'ರಾಯಚೂರು ಜಿಲ್ಲಾ ಉತ್ಸವ'ದ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ರಾಯಚೂರು: ಜನವರಿ 29ರಿಂದ ಮೂರು ದಿನಗಳು ನಡೆಯಲಿರುವ ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ರಾಯಚೂರಿನಲ್ಲಿ ಜಿಲ್ಲಾ ಉತ್ಸವ ಅನೇಕ ವರ್ಷಗಳ ಬೇಡಿಕೆ ಆಗಿತ್ತು, ಅನೇಕ ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿದೆ. ಎಲ್ಲರ ಸಹಕಾರದಿಂದ ಯಶಸ್ವಿಯಾಗುತ್ತದೆ ಎಂದರು.
ಸಚಿವ ಎನ್ ಎಸ್ ಬೋಸರಾಜು ಮಾತನಾಡಿ, ಜಿಲ್ಲಾ ಉತ್ಸವ ನಮ್ಮ ಹೆಮ್ಮೆ, ಸರ್ಕಾರದ ವತಿಯಿಂದ ಎಲ್ಲಾ ಸಹಕಾರ ಸಿಗಲಿದೆ, ಎಲ್ಲಾ ಅಧಿಕಾರಿಗಳು ಸಂಘ ಸಂಸ್ಥೆಗಳ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೇಳಿದರು.
ರಾಜಕೀಯ ಹಿಂಬಾಲಕರಿಗೆ ಕಾರ್ಯಕ್ರಮ ಸೀಮಿತ: ಶಾಸಕ ಡಾ.ಶಿವರಾಜ ಪಾಟೀಲ್ ಅಸಮಾಧಾನ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವದ ಆರಂಭದ ಕಾರ್ಯಕ್ರಮಕ್ಕೇ ಸಾರ್ವಜನಿಕರನ್ನು ಕಲಾವಿದರನ್ನು ದೂರ ಇಟ್ಟು ಕೇವಲ ರಾಜಕೀಯ ನಾಯಕರ ಹಿಂಬಾಲಕರಿಗೆ ಕರೆತರಲಾಗಿದ್ದು ಏತಕ್ಕಾಗಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ಕೆಲಸದಲ್ಲಿ ಅನೇಕ ಲೋಪದೋಷಗಳು ಕಂಡುಬರುತ್ತಿವೆ. ವೇದಿಕೆಯಲ್ಲಿ ರಾಜಕೀಯ ಮುಖಂಡರ ಹಿಂಬಾಲಕರು ಇದ್ದಾರೆ. ಇದು ಸಾರ್ವಜನಿಕರಿಲ್ಲ, ಅವರಿಗೆ ಮಾಹಿತಿಯೇ ಗೊತ್ತಿಲ್ಲ, ಇದು ದುಃಖದ ವಿಚಾರ, ಜಿಲ್ಲಾ ಉತ್ಸವದ ಕುರಿತು ಪ್ರತಿದಿನದ ಪ್ರಕಟನೆ ನೀಡಬೇಕು. ಜನರಿಗೆ ಗಮನಸೆಳೆಯಲು, ಕಬ್ಬಡ್ಡಿ ಸೇರಿ ಸ್ಥಳೀಯ ಕ್ರೀಡೆಗಳು ಇರಬೇಕು. ಕೇವಲ ಕ್ರೀಡಾಂಗಣಕ್ಕೆ ಸೀಮಿತ ಆಗಬಾರದು, ನಾಲ್ಕು ಝೋನ್ ಗಳಲ್ಲಿ ಮಾಡಬೇಕು. ಎಲ್ಲಾ ಸ್ಥಳೀಯ ಕಲಾವಿದರಿಗೆ ಸೇರಿಸಿಕೊಂಡು ಎಲ್ಲರನ್ನೂ ಒಗ್ಗೂಡಿ ಮಾಡಬೇಕು. ಇನ್ನೂ ಸಮಯವಿದೆ ಅಧಿಕಾರಿಗಳು ಯಾರು ಪ್ರಶ್ನೆ ಮಾಡುವುದಿಲ್ಲ ಎಂದು ಭಾವಿಸಬಾರದು ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ, ಹಂಪನಗೌಡ ಬಾದರ್ಲಿ, ಜಿಲ್ಲಾಧಿಕಾರಿ ನಿತಿಶ್ ಕೆ., ಮಹಾನಗರ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕಾಂಗ್ರೆಸ್ ಮುಖಂಡ ಅಸ್ಲಂ ಪಾಶ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ರಿಕೆಟ್ ಆಡಿ ಗಮನ ಸೆಳೆದ ಸಚಿವರು!
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಚಾಲನೆ ನೀಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಬ್ಯಾಟಿಂಗ್ ಗೆ ಇಳಿದಾಗ ಸಚಿವ ಎನ್.ಎಸ್. ಬೋಸರಾಜು ಬೌಲಿಂಗ್ ಮಾಡಿ ಗಮನ ಸೆಳೆದರು.
ಬಳಿಕ ಸಚಿವರಿಗೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಎಸ್ ಅರುಣ್ಗಿಶ್ ಗಿರಿ ಬೌಲಿಂಗ್ ಮಾಡಿದರು.







