಪ್ರಸಾದ್ ಕುಮಾರ, ಕ್ರಾಂತಿ ಕುಮಾರ, ಇನ್ನಿತರರು ಹಾಜರಿದ್ದರು.







