ರಾಯಚೂರಿನಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ: ಜಿಲ್ಲಾಧಿಕಾರಿ ನಿತೀಶ್ ಕೆ.

ರಾಯಚೂರು: ರಾಯಚೂರು ಮಹಾನಗರದ ವ್ಯಾಪ್ತಿಯ ತಗ್ಗು ಪ್ರದೇಶಗಳ ಮಳೆ ನೀರು ಒಳಚರಂಡಿ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಲೋಕೋಪಯೋಗಿ ಇಲಾಖೆ, ರಾಯಚೂರು ವಿಭಾಗದಿಂದ ಟೆಂಡರ್ ಸಹ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ರಾಯಚೂರು ಮಹಾನಗರದ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾದಲ್ಲಿ ಚರಂಡಿಯ ಕೊರತೆಯಿಂದ ಪ್ರತಿಕೂಲ ಪ್ರವಾಹಗಳು ಮತ್ತು ಅತಿ ಹೆಚ್ಚು ನಷ್ಟಗಳು ಉಂಟಾಗುತ್ತದೆ. ಈ ಪ್ರವಾಹದಿಂದ ಆರ್ಥಿಕ, ಸಾಮಾಜಿಕ, ಆರೋಗ್ಯ ಹಾಗೂ ಪರಿಸರದ ಮೇಲೆ ಅನೇಕ ರೀತಿಯ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತದೆ.
ಬಹಳ ವರ್ಷಗಳಿಂದ ರಾಯಚೂರು ಮಹಾನಗರದ ವ್ಯಾಪ್ತಿಯ ತಗ್ಗು ಪ್ರದೇಶದ ಏರಿಯಾಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಮಳೆಯಾದಲ್ಲಿ ನಾಗರಿಕರು ವಾಸಿಸುವ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತದೆ. ಈ ಸಮಸ್ಯೆಯನ್ನು ಬಗೆ ಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳವುದು ಅತಿ ಅವಶ್ಯವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ವಿಪತ್ತು ಉಪಶಮನ ನಿಧಿಯ ಮಾರ್ಗಸೂಚಿಗಳನ್ವಯ ರಾಯಚೂರು ಮಹಾನಗರ ವ್ಯಾಪ್ತಿಯ ತಗ್ಗು ಪ್ರದೇಶಗಳ ಮಳೆ ನೀರು ಒಳಚರಂಡಿ ನಿರ್ಮಾಣಕ್ಕೆ 16.61 ಕೋಟಿ ರೂ. ಗಳ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ, ರಾಯಚೂರು ವಿಭಾಗದ ಮುಖಾಂತರ ಕೈಗೊಳ್ಳಲು ಮಾನ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಮಾನ್ಯ ಸರಕಾರದಿಂದ ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.







