ಜೂ.21ರಂದು ಸಚಿವ ಭೋಸರಾಜುರಿಗೆ ಅಭಿನಂದನೆ, ಚೈತನ್ಯ ಸಾಗರ ಗ್ರಂಥ ಬಿಡುಗಡೆ ಸಮಾರಂಭ

ರಾಯಚೂರು: ಸಣ್ಣ ನೀರಾವರಿ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜ್ ಅವರ 79ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ಹಾಗೂ ಚೈತನ್ಯ ಸಾಗರ ಎನ್ನುವ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜೂ.21ರಂದು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಷ್ಟಕಾಲದಲ್ಲಿ ಕಾಂಗ್ರೆಸ್ ಬಲಪಡಿಸುವ ಕೆಲಸ ಭೋಸರಾಜು ಮಾಡಿದ್ದಾರೆ. ಅವರು ಆ ರೀತಿ ಪಳಗಿದ ಕಾರಣಕ್ಕೆ ಇಂದು ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಜರುಗುವ ಕಾರ್ಯಕ್ರಮವನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಉದ್ಘಾಟಿಸುವರು. ಗೃಹ ಸಚಿವ ಡಾ.ಜಿ.ಪರಮೇಶ್ವರ ಗ್ರಂಥ ಬಿಡುಗಡೆ ಮಾಡುವರು. ತೆಲಂಗಾಣ ಸರಕಾರದ ಉಪಮುಖ್ಯಮಂತ್ರಿ ಮಲ್ಲುಭಟ್ಟಿ ವಿಕ್ರಮಾರ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ರಾಜ್ಯಸಭೆ ಸದಸ್ಯ, ಹಿರಿಯ ಸಾಹಿತಿ ಎಲ್.ಹನುಮಂತಯ್ಯ ಗ್ರಂಥ ಪರಿಚಯ ಮಾಡುವರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ತೆಲಂಗಾಣ ಸರ್ಕಾರದ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವಾಕಿಟಿ ಶ್ರೀಹರಿ ಉಪಸ್ಥಿತಿ ವಹಿಸುವರು.
ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಮಾನ ಮನಸ್ಕರು ಒಗ್ಗೂಡಿ ಗ್ರಂಥ ರಚನೆ ಮಾಡಲಾಗಿದೆ. ಸಾಹಿತಿಗಳು, ಅಭಿಮಾನಿಗಳು, ಒಡನಾಡಿಗಳಿಂದ ಲೇಖನ ಬರೆಯಿಸುವ ಮೂಲಕ ಈ ಗ್ರಂಥ ರಚನೆ ಮಾಡಲಾಗಿದೆ. 350 ಪುಟಗಳ ಗ್ರಂಥ ಇದಾಗಿದೆ. ಅವರ ಹೋರಾಟ, ಸಾಧನೆ, ಜೀವನದ ಕುರಿತು ಲೇಖನಗಳನ್ನು ಒಳಗೊಂಡಿದೆ.
ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಸಚಿವರು, ಶಾಸಕರು ಸೇರಿದಂತೆ ಅನೇಕ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ, ಶಿವಮೂರ್ತಿ, ನರಸಿಂಹಲು ಮಾಡಗಿರಿ, ಅಮರೇಗೌಡ ಹಂಚಿನಾಳ, ಬಸವರಾಜ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.







