ಚುನಾವಣೆ ಆಯೋಗಕ್ಕೆ ನಾಗರಿಕರನ್ನು ಪತ್ತೆ ಮಾಡುವ ಅಧಿಕಾರ ಇಲ್ಲ : ಶಿವಸುಂದರ್

ಸಿಂಧನೂರು: ಚುನಾವಣಾ ಆಯೋಗಕ್ಕೆ ನಾಗರಿಕರನ್ನು ಪತ್ತೆ ಹಚ್ಚುವ ಅಧಿಕಾರವಿಲ್ಲ. ಎಸ್ ಐಆರ್ ಹೆಸರಿನಲ್ಲಿ ಮುಸ್ಲಿಂ ಮತದಾರರನ್ನು ಹೊರ ಹಾಕುವ ದುರುದ್ದೇಶವಿದೆ ಎಂದು ಚಿಂತಕ ಶಿವಸುಂದರ್ ಹೇಳಿದರು.
ರವಿವಾರ ಮತದಾರರ ವಿಶೇಷ ಪರಿಷ್ಕರಣೆ ಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಮತದಾರರ ವಿಶೇಷ ಪರಿಷ್ಕರಣೆ ಸಾಧಕ-ಬಾಧಕ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ, ಚಿಂತಕ ಶಿವಸುಂದರ್, ಮತದಾರರ ವಿಶೇಷ ಪರಿಷ್ಕರಣೆಯಿಂದ ಮತದಾನದ ಹಕ್ಕಿಗೆ ಗಂಡಂತಾರ ಎದುರಾಗಿದೆ. ಮೂಲಭೂತ ಹಕ್ಕುಗಳನ್ನು ಕಸಿಯುವ ಸಂಚು ನಡೆದಿದೆ. ನುಸುಳುಕೋರರಿಗೆ ಮತದಾನದ ಹಕ್ಕು ನೀಡಬಾರದೆಂದು ಹೇಳಿ, ತಮ್ಮ ಚುನಾವಣೆಗೆ ಅವಕಾಶವಾಗುವಂತೆ ಮತದಾರರನ್ನು ಸಿದ್ಧಪಡಿಸುವ ವ್ಯವಸ್ಥೆ ನಡೆದಿದೆ. ವೋಟಿನ ಹಕ್ಕು ಕೊಡುವುದು ಕರ್ತವ್ಯ. ಆದರೆ, ಪರಿಷ್ಕರಣೆ ಹೆಸರಿನಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಎಸ್ ಐಆರ್ ನಲ್ಲಿ ಮನೆಗೆ ಬಂದು ಫಾರ್ಮ ಕೊಟ್ಟು ಹೋಗುತ್ತಾರೆ. ಒಂದು ತಿಂಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ನಾವೇ ಸಲ್ಲಿಸಬೇಕು. ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೊರಗೆ ಹೋದಂತೆ. ವಿದ್ಯಾಭ್ಯಾಸ ಕಲಿಯದಿದ್ದರೆ, ಆಸ್ತಿ ಇಲ್ಲದಿದ್ದರೆ ಹೊರಗುಳಿಯಬೇಕಾಗುತ್ತದೆ. ಮಹಿಳೆಯರ ಹೆಸರಿನಲ್ಲಿ ಆಸ್ತಿ ಇಲ್ಲದ್ದರಿಂದ ಅವರೂ ಹೊರಗೆ ಉಳಿಯುತ್ತಾರೆ. ಗಂಡನ ಹೆಸರಿನಲ್ಲಿರುವ ಆಸ್ತಿ ಹೆಂಡತಿಗೆ ಅನ್ವಯ ಆಗಲ್ಲ ಎಂದು ವಿವರಿಸಿದರು.
ಬಾಂಗ್ಲಾದೇಶದಿಂದ ನುಸುಳಿಕೋರರು ಬಂದಿದ್ದು, ಅವರನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಸರಕಾರ ಹೇಳುತ್ತದೆ. ಆದರೆ ಸರಕಾರಕ್ಕೆ ನುಸುಳುಕೋರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರು.
ಮಕ್ಕಳ ತಜ್ಞ ಡಾ.ಕೆ.ಶಿವರಾಜ್ ಮಾತನಾಡಿ, ಹಿಂದೆ ಮತದಾರರು ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇಂದು ನಾಯಕನೇ ಇಂಥ ಮತದಾರರುಬೇಕೆಂದು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಜಾರಿಯಾಗಿರುವುದು ವಿಷಾದದ ಸಂಗತಿಯಾಗಿದೆ. ಈ ಮತದಾರರ ವಿಶೇಷ ಪರಿಷ್ಕರಣೆಯಿಂದ ನಿಜವಾದ ಮತದಾರ ಕೈಬಿಟ್ಟು ಹೋದರೆ ಜಿಡ್ಡುಗಟ್ಟಿದ ವ್ಯವಸ್ಥೆ ಬಲಗೊಳ್ಳಲಿದೆ. ಜನ ಸಾಮಾನ್ಯರಿಗೆ ಮೂಲಭೂತ ಹಕ್ಕು ಪಡೆಯುವ ಹಕ್ಕನ್ನು ಕಸಿದರೆ, ವ್ಯವಸ್ಥೆಯು ಬದಲಾಗಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಮತದಾರನಾಗಲು ಭಾರತ ಪ್ರಜೆಯಾಗಿರಬೇಕೆಂದಿರುವುದು ಸರಿ. ಆದರೆ, ಮತದಾರರನ್ನು ತಿರಸ್ಕಾರ ಮಾಡುವ ಹಕ್ಕು ಯಾರಿಗೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ನಿಮಗೆ ಮತದಾನದ ಹಕ್ಕು ಕೊಡಿಸುವೆ. ನಮ್ಮನ್ನು ಬೆಂಬಲಿಸಬೇಕೆಂಬ ಷರತ್ತು ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಪ್ರಾಸ್ತಾವಿಕವಾಗಿ ಹುಸೇನಸಾಬ್ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ಕೆಲ ಮತದಾರರನ್ನು ಕೈಬಿಡುವ ಹುನ್ನಾರ ಅಡಗಿದೆ. ನಾವು ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಿತಿ ಸಂಚಾಲಕ ಡಿ.ಎಚ್. ಕಂಬಳಿ ಮಾತನಾಡಿದರು. ಕಸಾಪ ಮಾಜಿ ತಾಲೂಕು ಅಧ್ಯಕ್ಷೆ ಸರಸ್ವತಿ ಪಾಟೀಲ್ ಸಂವಿಧಾನ ಪೀಠಿಕೆ ಓದಿದರು. ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ, ಸಮಿತಿ ಸಂಚಾಲಕ ಚಂದ್ರಶೇಖರ ಗೊರೇಬಾಳ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.







