ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಠಾಣೆ ಆಯ್ಕೆ

ರಾಯಚೂರು : ದೇಶದಲ್ಲಿ ಅತ್ಯುತ್ತಮ ಮೂರು ಪೊಲೀಸ್ ಠಾಣೆಗಳ ಆಯ್ಕೆಯಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆಯು ಆಯ್ಕೆಯಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಜಂಟಿ ಕಾರ್ಯದರ್ಶಿ ಸತ್ಯಪ್ರಿಯಾಸಿಂಗ್ ಅವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು 2025ನೇ ಸಾಲಿನ ದೇಶದಲ್ಲಿನ ಪೊಲೀಸ್ ಠಾಣೆಗಳ ಸ್ಥಿತಿಗತಿ ಹಾಗೂ ಮೂಲಸೌಕರ್ಯ, ಆಡಳಿತ ಸೇರಿದಂತೆ ಅನೇಕ ಷರತ್ತುಗಳನ್ವಯ ಸಮೀಕ್ಷೆ ನಡೆಸಿದಾಗ ದೇಶದಲ್ಲಿ ಮೂರು ಪೊಲೀಸ್ ಠಾಣೆಗಳು ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದರಲ್ಲಿ ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆಯೂ ಸೇರಿದೆ.
ನವೆಂಬರ್ 28ರಂದು ಛತ್ತಿಸ್‌ಗಡ್ ರಾಜ್ಯ ರಾಯಪುರ ಐಐಐನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕವಿತಾಳ ಠಾಣಾ ಅಧಿಕಾರಿಗೆ ಟ್ರೋಫಿ ಪ್ರದಾನ ನೀಡಿ ಗೌರವಿಸಲಾಗುತ್ತಿದೆ. ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆಯು ದೇಶದಲ್ಲಿ ಅತ್ಯುತ್ತಮ ಪೊಲೀಸ್ ಠಾಣೆಯನ್ನಾಗಿ ಗುರುತಿಸಿ ಆಯ್ಕೆ ಮಾಡಿರುವುದು ಸಂಸತ ತಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದ್ದಾರೆ.





