ಮೇ 17-18 : ಸಿಂಧನೂರಿನಲ್ಲಿ ಮೆದಕಿನಾಳ ಭೂ ಹೋರಾಟ ನೆನಪಿಗಾಗಿ ಸಾಹಿತ್ಯ ಮೇಳ

ರಾಯಚೂರು: ಜಿಲ್ಲೆಯ ಸಿಂಧನೂರಿನ ಸತ್ಯ ಗಾರ್ಡ್ನಲ್ಲಿ ಮೇ 17 ಮತ್ತು 18ರಂದು ಮೆದಕಿನಾಳ ಭೂ ಹೋರಾಟದ ನೆನಪಿಗಾಗಿ ಅಸಮಾನತೆ ಭಾರತ, ಸಮಾನತೆಗಾಗಿ ಸಂಘ ಅಂದು-ಇಂದು ಕುರಿತು ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಬಸವರಾಜ ಸುಳಿಭಾವಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇಳದ ಉದ್ಘಾಟನೆಯನ್ನು ಮೆದಿಕಿನಾಳ ಭೂ ಹೋರಾಟದಲ್ಲಿ ಭಾಗವಹಿಸಿದ್ದ ಸಂಗಮ್ಮ, ದಲಿತ ಚಳವಳಿ ಭೀಮಣ್ಣ ನಗನೂರು, ಕಾರ್ಮಿಕ ಚಳವಳಿಯ ನರಸಿಂಹಪ್ಪ, ಮದ್ಯ ವಿರೋಧಿ ಹೋರಾಟ ಸಮಿತಿಯ ಚಿನ್ನಮ್ಮ ಮುದ್ದನಗುಡ್ಡಿ, ರೈತ ಚಳವಳಿಯ ತಿಮ್ಮನಗೌಡ ಚಿಲ್ಕರಾಗಿ ಮಾಡಲಿದ್ದಾರೆ. ದಿಕ್ಸೂಚಿ ಮಾತುಗಳನ್ನು ಮುಂಬೈನ ರಾಮ್ ಪುನಿಯಾನಿ, ಔರಂಗಾಬಾದ್ನ ಮಾಲತಿ ವರಾಳೆ, ಹೊಸದಿಲ್ಲಿಯ ಶಂಸುಲ್ ಇಸ್ಲಾಂ, ಬೆಂಗಳೂರಿನ ಎ.ನಾರಾಯಣ ಆಡಲಿದ್ದಾರೆ ಎಂದು ವಿವರಿಸಿದರು.
17ರಂದು ಹೊಸಪೇಟೆಯ ಬಹುತ್ವ ಪ್ರತಿಷ್ಠಾನದಿಂದ ನಾ ಯಾರು? ರಂಗ ಪ್ರಸ್ತುತಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅಸಮಾನತೆ ಮತ್ತು ಸಂಘರ್ಷ: ಹೊರಳು ನೋಟ ಕುರಿತು ನಡೆಯಲಿದೆ. ವರ್ಗನೆಲೆ ಕುರಿತು ರವೀಂದ್ರ ಹಳಿಂಗಳಿ, ಜಾತಿ ನೆಲೆ ಕುರಿತು ಸಿ.ಜಿ, ಲಕ್ಷ್ಮೀಪತಿ, ಬಿಂಗ ನೆಲೆ ಕೆ.ಎಸ್.ಲಕ್ಷ್ಮೀ, ಭಾಷಾ ನೆಲೆ ಕುರಿತು ರಹಮತ್ ತರೀಕೆರೆ ಮಾತನಾಡಲಿದ್ದಾರೆ ಎಂದು ಹೇಳಿದರು.
ಕವಿಗೋಷ್ಠಿ, ಗೋಷ್ಠಿಗಳು, ಸಂವಾದ ಕಾರ್ಯಕ್ರಮಗಳ ನಡೆಯಲಿವೆ. ಮೇ 18 ರಂದು ಬೆಳಗ್ಗೆ 9 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಆಶಯ ನುಡಿಗಳನ್ನು ಡಾರ್ಜಲಿಂಗ್ನ ಮನೋಜ್ ಭೋಗಾಟ ಪ್ರಸ್ತುತಪಡಿಸಲಿದ್ದಾರೆ. ಅನೇಕ ಕವಿಗಳು ಭಾಗಿಯಾಗಲಿದ್ದಾರೆ. 11 ಗಂಟೆಗೆ ಅಭಿವೃದ್ಧಿಯ ಸತ್ಯ- ಮಿಥ್ಯ ವಿಷಯದ ಮೇಲೆ ಗೋಷ್ಠಿ ನಡೆಯಲಿದೆ. ಅಭಿವೃದ್ಧಿಯ ಪರಿಕಲ್ಪನೆ, ವಾಸ್ತವಾಂಶಗಳು ಕುರಿತು ನಾಗೇಗೌಡ ಕೀಲಾರ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಚಂದ್ರಶೇಖರ ಗೋರೆಬಾಳ, ಉತ್ತರ ಕರ್ನಾಟಕದ ಕುರಿತು ಬಿ.ಎಸ್.ಸೋಪ್ಪಿನ ಮಾತನಾಡಲಿದ್ದಾರೆ. ಅಲ್ಲದೇ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೋರಾಟಗಾರರು, ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಮುಖಂಡರಾದ ಬಾಬು ಬಂಡಾರಿಗಲ್, ದೇವೆಂದ್ರಗೌಡ, ಎಸ್.ಮಾರೆಪ್ಪ, ಶ್ರೀನಿವಾಸ ಕಲವಲದೊಡ್ಡಿ, ಡಿ.ಎಚ್.ಕಂಬಳಿ ಹಾಗೂ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.







