ಭೂಗಳ್ಳರ ಪರ ಅಧಿಕಾರಿಗಳ ವರ್ತನೆ: ನಾಗರಿಕರ ಆರೋಪ

ಸಾಂದರ್ಭಿಕ ಚಿತ್ರ | PC : gemini AI
ರಾಯಚೂರು: ಜಿಲ್ಲೆಯಲ್ಲಿ ಸರಕಾರಿ ಭೂಮಿ ಕಬಳಿಕೆ, ಬೇರೊಬ್ಬರ ಹೆಸರಿನಲ್ಲಿರುವ ಆಸ್ತಿಗಳನ್ನು ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಕ್ರಮಗಳ ತಡೆಗೆ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
ರಾಯಚೂರಿನಲ್ಲಿ ಈ ಹಿಂದೆಯೂ ಕೆರೆ, ರಾಜಕಾಲುವೆ, ಉದ್ಯಾನಕ್ಕೆ ಮೀಸಲಾದ ಜಾಗ ಒತ್ತುವರಿ ಮಾಡಿದ್ದು ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಜಾಲ ಪತ್ತೆಯಾಗಿದ್ದು, ಸರಕಾರಿ ಜಾಗ ಒತ್ತುವರಿ ಮಾಡುವುದಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವುದು, ಖಾಸಗಿ ವ್ಯಕ್ತಿಗಳ ನಿವೇಶನ, ಹೊಲ, ಜಮೀನು ಅವರಿಗೆ ಗೊತ್ತಿಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಕೆಲಸ ಜಿಲ್ಲೆಯ ಹಲವೆಡೆ ನಡೆಯುತ್ತಿದೆ. ಆರೋಪಿಗಳಿಗೆ ಬೇರೊಬ್ಬರ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಹೇಗೆ ತಿಳಿಯುತ್ತಿದೆ ಎಂಬ ಪ್ರಶ್ನೆಗೆ ಆಯಾ ಇಲಾಖೆಗಳ ಅಧಿಕಾರಿಗಳ, ಸಿಬ್ಬಂದಿ ಕೈವಾಡವಿರುವುದಂತು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಬ್ ರಿಜಿಸ್ಟ್ರಾರ್ ಕಚೇರಿ, ತಹಶೀಲ್ದಾರರ ಕಚೇರಿ, ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ತಮ್ಮದಲ್ಲದ ಆಸ್ತಿಗಳನ್ನು ಮಾರಾಟ ಮಾಡಿದ ಅನೇಕ ಪ್ರಕರಣಗಳು ದಾಖಲಾಗಿವೆ.
ರಾಯಚೂರು ನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಅನೇಕ ದಿನಗಳಿಂದ ಖಾಲಿ ಇರುವ ನಿವೇಶನ, ಉಳುಮೆ ಮಾಡದ ಭೂಮಿ, ಜಮೀನುಗಳನ್ನು ಗುರುತಿಸಿ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ನೋಂದಾಯಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಿ ಆಗಸ್ಟ್ 12 ರಂದು 6 ಆರೋಪಿಗಳನ್ನು ಬಂಧಿಸಿ 20ಲಕ್ಷ ರೂ. ನಗದು ಹಾಗೂ ಕಾರನ್ನು ವಶಪಡಿಸಿಕೊಂಡು ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಲಿಂಗಸುಗೂರು ತಾಲೂಕಿನಲ್ಲಿ ಪುರಸಭೆ ವ್ಯಾಪ್ತಿಯ ಹುಲಿಗುಡ್ಡ ಸೀಮಾಂತರದ ವಾರ್ಡ್ ನಂಬರ್ 8ರಲ್ಲಿ ಲೇಔಟ್ ಉದ್ಯಾನದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ 9 ನಿವೇಶನಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಪುರಸಭೆಯ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದರು. ಹೀಗೆ ಇನ್ನೂ ಅನೇಕ ಸರಕಾರಿ ಹಾಗೂ ಖಾಸಗಿ ವ್ಯಕ್ತಿಗಳ ಜಮೀನುಗಳನ್ನು ಮಾರಾಟ ಮಾಡಿದ ಪ್ರಕರಣ ಕೆಲವು ಬೆಳಕಿಗೆ ಬಂದಿದೆ. ಇನ್ನೂ ಅನೇಕ ಪ್ರಕರಣಗಳು ಬಯಲಿಗೆ ಬಂದಿಲ್ಲ. ಪೊಲೀಸರಿಗೆ, ಕಂದಾಯ ಅಧಿಕಾರಿಗಳಿಗೆ ಈ ಬಗ್ಗೆ ಅನೇಕರು ದೂರು ನೀಡಿದ್ದರೂ ಇನ್ನೂ ಪರೀಶೀಲನೆ ಹಂತದಲ್ಲಿದ್ದು ಅಧಿಕಾರಿಗಳ ಮೇಲೆ ಸಾರ್ವಜನಿಕರಲಿ ಅನುಮಾನ ಮೂಡಿಸಿದೆ.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುವಾಗ ಅಕ್ರಮ, ಭೂಗಳ್ಳರ ಜಾಲದ ಬಗ್ಗೆ ಪ್ರಶ್ನೆ ಕೇಳಿದಾಗ ಭೂಗಳ್ಳರ ಬಗ್ಗೆ ದೂರು ನೀಡಿದರೆ ಕ್ರಮ ಗ್ಯಾರಂಟಿ ಎಂದು ಹೇಳಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮವಹಿಸಿಲ್ಲ. ಕೇವಲ ಸರಕಾರಿ ಕಾರ್ಯಕ್ರಮಗಳಿಗೆ ಬರುವ ಸಚಿವರಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಲಿಂಗಸುಗೂರಿನಲ್ಲಿ ಈಚೆಗೆ ನಡೆದ ಸರಕಾರಿ ಜಾಗ ಮಾರಟದ ಆರೋಪದ ಮೇಲೆ ಮೂವರು ಅಧಿಕಾರಿಗಳಿಗೆ ಅಮಾನತು ಮಾಡಿದ್ದಾರೆ. ಆದರೆ ಈ ಅಕ್ರಮದಿಂದ ಸರಕಾರಕ್ಕೆ ಆದ ನಷ್ಟವನ್ನು ಭರಿಸುವ ಕೆಲಸ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಲೋಕಾಯುಕ್ತರಿಗೆ ದೂರು ನೀಡಿದರೂ ಮುಂದುವರಿದ ಅಕ್ರಮ: ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಸರ್ವೇ ನಂಬರ್ 149/2ನ 3ಎಕರೆ 8ಗುಂಟೆ ಸರಕಾರಿ ಖಾರಿಜ್ ಭೂಮಿಯನ್ನು ಆಂಧ್ರಪ್ರದೇಶದ ಕೆಲವು ವ್ಯಕ್ತಿಗಳು ನಿವೇಶನಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ತಹಶೀಲ್ದಾರರ ಕಚೇರಿಗೆ ದೂರು ನೀಡಿದರೂ ಅಕ್ರಮ ತಡೆದಿಲ್ಲ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ, ಆರ್ಐ ಸೇರಿ ತಹಶೀಲ್ದಾರರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉಳುವವನೇ ಭೂಮಿ ಒಡೆಯ ಎಂದು ದಿ.ದೇವರಾಜು ಅರಸು ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರೂ ಅರ್ಹ ಫಲಾನುಭವಿಗಳಿಗೆ ಸರಕಾರಿ ಜಾಗ ಸಿಗದೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭೂ ಮಾಫಿಯಾಗಳ ಪಾಲಾಗುತ್ತಿದೆ. ಸರಕಾರಿ ಜಾಗವನ್ನು ಸರ್ವೇ ಮಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಭೂಹೀನರಿಗೆ ನೀಡಬೇಕು ಎಂದು ಸ್ಥಳೀಯರು ಅಂದಿನ ಜಿಲ್ಲಾಧಿಕಾರಿ ಆಗಿದ್ದ ಸಸಿಕಾಂತ್ ಸೆಂಥಿಲ್ ( ಈಗ ತಮಿಳುನಾಡಿನ ಸಂಸದರು) ಕಂದಾಯ ಅಧಿಕಾರಿಗಳಿಗೆ ಸರ್ವೇ ಮಾಡಿ ಚೆಕ್ ಬಂದಿ ಮಾಡಬೇಕು ಎಂದು ಆದೇಶ ನೀಡಿದ್ದರು. ಕೆಲವೇ ತಿಂಗಳಲ್ಲಿ ಅವರು ವರ್ಗಾವಣೆ ಆದರು. ನಂತರ ಬಂದ ಹಲವು ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ಸ್ಥಳೀಯರು ಸುಮ್ಮನಾಗಿದ್ದರು. ಆದರೆ ಈಗ ಆಂಧ್ರಪ್ರದೇಶದ ಭೂಗಳ್ಳರ ತಂಡ ಸರಕಾರಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದು ಅಕ್ರಮವಾಗಿ ನಿವೇಶನಗಳ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಮುಂದಾಗಿದ್ದು, ಕೆಲವು ನಿವೇಶನಗಳನ್ನು ಮಾರಾಟ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಪ ಲೋಕಾಯುಕ್ತರಿಗೆ ದೂರು: ನಕಲಿ ಫಲಾನುಭವಿಗಳ ಹೆಸರು ಸೃಷ್ಟಿಸಿ ಭೂಗಳ್ಳರು ಸರಕಾರಿ ಜಾಗವನ್ನು ನಿವೇಶ, ಲೇಔಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಲ್ಲಿನ ಸ್ಥಳೀಯರು, ಪ್ರಗತಿಪರ ಸಂಘಟನೆಗಳು, ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಮುಖಂಡರು ಕಂದಾಯ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ ನಿರಂತರವಾಗಿ ಮನವಿ ಮಾಡಿದ ಬಳಿಕ ಪಂಚನಾಮೆ ಮಾಡಿದ್ದಾರೆ. ನಕಲಿ ಫಲಾನುಭವಿಗಳನ್ನೇ ಸಾಕ್ಷಿದಾರರನ್ನಾಗಿ ಮಾಡಿದ್ದಾರೆ.
ಇತ್ತಿಚೆಗೆ ಜಿಲ್ಲಾ ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತರಿಗೆ ಸಿಪಿಐಎಂ ಲಿಬರೇಶನ್ ಪಕ್ಷದ ಮುಖಂಡರು ದೂರು ನೀಡಿದ್ದರು, ಇದಕ್ಕೆ ತಹಶೀಲ್ದಾರರಿಗೆ ಹೊಣೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಅಕ್ರಮ ನಿವೇಶನ ಮಾರಟ ತಡೆಯಲು ಭರವಸೆ ನೀಡಿದ್ದರು. ಆದರೆ ಇದುವರೆಗೆ ಜಾಗದ ಸರ್ವೇ ಮಾಡಿ ಚೆಕ್ ಬಂದಿ ಮಾಡಿಲ್ಲ ಎಂದು ಸ್ಥಳೀಯರು, ದೂರುದಾರರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯರಗೇರಾ ಗ್ರಾಮದ ಸರಕಾರಿ ಖಾರಿಜ್ ಭೂಮಿಯ ಒತ್ತುವರಿಯ ಕುರಿತು ಪಂಚನಾಮೆ ಮಾಡಿದ್ದೇವೆ. ಉಪ ಲೋಕಾಯುಕ್ತರಿಗೆ ದೂರು ನೀಡಿದ ಕಾರಣ ತನಿಖೆಯ ನಡೆಸಿ ನಮಗೆ ವರದಿ ನೀಡಿದ ಬಳಿಕ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಸುರೇಶ ವರ್ಮಾ, ತಹಶೀಲ್ದಾರರು, ರಾಯಚೂರು
ರಾಜ್ಯದ ಕಾಂಗ್ರೆಸ್ ಸರಕಾರ ಬಡವರ, ದೀನ ದಲಿತರ ಪರ ಎಂದು ಹೇಳುತ್ತಿದೆ. ಆದರೆ ಯರಗೇರಾ ಗ್ರಾಮದಲ್ಲಿ ಸರಕಾರಿ ಭೂಮಿಯನ್ನು ಭೂಗಳ್ಳರು ಲೂಟಿ ಹೊಡೆಯಲು ಮುಂದಾಗಿದ್ದು, ಅಧಿಕಾರಿಗಳು ನಾಮಕವಸ್ಥೆಗೆ ಪಂಚನಾಮೆ ಮಾಡಿದ್ದು ಬಿಟ್ಟರೆ ಜಾಗದ ರಕ್ಷಣೆ ಮಾಡಲು ಪ್ರಯತ್ನ ಮಾಡಿಲ್ಲ. ಕೂಡಲೇ ಜಾಗದ ಸರ್ವೇ ಮಾಡಿ ಚೆಕ್ ಬಂದಿ ಮಾಡಬೇಕು.
ಅಝೀಝ್ ಜಾಗೀರದಾರ, ಸಿಪಿಐಎಂಎಲ್ ಪಕ್ಷದ ಜಿಲ್ಲಾ ಮುಖಂಡ







