ರೈತರ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ: ರಾಘವೇಂದ್ರ ಕುಷ್ಠಗಿ
ರಾಯಚೂರು: ದೇಶದ ರೈತರ ಸಮಸ್ಯೆಗಳನ್ನು ನಿವಾರಿಸಲು ಐಕ್ಯ ಹೋರಾಟ ಅಗತ್ಯವಾಗಿದೆ. ರೈತರು ಒಗ್ಗಟ್ಟಾಗಿರಬೇಕು ಎಂದು ಹೈದರಾಬಾದ್ ಕರ್ನಾಟಕ ಜನಾಂದೋಲನಾ ಕೇಂದ್ರದ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ರೈತ ಹೋರಾಟಗಾರ ಚನ್ನಬಸವಪ್ಪ ಬೆಟ್ಟದೂರು ಅವರ ನೆನಪಿನ ದಿನ ಆಚರಣೆ ಹಾಗೂ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಕೀಕರಣದ ಚಳವಳಿ ಜತೆಗೆ ಬರವಣಿಗೆ ಮೂಲಕ ರೈತ ಸಂಘಟನೆ ಈ ಭಾಗದಲ್ಲಿ ಬಲಪಡಿಸಿದ್ದರು. ಚನ್ನಬಸವಪ್ಪ ಅವರು ಪ್ರಗತಿಪರ ಚಿಂತನೆಗಳನ್ನು ಹೊಂದಿ ತಮ್ಮ ಮಕ್ಕಳನ್ನು ಈ ಭಾಗಕ್ಕೆ ಹೋರಾಟದ ಮುಂಚೂಣಿಯ ನಾಯಕರನ್ನಾಗಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ತುಂಗಭದ್ರಾ ಹಾಗೂ ನಾರಾಯಣಪುರ ನಾಲೆಗಳು ಈ ಭಾಗದ ರೈತರಿಗೆ ಜೀವನಾಡಿ ಹಾಗೂ ನಿರ್ವಹಣೆ, ರಾಜಕೀಯ ಪ್ರವೇಶದಿಂದ ಶಾಪವಾಗಿಯೂ ಪರಿಣಮಿಸಿದೆ. ಈ ಶಾಪದಿಂದ ಅನೇಕ ರೈತಾಪಿ ಜನರೂ ಇಂದಿಗೂ ಕಣ್ಣೀರು ಹರಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊನೆಯ ಭಾಗದ ರೈತರಿಗೆ ಕಾರಟಗಿ ಹಾಗೂ ತುರ್ವಿಹಾಳ ಭಾಗದ ರಾಜಕಾರಣಿಗಳಿಂದ ಅನ್ಯಾಯವಾಗುತ್ತಿದೆ. ಕಾರಟಗಿ, ತುರ್ವಿಹಾಳ ಸೇರಿದಂತೆ ಮೇಲ್ಬಾಗದ ರಾಜಕಾರಣಿಗಳ ಬೆಂಬಲದಿಂದ 1 ಸಾವಿರಕ್ಕೂ ಅಧಿಕ ಅನದೀಕೃತ ಪಂಪ್ ಸೆಟ್‌ಗಳನ್ನು ಅಳವಡಿಸಲಾಗಿದೆ. 500ಕ್ಕೂ ಅಧಿಕ ಟ್ರಾನ್ಸ್ ಫಾರಂಗಳನ್ನು ಅಳವಡಿಸಲಾಗಿದೆ ಇದನ್ನು ಪ್ರಶ್ನಿಸಲು ಹೋದ ರೈತ ಹೋರಾಟಗಾರರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಲುಕೋಟೆ ಶಾಸಕ ದರ್ಶನ ಪುಟ್ಟಣಯ್ಯ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆಗೆ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹವಾಮಾನಕ್ಕೆ ತಕ್ಕಂತೆ ವ್ಯವಸಾಯ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಯಿದ್ದು, ರೈತರು ಬೆಳೆಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ, ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಮಾತನಾಡಿದರು.
ಕಾರ್ಯಕ್ರಮದ ನಂತರ ತುಂಗಭದ್ರ ಎಡದಂಡೆ, ನಾಲೆ ಮತ್ತು ನಾರಾಯಣಪುರ ಬಲ ಮತ್ತು ಎಡದಂಡೆ ನಾಲೆಯ ಸಮಸ್ಯೆಗಳು ಹಾಗೂ ಪರಿಹಾರದ ಕುರಿತು ಕೃಷಿ ಬೆಲೆ ಆಯೋಗದ ಮಾಜಿ ಅದ್ಯಕ್ಷ ಹನುಮಗೌಡ ಬೆಳಗುರ್ಕಿ ವಿಷಯವನ್ನು ಮಂಡಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ.ವಿ.ಪಾಟೀಲ, ಜಿಲ್ಲಾಧ್ಯಕ್ಷ ಪ್ರಭಾಕರಪಾಟೀಲ ಇಂಗಳದಾಳ, ದೊಡ್ಡಬಸವ ಗೌಡ ಬಲ್ಲಟಗಿ, ಮಲ್ಲಿಕಾರ್ಜುನ ಸತ್ಯಂಪೇಟ, ಗೋಣಿ ಬಸ್ಸಪ್ಪ, ಮಲ್ಲಣ್ಣ, ಮುದ್ದನಯ್ಯ ಸ್ವಾಮಿ, ಮಹಾಂತೇಶ ಮಡಿವಾಳ ಸೇರಿ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.








