ಸೈಬರ್ ಅಪರಾಧ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಎಸ್ಪಿ ಎಂ.ಪುಟ್ಟಮಾದಯ್ಯ

ರಾಯಚೂರು: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ತಲುಪುವಂತಾಗುವ ದಿಸೆಯಲ್ಲಿ ಕಾರ್ಯಗಾರ ಆಯೋಜಿಸಲಾಗಿದೆ. ಸೈಬರ್ ಅಪರಾಧ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದ್ದಾರೆ.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ-ಕಾಲೇಜುಗಳ ಪ್ರಾಂಶುಪಾಲರು ಮತ್ತು ಶಿಕ್ಷಕರಿಗಾಗಿ ಶುಕ್ರವಾರ ಆಯೋಜಿಸಿದ್ದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಟೆಕ್ನಾಲಜಿ ಎಷ್ಟೇ ಬೆಳೆದಿದ್ದರೂ ಅಪರಾಧಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರು ಕನಿಷ್ಟ 10 ಸೈಬರ್ ಅಪರಾಧಗಳ ಬಗ್ಗೆ ಜನಕ್ಕೆ ಮನವರಿಕೆ ಮಾಡಿದಲ್ಲಿ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎಂದು ಅವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಮಾತನಾಡಿ, ನಾವೆಲ್ಲರೂ 21ನೇ ಶತಮಾನವು ಟೆಕ್ನಾಲಜಿಗೆ ಹೆಸರಾಗಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾಣುತ್ತಿದೆ. ಆದಾಗ್ಯೂ ಅಪರಾಧಗಳ ಸಂಖ್ಯೆಯು ಹೆಚ್ಚುತ್ತಿವೆ. ಸೈಬರ್ ಕ್ರೈಂಗೆ ಹಿರಿಯ ನಾಗರಿಕರನ್ನು ಹೆಚ್ಚಾಗಿ ಗುರಿಯಾಗಿಸಲಾಗುತ್ತದೆ ಎಂದು ತಿಳಿಸಿದರು.
ಶಾಲಾ-ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಎಚ್ಚರದಿಂದ ಮೊಬೈಲ್ ಬಳಕೆ ಮಾಡಬೇಕು. ಸೈಬರ್ ಕ್ರೈಂ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ರಾಯಚೂರು ಕಂದಾಯ ವಿಭಾಗದ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಮಾತನಾಡಿ, ಕೆಲ ವ್ಯಕ್ತಿಗಳು ಬೇರೋಬ್ಬರ ಅಸಾಹಕತೆಯನ್ನೇ ದುರ್ಬಳಕೆ ಮಾಡಿಕೊಂಡು ಸೈಬರ್ ಕ್ರೈಂಗೆ ಗುರಿಪಡಿಸುತ್ತಾರೆ. ಯಾರೇ ಆಗಲಿ ಆಸೆ-ಆಕಾಂಕ್ಷಿಗಳಿಗೆ ಒಳಗಾಗಬಾರದು ಎಂದು ತಿಳಿಸಿದರು.
ಸೈಬರ್ ಕ್ರೈಂಗೆ ನಿವೃತ್ತ ಹಂತದ ಅಧಿಕಾರಿಗಳು ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳು ಹೆಚ್ಚಾಗಿ ಬಲಿಯಾಗುತ್ತಾರೆ ಎಂಬ ಕಟು ವಾಸ್ತವವನ್ನು ಸಾರ್ವಜನಿಕರು ಅರಿಯಬೇಕು ಎಂದು ತಿಳಿಸಿದರು.
ಟೆಲಿಪೋನ್ ಎಂದು, ಪಾರ್ಸಲ್, ಕೋರಿಯರ್ ಹೆಸರಿನಲ್ಲಿ ಕರೆಮಾಡಿ ಕೆಲವರು ವಂಚನೆ ಮಾಡುತ್ತಿದ್ದು, ಎಚ್ಚರದಿಂದಿರಬೇಕು.
ಕಾನೂನು ಬಾಹಿರ ವಸ್ತುಗಳನ್ನು ಹೊರದೇಶಕ್ಕೆ ರವಾನೆ ಮಾಡಿದ್ದಿರಿ. ಅದಕ್ಕಾಗಿ ನಿಮಗೆ ವಿಡಿಯೊ ಕಾಲ್ ಮೂಲಕ ವಿಚಾರಣೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ಪಡೆದುಕೊಂಡು ವಂಚನೆ ಮಾಡುವವರ ಬಗ್ಗೆ ಸಹ ಎಚ್ಚರವಾಗಿರಬೇಕು ಎಂದರು.
ಸೈಬರ್ ಅಪರಾಧಗಳ ಸುರಕ್ಷಾ ಸಲಹೆಗಳು: ವಾಟ್ಸಪ್ ಮೂಲಕ ಬರುವ ಪಿ.ಎಂ. ಕಿಸಾನ್, ಮುದ್ರಾ ಯೋಜನೆ, ಬ್ಯಾಂಕ್ ಕೆ.ವೈ.ಸಿ ಅಪ್ಡೇಟ್ ಹಾಗೂ ವೆಡ್ಡಿಂಗ್ ಕಾರ್ಡ್ ಹೆಸರಿನಲ್ಲಿ ಬರುವ ಎ.ಪಿ.ಕೆ ಫೈಲ್ ಲಿಂಕ್ಗಳನ್ನು ಡೌನ್ ಲೋಡ್ ಮಾಡಬಾರದು. ಅಲ್ಲದೆ ಕಡಿಮೆ ಅವಧಿಯಲ್ಲಿ ಟ್ರೇಂಡಿಂಗ್ ಮಾಡಿ ಹಣ ಡಬಲ್ ಮಾಡಿಕೊಡುವುದಾಗಿ ವಾಟ್ಸಪ್ ಹಾಗೂ ಟೆಲಿಗ್ರಾಮ್ ಮೂಲಕ ಬರುವ ಜಾಹೀರಾತುಗಳನ್ನು ನಂಬಿ ಟ್ರೇಡಿಂಗ್ ಮಾಡಲು ಹಣ ಹೂಡಿಕೆ ಮಾಡಬಾರದು. ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿಂಗ್ ಮಾಹಿತಿಗಳಾದ ಎಟಿಎಮ್ ಕಾರ್ಡ ನಂಬರ್, ಮುಕ್ತಾಯದ ಅವಧಿ, ಸಿವಿವಿ, ಓಟಿಪಿ, ಯುಪಿಐ ಪಿನ್ ಮತ್ತು ಎಂಪಿನ್ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಯಾವುದೇ ಬ್ಯಾಂಕಿನವರು ಓಟಿಪಿ ಕೇಳುವುದಿಲ್ಲ. ಅಪರಿಚಿತರ ಮೂಲದ ಎಸ್.ಎಂ.ಎಸ್. ವಾಟ್ಸಪ್ ಹಾಗೂ ಇತರೆ ಮೆಸೆಂಜರ್ಗಳ ಮೂಲಕ ಸ್ವೀಕರಿಸುವ ಸಂದೇಶ, ಇ-ಮೇಲ್ಗಳಲ್ಲಿನ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು. ಅಲ್ಲದೆ ಗೂಗಲ್ನಲ್ಲಿ ಕಂಡುಬರುವ ಕಸ್ಟಮರ್ ಕೇರ್ ಸಂಪರ್ಕ ಸಂಖ್ಯೆ, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆ ಬಗ್ಗೆ ತಿಳಿದುಕೊಳ್ಳಬೇಕು. ಆನ್ಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ (ಲೋನ್ ಆಪ್) ಅನಧೀಕೃತ ಅಪ್ಲಿಕೇಷನ್ ಗಳನ್ನು ಬಳಸಬಾರದು. ಆನ್ಲೈನ್ ಮೂಲಕ ಕೆಲಸ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲಿ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬಾರದು. ಮತ್ತು ನಿಮ್ಮ ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸ್ವರ್ಡ ಬಳಸಿ, ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ನೀವು ಕ್ಯಾಶ್ ಬಹುಮಾನ ಗೆದ್ದಿರುವಿರಿ ಅಂತ ಯಾವುದೇ ಪತ್ರ ಬಂದರೆ ಅದಕ್ಕೆ ಸ್ಪಂದನೆ ಮಾಡಬಾರದು ಎಂದು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ.ಕೆ., ಕೃಷಿ ವಿವಿಯ ವಿಸ್ತರಣಾಧಿಕಾರಿ ಡಾ.ಎ.ಆರ್.ಕುರಬರ್, ನಿವೃತ್ತ ಅಧಿಕಾರಿಗಳಾದ ಪರಮವೀರ್, ಮಹಾದೇವಪ್ಪ ಹಾಗೂ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕಾಲೇಜ್ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.







