ವೆನೆಝುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಸಿಂಧನೂರಿನಲ್ಲಿ ಪ್ರತಿಭಟನೆ

ರಾಯಚೂರು: ತೈಲ ಸಂಪದ್ಭರಿತ ರಾಷ್ಟ್ರ ವೆನೆಝುವೆಲಾದ ಮೇಲೆ ಅಮೆರಿಕದ ಮಿಲಿಟರಿ ದಾಳಿ ಹಾಗೂ ಅಧ್ಯಕ್ಷ ನಿಕೊಲಸ್ ಮಡೊರಾ ಮತ್ತು ಅಧ್ಯಕ್ಷರ ಪತ್ನಿ ಸಿಲಿಯಾ ಪ್ಲೋರ್ಸ್ ಬಂಧನವನ್ನು ಖಂಡಿಸಿ, ಎಡ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ವೆನೆಝುವೆಲಾ ಮೇಲಿನ ಅಮೆರಿಕ ದುರಾಕ್ರಮಣ ಮಾಡಿರುವುದು, ವಿಶ್ವಸಂಸ್ಥೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಸಾಮ್ರಾಜ್ಯಶಾಹಿ ಅಮೆರಿಕವು ವೆನೆಜುವೆಲಾ ಮೇಲಿನ ದಾಳಿ ಮೂಲಕ ಇತರ ದೇಶಗಳ ಶಾಂತಿ ಮತ್ತು ಸ್ಥಿರತೆ, ಸೌರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಬೆದರಿಕೆಯೊಡ್ಡಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಇರಾನ್, ಇರಾಕ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಆರೋಪಿಸಿ ದಾಳಿ ನಡೆಸಿದ್ದಲ್ಲದೇ, ಇಸ್ರೇಲ್ ಅನ್ನು ಎತ್ತಿಗಟ್ಟಿ ಫೆಲೆಸ್ತೀನ್, ಗಾಝಾದ ಮೇಲೆ, ಉಕ್ರೇನ್ ಎತ್ತಿಗಟ್ಟಿ ರಶ್ಯದ ಮೇಲೆ ಪರೋಕ್ಷ ದಾಳಿ ನಡೆಸುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಅಷ್ಟೇ ಅಲ್ಲದೇ ನೈಸರ್ಗಿಕ ಸಂಪದ್ಭರಿತ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಸೌರ್ವಭೌಮತ್ವವನ್ನು ಕಿತ್ತೊಗೆಯಲು ಮಿಲಿಟರಿ ದಾಳಿ ನಡೆಸುತ್ತಿರುವ ಅಮೆರಿಕ ಮತ್ತು ಅದರ ನೀತಿಗಳು ಇಡೀ ವಿಶ್ವಕ್ಕೆ ಗಂಡಾಂತರಕಾರಿ ಎಂದು ಪ್ರತಿಭಟನಾಕಾರರು ಹೇಳಿದರು.
ವೆನೆಝುವೆಲಾದ ವಿರುದ್ಧದ ದುರಾಕ್ರಮಣ ಮತ್ತು ಅಮೆರಿಕದ ಸಶಸ್ತ್ರ ಪಡೆಗಳು ಅದರ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿದ್ದಕ್ಕೆ ಕೇಂದ್ರ ಸರಕಾರ ನೀಡಿದ ಪ್ರತಿಕ್ರಿಯೆ ಭಾರತವು ಇತರ ರಾಷ್ಟ್ರಗಳ ಸ್ವಾತಂತ್ರ್ಯನ ಮತ್ತು ಸಾರ್ವಭೌಮತ್ವದ ರಕ್ಷಣೆಯ ಬಗ್ಗೆ ದೀರ್ಘಕಾಲದಿಂದ ತಳೆದುಕೊಂಡು ಬಂದಿರುವ ನಿಲುವಿಗೆ ತಕ್ಕುದಾಗಿಲ್ಲ. ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯು ‘ವೆನೆಜುವೆಲಾದ ಬೆಳವಣಿಗೆಗಳ ಬಗ್ಗೆ ‘ಆಳವಾದ ಕಳವಳ’ವನ್ನು ಮಾತ್ರ ವ್ಯಕ್ತಪಡಿಸುತ್ತದೆ ಮತ್ತು ‘ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಲು ಸಂವಾದ'ಕ್ಕೆ ಕರೆ ನೀಡುತ್ತದೆ. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆಯ ಬಗ್ಗೆ ಒಂದೇ ಒಂದು ಖಂಡನೆಯ ಪದವೂ ಇಲ್ಲ. ಭಾರತದ ನಿಲುವು ಬ್ರೆಝಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಬ್ರಿಕ್ಸ್ ಪಾಲುದಾರರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾಗಿದೆ ಎಂದು ಪ್ರತಿಭಟನಾನಿರತರು ಆಪಾದಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಪಕ್ಷದ ಬಾಷುಮಿಯಾ, ಡಿ.ಎಚ್.ಕಂಬಳಿ, ಸಿಪಿಎಂನ ಬಸವಂತರಾಯಗೌಡ ಕಲ್ಲೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಚಂದ್ರಶೇಖರ ಗೊರಬಾಳ, ಸಿಪಿಐ(ಎಂಎಲ್) ಲಿಬರೇಶನ್ನ ನಾಗರಾಜ ಪೂಜಾರ್, ಜಮಾಅತೇ ಇಸ್ಲಾಮಿ ಹಿಂದ್ ನ ಹುಸೇಬ್ ಸಾಬ್, ಮನುಜ ಮತ ಬಳಗದ ಬಸವರಾಜ ಬಾದರ್ಲಿ, ಬಾಬರ್ಪಾಷಾ ವಕೀಲರು, ಜೀಲಾನಿ ಸಾಬ್, ಬಸವರಾಜ ಬೆಳಗುರ್ಕಿ, ಎಂ.ಗೋಪಾಲಕೃಷ್ಣ, ಶರಣಬಣ್ಣ ನಾಗಲಾಪುರ, ಕಂಠೆಪ್ಪ, ಸಿಪಿಐ(ಎಂಎಲ್) ಮಾಸ್ಲೈನ್ನ, ಬಿ.ಎನ್.ಯರದಿಹಾಳ, ಕೃಷ್ಣಮೂರ್ತಿ ಧುಮತಿ, ಮಂಜುನಾಥ ಗಾಂಧಿನಗರ, ಶಂಕರ ಗುರಿಕಾರ ಅಬುಲೈಸ್ ನಾಯಕ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಮಹಿಳಾ ಒಕ್ಕೂಟದ ವಿರುಪಮ್ಮ ಉದ್ಬಾಳ ಜೆ., ಕಟ್ಟಡ ಕಾರ್ಮಿಕರ ಸಂಘದ ಜಗದೀಶ್ ಸುಕಾಲಪೇಟೆ, ಬಸವರಾಜ ಹಸಮಕಲ್ ಹಾಗೂ ಹಮಾಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.







