ರಾಯಚೂರು ಜಿಲ್ಲೆಗೆ ಹೊಸದಾಗಿ 16 ಆರೋಗ್ಯ ಸೇವೆಗೆ ಮಂಜೂರಾತಿ : ಸಚಿವ ದಿನೇಶ್ ಗುಂಡೂರಾವ್

ರಾಯಚೂರು: ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ರಾಯಚೂರು ಜಿಲ್ಲೆಯಲ್ಲಿ 16 ಹೊಸ ಆರೋಗ್ಯ ಕೇಂದ್ರಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸಿಂಧನೂರಿನ ಸತ್ಯ ಗಾರ್ಡನ್‌ನಲ್ಲಿ ಸೆ.27ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜಿಲ್ಲೆಗೆ ಈಗಾಗಲೇ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿದ್ದೇವೆ. 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಯಚೂರು ನಗರಕ್ಕೂ ಹೊಸ ಆರೋಗ್ಯ ಕೇಂದ್ರ ಮಂಜೂರಾಗಿದೆ. ಲಿಂಗಸೂಗೂರಿನಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಯುನಿಟ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಜೊತೆಗೆ ಸಿಂಧನೂರಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಆರಂಭಿಸಿದ್ದು, ಇಲ್ಲಿನ ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ” ಎಂದರು.
ಸಿಂಧನೂರಿಗೆ ಅಗತ್ಯ ಸೌಲಭ್ಯ :
ಸಿಂಧನೂರು ತಾಲೂಕು ಈಗ ಜಿಲ್ಲಾಸ್ಪತ್ರೆ ಹಂತಕ್ಕೆ ಬರುವುದರಿಂದ, ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಪಂಚ ಗ್ಯಾರಂಟಿ ಯೋಜನೆ :
ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. “ಸಾಮಾನ್ಯರ ಹಿತದೃಷ್ಟಿಯಿಂದ ರೂಪಿಸಿದ ಈ ಯೋಜನೆಗಳು ಈಗ ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿವೆ. ಜನತೆಗೆ ಐದು ವರ್ಷಗಳ ಕಾಲ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನ ಲಭ್ಯವಾಗುತ್ತದೆ” ಎಂದರು.
ದಸರಾ ಹಬ್ಬದ ಅಂಗವಾಗಿ ಸಿಂಧನೂರಿನಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿರುವ ಶಾಸಕರಾದ ಹಂಪನಗೌಡ ಬಾದರ್ಲಿ, “ಜನತೆಗೆ ವಿಶೇಷ ದಸರಾ ಕೊಡುಗೆ ನೀಡಿದ್ದಾರೆ” ಎಂದು ದಿನೇಶ್ ಗುಂಡೂರಾವ್ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರುವಿಹಾಳ, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ, ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ. ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.







