ರಾಯಚೂರು ಜಿಲ್ಲೆಯ 12 ಮಂದಿಗೆ ವಿವಿಧ ನಿಗಮ, ಮಂಡಳಿಗಳ ನಿರ್ದೇಶಕ-ಸದಸ್ಯ ಸ್ಥಾನ

ಸಾಂದರ್ಭಿಕ ಚಿತ್ರ | Photo credit : AI
ರಾಯಚೂರು : ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ ರಾಯಚೂರು ಜಿಲ್ಲೆಯ 12 ಮಂದಿಯನ್ನು ನಿರ್ದೇಶಕರು ಮತ್ತು ಸದಸ್ಯರನ್ನಾಗಿ ನೇಮಕ ಮಾಡುವಂತೆ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಜಂಟಿ ಕಾರ್ಯದರ್ಶಿ ಉಮಾ ಕೆ. ಅವರು ಸರ್ಕಾರದ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಿಂಧನೂರಿನ ಶ್ರೀನಿವಾಸ, ಜೆಸ್ಕಾಂ ನಿಗಮಕ್ಕೆ ರಾಯಚೂರಿನ ಚಂದ್ರಶೇಖರಪ್ಪ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಮಾನ್ವಿ ತಾಲೂಕಿನ ತಾಯಪ್ಪ, ಕರ್ನಾಟಕ ಜೈವಿಕ ಇಂಧನ ಮಂಡಳಿಗೆ ರಾಯಚೂರಿನ ಜಿ. ಶಿವಮೂರ್ತಿ, ಕರ್ನಾಟಕ ತೊಗರಿ ಬೇಳೆ ಅಭಿವೃದ್ಧಿ ನಿಗಮಕ್ಕೆ ಸಿಂಧನೂರಿನ ನಿರುಪಾದಿ, ರಾಜ್ಯ ಖನಿಜ ನಿಗಮಕ್ಕೆ ಮಸ್ಕಿಯ ಹನುಮಂತಪ್ಪ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಮಾನ್ವಿ ತಾಲೂಕಿನ ಈರಮ್ಮ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ರಾಯಚೂರಿನ ಅಂಜನಕುಮಾರ ಮತ್ತು ಸಿಂಧನೂರಿನ ವೆಂಕಟೇಶ ರಾಗಲಪರ್ವಿ ಅವರನ್ನು ನೇಮಕ ಮಾಡಲಾಗಿದೆ.
ಉಳಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಯಚೂರಿನ ಜಿ. ಶ್ರೀನಿವಾಸ ಹಾಗೂ ಗಾಂಧಿ ಸ್ಮಾರಕ ನಿಧಿಗೆ ಲಿಂಗಸುಗೂರಿನ ರಜ್ಜಬ್ ಅಲಿ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ನಿಗಮಕ್ಕೆ ರಾಯಚೂರಿನ ಜಾವಿದ್ ಉಲ್ ಹಕ್ ಅವರನ್ನು ನಿರ್ದೇಶಕ ಹಾಗೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಅವರು ಅನಾರೋಗ್ಯದ ಕಾರಣ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ನಿಧನದ ಬಳಿಕವೂ ನೇಮಕಾತಿ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿರುವುದು ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಜಂಟಿ ಕಾರ್ಯದರ್ಶಿ ಉಮಾ. ಕೆ. ಅವರು, ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳ ಆಡಳಿತಾತ್ಮಕ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಂತೆ ತಿಳಿಸಿದ್ದಾರೆ.
ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ, ಕೂಡಲೇ ಸೂಕ್ತ ಆದೇಶ ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.






