ರಾಯಚೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಶೇ.100 ರಷ್ಟು ಸಾಧನೆ

PC: istockphoto
ರಾಯಚೂರು ಡಿ.26 : ರಾಷ್ಟೀಯ ಪಲ್ಸ್ ಪೋಲಿಯೋ ಅಭಿಯಾನದಡಿಯಲ್ಲಿ, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಅಭಿಯಾನ ಡಿ.21ರಿಂದ ಆರಂಭವಾಗಿದ್ದು, ಜಿಲ್ಲೆಯ ರಾಯಚೂರು, ಲಿಂಗಸುಗೂರು, ಸಿಂಧನೂರು, ಮಾನವಿ, ದೇವದುರ್ಗ ತಾಲ್ಲೂಕಗಳಲ್ಲಿ ಮೊದಲ ದಿನ ಒಟ್ಟು 2,59,984 ಮಕ್ಕಳ ಪೈಕಿ 2,47,052 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.95.02 ರಷ್ಟು ಸಾಧನೆ ಮಾಡಲಾಗಿದೆ.
ಡಿ.24 ರವರೆಗೆ ಉಳಿದ 12,932 ಮಕ್ಕಳಿಗು ಲಸಿಕೆ ಹಾಕಿ ಒಟ್ಟು 2,60, 002 ಮಕ್ಕಳನ್ನು ತಲುಪಿ ಶೇ. 100.02ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಅವರು ತಿಳಿಸಿದ್ದಾರೆ.
ಡಿ.21 ರಂದು, ಎನ್ ಎಸ್ ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕರ್ನಾಟಕ ಸರಕಾರ ಹಾಗೂ ಜಿ. ಕುಮಾರ್ ನಾಯಕ ಸಂಸದರು ರಾಯಚೂರು ಲೋಕಸಭಾ ಕ್ಷೇತ್ರ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಗುರಿ ಸಾಧನೆಗಾಗಿ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕುವ ದಿಶೆಯಲ್ಲಿ 601 ಕ್ಲಿಷ್ಟಕರವಾದ ವಸತಿ ಪ್ರದೇಶಗಳನ್ನು, 203 ವಲಸೆ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿತ್ತು. ಜಿಲ್ಲೆಯಾದ್ಯಂತ 1132 ಲಸಿಕಾ ಬೂತ್ಗಳು 1,133 ಮನೆ ಭೇಟಿ ನೀಡುವ ತಂಡಗಳು, ಹೆಚ್ಚು ಜನಸೇರುವ ಹಾಗೂ ಸಂತೆ-ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಇತರೆ ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಲಸಿಕೆ ಹಾಕಲು 53 ತಂಡಗಳು ಮತ್ತು ವಲಸೆ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ, ಕುರಿಹಟ್ಟಿ ಮುಂತಾದ ಸ್ಥಳಗಳಲ್ಲಿ ಲಸಿಕೆ ಹಾಕಲು 33 ಸಂಚಾರಿ ತಂಡಗಳ ಮೂಲಕ ಸಾಧನೆ ಮಾಡಲಾಗಿದೆ.
ಈ ಸಾಧನೆಯನ್ನು ಸಾಧಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ರಿಮ್ಸ್ ಆಸ್ಪತ್ರೆ, ನವೋದಯ ವೈದ್ಯಕೀಯ ಕಾಲೇಜು, ನಂದಿನಿ, ಎಸ್ಕೆಇ ಪ್ಯಾರಾ ಮೆಡಿಕಲ್ ಕಾಲೇಜ್, ರೋಟರಿ, ಲಯನ್ಸ್, ರೆಡ್ಕ್ರಾಸ್ ಹಾಗೂ ಇತರೆ ಸಂಘ ಸಂಸ್ಥೆಯವರು ಸ್ವಯಂ ಸೇವಕರಾಗಿ, ಪೋಲಿಯೋ ವ್ಯಾಕ್ಸಿನೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ 248 ಮೇಲ್ವಿಚಾರಕರು ಹಾಗೂ ಡಾ ನಂದೀತಾ ಎಮ್ ಎನ್ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಸೇರಿದಂತೆ ಜಿಲ್ಲೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಗಣೇಶ್, ಡಾ.ಶಿವಕುಮಾರ್, ಡಾ.ಶಾಕೀರ್, ಚಂದ್ರಶೇಖರ್ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದು,
ಜಿಲ್ಲೆಯಲ್ಲಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಇವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತದ ಸಂಪೂರ್ಣ ಬೆಂಬಲದಡಿ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಸಹಕಾರ ಮತ್ತು ಬೆಂಬಲದೊಂದಿಗೆ ಈ ಗುರಿಯನ್ನು ಸಾಧಿಸಲಾಗಿದೆ. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಭಿನಂದಿಸುತ್ತದೆ ಎಂದು ಅವರು ತಿಳಿಸಿದ್ದಾರೆ.







