ಅಂಬೇಡ್ಕರ್ ಚಿಂತನೆ ಇಂದಿಗೂ ಪ್ರಸ್ತುತ: ಸಂಸದ ಜಿ. ಕುಮಾರ ನಾಯಕ
ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ರಾಯಚೂರು: ದೇಶದಲ್ಲಿ ನಿರುದ್ಯೋಗ, ಆರ್ಥಿಕ ಅಸಮಾನತೆ ಹೆಚ್ಚಾಗಿದ್ದು, ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ಆರ್ಥಿಕ ಚಿಂತನೆಗಳು ಹಾಗೂ ದೇಶದ ಅಭಿವೃದ್ಧಿಗೆ ನಾಂದಿಯಾಗಿದೆ ಎಂದು ಸಂಸದ ಜಿ. ಕುಮಾರನಾಯಕ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲನಿಕೇತನ ಸಭಾಂಗಣದಲ್ಲಿ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾನತೆ ಕಲ್ಪಿಸಿದ್ದಾರೆ. ಆದರೆ ರೈತರು, ಕಾರ್ಮಿಕರು, ಅಸಂಘಟಿತ ವಲಯದ ದಿನಗೂಲಿಗಳು, ಸಣ್ಣಪುಟ್ಟ ವ್ಯಾಪಾರ, ವ್ಯವಹಾರ ಮಾಡುತ್ತಿರುವವರ ಬದುಕು ದುಃಸ್ಥಿತಿಯಲ್ಲಿದೆ ಎಂದು ಅಸಮಾಧಾನ ಹೊರಹಾಕಿದರು.
ದೇಶದಲ್ಲಿ ಬಹಳಷ್ಟು ಯುವಕ, ಯುವತಿಯರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಒಂದು ಕಡೆ ಯುವಜನರ ಬದುಕನ್ನು ನಿರುದ್ಯೋಗ ಹೈರಾಣ ಮಾಡುತ್ತಿದೆ.. ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರವು ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ. ಬೇಡಿಕೆಯ ಕೊರತೆಯಿಂದ ಉದ್ದಿಮೆ ರಂಗದಲ್ಲಿ ಉತ್ಪಾದನೆ ಕುಸಿದಿದೆ. ಯುವಕರು ಇದರ ಬಗ್ಗೆ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಯುವಜನರು ರೂಪಾಯಿ ಮೌಲ್ಯದ ಕುರಿತು ಅಧ್ಯಾಯನ ಮಾಡಬೇಕಾಗಿದೆ. ದೇಶದ ಆರ್ಥಿಕ ಮೌಲ್ಯದ ಬಗ್ಗೆ ತಿಳಿದುಕೊಳ್ಳಲಿಕ್ಕೆ ಇಂತಹ ವಿಚಾರ ಸಂಕಿರಣ ಕಾರ್ಯಕ್ರಮ ಅವಶ್ಯಕತೆವಾಗಿದೆ ಎಂದರು.
ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಮಾತನಾಡಿ, ಅಂಬೇಡ್ಕರ್ ಅವರು ಸಮ-ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಜೊತೆಗೆ ಬಹುದೊಡ್ಡ ಆರ್ಥಿಕ ತಜ್ಞರಾಗಿದ್ದರು. ದೇಶದ ಹಣಕಾಸು, ಅರ್ಥಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ದೇಶದಲ್ಲಿ ಆರ್ಥಿಕ ವ್ಯವಸ್ಥೆಯ ಪಾತ್ರದ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯ ಶ್ಲಾಘನೀಯಾವಾಗಿದೆ. ದೇಶದ ಆರ್ಥಿಕ ಬಲವರ್ಧನೆಗೆ ಜಾತಿ ವ್ಯವಸ್ಥೆ ಕಂಟಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಚಾರ್ಯ ವೆಂಕಣ್ಣ, ಪ್ರಾಧ್ಯಾಪಕ ಪ್ರಾಣೇಶ ಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ಜಯಣ್ಣ, ರುದ್ರಪ್ಪ ಅಂಗಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಕಮಲಕುಮಾರ ಜೈನ್, ಶೋಭಾ, ಮಹಾಂತೇಶ, ಸೋಮನಾಥ ರೆಡ್ಡಿ, ವೆಂಕಟೇಶ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







